ಯಾರಿಗೂ ಅರ್ಥವಾಗದ ಅವನ ವ್ಯಕ್ತಿತ್ವವನ್ನು ನೆನೆಯುವಾಗ ಧ್ವನಿ ಉಡುಗಿಹೋಗುತ್ತದೆ
ನಾ ದಿವಾಕರ
ಅವನ ಬದುಕೇ ಹಲವು ವಿಕಲ್ಪಗಳಿಂದ , ವೈಚಿತ್ರ್ಯಗಳಿಂದ ಕೂಡಿದ ಪಯಣ. ಮೂರು ವರ್ಷಗಳ ಹಿಂದೆ ಇದೇ ದಿನ ( ಮೇ 18 2021) ಅವನು ಅಂತಿಮ ಉಸಿರೆಳೆದಾಗ ಕೊನೆಯ ಬಾರಿ ಮುಖ ನೋಡಲೂ ಸಾಧ್ಯವಾಗದೆ ಹೋಗಿದ್ದು ಇಂದಿಗೂ ಕಾಡುವ ನೋವು. ಕಾರಣ ಕೋವಿದ್. ತನ್ನ ಆರೋಗ್ಯದ ಬಗ್ಗೆ ಎಂದೂ ಸಹ ಗಮನ ನೀಡದೆ ಕೋವಿದ್‌ಗೆ ಬಲಿಯಾದ ಅವನ ಜೀವನವನ್ನು ಸೂಕ್ಷ್ಮ ಮಸೂರಗಳ ಮೂಲಕ ನೋಡಿದಾಗ ಮನದಾಳದ ನೋವು, ವೇದನೆ , ಜೊತೆಗೆ ಸಿಟ್ಟು ಎಲ್ಲವೂ ಉಕ್ಕಿಬರುತ್ತದೆ. ಆದರೆ ಸಾವು ಒಂದು ಕ್ಷಣ ನಮ್ಮೊಳಗಿನ ವೈರುಧ್ಯಗಳೆಲ್ಲವನ್ನೂ ಬದಿಗೆ ಸರಿಸಿ ಮರೆಯಾಗಿಸಿಬಿಡುತ್ತದೆ. ಇವನ ಬದುಕಿನ ಹೆಜ್ಜೆಗಳತ್ತ ಗಮನ ಹರಿದಾಗ ಮನಸ್ಸು ಹೊಯ್ದಾಡುತ್ತದೆ, ವಿಹ್ವಲವಾಗುತ್ತದೆ, ಗೊಂದಲದ ಗೂಡಾಗುತ್ತದೆ. ಕಾರಣ ನನ್ನ ಅಣ್ಣ
ರವಿ ಎಂಬ ವ್ಯಕ್ತಿ Intriguing Personality ಅಂತಾರಲ್ಲಾ ಹಾಗೆ. ಯಾರಿಗೂ ಅರ್ಥವಾಗದವ. ಕೊನೆಗೆ ತಾನೇನು ಎನ್ನುವುದು ಅವನಿಗೇ ಅರ್ಥವಾಗಲಿಲ್ಲ ಎನಿಸುತ್ತದೆ.
ಬಹುಶಃ ರವಿ ನೆನಪಾದಾಗ ಕಾಲಚಕ್ರದ ಮುಳ್ಳು ಸರಿಯಾಗಿ ಐವತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿಬಿಡುತ್ತದೆ. ಹೌದು 1974. ನನಗಿಂತ ನಾಲ್ಕು ವರ್ಷ ಹಿರಿಯ. ಓದಿನಲ್ಲಿ ಬಹಳ ಬುದ್ಧಿವಂತ. ತೀಕ್ಷ್ಣಮತಿ. ಒಮ್ಮೆ ಆಸ್ತಿಕ ಮರುಕ್ಷಣ ನಾಸ್ತಿಕ, ಒಂದು ಕ್ಷಣ ಬಂಡಾಯಗಾರ ಮತ್ತೊಂದು ಕ್ಷಣ ಅಜಾತಶತ್ರು ಹೀಗೆ ಪಯಣದುದ್ದಕ್ಕೂ ಕವಲುಗಳಲ್ಲೇ ಸಾಗಿದ ಅವನ ಜೀವನ ಇಂದಿಗೂ ಅರ್ಥವಾಗದ ಒಗಟು. ಈ ಒಗಟುಗಳನ್ನು ಬಿಡಿಸುವುದೇ ದುಸ್ಸಾಹಸ. ಒಮ್ಮೆ ಪ್ರಖಾಂಡ ಪಂಡಿತ ಎಂದೇ ಪ್ರಸಿದ್ಧರಾಗಿದ್ದ ಜ್ಯೋತಿಷಿಯೊಬ್ಬನ ಹತ್ತಿರ ಇವನು ಹೋಗಿದ್ದ. ಇವನು ಅಲ್ಲಿಗೆ ಹೋದ. “ ನಿನ್ನ ಮುಖ ನೋಡಿದರೆ ಏನೂ ಅರ್ಥವಾಗುವುದಿಲ್ಲ ” ಎಂದು ಹೇಳಿ ವಾಪಸ್ ಕಳಿಸಿದ. ಹಾಗೆ ಯಾರಿಗೂ ಅರ್ಥವಾಗದವ ನನ್ನ ಅಣ್ಣ ರವಿ.
