ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕಕ್ಕೆ ನಡೆದ ಚುನಾವಣೆಯ ಫಲಿತಾಂಶ ಇನ್ನೂ ಮರೀಚಿಕೆಯಾಗಿದೆ. ಸಾಕಷ್ಟು ಗೊಂದಲ ಹಾಗೂ ಹಸಿ ಬಿಸಿ ಚರ್ಚೆಗಳನ್ನು ಹುಟ್ಟು ಹಾಕಿದ್ದ ಈ ಚುನಾವಣೆಯ ಫಲಿತಾಂಶವು ಇನ್ನೂ ಮುಂದೂಡಿಕೆಯಾಗುತ್ತಲೇ ಇದೆ. ಚುನಾವಣೆಗಾಗಿ ಶ್ರಮಿಸಿದ ಅಭ್ಯರ್ಥಿಗಳು ಇಂದು ನಾಳೆ ಎಂದು ಫಲಿತಾಂಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವ ಸ್ಥಿತಿ ಎದುರಾಗಿದೆ.
ಜನವರಿ 10, 11 ಮತ್ತು 12 ತಾರೀಕುಗಳಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಸುಮಾರು 6.5 ಲಕ್ಷ ಯುವ ಕಾಂಗ್ರೆಸ್ ಕಾರ್ಯಕರ್ತರು ಮತದಾನಕ್ಕೆ ಅರ್ಹರಾಗಿದ್ದರು. ಏಳು ತಿಂಗಳ ಕಾಲ ಈ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ಆನ್ಲೈನ್ನಲ್ಲಿ ಚುನಾವಣೆ ನಡೆಸಲಾಗಿತ್ತು. ಆದರೂ, ಚುನಾವಣೆಯ ಫಲಿತಾಂಶ ಮಾತ್ರ ಇನ್ನೂ ಬಂದಿಲ್ಲ.
ನಕಲಿ ಮತದಾನದ ಶಂಕೆ?
ಮೊದಲ ಹಂತದ ಚುನಾವಣೆಯ ದಿನದಂದು ಆನ್ಲೈನ್ ಮತದಾನದ ಮಾಡುವ ಆಪ್ ಅನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಸುದ್ದಿಗಳೂ ಹರಿದಾಡಿದ್ದವು. ಇದರೊಂದಿಗೆ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಹವಣಿಸಿದ್ದಾರೆ ಎಂಬ ದೂರುಗಳು ಕೂಡಾ ರಾಷ್ಟ್ರೀಯ ಯುವ ಕಾಂಗ್ರೆಸ್ ನೇತಾರರಿಗೆ ತಲುಪಿದ್ದವು.
ಈ ಕಾರಣಕ್ಕೆ, ಮತದಾರರ ವಿವರಗಳನ್ನು ಪರಿಶೀಲಿಸಿದ ನಂತರವೇ ಮತಗಳನ್ನು ಎಣಿಸಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಎಲ್ಲಾ ಮತಗಳು ಅಧಿಕೃತವಾಗಿಯೇ ಚಲಾವಣೆಯಾಗಿವೆ ಎಂಬುದನ್ನು ಧೃಡೀಕರೀಸಿದ ನಂತರವೇ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು.
ಕೇವಲ ಅಧ್ಯಕ್ಷ ಸ್ಥಾನ ಮಾತ್ರವಲ್ಲದೇ, ಬ್ಲಾಕ್ ಮಟ್ಟದ, ಜಿಲ್ಲಾ ಮಟ್ಟದ ಫಲಿತಾಂಶಗಳನ್ನು ಕೂಡಾ ತಡೆಹಿಡಿಯಲಾಗಿದೆ. ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿರುವ ಬ್ಲಾಕ್ ಅಧ್ಯಕ್ಷ ಸ್ಥಾನ ಆಕಾಂಕ್ಷಿಯೊಬ್ಬರು, ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ತಾಂತ್ರಿಕ ವ್ಯವಸ್ಥೆ ಅಳವಡಿಸಲು ಹಾಗೂ ಕೊರತೆ ನಿಗ್ರಹಿಸಲು ಸಾಮರ್ಥ್ಯ ಇಲ್ಲವೇ? ಒಂದು ವೇಳೆ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಲು ಬರದಿದ್ದಲ್ಲಿ ಬ್ಯಾಲೆಟ್ ಪೇಪರ್ ಮುಖಾಂತರವೇ ಚುನಾವಣೆ ಏಕೆ ನಡೆಸಿಲ್ಲ? ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ತಂತ್ರಜ್ಞಾನವನ್ನು ಪರಿಚಯಿಸಿದ ಪಕ್ಷ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಂಗ್ರೆಸ್, ಇದೇ ತಂತ್ರಜ್ಞಾನದ ಮೂಲಕ ನಡೆಸಿದ ಚುನಾವಣೆಯ ಫಲಿತಾಂಶವನ್ನು ಇನ್ನೂ ಬಿಡುಗಡೆ ಮಾಡದಿರುವುದು ನಿಜಕ್ಕೂ ವಿಪರ್ಯಾಸ. ಆನ್ಲೈನ್ ಮೂಲಕ ನಡೆಸಿದ ಚುನಾವಣೆಯ ಫಲಿತಾಂಶಕ್ಕೆ ಒಂದು ತಿಂಗಳು ಕಾಯುವ ಬದಲು, ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆ ನಡೆಸಿದ್ದರೆ, ಇನ್ನೂ ಬೇಗ ಫಲಿತಾಂಶ ಬಂದಿರಬಹುದು ಎಂಬ ಅಭಿಪ್ರಾಯಗಳು ಕೂಡಾ ಮೂಡಿವೆ.
