ಸಿಎಂ ಬಿಎಸ್ ಯಡಿಯೂರಪ್ಪ ಸದ್ಯದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹೊತ್ತಲೇ ಜುಲೈ ಅಂತ್ಯದ ವೇಳೆಗೆ ಸಿಎಂ ಯಡಿಯೂರಪ್ಪ ಪದತ್ಯಾಗ ಮಾಡಲಿದ್ದಾರೆ. ಪುತ್ರ ವಿಜಯೇಂದ್ರ ಜತೆಗೆ ಸಿಎಂ ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹಲವು ವಿಚಾರಗಳು ಚರ್ಚಿಸಿದ್ದರು. ಮೋದಿ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಮೊಗದಲ್ಲಿ ಖುಷಿ ಕಂಡು ಬಂದಿತ್ತು. ಈಗಂತೂ ಸಿಎಂ ಯಡಿಯೂರಪ್ಪ ಬದಲಾವಣೆ ಪಕ್ಕ ಎಂದು ಹೇಳುತ್ತಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಾಡಿದ್ದಾರೆ.
ಈ ಸಂಬಂಧ ಬೆಂಗಳೂರನಲ್ಲಿ ಮಾತಾಡಿದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ ಯಡಿಯೂರಪ್ಪ ಅವರನ್ನು ತೆಗೆಯುತ್ತಾರೆ ಎಂದು ಮೊದಲೇ ಹೇಳಿದ್ದೇ. ನಾನು ಹೇಳಿದ್ದನ್ನು ನೀವ್ಯಾರು ನಂಬಲೇ ಇಲ್ಲ. ನನಗೆ ಬಂದ ಮಾಹಿತಿಯನ್ನೇ ನಿಮ್ಮ ಬಳಿ ಶೇರ್ ಮಾಡಿದ್ದೇ ಹೊರತು ಭವಿಷ್ಯ ನುಡಿದಿರಲಿಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮೊದಲಿಂದಲೂ ಮಾಹಿತಿ ಇತ್ತು. ಯಡಿಯೂರಪ್ಪನವರ ಸರ್ಕಾರ ಭ್ರಷ್ಟ ಸರ್ಕಾರ. ಯಡಿಯೂರಪ್ಪ ಭ್ರಷ್ಟ, ಅವರ ಮಗ ಭ್ರಷ್ಟ, ಈ ಸರ್ಕಾರ ತೊಲಗಿದರೆ ಒಳ್ಳೆಯದು. ಕಾಂಗ್ರೆಸ್ ಸರ್ಕಾರ ಚುನಾವಣೆ ಎದುರಿಸಲು ಸಿದ್ಧ. ಈಗ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ ಎಂದು ತಿಳಿಸಿದರು.
ಅವಧಿಪೂರ್ವ ಚುನಾವಣೆ ಬರುತ್ತೆ ಅಂತ ನನಗೆ ಅನ್ನಿಸ್ತಿಲ್ಲ. ಯಡಿಯೂರಪ್ಪನ ತೆಗೆದರೆ ಇನ್ನೊಬ್ಬರ ಸಿಎಂ ಮಾಡ್ತಾರೆ. ನಳೀನ್ ಕುಮಾರ್ ಕಟೀಲ್ ಆಡಿಯೋವನ್ನು ತಿರಸ್ಕಾರ ಮಾಡಿದ್ದಾರೆ. ಅದು ನಂದಲ್ಲ ಎಂದು ಕಟೀಲ್ ಹೇಳುತ್ತಿರುವುದು ಸುಳ್ಳು ಇರಬಹುದು. ಒಬ್ಬ ಕರಪ್ಟ್ ಸಿಎಂ ಹೋಗ್ಬೇಕು ಅನ್ನೋದಷ್ಟೇ ನಮ್ಮ ಉದ್ದೇಶ ಎಂದರು.
ಹೊಸ ಸಿಎಂ ಆದ ನಂತರ ಮಂತ್ರಿಗಳ ಬದಲಾವಣೆ ಆಗಬಹುದು. ನಾನು ಒಂದು ವರ್ಷದ ಹಿಂದೆಯೇ ಸಿಎಂ ಬದಲಾಗ್ತಾರೆ ಅಂದಿದ್ದು ಭವಿಷ್ಯ ಅಲ್ಲ, ಅದು ನನ್ನ ಮಾಹಿತಿ. ಭವಿಷ್ಯ ಹೇಳೋದ್ರಲ್ಲಿ ನನಗೆ ನಂಬಿಕೆ ಇಲ್ಲ, ಭವಿಷ್ಯ ಹೇಳೋರನ್ನೂ ನಾನು ನಂಬಲ್ಲ. ನನಗಿದ್ದ ಮಾಹಿತಿಯನ್ನು ನಾನು ನಿಮಗೆ ಹೇಳಿದ್ದೆ ಅಷ್ಟೇ. ನಾನು ಯಾವತ್ತೂ ಭವಿಷ್ಯ ಹೇಳಿಲ್ಲ, ಭವಿಷ್ಯ ಹೇಳೋದರಲ್ಲಿ ನನಗೆ ನಂಬಿಕೆ ಇಲ್ಲ ಎಂದರು.
ರಾಹುಲ್ ತಮ್ಮನ್ನು ಮತ್ತು ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಹೀಗೆಂದರು. ಯಾವ ಕಾರಣಕ್ಕೆ ನಮ್ಮನ್ನು ಕರೆದಿದ್ದಾರೆ ಅಂತ ನಿಮಗೆ ಹೇಳಕ್ಕೆ ಆಗುತ್ತಾ. ನನಗೂ ಅದರ ಬಗ್ಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಮ್ಮ ವರಿಷ್ಠರು, ಕರೆದಿದ್ದಾರೆ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪದಾಧಿಕಾರಿಗಳ ನೇಮಕ ವಿಚಾರ ನಿಮಗೆ ಹೇಳಿದ್ದಾರಾ? ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನೋದು ಯಾರಿಗೆ ಗೊತ್ತು? ಸುಮ್ಮನೆ ಊಹಾಪೋಹ ಮಾಡಬೇಡಿ ಎಂದು ಸಿದ್ದರಾಮಯ್ಯ ಗರಂ ಆದರು.