ಬಾಲ್ಯ- ಯೌವ್ವನದತ್ತ ಹೊರಳಿದಾಗ
ಈಗ ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸುತ್ತೇನೆ. 1974-75. ಅಕ್ಷರಶಃ ಬೀದಿಗೆ ಬಿದ್ದ ಕುಟುಂಬ. ಸದ್ಯ ಸೂರು ಎನ್ನುವುದೊಂದಿತ್ತು. ಮಳೆ ಬಂದರೆ ಒಳಗೆ ಬಕೆಟ್ ಇಡಬೇಕಾದ ಸ್ಥಿತಿಯ ಹೆಂಚುಗಳ ಮನೆ. ಇದ್ದಾಗ ಊಟ ಇಲ್ಲದಿದ್ದರೆ ಮಾತುಗಳೇ ಆಹಾರ. ತಂದೆಯ ನೌಕರಿಗೆ ಚ್ಯುತಿಯಾದ ಮೇಲೆ ಅಕ್ಷರಶಃ ಬೀದಿಗೆ ಬಿದ್ದ ಕುಟುಂಬ.ಒಬ್ಬ ಸೋದರಿಯೊಬ್ಬಳ ಬೆಂಗಳೂರಿನ ನೌಕರಿ ಕೈ-ಬಾಯಿಗೆ ಸರಿಯಾದ ಆದಾಯ. ಅಮ್ಮನ ಪರಿಭಾಷೆಯಲ್ಲಿ ಇದ್ದ ಕೆಲಸಬಿಟ್ಟು ಬಂದ ದಂಡಪಿಂಡ ದೊಡ್ಡಣ್ಣ, ನಾವು ಮೂವರು ಸೋದರರು, ಇಬ್ಬರು ಸೋದರಿಯರು ಜೊತೆಗೆ ಮಧುಮೇಹದಿಂದ ನಿಷ್ಕ್ರಿಯರಾಗಿದ್ದ ಅಪ್ಪ, ಚಿಂತೆಗಳ ಗೂಡಾಗಿದ್ದ ಅಮ್ಮ. ಇದಿಷ್ಟು ಸಂಸಾರ.
ಆಗ ಪಿಯುಸಿ ಓದುತ್ತಿದ್ದ ಅಣ್ಣ ರವಿ ತನ್ನ ಓದಿಗೆ ತಿಲಾಂಜಲಿ ನೀಡಲೇಬೇಕಾಯಿತು. ಅಪ್ಪನ ಔಷಧಿಗಾದರೂ ದುಡ್ಡು ಬೇಕಲ್ಲವೇ ? ಜೀವನೋಪಾಯವೇ ಇಲ್ಲದ ಸಂದಿಗ್ಧ ಸನ್ನಿವೇಶದಲ್ಲಿ ಇವನಿಗೆ ಸಿಕ್ಕ ಕೆಲಸ ಅಕ್ಕಿ ಗಿರಣಿಯಲ್ಲಿ ಗುಮಾಸ್ತನಾಗಿ. Writer ಎನ್ನುತ್ತಿದ್ದರು. ತಿಂಗಳಿಗೆ 90 ರೂ ಸಂಬಳ. ಒಂದು ನೈಟ್ ಷಿಫ್ಟ್ ಮಾಡಿದರೆ ಎರಡು ರೂ ಅಧಿಕ. ಓದಿದ್ದು ಆರ್ಟ್ಸ್ ಆದರೂ ಸಿಕ್ಕ ಕೆಲಸ ಮಂಡಿಯ ಲೆಕ್ಕ ಬರೆಯುವುದು. ಮನೆ ಬಾಡಿಗೆ 125 ರೂ. ಏಳು ಹೊಟ್ಟೆಗಳು. 1977ರಲ್ಲಿ ಅಪ್ಪ ನಿರ್ಗಮಿಸುವ ವೇಳೆಗೆ ಹಿರಿಯಣ್ಣ ಎಲ್ಲರಿಗೂ ಟಾಟಾ ಹೇಳಿ ತನ್ನ ಪಾಡಿಗೆ ತಾನು ಹೊರಟಿದ್ದ. ಕಡೆಯ ಒಂದು ವರ್ಷದಲ್ಲಿ ಅಪ್ಪ ಸಹ ಹಾಸಿಗೆ ಹಿಡಿದಾಗ, ಬದುಕೇ ಅಲ್ಲೋಲ ಕಲ್ಲೋಲವಾಗಿಹೋಗಿತ್ತು.
ದಿನವಿಡೀ ರೈಸ್ ಮಿಲ್‌ನಲ್ಲಿ ಲೋಡಿಂಗ್-ಅನ್ ಲೋಡಿಂಗ್ ಕೆಲಸದ ಮೇಲ್ವಿಚಾರಣೆ ಹೊತ್ತು ರಾತ್ರಿ ಲೆಕ್ಕದ ಪುಸ್ತಕಗಳನ್ನು, ರಸೀದಿ ಪುಸ್ತಕಗಳೊಂದಿಗೆ ಮನೆಗೇ ತರುತ್ತಿದ್ದ. ಅದಕ್ಕೆ ನಡುರಾತ್ರಿಯಲ್ಲಿ ನೆರವಾಗುವುದು ನನ್ನ ಮತ್ತು ಮತ್ತೊಬ್ಬ ಸೋದರನ ಕೆಲಸ. ಓದಿಗೆ ಬೈ ಹೇಳಿದ ರವಿ ದಿನವಿಡೀ ದುಡಿದು ತರುತ್ತಿದ್ದ ದುಡ್ಡು “ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ”ಎನ್ನುವ ಗಾದೆ ಮಾತಿನಂತಾಗಿತ್ತು. ಅಣ್ಣ ರವಿ ಅಕ್ಕಿ ಗಿರಣಿಯಲ್ಲಿದ್ದುದರಿಂದ ಮನೆಗೆ ಅಕ್ಕಿ ಸುಲಭವಾಗಿ ಬರುತ್ತಿತ್ತು. ಕೆಲವೊಮ್ಮೆ ಪುಗಸಟ್ಟೆಯಾಗಿಯೂ. ಏನಿಲ್ಲದಿದ್ದರೂ ಮಜ್ಜಿಗೆ ಅನ್ನ ಖಾಯಂ. ಅದೂ ಇಲ್ಲದ ದಿನ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ. ಸೋದರ ನಾಗರಾಜನ ಜೋಕುಗಳ ನಡುವೆ, ಪಕ್ಕದ ಮನೆಯ ರೋಷನ್ ಎಂಬ ಮಗುವಿನ ಆಟಗಳ ನಡುವೆ ಹಸಿವೆ ಮರೆತುಹೋಗುತ್ತಿತ್ತು.
ಈ ಸಂದಿಗ್ಧ ಸನ್ನಿವೇಶಗಳ ನಡುವೆ ಅವನ ಹೆಗಲಿಗೆ ಹೊರಿಸಿದ ನೊಗ ದೊಡ್ಡ ಕುಟುಂಬ. ಅಪ್ಪ ತೀರಿಹೋಗುವ ವೇಳೆಗೆ (1977) ಹೈರಾಣಾಗಿದ್ದ ಒಂದು ಸಂಸಾರ. ನನ್ನ ಮತ್ತು ಸೋದರ ನಾಗರಾಜನ ಓದಿನ ಜವಾಬ್ದಾರಿ. ಪಿಯುಸಿ ಏನೋ ಬಂಗಾರಪೇಟೆಯಲ್ಲಿ ಆಯಿತು, ಪದವಿಗೆ ಕೋಲಾರಕ್ಕೆ ಹೋಗಬೇಕಿತ್ತು. ಒಂದೋ ಎರಡೋ ರುಪಾಯಿ ಇದ್ದರೆ ಕಾಲೇಜು ಇಲ್ಲವಾದರೆ ಮನೆ. ಬಸ್ ಪಾಸ್ ಮಾಡಿಸುವ ಹಣವಂತೂ ಇರಲಿಲ್ಲ. ಇಬ್ಬರು ಸೋದರಿಯರೂ ಮನೆಯಲ್ಲಿ. ಜೊತೆಗೆ ಅಮ್ಮ. ಬಹುಶಃ ಈ ನೊಗದ ಭಾರವೇ ಅವನ ಭವಿಷ್ಯದ ಎಲ್ಲ ವಿಕಲ್ಪಗಳಿಗೂ ಕಾರಣ ಎನಿಸುತ್ತದೆ. ಎರಡು ಮೂರು ಅಕ್ಕಿಮಂಡಿಗಳಲ್ಲಿ ಕೆಲಸ ಮಾಡುತ್ತಾ “ ಕೃಷ್ಣನ ಲೆಕ್ಕ ” ಬರೆಯುವುದರಲ್ಲಿ ನಿಷ್ಣಾತನಾಗಿದ್ದರಿಂದ ಮಾಲೀಕರ ಮೆಚ್ಚುಗೆಗೂ ಪಾತ್ರನಾಗಿದ್ದ. ಇದಕ್ಕೆ ಬಹುಮಾನವಾಗಿ ಬರುತ್ತಿದ್ದುದು ಸಂಬಳ ಅಲ್ಲ, ಪುಗಸಟ್ಟೆಯಾಗಿ ಅಕ್ಕಿ. ಮನೆ ಬಾಡಿಗೆ ಸರಿಯಾಗಿ ಕೊಟ್ಟ ನೆನಪೇ ಇಲ್ಲ. ಎಷ್ಟುಬಾಕಿ ಇತ್ತೋ/ಇದೆಯೋ ದೇವರೇ ಬಲ್ಲ.
ಹುಡುಗಾಟದಿಂದ ಹುಡುಕಾಟದವರೆಗೆ
ಅಣ್ಣನ ಬದುಕು ಪಡೆದುಕೊಂಡ ತಿರುವುಗಳಿಗೆ, ವಿವಿಧ ಕವಲುಗಳ ವಿಕಲ್ಪಗಳಿಗೆ ಅವನ ಮೇಲೆ ಅನಿವಾರ್ಯವಾಗಿ ಹೇರಲ್ಪಟ್ಟ ಸಂಸಾರದ ನೊಗದ ಭಾರವೇ ಕಾರಣ ಎನಿಸುತ್ತದೆ. ಏಕೆಂದರೆ ಅವನು ಮೂಲತಃ ಸ್ವೆಚ್ಛಾಚಾರಿ. ಬಾಲ್ಯದಲ್ಲಿ ಅಪ್ಪ-ಅಮ್ಮ ಸಿನೆಮಾಗೆ ಹೊರಟರೆ ನಾನೂ ಬರುತ್ತೇನೆ ಎಂದು ಬೆಂಬತ್ತಿ, ಅಮ್ಮನ ಕೈ ಏಟು ತಿಂದು ವಾಪಸ್ ಬರುತ್ತಿದ್ದವ. ಹಟವಾದಿ, ತುಂಟ, ಅಪಾರವಾದ ಚೇಷ್ಟೆ. ಒಮ್ಮೆ ಪಿಯುಸಿಯಲ್ಲಿ ಸಹಪಾಠಿಗಳ ಬಲಿ ಚಾಲೆಂಜ್ ಮಾಡಿ ಹುಡುಗಿಗೆ ಗುಲಾಬಿ ಹೂ ಮುಡಿಸಿ ಸಸ್ಪೆಂಡ್ ಆಗಿದ್ದ. ಅದನ್ನು ತೆರವುಗೊಳಿಸಲು ಇಡೀ ಶಾಲೆ ಮುಷ್ಕರ ಹೂಡಬೇಕಾಯಿತು. ಬುದ್ಧಿವಂತ ಎಂಬ ಕಾರಣಕ್ಕೆ ಮುಕ್ತನಾಗಿದ್ದ. ಅಪ್ಪ ಚೆನ್ನಾಗಿ ಇದ್ದಾಗಲೇ ನಡೆದ ಒಂದು ಪ್ರಸಂಗ ಇಲ್ಲಿ ಹೇಳಲೇಬೇಕು. ಅವರು ತಮ್ಮ ಔಷಧಿಯನ್ನು ಎರಡು ಮೂರು ತಿಂಗಳಿಗಾಗುವಷ್ಟು ಸಂಗ್ರಹಿಸುತ್ತಿದ್ದರು.
