ಇಂಫಾಲ: ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ‘ಅಪಹರಣ ಮತ್ತು ಕೊಲೆ’ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರ ಬುಧವಾರ ಇನ್ನಷ್ಟು ತೀವ್ರಗೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸರಕಾರ, ರಾಜ್ಯ ರಾಜಧಾನಿ ಇಂಫಾಲದಲ್ಲಿ ಕರ್ಫ್ಯೂ ಹೇರಿದೆ.
ಈಗಾಗಲೇ ರಾಜ್ಯ ಸರಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರೂ, ವಿಳಂಬ ಗತಿಯ ತನಿಖೆಯು ವಿದ್ಯಾರ್ಥಿ ಸಮೂಹವನ್ನು ರೊಚ್ಚಿಗೆಬ್ಬಿಸಿದೆ. ಇಂಫಾಲ, ಚುರಾಚಾಂದ್‌ಪುರ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಸಂಘರ್ಷ ಭುಗಿಲೆದ್ದಿದೆ. ಸಿಎಂ ಎನ್. ಬಿರೇನ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಸತತ ಎರಡನೇ ದಿನವೂ ನಡೆದಿದೆ.
ಸ್ವದೇಶಿ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸರಕಾರ ಹರಸಾಹಸ ನಡೆಸುತ್ತಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೇ ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿ ಹತೋಟಿಗೆ ತರಲು ಸಿಆರ್‌ಪಿಎಫ್, ಕ್ಷಿಪ್ರ ಕಾರ್ಯಪಡೆಯೂ (ಆರ್‌ಎಎಫ್) ಕಾರ್ಯಾಚರಣೆಗೆ ಇಳಿದಿವೆ. ಮಂಗಳವಾರದಿಂದ ಶುರುವಾಗಿರುವ ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ಹೇಳಿವೆ.