ಮೂರು ವರ್ಷಗಳ ಬಳಿಕ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13ರಿಂದ ಚಳಿಗಾಲ ಅಧಿವೇಶನ ಆರಂಭಗೊಂಡಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಅಧಿವೇಶನ ನಡೆಯುವಾಗ ಕಲಾಪದಲ್ಲಿ ಪ್ರತಿಪಕ್ಷಗಳ ಸವಾಲಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಾದಂತೆ ಕಾಣುತ್ತಿದೆ. ಹತ್ತು ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಈ ನಡುವೆ 40 ಕ್ಕೂ ಅಧಿಕ ಹೆಚ್ಚು ಸಂಘ -ಸಂಸ್ಥೆಗಳು ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಂಡಿದೆ.
ಅಧಿವೇಶನಕ್ಕೆ ಗೈರಾಗದಿರಲು ಶಾಸಕರಲ್ಲಿ ಸ್ಪೀಕರ್ ಮನವಿ
2018ರ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಪ್ರವಾಹ, ಕರೋನಾ ಕಾರಣದಿಂದಾಗಿ ಬೆಂಗಳೂರಿನಲ್ಲೇ ಅಧಿವೇಶನವನ್ನು ನಡೆಸಲಾಗಿತ್ತು. ಈಗ ಓಮಿಕ್ರಾನ್ ಸೋಂಕಿನ ನಡುವೆ ಡಿಸೆಂಬರ್ 13 ರಿಂದ ಡಿಸೆಂಬರ್ 24 ರವರೆಗೆ ಚಳಿಗಾಲ ಅಧಿವೇಶನವು ನಡೆಯಲಿದೆ. ವಿರೋಧ ಪಕ್ಷಗಳು ಕೂಡಾ ಸರ್ಕಾರದ ವಿರುದ್ಧ ಚಾಟಿ ಬೀಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಅತ್ತ ಸುವರ್ಣ ಸೌಧದಲ್ಲಿ ಕಲಾಪವಾಗಲಿದ್ದರೆ, ಇತ್ತ ಹೊರಗಡೆ ಸೋಮವಾರದಿಂದಲೇ ಹಲವಾರು ಸಂಘಟನೆಗಳು ಪ್ರತಿಭಟನೆಯನ್ನು ನಡೆಸಲು ಸಜ್ಜಾಗಿವೆ.
ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿ,” ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯಲಾಗುತ್ತೆ. ಸರ್ಕಾರ ಇದುವರೆಗೂ ಯಾವ ಯಾವ ವಿಧೇಯಕಗಳನ್ನು ಮಂಡಿಸಲಿದೆ ಅನ್ನುವುದು ಕಳುಹಿಸಿಲ್ಲ. ಬಿಲ್ ಕಳಿಹಿಸುತ್ತೇವೆ ಎಂದು ಹೇಳಿದ್ದಾರೆ ಇದುವರೆಗೂ ಬಂದಿಲ್ಲ. ನಾಳೆಯೊಳಗೆ ಕಳಿಸ್ತೀವಿ ಅಂತ ಮೌಖಿಕವಾಗಿ ತಿಳಿಸಿದ್ದಾರೆ. ಇನ್ನು ಈ ಅಧಿವೇಶನದಲ್ಲಿ ಎರಡು ದಿನವಾದ್ರು ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆ ಮಾಡಬೇಕು ಅಂತ ಸಲಹೆಗಳು ಬಂದಿದೆ. ನಾವು ಕೊರೊನಾ ಕಾರಣದಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಲಾಪವನ್ನು ನಡೆಸಲಾಗುತ್ತದೆ ಎಂದಿದ್ದಾರೆ.
12 ಕೋಟಿಗೆ ಇಳಿಸಿದ ಅಧಿವೇಶನದ ವೆಚ್ಚ
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನವು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಸೇರಿ ಸುಮಾರು 4500 ಜನರಿಗೆ ಜಿಲ್ಲಾಡಳಿತ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹತ್ತು ದಿನದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ ಹನ್ನೆರಡು ಕೋಟಿ ಖರ್ಚು ಮಾಡುತ್ತಿದೆ. ಈ ಹಿಂದಿನ ಅಧಿವೇಶನಕ್ಕೆ ಸುಮಾರು 24 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಸುಮಾರು 12 ಕೋಟಿ ರೂ. ಮಾತ್ರ ಖರ್ಚು ಮಾಡಲಾಗುತ್ತಿದೆ. ಅಂದರೆ ಸುಮಾರು 12 ಕೋಟಿ ರೂ. ಇಳಿಕೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಧಿವೇಶನ ಭದ್ರತೆಗಾಗಿ ಆಗಮಿಸುತ್ತಿರುವ ಸುಮಾರು 2800 ಪೊಲೀಸ್ ಸಿಬ್ಬಂದಿ, ಐನ್ನೂರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತಾಲಯ ವಸತಿ ಸೌಲಭ್ಯ ಕಲ್ಪಿಸುತ್ತಿದೆ.
ಕಲಾಪದಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಅಸ್ತ್ರಗಳೇನು?
• ಅತಿವೃಷ್ಟಿ, ನೆರೆ ಹಾವಳಿ ಪರಿಹಾರ ಕಾರ್ಯ
• ಪುನರ್ ವ್ಯವಸ್ಥೆ ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯತೆ
• ಕೇಂದ್ರ ಸರ್ಕಾರದಿಂದ ಬಂದಿರುವ ನೆರವಿನ ಲೆಕ್ಕ
• ಕೃಷ್ಣಾ ಎರಡನೇ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ವಿಳಂಬದಿಂದ ಯುಕೆಪಿ ಮೂರನೇ ಹಂತದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಗಾಲು ವಿಚಾರ
• ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ವಿವಿಧ ಇಲಾಖೆಗಳಲ್ಲಿ 40% ಕಮೀಷನ್ ಎಂಬ ಗಂಭೀರ ಆರೋಪ ವಿಷಯ
• ಬಿಟ್ಕಾಯಿನ್ ಹಗರಣದ ತನಿಖೆಯಲ್ಲಿ ಸರ್ಕಾರದ ಅನುಮಾನಾಸ್ಪದ ನಡೆ
• ಸರ್ಕಾರವು ಅತಿವೃಷ್ಟಿ, ನೆರೆಯಿಂದ ಆದ ನಷ್ಟ ರೈತರಿಗೆ ಪರಿಹಾರ ನೀಡಿದ ಲೆಕ್ಕ
75 ಸಂಘಟನೆಗಳಿಂದ ಪ್ರತಿಭಟನೆ
ಅಧಿವೇಶನ ಸಂದರ್ಭದಲ್ಲಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹ ಮಾಡಿ ಪ್ರತಿಭಟನೆ ಮಾಡಲು ಹಲವಾರು ಸಂಘಟನೆಗಳು ಮುಂದಾಗಿದೆ. ಈ ರೀತಿ ಪ್ರತಿಭಟನೆಗಾಗಿಯೇ ಸರ್ಕಾರವು ಹಲಗಾ ಗ್ರಾಮದ ಸುವರ್ಣ ಉದ್ಯಾನವನದಲ್ಲಿ ಏಳು ಟೆಂಟ್, ಕೊಂಡಸಕೊಪ್ಪ ಗ್ರಾಮದಲ್ಲಿ ಒಂದು ಟೆಂಟ್ ವ್ಯವಸ್ಥೆ ಮಾಡಿದೆ. ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡಲು 75 ಸಂಘಟನೆಗಳು ಮುಂದಾಗಿದೆ. ಕೋವಿಡ್ ಕಾರಣದಿಂದಾಗಿ ಒಂದು ಟೆಂಟ್ನಲ್ಲಿ ಐನ್ನೂರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಐನ್ನೂರಕ್ಕಿಂತ ಅಧಿಕ ಜನರು ಇದ್ದರೆ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಇನ್ನೊಂದು ದೊಡ್ಡ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧ ಮುತ್ತಿಗೆ ಚಳುವಳಿಯ ಬಗ್ಗೆ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸಂಘವು ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಮಾಡುವುದು, ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ವಾಪಸ್ಸು ಪಡೆಯಬೇಕು, ರೈತರ ಮೇಲಿನ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಬೇಕು, ಚಳುವಳಿಯಲ್ಲಿ ಮಡಿದ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದು, ಲಂಖೀಪುರ ಖೇರಿ ಘಟನೆಯ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜೇಯ್ ಮಿಶ್ರಾ ಮತ್ತು ಅವರ ಮಗ ಆಶಿಷ್ ಮಿಶ್ರಾ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು ಎಂದು ಸಂಘವು ಹೇಳಿದೆ. ಇಂದು ನಡೆಯುವ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಸುವರ್ಣ ಸೌಧ ಮುತ್ತಿಗೆ ಹಾಕಲಾಗುತ್ತದೆ. ಕೃಷಿ ಕಾಯ್ದೆ ವಾಪಸ್ ಪಡೆಯುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ಸುಮ್ಮನೆ ಕೈ ಕಟ್ಟಿ ಕುಳಿತು ಕೊಳ್ಳುವ ಮಾತೇ ಇಲ್ಲ. ಅರೆಸ್ಟ್ ಮಾಡಿದರೂ ಹೆದರಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.