ಒಮ್ಮೆ ನವರಾತ್ರಿಯಲ್ಲಿ ಇವನಿಂದ ಮನೆಯಲ್ಲಿ ಸರಸ್ವತಿ ಪೂಜೆ ಮಾಡುವ ಸಂಭ್ರಮ. ಮಂಟಪ ಮಾಡಿ, ತೋರಣ ಕಟ್ಟಿ ಅದ್ಧೂರಿಯಾಗಿ ನೆರವೇರಿಸಿಬಿಟ್ಟ. ನಮಗೆಲ್ಲಾ ಸಂಭ್ರಮವೋ ಸಂಭ್ರಮ. ದುಡ್ಡು ಎಲ್ಲಿಂದ ಬಂತೋ ಎಂದು ಅಮ್ಮ ಕೇಳಿದಾಗ ಹೇಗೋ ಮಾಡಿದೆ ಬಿಡಮ್ಮ ಎಂದ. ಒಂದೆರಡು ದಿನ ಕಳೆದ ಮೇಲೆ ಅಟ್ಟದ ಮೇಲಿಟ್ಟಿದ್ದ ಔಷಧಿ ತೆಗೆಯಲು ಹೋದರೆ ಅಲ್ಲೇನಿದೆ !!! ಎಲ್ಲಾ ಖಾಲಿ. ಸೂಕ್ಷ್ಮಮತಿ ಅಮ್ಮನಿಗೆ ಇದು ಗೊತ್ತಾಗಿಹೋಯಿತು. ವಿಚಾರಣೆಯಲ್ಲಿ ಸಿಕ್ಕಿಬಿದ್ದ. ಎಲ್ಲವನ್ನೂ ಮಾರಿಬಿಟ್ಟು ಆ ಹಣದಿಂದ ಸರಸ್ವತಿ ಸಂಭ್ರಮ ಆಚರಿಸಿದ್ದ. ಅಮ್ಮನಿಂದ ಬಿದ್ದ ಏಟುಗಳು ಇಂದಿಗೂ ನೆನಪಿದೆ. ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗೆ ಇಳಿಸಲೂ ಸಜ್ಜಾದರು. ಇವನೂ ಹಟವಾದಿ. ಬಿಟ್ಟುಬಿಡು ಸಾಯ್ತೀನಿ ಎಂದನೇ ಹೊರತು ತಪ್ಪಾಯಿತು ಎನ್ನಲಿಲ್ಲ. ಅಂತಹ ಉದ್ಧಟನ ಇದ್ದವನಿಗೆ ಒಮ್ಮೆಲೆ ದೊಡ್ಡ ಕುಟುಂಬದ ನೊಗ ಹೊರಿಸಿದರೆ ದಾರಿ ಕವಲೊಡೆಯದೆ ಇರುತ್ತದೆಯೇ ?
ಇವನ ಹಾದಿಯೂ ಹಾಗೇ. ಅಂತೂ ಇಂತು ನನ್ನ ಹಾಗೂ ಸೋದರನ ಪದವಿ ಮುಗಿಯುವವವರೆಗೂ ಗಾಡಿ ನಡೆಯುತ್ತಾ ಬಂದು. ಬಿರು ಬೇಸಿಗೆಯಲ್ಲೂ ಸ್ವೆಟರ್ ಹಾಕುವ ಪರಿಸ್ಥಿತಿಯಲ್ಲಿ ಕಾಲೇಜು ವ್ಯಾಸಂಗ. ಅರಿವೆಯ ತೂತುಗಳನ್ನು ಮರೆಮಾಚುವುದು ಹೇಗೆ ಮತ್ತೆ ? ಅವರಿವರ ನೆರವಿನೊಂದಿಗೆ ಫೀಸುಗಳನ್ನು ಕಟ್ಟಿಕೊಂಡು ಎಲ್ಲೂ ನಪಾಸಾಗದೆ ಒಬ್ಬ ಪದವಿ ಮುಗಿಸಿದ, ನಾನು ಬಿಕಾಂ ಮೂರನೆ ವರ್ಷಕ್ಕೆ ಬಂದಿದ್ದೆ. ಈ ನಡುವೆ ಬೇಸಿಗೆ-ನವರಾತ್ರಿ ರಜೆಯಲ್ಲಿ ಬೆಂಗಳೂರಿನ ಮೆಡಿಕಲ್ ಷಾಪ್ ಒಂದರಲ್ಲಿ ಕೆಲಸ ಮಾಡಿದ್ದೂ ಆಗಿತ್ತು. ಕಾಲೇಜಿಗೆ ಹೋಗದಿದ್ದರೂ ಹೇಗೋ ಓದಿಕೊಂಡು 1982ರ ಪರೀಕ್ಷೆಗೆ ಹೋಗಬೇಕಿತ್ತು. 1981ರ ಸೆಪ್ಟಂಬರ್ ಮೊದಲ ವಾರ ಅಣ್ಣ ರವಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ನನ್ನ ಭವಿಷ್ಯವನ್ನಷ್ಟೇ ಅಲ್ಲ ಇಡೀ ಕುಟುಂಬದ ಬುನಾದಿಯನ್ನು ಅಲುಗಾಡಿಸಿಬಿಟ್ಟಿತು. ಹಠಾತ್ತನೆ ಇಡೀ ಸಂಸಾರವನ್ನು ಹೊಸಕೋಟೆಗೆ ಸಾಗಿಸುವ ತೀರ್ಮಾನಕ್ಕೆ ಬಂದುಬಿಟ್ಟ. ನನ್ನ ಪರೀಕ್ಷೆ/ಭವಿಷ್ಯ ??
