
ಸ್ಯಾಂಡಲ್ವುಡ್ನ ಹಿಟ್ ನಿರ್ದೇಶಕ ತರುಣ್ ಸುಧೀರ್ ಹಾಗು ರಾಬರ್ಟ್ ಸುಂದರಿ ಸೋನಲ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಬೆಳಗ್ಗೆ 10:50 ರಿಂದ 11:35ರ ತುಲಾ ಲಗ್ನದಲ್ಲಿ ಹಿಂದೂ ಸಂಪ್ರದಾಯದಂತೆ ಧಾರಾ ಮುಹೂರ್ತ ನಡೆಸಲಾಗುತ್ತಿದೆ. ಅದಕ್ಕೂ ಮೊದಲು ಮಾಂಗಲ್ಯ ಧಾರಣೆ ನಡೆಯಲಿದೆ. ಈಗಾಗಲೇ ದಿವಂಗತ ನಟ ಸುಧೀರ್ ಕುಟುಂಬ ಸಕಲ ಸಿದ್ದತೆ ಮಾಡಿಕೊಂಡಿದೆ.
ಪೂರ್ಣಿಮ ಕನ್ವೆನ್ಷನ್ ಹಾಲ್ನಲ್ಲಿ ಕಮಲದ ಹೂವಿನ ಆಕಾರದ ಮಂಟಪ ಸಿದ್ಧ ಮಾಡಿದ್ದು, ನಿರ್ದೇಶಕ ತರುಣ್ ಸುಧೀರ್ ಹಾಗು ನಟಿ ಸೋನಲ್ ಮದುವೆಗೆ ಇಂದು ಹಿರಿಯ ನಟ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುವ ಸಾಧ್ಯತೆಯಿದೆ.

ತರುಣ್ – ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪದ ಸೆಟ್ ಹಾಕಲಾಗಿದ್ದು, ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪಕ್ಕೆ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಿದ್ದು, ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಅಲಂಕಾರ ಕಣ್ಮನ ಸೆಳೆಯುವಂತಿದೆ. ಕಲಾಂಜನಿ ವೆಡ್ಡಿಂಗ್ಸ್ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ನಿರ್ಮಾಣ ಮಾಡಲಾಗಿದೆ.
ಚಿತ್ರರಂಗದಲ್ಲಿ ಇರುವ ಕಾರಣದಿಂದ ಮದುವೆಯ ಎಲ್ಲಾ ಚಟುವಟಿಕೆಗಳು ಸಿನಿಮಾ ಕಾನ್ಸೆಪ್ಟ್ನಲ್ಲೇ ಸಿದ್ದವಾಗಿವೆ. ನಿನ್ನೆ ರಾತ್ರಿ ತರುಣ್ – ಸೋನಲ್ ಆರತಕ್ಷತೆ ವೇದಿಕೆ ಕೂಡ ಇದಕ್ಕೆ ಹೊರತಾಗಿ ಇರಲಿಲ್ಲ. ಸೈಮಾ, ಫಿಲ್ಮ್ ಫೇರ್ ಅವಾರ್ಡ್ನ ರೆಡ್ ಕಾರ್ಪೆಟ್ ಇವೆಂಟ್ ಕಾನ್ಸೆಪ್ಟ್ನಲ್ಲಿ ಆರತಕ್ಷತೆ ಸೆಟ್ ರೆಡಿ ಮಾಡಲಾಗಿತ್ತು. ರೆಡ್ ಅಂಡ್ ಬ್ಲಾಕ್ ಕಾಂಬಿನೇಶನ್ನಲ್ಲಿ ಇಡೀ ಕಲ್ಯಾಣ ಮಂಟಪ ಸಿಂಗಾರ ಮಾಡಲಾಗಿತ್ತು. ಕಲ್ಯಾಣ ಮಂಟಪದ ಎಂಟ್ರಿಯಲ್ಲಿ ಬಂದವರನ್ನು ದಿವಂಗತ ನಟ ಸುಧೀರ್ ಫೊಟೊಗಳು ಸ್ವಾಗತಿಸುತ್ತಿದ್ದವು. ಕಣ್ಮನ ಸೆಳೆಯುತ್ತಿತ್ತು ರೆಟ್ರೋ ಶೈಲಿಯ ಪ್ರಾಪರ್ಟಿಗಳು.

ನಿರ್ದೇಶಕ ತರುಣ್ ಸುಧೀರ್ ಸಹೋದರ ನಟ, ನಿರ್ದೇಶಕ ನಂದಕಿಶೋರ್ ಮಾತನಾಡಿ, ನಮ್ಮ ಕುಟುಂಬದಲ್ಲಿ ಸಾಕಷ್ಟು ವರ್ಷಗಳ ಬಳಿಕ ಈ ರೀತಿಯ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ. ತರುಣ್ಗೆ ಮದುವೆ ತಡವಾದ ವಿಚಾರದ ಬಗ್ಗೆ ಅಮ್ಮ ಸಾಕಷ್ಟು ಬಾರಿ ನೊಂದುಕೊಂಡು ಮಾತನಾಡಿದ್ದರು. ಆದರೆ ಇದೀಗ ಎಲ್ಲವೂ ಒಳ್ಳೆಯದಾಗುತ್ತಿದೆ. ಸಾರ್ (ದರ್ಶನ್) ಇಲ್ಲದೆ ಇರುವುದು ನೋವು ತರಿಸಿದೆ. ಅವರೊಂದಿಗೆ ನಾನು ಕರಿಯಾ ಸಿನಿಮಾಗೂ ಮೊದಲಿನಿಂದಲೂ ಒಡನಾಡಿ ಆಗಿದ್ದೇನೆ. ಅವರು ನಮ್ಮ ತಾಯಿಯನ್ನು ಮದರ್ ಇಂಡಿಯಾ ಎನ್ನುತ್ತಿದ್ದರು. ಚಿತ್ರವನ್ನು ಮೀರಿದ ಸಂಬಂಧ ನಮ್ಮದು ಎಂದಿದ್ದಾರೆ.

ತರುಣ್ ಹಾಗು ಸೋನಲ್ ದರ್ಶನ್ಗಾಗಿ ಮದುವೆಯನ್ನೇ ಮುಂದೂಡಿಕೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಚರ್ಚೆ ನಡೆಸಿದ ವೇಳೆ, ಯಾವುದೇ ಕಾರಣಕ್ಕೂ ಮದುವೆ ಮುಂದೂಡಬೇಡ ಎಂದು ದರ್ಶನ್ ತಾಕೀತು ಮಾಡಿದ್ದರು. ಹಾಗಾಗಿ ಮದುವೆ ಮುಂದೂಡುವ ನಿರ್ಧಾರ ಕೈಬಿಡಲಾಗಿತ್ತು. ಇಂದು ಅದ್ಧೂರಿಯಾಗಿ ಮದುವೆ ನಡೆಯುತ್ತಿದೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದು, ಮಂಗಳೂರಿನಲ್ಲಿ ಮತ್ತೊಮ್ಮೆ ಕ್ರೈಸ್ತ ಸಮುದಾಯದಂತೆ ಮದುವೆ ರಿಸೆಪ್ಷನ್ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಕೃಷ್ಣಮಣಿ