ನಾ ದಿವಾಕರ
ಭಾಗ 2
ಸಾಂಸ್ಕೃತಿಕ ಅಭಿವ್ಯಕ್ತಿಯ ವೈರುಧ್ಯ
ಈ ಮೇಲಿನ ದತ್ತಾಂಶಗಳು ಏನನ್ನು ಸೂಚಿಸುತ್ತವೆ ? ಸಾಂಸ್ಕೃತಿಕ ಲೋಕ ಎಂದರೆ ಮಾನವ ಸಮಾಜದ ಸಂಸ್ಕೃತಿಯನ್ನು ಎಲ್ಲ ಆಯಾಮಗಳನ್ನೂ ಪ್ರತಿನಿಧಿಸುವ ವಿಶಾಲ ಬಯಲು. ಈ ಬಯಲು ಹಲವು ದಶಕಗಳಿಂದಲೂ , ಶಾಶ್ವತವಾಗಿ ಪುರುಷಾಡಳಿತದ ಆಡುಂಬೊಲವಾಗಿರುವುದನ್ನು ಹೇಗೆ ವ್ಯಾಖ್ಯಾನಿಸುವುದು ? ಪ್ರಾತಿನಿಧ್ಯದ ಪ್ರಶ್ನೆ ಎದುರಾದಾಗ ಇದು ಇನ್ನೂ ಕ್ಲಿಷ್ಟವಾಗುತ್ತದೆ. ಧರ್ಮ ಮತ್ತು ಸಂಸ್ಕೃತಿ (Religion and Culture )ಭಿನ್ನವಾಗಿಯೇ ನೋಡಿದಾಗಲೂ, ಸಂಸ್ಕೃತಿ ಎಂಬ ವಿಶಾಲ ಆವರಣದಲ್ಲಿ ಗುರುತಿಸಬಹುದಾದ ದೃಶ್ಯ, ಶ್ರವ್ಯ, ಬರಹ ಮಾಧ್ಯಮಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇಂದಿನವರೆಗೂ ಅವಗಣನೆಗೆ ಒಳಗಾಗಿರುವುದು ಎದ್ದು ಕಾಣುತ್ತದೆ. ಧಾರ್ಮಿಕ ಅಂಗಳದಲ್ಲಿ ಕಾಣಬಹುದಾದ ಪುರುಷಾಧಿಪತ್ಯದ ಛಾಯೆಯನ್ನು ಸಾಂಸ್ಕೃತಿಕ ಆವರಣದಲ್ಲೂ ಕಾಣಬಹುದು. ಸಾಂಸ್ಥಿಕ ದೃಷ್ಟಿಯಿಂದ ನೋಡಿದಾಗ ಎರಡೂ ವಲಯಗಳನ್ನು ಸಮಾನ ಎಳೆಯೊಂದು ಬಂಧಿಸುತ್ತದೆ. ಅದು ಪಿತೃಪ್ರಧಾನತೆ.
ಆದರೆ ಮಹಿಳೆಯರಿಗೆ ಸಾರ್ವಜನಿಕ ಅವಕಾಶ (Public Space) ಕಲ್ಪಿಸುವ ನಿಟ್ಟಿನಲ್ಲಿ , ಸಾಂಸ್ಕೃತಿಕ ವಲಯದ ಸಾಂಸ್ಥಿಕ ಚೌಕಟ್ಟುಗಳು ಮಾರುಕಟ್ಟೆಯ ನಿರ್ಬಂಧಗಳಿಗೆ ಒಳಪಟ್ಟಿರುವುದಿಲ್ಲ. ಇಲ್ಲಿ ಮೌಲ್ಯೀಕರಣ ಪ್ರಕ್ರಿಯೆಯಲ್ಲಿ ಹಣಕಾಸು ಮುಖ್ಯವಾಗುವುದಿಲ್ಲ. ಆದರೂ ಸಮಾಜಕ್ಕೆ ಸಂದೇಶ ತಲುಪಿಸುವ, ಜಟಿಲ ಸಿಕ್ಕುಗಳಿಗೆ ಪರಿಹಾರ ಸೂಚಿಸುವ, ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಬೌದ್ಧಿಕ ಸಂವಾದ-ಸಂಕಥನ ವೇದಿಕೆಗಳಲ್ಲಿ ಮಹಿಳೆಯರು ಆ ಸಾರ್ವಜನಿಕ ಅವಕಾಶಗಳನ್ನು ಪ್ರಾತಿನಿಧಿಕವಾಗಿಯಾದರೂ ಏಕೆ ಆಕ್ರಮಿಸಲು ಸಾಧ್ಯವಾಗಿಲ್ಲ ? ನೇರ ಉತ್ತರ ಎಂದರೆ ಸಾಂಸ್ಕೃತಿಕ-ಮನರಂಜನಾ ಕ್ಷೇತ್ರದಲ್ಲಿ ಬೇರೂರಿರುವ (Entrenched) ಪುರುಷಾಡಳಿತದ ಧೋರಣೆ ಮತ್ತು ಪಿತೃಪ್ರಧಾನತೆಯ ಅಡಿಪಾಯ.
ಆದರೆ ಇದನ್ನೂ ಮೀರಿ ಯೋಚಿಸಿದಾಗ, ಇಂದಿಗೂ ಸಹ ಸಾರ್ವಜನಿಕ ವೇದಿಕೆಗಳಲ್ಲಿ, ವಿಚಾರ ಸಂಕಿರಣ, ವಿಚಾರ ಗೋಷ್ಠಿ, ಸಮಾವೇಶ-ಸಮಾರಂಭಗಳಲ್ಲಿ ಮಹಿಳಾ ಪ್ರಾತಿನಿಧ್ಯ ಅನುಷಂಗಿಕ (Secondary) ಆದ್ಯತೆಯಾಗಿರುವುದು ಮೇಲ್ನೋಟಕ್ಕೇ ಕಾಣುವ ವಾಸ್ತವ. ಸಾಮಾಜಿಕ-ಕಾರ್ಮಿಕ ಚಳುವಳಿಗಳ ಸಂದರ್ಭದಲ್ಲೂ ಸಹ ಸಾರ್ವಜನಿಕ ವೇದಿಕೆಗಳ ಮೇಲೆ ಬುದ್ಧ-ಬಸವ-ಅಂಬೇಡ್ಕರ್-ಮಾರ್ಕ್ಸ್ ಮೊದಲಾದವರ ಮುಖತೋರಣ ಇದ್ದರೂ, ಉಪಸ್ಥಿತರನ್ನು ಗಮನಿಸಿದಾಗ ಅಲ್ಲಿ ವಿದ್ವತ್ ವಿಚಾರ ಮಂಡನೆಯ ಸಾಲಿನಲ್ಲಿ ಮಹಿಳೆ ಕಾಣೆಯಾಗಿರುತ್ತಾಳೆ. ಅಥವಾ ನೆಪಮಾತ್ರವಾಗಿ ಕಾಣುತ್ತಾಳೆ. ಸಾಮಾಜಿಕ ಹೋರಾಟ ಸಂಘಟನೆಗಳೂ, ಅಕಾಡೆಮಿಕ್ ಸಂಸ್ಥೆಗಳೂ, ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳೂ ಸಹ ಈ ದೃಷ್ಟಿಯಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ.