????ಈ ಚಿಹ್ನೆಯೊಂದಿಗೇ ಇಬ್ಬರು ಸೋದರಿಯರು, ಮತ್ತೊಬ್ಬ ಸೋದರ ಮತ್ತು ಅಮ್ಮನೊಡನೆ ಯಾರೂ ದಿಕ್ಕಿಲ್ಲದ ಹೊಸಕೋಟೆಗೆ ರವಾನೆಯಾದೆವು. ಇಬ್ಬರೂ ಕೀರ್ತಿ ಸರ್ವೀಸ್ ಸ್ಟೇಷನ್, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವುದಾಗಿ ನಿಶ್ಚಯವಾಗಿತ್ತು. ತಿಂಗಳಿಗಾಗುವಷ್ಟು ಅಕ್ಕಿ ಪೂರೈಸುವುದು ಇವನ ಜವಾಬ್ದಾರಿ. ಬಂಗಾರಪೇಟೆಯಲ್ಲಿ ಇವನ ಒಂಟಿವಾಸ. ಅಲ್ಲೇನಾಯಿತು ಎಂದು ಹೇಳಿದರೆ ಒಂದು ಟಿವಿ ಧಾರಾವಾಹಿಯೇ ಆಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆರು ತಿಂಗಳಲ್ಲೇ ನಾವು ಸೂರಿಲ್ಲದವರಾಗಿದ್ದೆವು. ಇರಲು ಮನೆ ಇಲ್ಲ, ದುಡಿಯಲು ನೌಕರಿಯಿಲ್ಲ. ಅಕ್ಕ ಒಂದು ದಾರಿ. ಸೋದರ, ಅಮ್ಮ ಮತ್ತೊಬ್ಬ ಸೋದರಿ ಹಿರಿಯಕ್ಕನ ಮನೆಯ ಅನಿವಾರ್ಯದ ಅತಿಥಿಗಳು. ನಾನು ಪದವಿ ಪರೀಕ್ಷೆಗಾಗಿ ಮರಳಿ ಗೂಡಿಗೆ. ಗಜೇಂದ್ರ ಎಂಬ ಆತ್ಮೀಯ ಗೆಳೆಯನ ಮನೆಯಲ್ಲಿ ರಾತ್ರಿ ಊಟ ಮತ್ತು ನಿದ್ದೆ. ನಮ್ಮ ನೆರೆಮನೆಯಲ್ಲಿದ್ದ ಬೈರಾರೆಡ್ಡಿ-ಭಾರತಿ ದಂಪತಿಗಳಿಂದ ಮುಂಜಾವಿನ ತಿಂಡಿ. ನೂರುಲ್ಲಾ ಎಂಬ ಗೆಳೆಯನ ನೆರವಿನಿಂದ ಸುಜಾತಾ ಮೆಸ್‌ನಲ್ಲಿ ಮಧ್ಯಾಹ್ನದ ಊಟದ ಕೂಪನ್. ಇಷ್ಟೆಲ್ಲಾ ಬಾಧೆ ಏಕೆಂದರೆ ಇವನು ಊರುಬಿಟ್ಟು ಎಲ್ಲೋ ಹೋಗಿದ್ದ. ಅಜ್ಞಾತನಾಗಿ. ಅಟೆಂಡೆನ್ಸ್ ಇಲ್ಲದೆಯೇ ಪದವಿ ಪರೀಕ್ಷೆ ಮುಗಿಸಿ 60% ಅಂಕ ಗಳಿಸಿ ಪಾಸಾದೆ. ಇದು ಬೇರೆಯೇ ಕಥೆ ಇನ್ನೊಮ್ಮೆ ಹೇಳಬಹುದು.
ವಿಕಲ್ಪಗಳ ಹಾದಿಯಲ್ಲಿ ಬದುಕು
ಅಣ್ಣ ರವಿಯ ಬದುಕಿನ ವಿಕಲ್ಪಗಳು ಆರಂಭವಾದದ್ದು ಇಲ್ಲಿಂದ. ನಾನು ಮತ್ತು ಸೋದರ ಬ್ಯಾಂಕಿಗೆ ಸೇರುವ ಮುನ್ನವೇ ಬೆಂಗಳೂರಿನಲ್ಲಿ ಮಾಡಿದ್ದ ಸಣ್ಣ ಮನೆಗೆ ಇವನನ್ನು ಕರೆತರಲು ಸಾಕಷ್ಟು ಹುಡುಕಾಡಬೇಕಾಯಿತು. ಇರಬಾರದ ಜಾಗದಲ್ಲಿ, ಇರಬಾರದವರ ಸಂಗದಲ್ಲಿ ಇದ್ದವನನ್ನು ಕರೆತಂದಿದ್ದಾಯಿತು. ಖಾಸಗಿ ನೌಕರಿಯೂ ಆಯಿತು. ಅಲ್ಲಿ ಇವನ ಕೃಷ್ಣನ ಲೆಕ್ಕ ಗೊತ್ತಾಗಿ ಕಿಕ್‌ಔಟ್ ಆಯಿತು. ನಾನು ದಾವಣಗೆರೆಯ ಲೋಕಿಕೆರೆಯಲ್ಲಿ ಬ್ಯಾಂಕ್ ಸೇರಿದೆ. ಜೂನ್ 16 1984, ದೂರವಾಣಿ ಕರೆ ಬಂತು. “ ದಿವಿ ನಾಳೆ ಮದುವೆ ಮಾಡ್ಕೋತಾ ಇದೀನಿ ನೀನು ಇಲ್ಲದಿದ್ದರೆ ಆಗುವುದಿಲ್ಲ ಕೂಡಲೇ ಹೊರಟು ಬಾ ” ಇವನ ತಿಕ್ಕಲು ಕರೆಗೆ ಹೆದರಿ ರಾತ್ರಿವೇಳೆಗೆ ಬಂದು ಸೇರಿದೆ. ಮನೆಯಲ್ಲಿ ಮೂವರು ಹೆಣ್ಣುಮಕ್ಕಳಿದ್ದಾಗ ಇವನ ಮದುವೆ, ಇವನಿಗೂ ಆದಾಯವಿಲ್ಲ, ಸಹಜವಾಗಿಯೇ ಅಮ್ಮನ ವಿರೋಧ.
ಕೊಲೆ ಮಾಡಿಯಾದರೂ ಮದುವೆಯಾಗುತ್ತೇನೆ ಎಂದು ಇವನ ಹಟ. ಅಮ್ಮನನ್ನು ಒಪ್ಪಿಸಿ ಅವರ ಅನುಪಸ್ಥಿತಿಯಲ್ಲಿ ಇವನ ಮದುವೆ ಮಾಡಿಯೂ ಆಯಿತು. ಮೂರೇ ತಿಂಗಳು ಅಮ್ಮನಿಂದ ಇವನಿಗೆ ಗೇಟ್‌ಪಾಸ್ ಸಿಕ್ಕಿದ್ದಕ್ಕೆ ಕಾರಣ ಅವನ ಹೆಂಡತಿಗಿಂತಲೂ ಹೆಚ್ಚಾಗಿ ಇವನ ಚಟಗಳು. 1985 ನಾನು ಸಂಸಾರವನ್ನು ದಾವಣಗೆರೆಗೆ ಸಾಗಿಸಿದೆ. ಇವನು ಬೆಂಗಳೂರಿನಲ್ಲೇ ಉಳಿದ. ಕೆಲವೇ ತಿಂಗಳುಗಳು ಇವನಿಂದ ಮತ್ತೊಮ್ಮೆ ಕರೆ. “ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದೇನೆ, ನೀನು ಕೈ ಹಿಡಿಯದಿದ್ದರೆ !!!! ” ಅಲ್ಲಿಗೇ ಕರೆಸಿದೆ. ಒಬ್ಬನೇ ಬಂದ. ಗೆಳೆಯರ ಜಾಮೀನು ಹಾಕಿಸಿ ಬ್ಯಾಂಕೊಂದರಲ್ಲಿ ಸಾಲ ಕೊಡಿಸಿ ಕಿರಾಣಿ ಅಂಗಡಿ ತೆರೆಸಿದೆ. ಚಿಂದೋಡಿಲೀಲಾ ಅವರ ಸೋದರನ ಮಳಿಗೆ ಅದು. ಒಂದೆರಡು ತಿಂಗಳು ಅದನ್ನೂ ಮುಚ್ಚಿ ಮನೆಯಲ್ಲಿ ಕೂತ. ನನಗೆ ಸಾಲ ತೀರಿಸಲು ಮೂರು ವರ್ಷ ಬೇಕಾಯಿತು. ಪಾಪ ಜಾಮೀನು ಹಾಕಿದವರು ಪರಿತಪಿಸಬೇಕಾಯಿತು. ನಾನು ತಲೆತಗ್ಗಿಸಬೇಕಾಯಿತು.
