ನನ್ನ ನಿರುದ್ಯೋಗ ದಿನ ಎಂದ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ
ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದಂದು ದೇಶಾದ್ಯಂತ ಬಿಜೆಪಿ ‘ಸೇವಾ ಪಾಕ್ಷಿಕ’ ಆಚರಿಸುತ್ತಿದ್ದರೆ, ಇತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) ಅವರ ಕಚೇರಿ ಮುಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ (Manjunath Gowda) ನೇತೃತ್ವದಲ್ಲಿ ‘ಪಕೋಡಾ’ ತಯಾರಿಸಿ ಮಾರಾಟ ಮಾಡುವ ವಿನೂತನ ಪ್ರತಿಭಟನೆ ನಡೆಸಿತು. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ಆದೇಶದಂತೆ, ದೇಶಾದ್ಯಂತ ಯುವ ಕಾಂಗ್ರೆಸ್ ಘಟಕಗಳು ಕೇಂದ್ರ ಸರ್ಕಾರದ ವಿಫಲ ಉದ್ಯೋಗ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿವೆ. ಇದರ ಭಾಗವಾಗಿ ಬೆಂಗಳೂರಿನಲ್ಲಿಯೂ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಬೆಂಗಳೂರು ಉತ್ತರ ಯುವ ಕಾಂಗ್ರೆಸ್ ಸಮಿತಿಯು ‘ವೋಟ್ ಚೋರಿ’ (ಮತಗಳವು ) ಮತ್ತು ಪ್ರಧಾನಿ ಮೋದಿಯವರ ಸುಳ್ಳು ಭರವಸೆಗಳ ವಿರುದ್ಧ ಧ್ವನಿ ಎತ್ತಿತು.

ಪ್ರತಿಭಟನಾಕಾರರ ಆರೋಪಗಳೇನು?
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ (Manjunath Gowda) ಅವರು ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. “ಪ್ರಧಾನಿ ಮೋದಿ (PM Modi) ಅವರು ನೀಡಿದ ಉದ್ಯೋಗ ಭರವಸೆಗಳನ್ನು ಈಡೇರಿಸದೆ ದೇಶದ ಯುವಕರ ಭವಿಷ್ಯವನ್ನು ಹಾಳುಮಾಡಿದ್ದಾರೆ. ಉದ್ಯೋಗ ಕೇಳಿದರೆ ‘ಪಕೋಡಾ ಮಾರಿ, ಅದು ಕೂಡ ಒಂದು ಕೆಲಸ’ ಎಂದು ಹೇಳುತ್ತಾರೆ. ಇಂದು ಅವರ ಮಾತೇ ನಿಜವಾಗಿದೆ. ಉದ್ಯೋಗಾವಕಾಶಗಳಿಲ್ಲದೆ ಯುವಜನತೆ ಪಕೋಡಾ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ಇದರಿಂದಾಗಿ ಯುವಕರು ಉದ್ಯೋಗ ಅರಸಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಪ್ರಧಾನಿ ಮೋದಿಯವರೇ ನೇರ ಹೊಣೆ. ಅವರ ತಪ್ಪು ನೀತಿಗಳಿಂದಾಗಿ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳು ಕಡಿಮೆಯಾಗಿವೆ. ಮೋದಿ ಕೇವಲ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ, ಯುವ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ,” ಎಂದು ಅವರು ದೂರಿದರು.

ನಿರ್ಮಲಾ ಸೀತಾರಾಮನ್ ವಿರುದ್ಧವೂ ಕಿಡಿ
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) ಅವರ ವಿರುದ್ಧವೂ ಮಂಜುನಾಥ ಗೌಡ ಹರಿಹಾಯ್ದರು. “ಅವರು ಕೂಡ ‘ಉಪ್ಪಿನಕಾಯಿ ಕಥೆ’ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಇದು ಸರಿಯಲ್ಲ. ನೆರೆಯ ಬಾಂಗ್ಲಾದೇಶ(Bangladesh), ನೇಪಾಳ(Nepal), ಶ್ರೀಲಂಕಾ(Srilanka)ದಂತಹ ದೇಶಗಳು ಎದುರಿಸಿದ ಆರ್ಥಿಕ ಕುಸಿತ ಮತ್ತು ಅರಾಜಕತೆಯತ್ತ ನಮ್ಮ ದೇಶವನ್ನು ಕೊಂಡೊಯ್ಯಲಾಗುತ್ತಿದೆ ಎಂಬ ಆತಂಕವಿದೆ,” ಎಂದು ಆತಂಕ ವ್ಯಕ್ತಪಡಿಸಿದರು..

ಗ್ಯಾರಂಟಿ ಯೋಜನೆಗಳ ಸಮರ್ಥನೆ ಮತ್ತು ‘ನರೇಗಾ’ ಅನುದಾನ ಕಡಿತ.
ಮಂಜುನಾಥ ಗೌಡ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು. “ನಮ್ಮ ರಾಜ್ಯದಲ್ಲಿ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ತಲಾದಾಯ ಹೆಚ್ಚಾಗಿದೆ. ಆದರೆ, ಬಡವರಿಗಾಗಿ ಇರುವ ಈ ಯೋಜನೆಗಳನ್ನೂ ಪ್ರಧಾನಿ ಮೋದಿ ಟೀಕಿಸುತ್ತಾರೆ. ಇನ್ನೊಂದೆಡೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಅನುದಾನವನ್ನು ಕಡಿತಗೊಳಿಸಲಾಗಿದೆ. ಪ್ರಧಾನಿಯವರ ಸುಳ್ಳುಗಳಿಂದಾಗಿಯೇ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ವಿರುದ್ಧವೇ ನಮ್ಮ ಹೋರಾಟ,” ಎಂದು ಅವರು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದರು. ಪ್ರತಿಭಟನೆ ವೇಳೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.