ಸಾಹಿತ್ಯ ಸಮ್ಮೇಳನಗಳಲ್ಲೂ ಸಹ ಈ ವ್ಯತ್ಯಯವನ್ನು ಕಾಣಬಹುದು. ಸರಾಸರಿ ದಿನಕ್ಕೊಂದರಂತೆ ನಡೆಯುವ ಸೆಮಿನಾರುಗಳಲ್ಲಿ ವಿಷಯ ಮಂಡನೆ ಪುರುಷಾಳ್ವಿಕೆಯ ಆಡುಂಬೊಲವಾಗಿರುತ್ತದೆ. ಮಹಿಳೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಮಾತ್ರ ಮಹಿಳೆಯ ಉಪನ್ಯಾಸಕ್ಕೆ ಅವಕಾಶ ಇರುತ್ತದೆ. ಉದಾಹರಣೆಗಳನ್ನು ನೀಡುತ್ತಾ ಹೋದರೆ ಪುಟಗಟ್ಟಳೆ ಆಗಬಹುದು. ದಲಿತ, ಎಡಪಂಥೀಯ, ಪುರೋಗಾಮಿ ಚಳುವಳಿಗಳಲ್ಲೂ ಸಹ ಈ ಲಿಂಗ ತಾರತಮ್ಯವನ್ನು ಗುರುತಿಸಬಹುದು. ಇದನ್ನು ಅಸೂಕ್ಷ್ಮತೆ ಎಂದು ನಿರ್ವಚಿಸುವುದೇ ಸೂಕ್ತ. ಖಾವಿಧಾರಿಗಳು, ಇಸ್ಲಾಮಿಕ್ ವಿದ್ವಾಂಸರು-ಮೌಲ್ವಿಗಳು, ಬೌದ್ಧ ಬಂತೇಜಿಗಳು, ಮಠಾಧೀಶರು ಆಸೀನರಾಗಿರುವ ವೇದಿಕೆಗಳಲ್ಲಿ ಈ ಪ್ರಾತಿನಿಧ್ಯದ ಪ್ರಶ್ನೆ ಚರ್ಚೆಗೊಳಗಾಗುವುದೇ ಇಲ್ಲ. ಸಾಮಾನ್ಯವಾಗಿ ಮನುವಾದಿ ಎಂದು ಖಂಡನೆಗೊಳಗಾಗುವ ಈ ಅಸೂಕ್ಷ್ಮತೆ ಮೂಲತಃ ಮನುಸಂಸ್ಕೃತಿಯನ್ನೂ ದಾಟಿದ ಪಿತೃಪ್ರಧಾನತೆಯ ಲಕ್ಷಣವಾಗಿದೆ.
ಸಂಘಟನೆ ಚಳುವಳಿ –ರಾಜಕೀಯ
ಮಹಿಳಾ ಸಮಾನತೆ ಒಂದು ಸ್ವಾಯತ್ತ ವಿದ್ಯಮಾನವಲ್ಲ. ಅಥವಾ ನಮ್ಮ ನಿತ್ಯ ಚಟುವಟಿಕೆಗಳಿಂದ ಪ್ರತ್ಯೇಕಿಸಿ ನೋಡಬೇಕಾದ ʼ ಸಾಮಾಜಿಕ ಜವಾಬ್ದಾರಿ ʼಯೂ ಅಲ್ಲ. ಮಹಿಳಾ ಸಮಾನತೆಯ ಪ್ರಶ್ನೆ ಎದುರಾದಾಗ ಮೂರು ಆಯ್ಕೆಗಳು ಕಾಣುತ್ತವೆ. ಸಮಾನತೆ ಕೊಡಲ್ಪಡುವುದು ಅಥವಾ ಕಲ್ಪಿಸುವುದು ಎಂದಾದರೆ ಯಾರಿಂದ, ಯಾವ ಸಂಸ್ಥೆಯಿಂದ ಎನ್ನುವುದು ಮೊದಲ ಆಯ್ಕೆ. ಎರಡನೆಯದಾಗಿ ಇದು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಕೇಳಿ ಪಡೆಯಬೇಕಾದ ಹಕ್ಕು/ಸವಲತ್ತು/ಸೌಲಭ್ಯ/ಅವಕಾಶವೇ ? ಮೂರನೆಯ ಪ್ರಶ್ನೆ ಭಾಗವಹಿಸುವಿಕೆಯ ಪ್ರಜಾಪ್ರಭುತ್ವ (Participatory Democracy) ಹಾಗೂ ಪ್ರಾತಿನಿಧಿಕ ಪ್ರಜಾಪ್ರಭುತ್ವ (Representative Democracy) ಮತ್ತು ಒಳಗೊಳ್ಳುವ ರಾಜಕೀಯ (Inclusive Politics) ಈ ಮೂರೂ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಭಾರತೀಯ ಸಂವಿಧಾನ ಇದನ್ನು ಹೇಗೆ ನೋಡುತ್ತದೆ ?