ಅವನ ಹಿಂದೆಯೇ ಗರ್ಭಿಣಿ ಹೆಂಡತಿಯೂ ಬಂದಳು. ಅವಳೊಡನೆ ಜಗಳ ಕಾದು ರಾತ್ರೋರಾತ್ರಿ ಬೆಂಗಳೂರಿಗೆ ಓಡಿಸಿಬಿಟ್ಟ- ಗೆಳೆಯನ ಜೊತೆ ಮಾಡಿ. ಮಗುವನ್ನು ಮೊದಲು ನೋಡಿದ್ದೂ ನಾನೇ. ಅವನಲ್ಲ. ಹೇಗೋ ಒಪ್ಪಿಸಿ ಕಳಿಸಿದೆ ಮರಳಿ ಗೂಡಿಗೆ, ಬಂಗಾರಪೇಟೆಗೆ ಹೊರಟ. ಮತ್ತದೇ ಮಂಡಿ ಲೆಕ್ಕ ಬರೆಯಲು. 1988 ಅಮ್ಮನಿಗೆ ಶಸ್ತ್ರ ಚಿಕಿತ್ಸೆಯಾಗಿತ್ತು. ನನ್ನೊಡನೆ ಕಳಿಸು ಎಂದು ಇವನ ಒತ್ತಾಯ. ನಾನು ಹೋಗುವುದಿಲ್ಲ ಎಂದು ಅಮ್ಮನ ಹಟ. ಅಮ್ಮನ ಚಿಕಿತ್ಸೆ ನಡೆಯುತ್ತಿದ್ದಾಗಲೇ ಮತ್ತೊಂದು ದೂರವಾಣಿ ಕರೆ. ಗೆಳೆಯನಿಂದ, “ರವಿಯ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ” ಎರಡು ವರ್ಷದ ಮಗುವನ್ನು ಬಿಟ್ಟು ಆಕೆ ಸೀಮೆಎಣ್ಣೆ ಸುರಿದುಕೊಂಡು ಜೀವ ತೆತ್ತಿದ್ದಳು. ಕಾರಣ ಇನ್ನೂ ನಿಗೂಢ. ಈ ಚಟಸಾರ್ವಭೌಮನ ಸಂಗ-ಸಹವಾಸದಿಂದ ಎಂದು ಗೆಳೆಯರಿಂದ ಬಂದ ವರದಿ. ಯಾವ ಹೆಣ್ಣು ತಾನೆ ನಿತ್ಯ ಒದೆ ತಿನ್ನುತ್ತಾಳೆ ? ಕೊನೆಗೆ ಇವನ ಮಗುವಿಗಾಗಿ ನಾನೇ ನನ್ನೂರಿಗೆ ಮರಳಿಬಂದೆ. ಒಟ್ಟಾಗಿ ಇರಲು ಅಮ್ಮನನ್ನು ಒಪ್ಪಿಸಿದೆ.
ಒಂದೇ ವರ್ಷ, ಮತ್ತೊಂದು ಮದುವೆಗೆ ಸಿದ್ಧವಾಗಿಬಿಟ್ಟ. ಅವನಿಗೆ ಬೇಕಿದ್ದುದು ಹೆಣ್ಣೋ ಹೆಂಡತಿಯೋ ಅರಿವಾಗದೆ ಒಪ್ಪಿದೆ.. ಮದುವೆಯೂ ಆಯಿತು. ಚಟಗಳೇನೂ ನಿಲ್ಲಲಿಲ್ಲ. ಅತ್ತೆ ಸೊಸೆ ವಿರಸ, ಹೆಂಡತಿಗೆ ಒದೆತ, ಇವನ ಸಿಗರೇಟು ಹೆಂಡದ ಸರಸ, ಅಮ್ಮನಿಗೆ ಸರಿಹೋಗಲೇ ಇಲ್ಲ. ಸಿಗರೇಟು ಸೇದಬೇಡವೋ ಎಂದ ತಾಯಿಯ ಮುಖಕ್ಕೆ ಸಿಗರೇಟು ಹೊಗೆ ಬಿಟ್ಟರೆ ಆಕೆ ಹೇಗೆ ಸಹಿಸಿಕೊಂಡಾಳು. ಆದರೂ ಸಹಿಸಿಕೊಂಡಳು ಆ ಮಹಾತಾಯಿ, ನನಗಾಗಿ, ಆ ತಾಯಿಲ್ಲದ ಮಗುವಿಗಾಗಿ. ಕೊನೆಗೆ ಅವರೂ ತಮ್ಮ ಹಾದಿ ಹಿಡಿದು ಕೊನೆ ಹಾಡಿದರು. ಇವನೊಡನೆ ಬಾಳುವುದು ಅಸಾಧ್ಯವೆನಿಸಿದಾಗ ಸೋದರನೊಡನೆ ನಾನೂ ಹೊರಬಿದ್ದೆ. ನಂತರದ ಬದುಕು ಅವನದು. ̤ CA ಮಾಡದೆಯೇ ಊರಿನ ಚಾರ್ಟರ್ಡ್ ಅಕೌಂಟೆಂಟ್ ಆಗಿ ಪ್ರಸಿದ್ಧನಾದ. ಕೃಷ್ಣನ ಲೆಕ್ಕದಲ್ಲಿ ನಿಷ್ಣಾತನಾಗಿದ್ದುದು ವ್ಯಾಪಾರಿಗಳಿಗೆ ಆಪ್ತನಾಗಲು ನೆರವಾಗಿತ್ತು.
