ಮೈಸೂರು: ಪ್ರೀತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ತನ್ನ ತಾಯಿ ಹಾಗೂ ತಂಗಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಯುವತಿ ಧನುಶ್ರೀ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಇದೇ ಗ್ರಾಮದ ನಿವಾಸಿಗಳಾದ ಅನಿತಾ(43) ಹಾಗೂ ಧನುಶ್ರೀ (19) ಮೃತಪಟ್ಟಿದ್ದಾರೆ. ಅನಿತಾ ಅವರ ಮಗ ನಿತಿನ್ ಎಂಬಾತ ಈ ನೀಚಕೃತ್ಯವೆಸಗಿದ್ದಾನೆ.

ಆರೋಪಿ ನಿತಿನ್ ತನ್ನ ತಂಗಿ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈ ವಿಚಾರವಾಗಿ ಅಣ್ಣ-ತಂಗಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ನಿತಿನ್, ತಾಯಿ ಅನಿತಾ ಹಾಗೂ ತಂಗಿ ಧನುಶ್ರೀಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಕೆರೆ ಬಳಿ ಬೈಕ್ ನಿಲ್ಲಿಸಿ ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಈ ವೇಳೆ ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ.

ಈ ವಿಷಯ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಮೃತದೇಹ ಹೊರಗೆ ತೆಗೆದಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿ, ತಂಗಿಯನ್ನು ಕೊಂದ ನಿತಿನ್