ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಜೀವನದ ಸತ್ಯ, ಸಿಹಿ – ಕಹಿ ಎಲ್ಲವೂ ಗೊತ್ತು. ನಮ್ಮ ವಯಸ್ಸಿನಷ್ಟು ಅವರಿಗೆ ಅನುಭವ ಇದೆ. ಅದನ್ನು ತೋರಿಸಿಕೊಳ್ಳದೇ ಎಲ್ಲರ ಜತೆಗೂ ಬೆರೆತು ಎಲ್ಲರನ್ನೂ ಸರಿಸಮಾನರನ್ನಾಗಿ ಕಂಡು ದೊಡ್ಡತನ ಮೆರೆಯುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ವಿಧಾನ ಮಂಡಲದ 15 ನೇ ಅಧಿವೇಶನದ ಕೊನೆಯ ದಿನ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿದಾಯದ ಶುಭ ನುಡಿಗಳನ್ನಾಡಿದರು.
ಬಿಎಸ್ವೈ ಅವರು ನಡೆದು ಬಂದ ದಾರಿ, ಮಾಡಿದ ಹೋರಾಟ ಸಾಮಾನ್ಯ ಏನಲ್ಲ. ತಾವು ಏನು ಮಾಡಬೇಕೆಂದುಕೊಂಡಿದ್ದರೋ ಅದನ್ನು ಮಾಡದೇ ಬಿಟ್ಟಿಲ್ಲ. ಅವರ ಛಲ – ಸಾಹಸ ನಿಜಕ್ಕೂ ಮೆಚ್ಚುವಂಥದ್ದು, ನಮಗೆಲ್ಲಾ ಮಾದರಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತ ಬಜೆಟ್ ಕೊಟ್ಟವರು
ಸದನಕ್ಕೆ ಯಡಿಯೂರಪ್ಪ ಅವರ ಕೊಡುಗೆ ಬಹಳ ದೊಡ್ಡದು. ಅವರು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ರೈತ ಬಜೆಟ್ ಕೊಟ್ಟಿದ್ದರು. 2008 ರಲ್ಲಿ 2ನೇ ಬಾರಿ ಮುಖ್ಯಮಂತ್ರಿ ಆದಾಗ ರೈತರಿಗೆ 10 ಎಚ್ ಪಿ ಉಚಿತ ವಿದ್ಯುತ್ ಕೊಟ್ಟರು. 3ನೇ ಬಾರಿಗೆ ಮುಖ್ಯಮಂತ್ರಿ ಆದಾಗ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಪಾಲು 4 ಸಾವಿರ ಕೊಟ್ಟು ರೈತರನ್ನು ಗೌರವಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಯಶಸ್ವಿ ಯೋಜನೆಗಳ ಹರಿಕಾರ
ಇಷ್ಟು ಮಾತ್ರವಲ್ಲದೇ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟರು. ಯಶಸ್ವಿನಿ ಯೋಜನೆಯನ್ನು ಕೊಟ್ಟು ರೈತರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ಜತೆಗೆ ಅವರು ಹಲವಾರು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಆದರ್ಶ ಆಡಳಿತ ನಮಗೆ ತೋರಿಸಿಕೊಟ್ಟಿದ್ದಾರೆ. 15 ನೇ ವಿಧಾನಸಭೆಯಲ್ಲಿ ಅವರು ಬೇರೆ ಬೇರೆ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಮಗೆ ನಿಮ್ಮ ಮಾರ್ಗದರ್ಶನ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಯಡಿಯೂರಪ್ಪ ಅವರಿಗೆ ಮನಃಪೂರ್ವಕವಾಗಿ ಅಭಿನಂದಿಸಿ ವಿದಾಯ ಹೇಳಿದರು.