“ ದಿವಾಕರ ನೀನು ಜೀವನದಲ್ಲಿ ಏನು ಆಗಬಾರದು ಎಂದು ಅರ್ಥಮಾಡಿಕೊಳ್ಳಲು ನಿನ್ನ ಅಣ್ಣನನ್ನು ನೋಡು ” ಗೆಳೆಯ ಶಾಸ್ತ್ರಿಯ ಈ ಉಪದೇಶ ನನ್ನ ಬದುಕಿಗೆ ಹೊಸ ತಿರುವು ನೀಡಿತು. ನಾನು ಯಾವಯಾವುದರಿಂದ ದೂರ ಇರಬೇಕೆಂದು ತೀರ್ಮಾನಿಸಲು ನನ್ನ ಅಣ್ಣ ರವಿಯ ಬದುಕಿನ ವಿಕಲ್ಪಗಳೇ ಕಾರಣ. ಇಷ್ಟೆಲ್ಲಾ ಆದರೂ ಅವನು ಬದುಕಿನಲ್ಲಿ ಊರ್ಜಿತನಾದ. ಪ್ರಸಿದ್ಧ CA-Tax consultant ಆದ. ಜೀವನ ಶಿಸ್ತು ಇಲ್ಲದ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕಿನ ಪ್ರತಿಯೊಂದು ತಿರುವಿನಲ್ಲೂ ಎಡವುತ್ತಾನೆ ಎನ್ನುವುದಕ್ಕೆ ಈ ಅಣ್ಣನಿಗಿಂತಲೂ ಉತ್ತಮ ನಿದರ್ಶನ ಬೇಕಿಲ್ಲವೇನೋ. ಅತಿಯಾದ ಧನದಾಹ, ಐಷಾರಾಮಿ-ಸ್ವಚ್ಛಂದ ಬದುಕು, ದಿಲ್‌ದಾರ್ ಜೀವನ, ಯಾರಿಗೂ ಕೇರ್ ಮಾಡದ ದಾರ್ಷ್ಟ್ಯ, ಹೆಂಡತಿಯನ್ನು ಹೊಡೆಯುವ ಕ್ರೌರ್ಯ ಮತ್ತು ಯೌವ್ವನಾವಸ್ಥೆಯಲ್ಲಿ ಅಂಟಿಕೊಂಡ ಚಟಗಳು, ಇಷ್ಟರ ನಡುವೆ ಅಪಾರ ದೈವಭಕ್ತಿಯೂ. ಈ ದಿಲ್‌ದಾರ್ ಜೀವ ಕೊನೆಯಾಗಿದ್ದು ಮೇ 18 2021ರಂದು.
ಅಂತಿಮ ನಮನ ಹೇಳುವ ಮುನ್ನ
ಅವನ ನೆನಪಿನಲ್ಲಿ ಇಷ್ಟೆಲ್ಲಾ ಬರೆಯುವಾಗ ನನ್ನ ಕಣ್ಣಲ್ಲಿ ಹನಿಗೂಡುತ್ತಿಲ್ಲ. ಏಕೋ ಅಂಚಿಗೆ ಬಂದು ಬತ್ತಿಹೋಗುತ್ತಿದೆ. ಬಹುಶಃ ನನ್ನ ಬದುಕಿನಲ್ಲಿ ಅವನು ಕೊಟ್ಟ ಷಾಕ್‌ಗಳು, ಆ ವಿಶ್ವಾಸಘಾತುಕತನ, ವಿಶ್ವಾಸ ದ್ರೋಹ, ಅವನ ಸ್ವಾರ್ಥಕ್ಕೆ ಬಲಿಯಾದ ನನ್ನ ಬದುಕು ಇವೆಲ್ಲವೂ ಆ ಹನಿಗಳನ್ನು ತಡೆಹಿಡಿಯುತ್ತಿರಬಹುದು. ಇದು ಮನುಷ್ಯ ಸಹಜವೇ ? ಗೊತ್ತಿಲ್ಲ. ಅವನು ನನ್ನ ಮನೆಗೆ ಕಾಲಿಟ್ಟು ಸರಿಯಾಗಿ 30 ವರ್ಷಗಳಾಗಿದ್ದವು. ಸಿಕ್ಕಾಗ ಗೆಳೆಯರಂತೆ ಆನಂದದಿಂದ ಇರುತ್ತಿದ್ದೆವು. “ ನೀವಿಬ್ಬರೂ ಒಂದೇ ಥರ ಕಾಣ್ತೀರ ಅಣ್ಣತಮ್ಮಂದಿರಾ ” ಎಂದು ಕೇಳಿದವರೂ ಉಂಟು. ಅವನ ಹಾಸ್ಯಪ್ರವೃತ್ತಿ, ಹೆಂಗರುಳು (?) ವರ್ಣಿಸಲಸಾಧ್ಯ. ಯಾರಿಗೇ ಕಷ್ಟ ಎಂದರೂ ಮಿಡಿಯುವ ಮನಸ್ಸು. ಬಹುಶಃ ಅಂತಹ ಮನಸ್ಸೇ ಅವನಿಗೆ ವಿದ್ಯಾಭ್ಯಾಸವನ್ನೂ ತೊರೆದು ನಮ್ಮ ಜೀವನಕ್ಕೆ ಒಂದು ಕಾಯಕಲ್ಪ ನೀಡಲು ಪ್ರೇರೇಪಿಸಿತ್ತೇನೋ. ಆದರೆ ಆ ದಿನಗಳ ನೊಗಭಾರವೇ ಅವನ ವಿಕಲ್ಪಗಳಿಗೆ ಕಾರಣವೂ ಆಯಿತೇನೋ ? ಹೇಳಲಾಗುತ್ತಿಲ್ಲ. ಈ ನಿಗೂಢ ಪ್ರಶ್ನೆಗೆ ಉತ್ತರ ಹೊಳೆಯುತ್ತಲೇ ಇಲ್ಲ.