ಮೊದಲ ಎರಡು ಪ್ರಶ್ನೆಗಳನ್ನು ನಾವೇ, ನಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡಿದ್ದೇವೆ. ಅದೇ ಪ್ರಶ್ನೆಯನ್ನೇ ಮುಂದಿಟ್ಟು ಮಹಿಳಾ ಸಮಾನತೆಗಾಗಿ,ಅವಕಾಶಗಳಿಗಾಗಿ ಇಂದಿಗೂ ಹಕ್ಕೊತ್ತಾಯ ಮಾಡುತ್ತಿದ್ದೇವೆ. ತನ್ನ 80ನೆಯ ವಯಸ್ಸಿನಲ್ಲಾದರೂ ಭಾರತ ಪ್ರಬುದ್ಧ ಸಮಾಜವಾಗಿ ಕಾಣಬೇಕಾದರೆ ಮೂರನೆಯ ಪ್ರಶ್ನೆಯನ್ನು ಛೇದಿಸಿ ನೋಡಬೇಕಿದೆ. ಸಂವಿಧಾನ ಪ್ರಸ್ತಾವನೆಯನ್ನು ನಿತ್ಯ ಪಠಿಸುವ, ಪ್ರಮಾಣಿಸುವ ಮೂಲಕ ಈ ಮೌರೂ ಮೌಲ್ಯಗಳನ್ನು ನಿತ್ಯಾಚರಣೆಯಂತೆ (Daily ritual) ಅನುಸರಿಸುತ್ತಿದ್ದೇವೆ. ವಿಡಂಬನೆ ಎಂದರೆ ವೇದಿಕೆಯ ಮೇಲೆ ಮಹಿಳೆಯ ಸುಳಿವೂ ಇಲ್ಲದ ಸಾರ್ವಜನಿಕ ಸಮಾವೇಶದಲ್ಲೂ ನಾವೆಲ್ಲರು ಮುಂದಕ್ಕೆ ಕೈಚಾಚಿ, ಎದೆಯ ಮೇಲೆ ಕೈಯ್ಯಿರಿಸಿ, ಸಂವಿಧಾನ ಪಠಣದ ಆಚರಣೆಯನ್ನು ಪೂರೈಸುತ್ತೇವೆ. ಎಂತಹ ಕಪಟ ನಡೆ (Hypocricy) ಅಲ್ಲವೇ ?
ಸಾರ್ವಜನಿಕ ಚಳುವಳಿಗಳ ನಡುವೆ
ಭಾಗವಹಿಸುವಿಕೆ, ಪ್ರಾತಿನಿಧಿತ್ವ ಮತ್ತು ಒಳಗೊಳ್ಳುವಿಕೆ ಈ ಮೂರೂ ಔದಾತ್ಯಗಳನ್ನು ಕಾನೂನು, ಶಾಸನಗಳ ಮೂಲಕ ವಿಧಿವತ್ತಾಗಿ ಜಾರಿಗೊಳಿಸುವುದಕ್ಕೂ ಮುನ್ನ, ಭಾರತದ ಸಂವಿಧಾನವನ್ನು ಗೌರವಿಸಿ, ಎಲ್ಲ ಸಾಂವಿಧಾನಿಕ ಹಕ್ಕುಗಳನ್ನೂ ಪಡೆದುಕೊಂಡು ಈ ಹಕ್ಕುಗಳಿಗಾಗಿಯೇ ನಿರಂತರ ಹೋರಾಡುತ್ತಿರುವ ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಹೇಗೆ ಅಳವಡಿಸಿಕೊಂಡಿವೆ ಎನ್ನುವುದನ್ನೂ ಗಮನಿಸಬೇಕಿದೆ. ತಮ್ಮ ಸಾಂಸ್ಥಿಕ ಚೌಕಟ್ಟಿನೊಳಗೇ ಈ ನಿಬಂಧನೆಗಳನ್ನು ಅಳವಡಿಸಿಕೊಳ್ಳದ ರಾಜಕೀಯ ಪಕ್ಷಗಳಿಗೆ, ಕಾರ್ಮಿಕ ಸಂಘಟನೆಗಳಿಗೆ ಸಾರ್ವಜನಿಕ ಹೋರಾಟಗಳಲ್ಲಿ ʼ ಮಹಿಳಾ ಸಮಾನತೆ ʼ ಆದ್ಯತೆಯಾಗುವುದು ವಿಪರ್ಯಾಸವಲ್ಲವೇ ? ನಡೆ-ನುಡಿಯ ನಡುವಿನ ಅಂತರ ಇಲ್ಲಿ ಢಾಳಾಗಿ ಕಾಣಿಸುತ್ತದೆ.
ನಿದರ್ಶನ ರೂಪದಲ್ಲಿ ಎಡಪಕ್ಷಗಳನ್ನು , ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನು ಪ್ರಧಾನವಾಗಿ ಶೋಧಿಸುವುದು ಸೂಕ್ತ. ಏಕೆಂದರೆ ಮುಖ್ಯವಾಹಿನಿಯ ಇತರೆ ಪಕ್ಷಗಳಿಗೆ ಸಂವಿಧಾನ ಕೇವಲ ಒರಗು ಗೋಡೆಯಾಗುವುದೇ ಹೊರತು ಮೌಲಿಕ ಮಾರ್ಗದರ್ಶಿಯಾಗಿ ಕಾಣುವುದಿಲ್ಲ. ಶತಮಾನ ಪೂರೈಸಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಸಾಂಸ್ಥಿಕವಾಗಿ ಮಹಿಳಾ ಪ್ರಾತಿನಿಧ್ಯವನ್ನು (Women Representation) ಅಳವಡಿಸಿಯೇ ಇಲ್ಲ. ಕೇಂದ್ರ ಸೆಕ್ರೆಟರಿಯಟ್ನಲ್ಲಿ 10 ಸದಸ್ಯರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. ಈವರೆಗಿನ ಪ್ರಧಾನ ಕಾರ್ಯದರ್ಶಿಗಳ, ಪ್ರಸ್ತುತ ರಾಜ್ಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಏಕೈಕ ಮಹಿಳೆ ಕಾಣುತ್ತಾರೆ. ಈ ಪಕ್ಷದ ಸಂಯೋಜಿತ ಕಾರ್ಮಿಕ ಸಂಘಟನೆ ಎಐಟಿಯುಸಿ (AITUC) ಈವರೆಗೂ ಮಹಿಳಾ ಅಧ್ಯಕ್ಷರ ಆಯ್ಕೆ ಮಾಡಿಲ್ಲ. ಮೊಟ್ಟಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಅಮರ್ಜಿತ್ ಕೌರ್ ಕಾರ್ಯನಿರ್ವಹಿಸುತ್ತಿದ್ದಾರೆ.
