ಬೆಂಗಳೂರು: ಸಾಕು ಗಿಳಿಯನ್ನ ವಿದ್ಯುತ್ ಶಾಕ್ ನಿಂದ ರಕ್ಷಣೆ ಮಾಡಲು ಹೋಗಿ ಯುವಕನೇ ವಿದ್ಯುತ್ ಶಾಕ್ ಗೆ ಬಲಿಯಾಗಿದ್ದಾನೆ. ಗಿರಿನಗರದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಅರುಣ್ ಕುಮಾರ್ ಮೃತ ದುರ್ದೈವಿಯಾಗಿದ್ದಾನೆ.
ಗಿರಿನಗರದ ಖಾಸಗಿ ಅಪಾರ್ಟ್ ಮೆಂಟ್ ನ ಸಂಬಂಧಿ ಮನೆಯಲ್ಲಿದ್ದ ಅರುಣ್ ಬೆಳಗ್ಗೆ ಮನೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಮಾಕಯ್ ಗಿಳಿಯ ಜೊತೆ ಆಟ ಆಡ್ತಿದ್ದ. ಈ ವೇಳೆ ಹೊರಗಡೆ ಹಾರಿ ಬಂದ ಗಿಳಿ ವಿದ್ಯುತ್ ಕಂಬದ ಮೇಲೆ ಕುಳಿತಿದೆ. ಹೀಗಾಗಿ ಗಿಳಿಗೆ ವಿದ್ಯುತ್ ಶಾಕ್ ಹೊಡೆದು ಅಪಾಯ ಆಗಬಹುದು ಅಂತ ಅರುಣ್ ಅದನ್ನ ಕೆಳಗಿಳಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಮನೆಯಲ್ಲಿದ್ದ ಒಂದು ಸ್ಟೀಲ್ ಪೈಪ್ ಗೆ ಕಡ್ಡಿ ಹಾಕಿ ಎತ್ತರದಲ್ಲಿ ಗಿಳಿ ಓಡಿಸಲು ಕಾಪೌಂಡ್ ಮೇಲೆ ನಿಂತಾಗ ಅಪಾರ್ಟ್ ಮೆಂಟ್ ಒಳಗಡೆ ಹಾದು ಹೋಗಿರೋ 66 ಸಾವಿರ ಕೆವಿ ಸಾಮರ್ಥ್ಯದ ವಿದ್ಯುತ್ ವೈರ್ ಗಳಿಂದ ಶಾಕ್ ಹೊಡೆದು ಕೆಳಗೆ ಬಿದ್ದ.
ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪರಿಶೀಲಿಸಿದಾಗ ಆತ ಮೃತಪಟ್ಟಿದ್ದ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಹಾಗೆ ಘಟನೆ ಬಳಿಕ ಸ್ಥಳಕ್ಕೆ ಬೆಸ್ಕಾಂ., ಕೆಇಬಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಇನ್ನು ಘಟನೆ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ UDR ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇತ್ತ ಕೆಇಬಿಯವರು ಕರೆಂಟ್ ಆಫ್ ಮಾಡಿ ವಿದ್ಯುತ್ ಕಂಬದ ಮೇಲಿದ್ದ ಗಿಳಿ ರಕ್ಷಿಸಿ ಮಾಲೀಕರಿಗೆ ನೀಡಿದ್ದಾರೆ. ಆದರೆ ಅಪಾರ್ಟ್ ಮೆಂಟ್ ಒಳಭಾಗದಲ್ಲಿ ಹೈಟೆನ್ಸನ್ ವೈರ್ ಹಾದು ಹೋಗಿರೋದಕ್ಕೆ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.