ಏನೇ ಆಗಲಿ, ಬದುಕಿನ ವಿವಿಧ ಕವಲುಗಳನ್ನು ಹಾದು ಇಬ್ಬರು ಹೆಣ್ಣುಮಕ್ಕಳು, ಹೆಂಡತಿಯೊಡನೆ ಸುಖವಾಗಿ ಬಾಳುವ ವಯಸ್ಸಿನಲ್ಲಿ ಕೋವಿದ್ ಅವನನ್ನು ಸೆಳೆದುಕೊಂಡುಬಿಟ್ಟಿತು. ದೂರದಲ್ಲೇ ಇದ್ದರೂ ಸನಿಹದಲ್ಲೇ ಇದ್ದಾನೆ ಎಂದು ಭಾಸವಾಗುವ ರೀತಿ ಅವನ ಫೋನ್ ಕರೆಗಳು ಇರುತ್ತಿದ್ದವು. ಬೆನ್ನ ಮೇಲಿನ ಇರಿದ ಗಾಯಗಳೇನೂ ಆರುವುದಿಲ್ಲ. ನನ್ನ ಪಯಣದಲ್ಲಿ ನೊಂದ ಬದುಕಿನ ವಿಚಿತ್ರ ತಿರುವುಗಳು ಅಲ್ಲಿ ಕಂಡಂತಹ ನರಕಸದೃಶ ನಿರ್ಗತಿಕ ಬದುಕು ಇವೆಲ್ಲಕ್ಕೂ ಕಾರಣನಾದ ಅವನ ಬಗ್ಗೆ ಮನದ ಒಂದು ಮೂಲೆಯಲ್ಲಿ ದ್ವೇಷ ಅಲ್ಲದಿದ್ದರೂ ಬೇಸರವಂತೂ ಇದೆ. ಆದರೆ ಈ ಕವಲುಗಳಿಗೂ ಮುನ್ನ, ಸೂರಿಲ್ಲದ ವೇಳೆ, ಕೂಳಿಲ್ಲದ ಸಮಯದಲ್ಲಿ, ವಿದ್ಯಾರ್ಜನೆಯೇ ಕೊನೆಯಾಗುವಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ತನ್ನ ಓದನ್ನು ತ್ಯಾಗ ಮಾಡಿ ನಮ್ಮ ಕುಟುಂಬವನ್ನು ಎತ್ತಿಹಿಡಿದ ಸುದರ್ಶನನ ಕಿರುಬೆರಳನ್ನು ಹೇಗೆ ಮರೆಯಲು ಸಾಧ್ಯ.
ಅವನು ಎತ್ತಿಹಿಡಿದ ಗೋವರ್ಧನ ಗಿರಿ ನಮ್ಮ ಇಡೀ ಕುಟುಂಬವನ್ನು ಜೀವಪ್ರಳಯದಿಂದ ಪಾರುಮಾಡಿದ್ದನ್ನು ಮರೆತರೆ ನಾನು ಕೃತಘ್ನನಾಗಿಬಿಡುತ್ತೇನೆ. ಬಹುಶಃ ಆಗ ಅವನು ಕೈಬಿಟ್ಟಿದ್ದರೆ ನಮ್ಮ ಮುಂದೆ ಇದ್ದ ಆಯ್ಕೆ ಅಂತಿಮ ಯಾತ್ರೆ ಮಾತ್ರ. ಆ ಕಾರಣಕ್ಕಾಗಿ ನನ್ನ ಅಣ್ಣ ರವಿ ಚಿರಸ್ಮರಣೀಯನಾಗುತ್ತಾನೆ. ಅವನ ವಿಕಲ್ಪಗಳು, ವೈಚಿತ್ರ್ಯಗಳು, ಅವನಲ್ಲಿದ್ದ ಕ್ರೌರ್ಯ ಇವೆಲ್ಲವೂ ಬಹುಶಃ ಅವನ ಬದುಕಿನ ಹಾದಿಯ ಕವಲುಗಳಲ್ಲಿ ಸೃಷ್ಟಿಯಾದವು ಎಂದೇ ಭಾವಿಸುತ್ತೇನೆ. ಮನುಷ್ಯನಲ್ಲಿ ವ್ಯಕ್ತಿತ್ವವನ್ನು ರೂಪಿಸುವುದು ಒಂದು ಸಮಾಜ ಮತ್ತೊಂದು ಕುಟುಂಬ ಅಥವಾ ಸಂಸಾರ. ಯೌವ್ವನದ ಅರಳುವ ಹೊತ್ತಿನಲ್ಲಿ ಹೆಗಲ ಮೇಲೆ ಬೀಳುವ ನೊಗದ ಭಾರ ವ್ಯಕ್ತಿತ್ವವನ್ನೇ ಬದಲಾಯಿಸಿಬಿಡುತ್ತದೆ. ಬಹುಶಃ ನನ್ನ ಅಣ್ಣ ರವಿ ಅದರ ಒಂದು ಜೀವಂತ ನಿದರ್ಶನ.
ಏನೇ ಆಗಲಿ ಅವನ ಅಂತಿಮ ದರ್ಶನ ಪಡೆಯಲಾಗದ ದುಃಖ ಇನ್ನೂ ಇದೆ. ಅವನು ಎಲ್ಲೇ ಇದ್ದರೂ ಇನ್ನೂ ಇರಬೇಕಿತ್ತು ಎನಿಸುತ್ತದೆ. ಅವನು ಇಲ್ಲ ಎಂದು ಮನಸ್ಸಿಗೆ ನಾಟಿದಾಗ ಸಿಕ್ಕುಗಟ್ಟಿದ ಬದುಕಿನ ಟೇಪು ತಂತಾನೇ ಬಿಚ್ಚಿಕೊಳ್ಳುತ್ತಾ ಹಾಡಲಾರಂಭಿಸುತ್ತದೆ. ಮೇ 18 ಅವನು ನೆನಪಾಗುತ್ತಾನೆ. ಈಗ ಒಂದೆರಡು ಕಂಬನಿಯ ಹನಿ ಕೀಬೊರ್ಡನ್ನು ಒದ್ದೆ ಮಾಡಿದೆ. ಸಾಕುಮಾಡುತ್ತೇನೆ.
ನಿನಗೆ ಮತ್ತೊಮ್ಮೆ ನಮನಗಳು ರವಿ.