1964ರ ವಿಭಜನೆಯ ನಂತರ ಸ್ಥಾಪನೆಯಾದ ಸಿಪಿಎಂ ಪಕ್ಷದಲ್ಲಿ ಈವರೆಗೂ ಮಹಿಳಾ ಪ್ರಧಾನ ಕಾರ್ಯದರ್ಶಿಯನ್ನು ಕಾಣಲಾಗಿಲ್ಲ. ಪಕ್ಷದ ನಿರ್ಣಾಯಕ ಸ್ಥಾನದಲ್ಲಿರುವ ಪಾಲಿಟ್ಬ್ಯುರೋದಲ್ಲಿ 18 ಸದಸ್ಯರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. ಮೊದಲ ಮಹಿಳೆ ಪಾಲಿಟ್ಬ್ಯುರೋ ಪ್ರವೇಶಿಸಿದ್ದು 2004ರಲ್ಲಿ. ರಾಜ್ಯ ಕಾರ್ಯದರ್ಶಿಗಳ ಪೈಕಿ ಮಹಿಳೆಯರು ಕಂಡುಬರುವುದಿಲ್ಲ. ಈ ಪಕ್ಷದ ಸಂಯೋಜಿತ ಕಾರ್ಮಿಕ ಸಂಘಟನೆ ಸಿಐಟಿಯು (CITU) ಈವರೆಗೂ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ, 2020ರಲ್ಲಿ ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿ ಮಹಿಳೆಯನ್ನು ಆಯ್ಕೆ ಮಾಡಲಾಗಿತ್ತು. ಸಿಪಿಐ-ಎಂಎಲ್ ಲಿಬರೇಷನ್ ಪಕ್ಷದಲ್ಲಿ ಮತ್ತು ಸಂಯೋಜಿತ ಕಾರ್ಮಿಕ ಸಂಘಟನೆ ಎಐಸಿಸಿಟಿಯು (AICCTU) ಈವರೆಗೂ ಮಹಿಳಾ ಸಂಗಾತಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿಲ್ಲ. ಈ ಪಕ್ಷದ ಪಾಲಿಟ್ಬ್ಯುರೋ ಸಹ ಮಹಿಳೆಯನ್ನು ಒಳಗೊಂಡಿಲ್ಲ.
ಸೈದ್ಧಾಂತಿಕ ಅರಿವು ಸಾಂವಿಧಾನಿಕ ಪ್ರಜ್ಞೆ
ಸೈದ್ಧಾಂತಿಕವಾಗಿ ವರ್ಗಪ್ರಜ್ಞೆ ಮತ್ತು ವರ್ಗ ಸಂಘರ್ಷದ ಮುಖಾಂತರ ರಾಜ್ಯಾಧಿಕಾರ ಪಡೆಯುವ ಗುರಿ ಇರುವ ಎಡಪಂಥೀಯ ಪಕ್ಷ/ಸಂಘಟನೆಗಳಿಗೆ ಮಹಿಳೆಯೂ ಈ ವರ್ಗಪ್ರಜ್ಞೆಯ ಅಂಶಿಕ ಭಾಗ ಎಂಬ ವಾಸ್ತವದ ಅರಿವು ಇರಬೇಕು. ಸಾಮಾನ್ಯ ಸಂಕಥನಗಳಲ್ಲಿ ಮಹಿಳೆಯನ್ನು ಪ್ರತ್ಯೇಕವಾಗಿ ವರ್ಗೀಕರಿಸದೆ ಇದ್ದರೂ, ಪ್ರಾತಿನಿಧ್ಯದ ಪ್ರಶ್ನೆ ಎದುರಾದಾಗ ಮಹಿಳಾ ವರ್ಗ ಅವಕಾಶವಂಚಿತವಾಗಿಯೇ ಮುಂದುವರೆದಿದೆ. ಚರಿತ್ರೆಯನ್ನು ಸರಿಪಡಿಸಲಾಗುವುದಿಲ್ಲ, ಆಗಿಹೋದ ಪ್ರಮಾದಗಳಿಗಾಗಿ ಪರಿತಪಿಸುವ ಅಗತ್ಯವೂ ಇಲ್ಲ, ಸ್ವ-ವಿಮರ್ಶಾತ್ಮಕವಾಗಿ ಯೋಚಿಸಿ ಭವಿಷ್ಯದಲ್ಲಿ ಭಾಗವಹಿಸುವಿಕೆ, ಪ್ರಾತಿನಿಧಿತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ. ಪಿತೃಪ್ರಧಾನತೆಯನ್ನು ಕಾಪಾಡಿಕೊಂಡು ಮನುವಾದವನ್ನು ವಿರೋಧಿಸುವುದು ಸೈದ್ಧಾಂತಿಕ ಬೂಟಾಟಿಕೆಯಾಗಿ (Ideologicl Hypocricy) ಕಾಣುತ್ತದೆ.
