ಕಾಮಗಾರಿ ಆರಂಭಿಸುವ ಹಂತದಲ್ಲಿ ಸಣ್ಣ ಕಾಮಗಾರಿಗಳನ್ನು ದಿಢೀರ್ ರದ್ದುಪಡಿಸಿ ಸುಮಾರು 50 ಕೋಟಿ ರೂ. ಮೊತ್ತದ ಬೃಹತ್ ಪ್ಯಾಕೇಜ್ ಆಗಿ ಪರಿವರ್ತಿಸುವಂತೆ ಆದೇಶ ಹೊರಡಿಸುವ ಮೂಲಕ ನೀರಾವರಿ ಇಲಾಖೆ ಗುತ್ತಿಗೆದಾರರಿಗೆ ಆಘಾತ ನೀಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಮಾರು 58 ಗುತ್ತಿಗೆದಾರರು ಟೆಂಡರ್ ಪಡೆದು ಕಾಮಗಾರಿ ಆರಂಭಿಸುವ ಹಂತದಲ್ಲಿ ದಿಢೀರ್ ಟೆಂಡರ್ ರದ್ದು ಮಾಡಲು ಮುಂದಾಗಿರುವ ಇಲಾಖೆಯ ಕ್ರಮವನ್ನು ನಿಲ್ಲಿಸಿ ಕಾಮಗಾರಿ ನಡೆಸಲು ಅವಕಾಶ ನೀಡುವಂತೆ ಸಣ್ಣ ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸುಮಾರು 58 ಗುತ್ತಿಗೆದಾರರು ಸಣ್ಣ ಪ್ರಮಾಣದ ಗುತ್ತಿಗೆ ಪಡೆದು ಈಗಾಗಲೇ 4ರಿಂದ 8 ಲಕ್ಷ ರೂ. ವಿನಿಯೋಗಿಸಲಾಗಿದೆ. ಈ ರೀತಿ ದಿಢೀರ್ ಕಾಮಗಾರಿ ರದ್ದುಗೊಳಿಸಿದರೆ ಏನು ಮಾಡುವುದು. ನಾವು ಖರ್ಚು ಮಾಡಿದ ಹಣವನ್ನು ಯಾರು ಕೊಡುವುದು ಎಂದು ಗುತ್ತಿಗೆದಾರರು ಪ್ರಶ್ನಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ವ್ಯವಸ್ಥಾಪಕರು ದಿಢೀರನೆ ಈ ರೀತಿ ಆದೇಶ ಹೊರಡಿಸುವ ಮೂಲಕ ಬೆಂಗಳೂರು ಮೂಲದ ಹೊರರಾಜ್ಯದ ದೊಡ್ಡ ಗುತ್ತಿಗೆದಾರರಿಗೆ ಟೆಂಡರ್ ಕೊಡಲು ಪ್ರಯತ್ನಗಳು ನಡೆದಿವೆ ಎಂದು ಗುತ್ತಿಗೆದಾರರು ಆರೋಪಿಸಿದ್ದು, ಮುಖ್ಯಮಂತ್ರಿಗಳು ಈ ಕೂಡಲೇ ನ್ಯಾಯ ದೊರಕಿಸಿಕೊಡದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ಧಾರೆ.
ಇತ್ತೀಚೆಗಷ್ಟೇ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಸುಮಾರು 4 ಕೋಟಿ ರೂ. ವಿನಿಯೋಗಿಸಿ 108 ಸಣ್ಣ ಕಾಮಗಾರಿಗಳನ್ನು ನಡೆಸಿದ್ದು, ಇದರ ಬಿಲ್ ಪಾವತಿಗೆ ಸಚಿವ ಕೆಎಸ್ ಈಶ್ವರಪ್ಪ ಶೇ.೪೦ರಷ್ಟು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದರು.
ಈ ವಿವಾದದ ಬೆನ್ನಲ್ಲೇ ಕರ್ನಾಟಕ ಗುತ್ತಿಗೆದಾರರ ಸಂಘ ಗ್ರಾಮೀಣಾಭಿವೃದ್ಧಿ ಮಾತ್ರವಲ್ಲದೇ ನೀರಾವರಿ, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು.