
ಬಿಜೆಪಿಯಿಂದ 2ನೇ ಬಾರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟಿಸಿ ಆದೇಶ ಹೊರಬಿದ್ದಿದೆ. ಈ ಹಿಂದೆ ಎರಡು ಬಾರಿ ಪಕ್ಷದ ಉಚ್ಛಾಟನೆ ಶಿಕ್ಷೆಗೆ ಗುರಿಯಾಗಿದ್ದ ಯತ್ನಾಳ್ , 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಅಮಾನತ್ತಾಗಿದ್ದರು. ಯಡಿಯೂರಪ್ಪ ಹಾಗು ಶೋಬಾ ಕರಂದ್ಲಾಜೆ ಮತ್ತು ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು.

ಬಿಜೆಪಿಯಲ್ಲಿ ಉಚ್ಛಾಟನೆ ಆದ ಬಳಿಕ ಜೆಡಿಎಸ್ ಪಕ್ಷ ಸೇರಿದ್ದ ಯತ್ನಾಳ್, 2013 ರಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯ ಕಂಡಿದ್ದರು. ಬಳಿಕ 2014 ರಲ್ಲಿ ಅಮಾನತ್ತು ಶಿಕ್ಷೆ ರದ್ದು ಮಾಡಿದ ಬಿಜೆಪಿ ಪಕ್ಷಕ್ಕೆ ವಾಪಸ್ ಕರೆ ತಂದರು. ಆ ಸಮಯದಲ್ಲಿ ಯಡಿಯೂರಪ್ಪ ಬಿಜೆಪಿಯಲ್ಲಿ ಇರಲಿಲ್ಲ. 2014 ರ ಲೋಕಸಭಾ ಚುನಾವಣೆ ಬಳಿಕ ಪರಿಷತ್ ಚುನಾವಣೆಗೆ ಪಕ್ಷದ ಟಿಕೆಟ್ ಸಿಗದ ಕಾರಣಕ್ಕೆ 2016 ರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಕಾರಣ ಮತ್ತೊಮ್ಮೆ 2016 ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು.

ಬಂಡಾಯವಾಗಿ ಸ್ಪರ್ಧೆ ಮಾಡಿ ಪರಿಷತ್ ಚುನಾವಣೆಯಲ್ಲಿ ಗೆದ್ದು ಬೀಗಿದರು. ಆ ನಂತರ 2018 ರಲ್ಲಿ ಕೇಂದ್ರದ ವರಿಷ್ಟರು ಹಾಗೂ ಯಡಿಯೂರಪ್ಪ ಅಮಾನತ್ತು ಶಿಕ್ಷೆ ರದ್ದು ಮಾಡಿ ಯತ್ನಾಳರನ್ನು ವಾಪಸ್ ಬಿಜೆಪಿಗೆ ಕರೆ ತಂದರು. 2018 ರಲ್ಲಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಗಳಿಸಿದರು. ನಂತರ ಯಡಿಯೂರಪ್ಪ ಹಾಗೂ ಕುಟುಂಬ ರಾಜಕಾರಣದ ವಿರುದ್ದ ಅಬ್ಬರಿಸಿ ಭ್ರಷ್ಟಾಚಾರ ಆರೋಪ ಮಾಡಿಕೊಂಡು ಬಂದರು. ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಿಜಯಪುರ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿ ಜಯ ಗಳಿಸಿದ್ರು.
ನಂತರ ಯಡಿಯೂರಪ್ಪ ವಿರುದ್ದ ಕಿಡಿನುಡಿ ನಿಲ್ಲಲಿಲ್ಲ. ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಆದ ಬಳಿಕ ಯತ್ನಾಳ್, ನಿರಂತರ ವಾಗ್ದಾಳಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ಬಾರಿ ಕೇಂದ್ರದ ಶಿಸ್ತು ಸಮಿತಿ ನೋಟಿಸ್ ನೀಡಿದಾಗಲೂ ಉತ್ತರ ನೀಡಿದ್ದರು. ಇದೀಗ ಬಿಜೆಪಿಯಿಂದ ಯತ್ನಾಳ್ನನ್ನು ಮೂರನೇ ಬಾರಿ ಉಚ್ಛಾಟನೆ ಮಾಡಲಾಗಿದೆ. ಆದರೆ ಇದೀಗ ಜೆಡಿಎಸ್ ಕೂಡ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಬಾಗಿಲು ಕೂಡ ಬಂದ್ ಆದಂತಾಗಿದೆ.