ಸಮೂಹ ಸಂಘಟನೆಗಳಲ್ಲಿ (Mass Organisations) ಮಹಿಳಾ ಪ್ರಾತಿನಿಧ್ಯ ಅತ್ಯುತ್ತಮ ಎನ್ನಬಹುದು. ನಾಯಕತ್ವದ ಸ್ಥಾನದಲ್ಲೂ ಮಹಿಳೆಯರು ಕಾಣುತ್ತಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರ ಯೋಜನಾ ದುಡಿಮೆಗಾರರ (Scheme workers)ಹಾಗೂ ಅಸಂಘಟಿತ ವಲಯದ ಗಾರ್ಮೆಂಟ್, ಕಟ್ಟಡ ನಿರ್ಮಾಣ, ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರ ನಡುವೆ ಎಡಪಕ್ಷಗಳ ಸಂಘಟನೆ ಬಲವಾಗಿದೆ. ಈ ದುಡಿಮೆಯ ವಲಯಗಳಲ್ಲಿ ತಳಸ್ತರದ ನೌಕರಿಯಲ್ಲಿರುವ ಮಹಿಳೆಯರು ಉತ್ತಮ ವೇತನ ಮತ್ತು ಸೌಲಭ್ಯಗಳನ್ನು ಪಡೆದಿರುವುದು ಎಡಪಂಥೀಯ ಪಕ್ಷಗಳ ಸಂಯೋಜಿತ ಹೋರಾಟಗಳಿಂದಲೇ ಎನ್ನುವುದು ವಾಸ್ತವ. ಆದರೆ ಎಲ್ಲ ಸಂಘಟನೆಗಳನ್ನೂ ನಿಯಂತ್ರಿಸಿ-ನಿರ್ದೇಶಿಸುವ ರಾಜಕೀಯ ಪಕ್ಷಗಳ ಉನ್ನತ ಹಂತದ ನಿರ್ಣಾಯಕ ಸ್ಥಾನಗಳಲ್ಲಿ ( ಪಾಲಿಟ್ಬ್ಯುರೋ, ಕೇಂದ್ರ ಸಮಿತಿ ಇತ್ಯಾದಿ) ಮಹಿಳೆ ಇಲ್ಲದಿರುವುದು ಇಬ್ಬಂದಿತನದ ಸಂಕೇತವಾಗಿ ಕಾಣುತ್ತದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರಾಧಿಸುವ ಮತ್ತು ಅಂಬೇಡ್ಕರ್ವಾದವನ್ನೇ ತನ್ನ ಮುಖ್ಯಸ್ಥಾಯಿಯಾಗಿ ಪರಿಗಣಿಸುವ ಬಹುಜನ ಸಮಾಜ ಪಕ್ಷ (BSP) ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯನ್ನೇ ಹೊಂದಿದೆ. ಆದರೆ ಪಕ್ಷವನ್ನು ನಿಯಂತ್ರಿಸಿ ನಿರ್ವಹಿಸುವ ಆಡಳಿತ ಹಂತಗಳಲ್ಲಿ, ರಾಷ್ಟ್ರೀಯ ಸಂಯೋಜಕರು, ರಾಷ್ಟ್ರೀಯ ಉಪಾಧ್ಯಕ್ಷರು, ಖಜಾಂಚಿ, ರಾಷ್ಟ್ರಿಯ ಮತ್ತು ರಾಜ್ಯ ಕಾರ್ಯದರ್ಶಿಗಳು, ಕೇಂದ್ರ ಸಂಯೋಜಕರು ಮತ್ತು ಉಸ್ತುವಾರಿ ನಾಯಕರು ಎಲ್ಲರೂ ಪುರುಷರೇ ಆಗಿರುವುದು ವಿಡಂಬನೆಯಲ್ಲವೇ ? ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಪರಮೋಚ್ಛ ಎಂದು ಭಾವಿಸುವ, ದಲಿತರನ್ನೇ ಮುಖ್ಯವಾಗಿ ಪ್ರತಿನಿಧಿಸುವ ರಾಜಕೀಯ ಪಕ್ಷವಾಗಿ ಬಿಎಸ್ಪಿ ಅತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ.
ದಲಿತ ಚಳುವಳಿಗಳಲ್ಲಿ ಮಹಿಳಾ ನಾಯಕತ್ವ ಈವರೆಗೂ ಚರ್ಚೆಗೊಳಗಾಗದ ವಿಚಾರ. ಕರ್ನಾಟಕದ ದಲಿತ ಚಳುವಳಿ ಐದು ದಶಕಗಳನ್ನು ಪೂರೈಸಿದೆ. ಮಹಾರಾಷ್ಟ್ರದ ಪ್ರಬಲ ದಲಿತ ಚಳುವಳಿಗಳಲ್ಲೂ ಲಿಂಗತ್ವ ಪ್ರಶ್ನೆಯನ್ನು ನಿರ್ಲಕ್ಷಿಸಿರುವ ಕಾರಣ ದಲಿತ ಮಹಿಳೆಯರು ಸ್ವಾಯತ್ತ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಉತ್ತರ ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ತಮಿಳುನಾಡಿನಲ್ಲೂ ಸಹ ದಲಿತ ಮಹಿಳೆಯರು ಸ್ವಾಯತ್ತ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಇದು ಕೇವಲ ನಾಯಕತ್ವದ ಅಥವಾ ಪ್ರಾತಿನಿಧ್ಯದ ಪ್ರಶ್ನೆಯಿಂದಲ್ಲ. ಮಹಿಳೆಯರಿಗೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳನ್ನು ಮುಖ್ಯವಾಹಿನಿ ಸಂಘಟನೆಗಳು ಅಲಕ್ಷಿಸಿರುವುದು ಈ ಬೆಳವಣಿಗೆಗೆ ಕಾರಣವಿರಬಹುದು. (ಈ ಕುರಿತ ಸಂಶೋಧನೆ ಅಗತ್ಯವಿದೆ. ಲಭ್ಯವಿದ್ದರೆ ಅಂತಹ ಸಂಶೋಧನೆಗಳ ಉಲ್ಲೇಖ ಒದಗಿಸಬಹುದು.)