ಹಲವು ಬಾರಿ ಫಲಿತಾಂಶ ಘೋಷಣೆಯ ದಿನವನ್ನು ಮುಂದೂಡಿದ್ದು, ಮತಗಳ ಮತ್ತು ಮತದಾನ ಪ್ರಕ್ರಿಯೆಯ ಕುರಿತು ಸಂದೇಹ ಮೂಡಿಸುತ್ತಿದೆ. ದೇಶದಾದ್ಯಂತ EVM ಬಳಕೆಯನ್ನು ನಿಷೇಧಿಸಲು ಒತ್ತಡ ಹೇರುತ್ತಿರುವ ಕಾಂಗ್ರೆಸ್ ಖುದ್ದು ತಂತ್ರಜ್ಞಾನವನ್ನು ನಿಭಾಯಿಸಲು ಪರದಾಡುತ್ತಿರುವುದು ಜಗಜ್ಜಾಹೀರಾಗಿದೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಹೆಚ್ ಎಸ್ ಮಂಜುನಾಥ್ ಅವರು, ನಕಲಿ ಮತಗಳು ಚಲಾವಣೆಯಾಗಿರುವ ಶಂಕೆ ಇರುವುದರಿಂದ ಇಂತಹ ಮತಗಳನ್ನು ಅಸಿಂಧು ಎಂದು ಪರಿಗಣಿಸಿಲಾಗುತ್ತಿದೆ. ಈ ಕಾರಣಕ್ಕಾಗಿ ಚುನಾವಣಾ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ. ಫೆಬ್ರವರಿ 5ರಂದು ಫಲಿತಾಂಶ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ನಾವು ಕಾದು ನೋಡುತ್ತಿದ್ದೇವೆ, ಎಂದು ಹೇಳಿದ್ದಾರೆ.
ಇತರ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾದ ರಕ್ಷಾ ರಾಮಯ್ಯ ಹಾಗೂ ಮೊಹಮ್ಮದ್ ನಲಪಾಡ್ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಹಿರಿಯ ನಾಯಕರ ಲಾಬಿಯ ಸಮಸ್ಯೆ?
ಫಲಿತಾಂಶ ವಿಳಂಬಕ್ಕೆ ಕಾಂಗ್ರೆಸ್ನ ಹಿರಿಯ ನಾಯಕರ ಲಾಬಿ ಹಾಗೂ ಹಣ ಬಲವೇ ಕಾರಣ ಎಂಬ ಸುದ್ದಿಯೂ ಕಾಂಗ್ರೆಸ್ನ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಬಲಿಷ್ಟ ಯುವ ನಾಯಕನ ಅಗತ್ಯವಿದ್ದು, ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಡಿಕೆಶಿ ಅವರ ಖಾಸಾ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಿಥುನ್ ರೈ ಅವರು, ಕೊನೆಯ ಕ್ಷಣದಲ್ಲಿ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದರು.
ಫೆಬ್ರುವರಿ 5ರಂದು ಫಲಿತಾಂಶ ಘೋಷಣೆ?
ಫಲಿತಾಂಶದ ಕುರಿತಾಗಿ ಯುವ ಕಾಂಗ್ರೆಸ್ ಅಧಿಕೃತ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಪ್ರಕಟಿಸಲಾಗಿದೆ. ಫೆಬ್ರುವರಿ 5ರಂದು ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ. ಈ ಬಾರಿ ಫಲಿತಾಂಶ ಘೋಷಣೆಯಾಗುವುದೋ? ಇಲ್ಲ ಹಿಂದಿನಂತೆಯೇ ಮತ್ತೆ ದೀರ್ಘ ಕಾಲದ ಗಜ ಪ್ರಸವದಂತೆ ಉಳಿದುಕೊಳ್ಳುವುದೋ? ಎಂದು ಕಾದು ನೋಡಬೇಕಿದೆ.