ನಾವು ಬಿಜೆಪಿ ಕಟ್ಟುವಾಗ ಅವನಿಗೆ ಚಡ್ಡಿ ಹಾಕಲು ಕೂಡಾ ಬರುತ್ತಿರಲಿಲ್ಲ ಎಂದು ಬಿಜೆಪಿ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬಿವೈ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿಎಂ ಯಡಿಯೂರಪ್ಪ ಅವರು ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಹಾಗೂ ಪಕ್ಷದ ಹೈಕಮಾಂಡ್ ಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪರನ್ನು ಸಮರ್ಥಿಸಿಕೊಂಡಿದ್ದಾರೆ.

ನಾವು ಬಿಜೆಪಿ ಕಟ್ಟುವಾಗ ಅವನಿಗೆ ಚಡ್ಡಿ ಹಾಕಲೂ ಬರುತ್ತಿರಲಿಲ್ಲ. ಈಗ ಅವನ ಮುಂದೆ ನಿಂತು ನಾವು ಅಥವಾ ಈಶ್ವರಪ್ಪ ʼಸರ್ʼ ಅನ್ನಬೇಕಾ ಎಂದು ಖಾರವಾಗಿ ಪ್ರಶ್ನಿಸಿದ ಯತ್ನಾಳ್, ಯಡಿಯೂರಪ್ಪ ಅವರಿಗೆ ವಯೋಸಹಜ ಮರೆವು ಹೆಚ್ಚಾಗಿದೆ ಎಂದು ಕಿಡಿ ಕಾರಿದ್ದಾರೆ.
ಎಲ್ಲಾ ಇಲಾಖೆಗಳಲ್ಲೂ ನೀವು ಹಸ್ತಕ್ಷೇಪ ಮಾಡುವುದಾದರೆ ನಿಮಗೆ ಸಚಿವ ಸಂಪುಟ ಯಾಕೆ ಬೇಕು. ಎಲ್ಲದಕ್ಕೂ ವಿಜಯೇಂದ್ರ ಅವರನ್ನೇ ನೇಮಕ ಮಾಡಿ ಬಿಡಿ. ʼನಾನು ಮುಖ್ಯಮಂತ್ರಿ…ʼ ಎಂದು ವಿಜಯೇಂದ್ರ ಪ್ರಮಾಣವಚನ ಸ್ವೀಕರಿಸಿಬಿಡಲಿ. ಇಡೀ ಕರ್ನಾಟಕವನ್ನು ರಾಘವೇಂದ್ರ, ಸೇರಿದಂತೆ ಎಲ್ಲಾ ನನ್ನ ಮಕ್ಕಳೇ ನೋಡಿಕೊಳ್ತೀವಿ. ನೀವೆಲ್ಲರೂ ಶಾಸಕರಾಗಿ ಉಳೀರಿ ಎಂದು ಹೇಳುವಂತೆ ಯತ್ನಾಳ್ ಮುಖ್ಯಮಂತ್ರಿಯನ್ನು ಛೇಡಿಸಿದ್ದಾರೆ.

ನಾನು ಈ ಕಾರಣಕ್ಕೇ ಮಂತ್ರಿಯಾಗಿಲ್ಲ. ಈ ಗುಲಾಮಗಿರಿ ಬೇಡವೆಂದೇ ನಾನು ಸಚಿವ ಸ್ಥಾನವನ್ನು ಒಪ್ಪಿಕೊಂಡಿಲ್ಲ. ವಿಜಯೇಂದ್ರ ಅಥವಾ ರಾಘವೇಂದ್ರ ಮುಂದೆ ಬೇಡುವಂತ ಸ್ಥಿತಿಯಲ್ಲಿ ಯತ್ನಾಳ್ ಇಲ್ಲ. ನಾನು, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಎಲ್ಲರೂ ಸಮಾನರಾಗಿ ಹೋರಾಟ ಮಾಡಿ ಪಕ್ಷ ಕಟ್ಟಿದ್ದೇವೆ. ಅವರೊಬ್ಬರೇ ಕಟ್ಟಿದ ಪಕ್ಷವಲ್ಲ ಇದು ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲೇ ಉಪಚುನಾವಣೆ ನಡೆಯುವುದಿದ್ದರೆ ಪಕ್ಷ ಯಾಕೆ ಬೇಕು? ನರೇಂದ್ರ ಮೋದಿ ಯಾಕೆ ಬೇಕು? ನೀವು ಅಷ್ಟೊಂದು ಪ್ರಭಾವಿಯಾಗಿದ್ದರೆ ಕೆಜೆಪಿ ಕಟ್ಟಿ 120 ಸ್ಥಾನವನ್ನು ಗೆಲ್ಲಬೇಕಿತ್ತು ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.