ರಾಜಕೀಯ ಪ್ರಭಾವ ಮತ್ತು ಪರಿಣಾಮ
ಎಡ-ಬಲ-ಮಧ್ಯಮ (Left Right and Centre ) ಎತ್ತ ನೋಡಿದರೂ ಗುರುತಿಸಬಹುದಾದ ಸಮಾನ ಲಕ್ಷಣ ಎಂದರೆ ಉನ್ನತ ಸಾಂಸ್ಥಿಕ ಸ್ಥಾನಗಳಲ್ಲಿ (Higher Institutional Positions) ಮಹಿಳಾ ಪ್ರಾತಿನಿಧ್ಯಕ್ಕೆ ಮಾನ್ಯತೆಯೇ ಇಲ್ಲದಿರುವುದು. ಈ ಆವರಣದೊಳಗೆ ಮನುವಾದವನ್ನು ಖಂಡಿಸುವವರೂ, ಅನುಸರಿಸುವವರೂ, ಆರಾಧಿಸುವವರೂ ಇರುವುದು ಸೋಜಿಗ. ವಾಸ್ತವವಾಗಿ ಮನುವಾದಕ್ಕಿಂತಲೂ ಈ ಆಧಿಪತ್ಯದ ಶ್ರೇಣೀಕರಣವನ್ನು (Hegemonic Heirarchy) ನಿಯಂತ್ರಿಸುವುದು ಪಿತೃಪ್ರಧಾನತೆ ಮತ್ತು ಪುರುಷಾಧಿಪತ್ಯದ ಮೌಲ್ಯಗಳು. ಇವೆರಡೂ ಮನುಸ್ಮೃತಿಯ ಬೌದ್ಧಿಕ ಸ್ತಂಭಗಳು. ಹಿಂದೂ-ಇಸ್ಲಾಮಿಕ್ ಕರ್ಮಠರಿಂದ ಕ್ರಾಂತಿಕಾರಿ ಚಳುವಳಿಗಳವರೆಗೂ ವಿಸ್ತರಿಸುವ ಸಮಾನ ಎಳೆಯಲ್ಲಿ ಪ್ರತಿಯೊಂದು ಸ್ತರದಲ್ಲೂ ಪಿತೃಪ್ರಧಾನತೆಯನ್ನು ಗುರುತಿಸಬಹುದು.
ಏಕೆ ಹೀಗೆ ? ಕಾರಣ ಸ್ಪಷ್ಟ. ಭಾರತದಲ್ಲಿ ಯಾವುದೇ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ವಿಸ್ತರಿಸಬೇಕಾದರೂ, ಅದರ ಹಿಂದೆ ರಾಜಕೀಯ ಪ್ರಭಾವ, ಶಕ್ತಿ ಮತ್ತು ಜನಬೆಂಬಲ ಮುಖ್ಯವಾಗಿರುತ್ತದೆ. ಕಾರ್ಮಿಕ-ವಿದ್ಯಾರ್ಥಿ-ಯುವಜನ ಸಂಘಟನೆಗಳೂ ಸಹ ಇದೇ ಅನಿವಾರ್ಯತೆಯನ್ನು ಎದುರಿಸುತ್ತವೆ. ಆದಾಗ್ಯೂ ಕಾರ್ಮಿಕ ವಲಯದಲ್ಲಿ ಗಾರ್ಮೆಂಟ್ ಮತ್ತಿತರ ಕ್ಷೇತ್ರಗಳಲ್ಲಿ ಸ್ವತಂತ್ರ ಕಾರ್ಮಿಕ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ರಾಜಕೀಯ ಸೂತ್ರದ (String) ನಿಯಂತ್ರಣದಲ್ಲೇ ವಿಸ್ತರಿಸುವ ಸಾಮಾಜಿಕ ಹೋರಾಟ-ಸಂಘಟನೆಗಳು ಸಹಜವಾಗಿ ಮೇಲ್ ಹಂತದ ರಾಜಕೀಯ ನಿರ್ದೇಶನಗಳಿಗೇ ಒಳಪಟ್ಟಿರುತ್ತವೆ. ಇದೇ ಮಾತುಗಳನ್ನು ಇತ್ತೀಚಿನ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಂಘಗಳ ಬಗ್ಗೆಯೂ ಹೇಳಬಹುದು.
ಸಾರ್ವಜನಿಕ ಸಂವಾದ-ಸಂಕಥನ
ಈ ವಾತಾವರಣದಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಭೆಗಳು, ವಿಚಾರ ಸಂಕಿರಣ, ಸಮ್ಮೇಳನ, ಸಮಾವೇಶ, ಅಧ್ಯಯನ ಶಿಬಿರ, ಕಾವ್ಯಕಮ್ಮಟ ಇತ್ಯಾದಿಗಳು ಪುರುಷಾಳ್ವಿಕೆಯ ಕೇಂದ್ರಗಳಿಂದಲೇ ಆಯೋಜಿಸಿ , ನಿರ್ವಹಿಸಿ, ನಿಯಂತ್ರಿಸಲ್ಪಡುತ್ತವೆ. ಹಾಗಾಗಿಯೇ ಈ ಸಾರ್ವಜನಿಕ ಅಥವಾ ಸಭಾಂಗಣ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಮಹಿಳೆಯ ಉಪಸ್ಥಿತಿ , ಮಹಿಳಾ ಸಮೂಹದ ಸ್ವಯಂ ಸಿದ್ಧ ಹಕ್ಕು ಆಗುವುದಿಲ್ಲ. ಬದಲಾಗಿ ಮೇಲ್ ಹಂತದ ನಿಯಂತ್ರಕರಿಂದ ಕೊಡಬೇಕಾದ, ಕಲ್ಪಿಸಬೇಕಾದ ಅವಕಾಶವಾಗಿಬಿಡುತ್ತದೆ. ಇಂತಹ ನೂರಾರು ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳನ್ನು ಗಮನಿಸಿದರೂ ಕಾಣುವ ಸಮಾನ ಅಂಶ ಎಂದರೆ ಮಹಿಳೆಯರ ಉಪಸ್ಥಿತಿ ಶೂನ್ಯ ಅಥವಾ ನಗಣ್ಯ ಹೆಚ್ಚೆಂದರೆ ಆಲಂಕಾರಿಕ (Decorative) ಆಗಿ ಕಾಣುತ್ತದೆ.
ನಾವು ಬದಲಾಗಬೇಕಿದೆ. ಮಹಿಳೆ ಒಂದು ಸಮಾಜವಾಗಿ ಅಥವಾ ವರ್ಗವಾಗಿ ತನ್ನ ಅಸ್ಮಿತೆಗಾಗಿ ಸಾರ್ವಜನಿಕ ಅವಕಾಶ (Public Space) ಕೇಳುತ್ತಿಲ್ಲ. ಕೇಳುವುದೂ ಇಲ್ಲ. ಏಕೆಂದರೆ ಸ್ವಾಯತ್ತ ಮಹಿಳಾ ಚಳುವಳಿಗಳು (Autonomous Womenʼs movements) ಸಮಸ್ತ ಮಹಿಳೆಯರಿಗೂ ಈ ಅವಕಾಶವನ್ನು ಕಲ್ಪಿಸಿವೆ. ಮಹಿಳಾ ಮೀಸಲಾತಿ, ಮೀ ಟೂ, ಶಬರಿಮಲೆ , ಕೊಂದವರು ಯಾರು ಇನ್ನೂ ಮುಂತಾದ ಹೋರಾಟಗಳ ಮೂಲಕ ಮಹಿಳಾ ಸಮುದಾಯ ತನ್ನ ಅಸ್ಮಿತೆಯನ್ನು ಗಳಿಸಿ, ಉಳಿಸಿಕೊಂಡಿದೆ. ಆದರೆ ಸಮಸ್ಯೆ ಇರುವುದು ವಿಶಾಲ ಸಮಾಜದ (Broader Society) ಸಾರ್ವಜನಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಹಾಗೂ ಅಕಾಡೆಮಿಕ್ ಚಟುವಟಿಕೆಗಳಲ್ಲಿ, ಈ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಮಹಿಳೆಗೆ ಮೀಸಲಾತಿ ಕೊಡಿ ಎಂದು ಕೇಳಬೇಕೇ ?
ಇದು ಪ್ರಗತಿ ಹೊಂದಿರುವ ಸಮಾಜಕ್ಕೆ ಅಪಮಾನಕರ. ವೇದಿಕೆಗಳ ಉಪಸ್ಥಿತಿಯನ್ನು ಕೇವಲ ಸಮ್ಮಾನದ ದೃಷ್ಟಿಯಿಂದ ನೋಡಬೇಕಿಲ್ಲ. ಅಲ್ಲಿ ಸ್ವತಂತ್ರ ಅಭಿವ್ಯಕ್ತಿಯ ಅವಕಾಶವಿರುತ್ತದೆ. ವಿಶಾಲ ಬಯಲಿನ ಜನಸ್ತೋಮದೊಡನೆ ನೇರ ಸಂಭಾಷಣೆ ನಡೆಸುವ ಅವಕಾಶವಿರುತ್ತದೆ. ಜನರ ವಿಭಿನ್ನ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಅವಕಾಶವಿರುತ್ತದೆ. ವೇದಿಕೆಗಳ ಹಿಂಬದಿಯಲ್ಲಿ ನೇತುಹಾಕುವ ವಿಶಾಲ ಬ್ಯಾನರ್ಗಳನ್ನು ಅಲಂಕರಿಸುವ ಮುಖತೋರಣದಲ್ಲಿ ಸಾವಿತ್ರಿ ಫುಲೆ, ಫಾತಿಮಾ ಶೇಖ್ ಮೊದಲಾದ ಮಹಿಳೆಯರು ಕಂಡರೂ, ಉಪನ್ಯಾಸಕರ ಸಾಲು ಪುರುಷರ ಆಡುಂಬೊಲವಾಗಿರುತ್ತದೆ. ಇದನ್ನು ದ್ವಂದ್ವ (Dichotomy) ಎನ್ನುವುದೋ ಅಥವಾ ವ್ಯವಸ್ಥಿತ ದೋಷ (Systemic Defect) ಎನ್ನುವುದೋ ? ಅಥವಾ ಪ್ರತಿಯೊಂದು ಸಭೆ ಸಮಾವೇಶದಲ್ಲೂ “ ಹೆಣ್ಣಿಗೊಂದು ಜಾಗ ಕೊಡಿ ” ಎಂಬ ಫಲಕ (Placard) ನೆಟ್ಟಿರಬೇಕೇ ?
ಆಲೋಚನೆ-ಮನಸ್ಥಿತಿ-ಕಾರ್ಯಾಚರಣೆ
ಇದು ಕೇವಲ ಮನುಸ್ಮೃತಿಯ ಪ್ರಶ್ನೆಯಲ್ಲ, ವರ್ತಮಾನದ ಮನಸ್ಥಿತಿಯ ಪ್ರಶ್ನೆ. ಮನುವಾದಿ ಎಂಬ ಪದವನ್ನು ಬಿಜೆಪಿ-ಸಂಘಪರಿವಾರಕ್ಕೆ ಸಂವಾದಿಯಾಗಿ ಬಳಸುವ ಮೂಲಕ ನಾವು ಮೂಲ ಮನುವಾದದ ವಿಶಾಲ ಹಂದರವನ್ನು ಕೇವಲ ಜಾತಿ ತಾರತಮ್ಯಗಳಿಗೆ ಸಂಕುಚಿತಗೊಳಿಸಿಬಿಟ್ಟಿದ್ದೇವೆ. ಮನುವಾದವನ್ನು ಖಂಡಿಸುವ, ವಿರೋಧಿಸುವ ಪ್ರಗತಿಪರ ಚಳುವಳಿಗಳಲ್ಲೂ, ಕ್ರಾಂತಿಕಾರಿ ಪಕ್ಷಗಳಲ್ಲೂ, ಅದರ ಪ್ರಧಾನ ಅಂಶವಾದ ಪಿತೃಪ್ರಧಾನತೆ ಆಳವಾಗಿ ಬೇರೂರಿದೆ. ಮನುಸ್ಮೃತಿಯ ಸೋಂಕಿಲ್ಲದ ಮುಸ್ಲಿಂ, ಕ್ರೈಸ್ತ ಸಮುದಾಯಗಳಲ್ಲೂ ಪಿತೃಪ್ರಧಾನತೆಯ ಬೇರುಗಳು ದಿನದಿನಕ್ಕೆ ಗಟ್ಟಿಯಾಗುತ್ತಿವೆ. Smash Patriarchy (ಪಿತೃಪ್ರಧಾನತೆಯನ್ನು ಹೊಡೆದುಹಾಕಿ ) ಎಂದು ಘೋಷಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ತಮ್ಮ ಪಕ್ಷದ ಒಳಗೆ ಇಣುಕಿ ನೋಡಿಲ್ಲ, ನೋಡುವುದೂ ಇಲ್ಲ.
ಏಕೆಂದರೆ ವಿಶಾಲ ರಾಜಕೀಯ ಸಂಕಥನಗಳಲ್ಲಿ (Broader Political Discourse) ಫ್ಯಾಸಿಸಂ/ಫ್ಯಾಸಿಸ್ಟ್, ಮನುವಾದ/ವಾದಿ ಇವೆಲ್ಲವೂ ಘೋಷಣೆಯ ಪರಿಭಾಷೆಗಳಾಗಿಬಿಡುತ್ತವೆ. (Jargons), ಪಿತೃಪ್ರಧಾನತೆಯನ್ನು ಹೊಡೆದುಹಾಕಲೇಬೇಕಾದರೆ, ಬುಡಮಟ್ಟದಿಂದ ಕಿತ್ತೊಗೆಯಬೇಕಾದರೆ, ಸಾಂಸ್ಥಿಕ, ಸಾಂಘಿಕ ನೆಲೆಗಳಲ್ಲಿ ಅದರ ಬೇರುಗಳನ್ನು ಅಳಿಸಿಹಾಕಬೇಕು. ಇದೊಂದು ಸಾರ್ವತ್ರಿಕ ಯೋಜನೆಯೇ (Universal Scheme) ಆಗಬಹುದು. ಆದರೆ ಈ ಪ್ರಯತ್ನ ಮಹಿಳೆಯರ ಹಕ್ಕೊತ್ತಾಯದ ಪ್ರಶ್ನೆಯಾಗಕೂಡದು, ಪುರುಷ ಸಮಾಜದ, ಪುರುಷಾಡಳಿತ ಕೇಂದ್ರಗಳ, ಪುರುಷಾಳ್ವಿಕೆಯ ಸಂಸ್ಥೆಗಳ ಆತ್ಮಾವಲೋಕನದ ಪ್ರಶ್ನೆಯಾಗಬೇಕು. ಸಾಂವಿಧಾನಿಕ ನೈತಿಕತೆಯ (Constitutional Morality) ಪ್ರಶ್ನೆಯಾಗಬೇಕು. ಸಾಂಸ್ಥಿಕ ಸ್ಥಾನಮಾನಗಳಿಂದ ಸಾರ್ವಜನಿಕ ಅವಕಾಶಗಳವರೆಗೂ ವಿಸ್ತರಿಸಿದಾಗ ಮಾತ್ರ ನಾವು ಸಂವಿಧಾನವನ್ನು ಗೌರವಿಸಿದಂತಾಗುತ್ತದೆ.
ಸಾರ್ವಜನಿಕ ವೇದಿಕೆಗಳ (Public Platforms) ಮೇಲೆ̧ ಅಕಾಡೆಮಿಕ್ ಸಂಕಥನಗಳಲ್ಲಿ, ಸಾಂಸ್ಕೃತಿಕ ಅಭಿವ್ಯಕ್ತಿಯ ಪ್ರಕ್ರಿಯೆಗಳಲ್ಲಿ ಮಹಿಳೆಯ ಉಪಸ್ಥಿತಿ ಮತ್ತು ಸಮಾನ ಪ್ರಾತಿನಿಧ್ಯ, ಶಾಸನಾತ್ಮಕವಾಗಿ ಹೇರಲ್ಪಡುವ ಮೀಸಲಾತಿಯಂತೆ ಆಗಕೂಡದು. ಮಹಿಳಾ ಪ್ರಾತಿನಿಧಿತ್ವ ಮೇಲಿನಿಂದ ಕೊಡುವಂತಹುದಲ್ಲ ಅದು ಸ್ವಾಭಾವಿಕವಾಗಿ ರೂಪುಗೊಳ್ಳಬೇಕಾದ ಸಂವೇದನಾಶೀಲ ವಿದ್ಯಮಾನ. ಭಾರತ ಎದುರಿಸುತ್ತಿರುವ ಕೋಮುವಾದಿ ಫ್ಯಾಸಿಸಂ (Communal Fascism) ಮತ್ತು ನವ ಉದಾರವಾದದ (Neo liberalism) ದಾಳಿಯಲ್ಲಿ , ಪ್ರಗತಿಪರ ಚಳುವಳಿಗಳು ʼ ಮನುವಾದ ʼವನ್ನು ಪ್ರಥಮ ಶತ್ರು ಎಂದು ಭಾವಿಸುತ್ತದೆ. ಈ ಸೀಮಿತ ಅರ್ಥದ ʼ ಮನುವಾದ/ವಾದಿ/ ಬಳಕೆಯನ್ನು ವಿಸ್ತರಿಸಿ, ಅದರ ಮೂಲಸ್ಥಾಯಿಯಾದ ಪಿತೃಪ್ರಧಾನತೆಯನ್ನು ವಿರೋಧಿಸಬೇಕಿದೆ. ಇಲ್ಲವಾದರೆ ಧಾರ್ಮಿಕ-ಸಾಂಸ್ಕೃತಿಕ ನೆಲೆಯಲ್ಲಿ ಮನುಸ್ಮೃತಿಯಿಂದ ಹೊರತಾದ ಅಲ್ಪಸಂಖ್ಯಾತರ ನಡುವೆ , ದಲಿತ ಸಮಾಜಗಳಲ್ಲಿ ಗಟ್ಟಿಯಾಗಿರುವ ಪಿತೃಪ್ರಧಾನತೆ ನಮ್ಮ ಸಂಕಥನದ ಭಾಗವಾಗುವುದೇ ಇಲ್ಲ.
ಪಿತೃಪ್ರಧಾನತೆ ಎಷ್ಟೇ ರೂಪಾಂತರಗೊಂಡು ನಮ್ಮ ನಡುವೆ ಇದ್ದರೂ ಅದು ಮೂಲತಃ ಸ್ತ್ರೀ ವಿರೋಧಿಯೇ ಆಗಿರುತ್ತವೆ. ಈ ಪ್ರಾಚೀನ ಮೌಲ್ಯವನ್ನು ಬೇರು ಸಮೇತ ಕಿತ್ತೊಗೆಯದೆ ಹೋದರೆ ಬಹುಶಃ ಭಾರತದ ಸಂವಿಧಾನ ಆಶಿಸುವ ಭಾಗವಹಿಸುವಿಕೆ, ಪ್ರಾತಿನಿಧಿತ್ವ ಮತ್ತು ಒಳಗೊಳ್ಳುವಿಕೆ (Participativȩ Representative & Inclusiveness) ಮಹಿಳೆಯ ಪಾಲಿಗೆ ಶಾಶ್ವತ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.






