ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ನಟ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’ ಬಿಡುಗಡೆಯಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಸ್ಯಾಂಡಲ್‌ವುಡ್‌ನಲ್ಲಿ ಸದಾ ಚರ್ಚೆಯಾಗುವ ‘ನೆಪೋಟಿಸಂ’ (ಸ್ವಜನಪಕ್ಷಪಾತ) ವಿಚಾರ ಪ್ರಸ್ತಾಪವಾಗಿದ್ದು, ಇದಕ್ಕೆ ಕಿಚ್ಚ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಸಂಚಿತ್ ಸಂಜೀವ್ ಅವರಿಗೆ, “ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ಇದೆ. ಸುದೀಪ್ ಕುಟುಂಬದಿಂದಲೂ ಈಗ ಮತ್ತೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ” ಎಂಬ ಅರ್ಥದ ಪ್ರಶ್ನೆ ಕೇಳಿದರು. ಈ ವೇಳೆ ಸಂಚಿತ್ ಪರವಾಗಿ ಸ್ವತಃ ಸುದೀಪ್ ಮೈಕ್ ಹಿಡಿದು ಉತ್ತರಿಸಿದರು.
“ನೆಪೋಟಿಸಂ ಬಗ್ಗೆ ಮಾತನಾಡುವವರು ಇದೇ ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತಾರೆಯೇ? ನೆಪೋಟಿಸಂ ಅಂದ್ರೆ ಅದು ಮೊದಲಿಗೆ ದೊಡ್ಮನೆಯಿಂದಲೇ ಆರಂಭವಾಗಿದೆ ಅಂತ ಹೇಳಬಹುದು. ಹಾಗಾದರೆ ನೀವು ಎಂದಾದರೂ ಶಿವರಾಜ್‌ಕುಮಾರ್ ಅವರಿಗೆ ಅಥವಾ ಡಾ. ರಾಜ್‌ಕುಮಾರ್ ಅವರ ಕುಟುಂಬದವರಿಗೆ ಇದೇ ಪ್ರಶ್ನೆ ಕೇಳಿದ್ದೀರಾ?” ಎಂದು ಸುದೀಪ್ ಪ್ರಶ್ನಿಸಿದರು.ಮುಂದುವರಿದು ಮಾತನಾಡಿದ ಅವರು, “ಬಾಲಿವುಡ್‌ನಲ್ಲಿ ಹುಟ್ಟಿದ ಒಂದು ಪದವನ್ನು ಕರ್ನಾಟಕಕ್ಕೆ ತಂದು ಅಂಟಿಸಬೇಡಿ. ನಮ್ಮಲ್ಲಿ ಪ್ರತಿಭೆ ಮತ್ತು ಅರ್ಹತೆಯೇ ಮುಖ್ಯ. ಡಾ. ರಾಜ್‌ಕುಮಾರ್ ಕುಟುಂಬದವರು ತಮ್ಮ ಕಲೆ ಮತ್ತು ಪ್ರತಿಭೆಯಿಂದ ಜನರ ಪ್ರೀತಿ ಗಳಿಸಿದ್ದಾರೆ. ಜನ ಒಪ್ಪಿಕೊಂಡರೆ ಮಾತ್ರ ಯಾರೂ ಇಲ್ಲಿ ಉಳಿಯಲು ಸಾಧ್ಯ” ಎಂದು ಹೇಳಿದರು.
ಉದ್ಯಮ ಕ್ಷೇತ್ರದ ಉದಾಹರಣೆಯನ್ನೂ ನೀಡಿದ ಸುದೀಪ್, “ಮುಕೇಶ್ ಅಂಬಾನಿ ತಮ್ಮ ಆಸ್ತಿಯನ್ನು ಮಕ್ಕಳಿಗೆ ನೀಡಿದರೆ ಅದನ್ನು ನೆಪೋಟಿಸಂ ಎಂದು ಕರೆಯುವುದಿಲ್ಲ. ಆದರೆ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಈ ಪ್ರಶ್ನೆ ಕೇಳುವುದು ಏಕೆ?” ಎಂದು ಪ್ರತಿಪ್ರಶ್ನೆ ಹಾಕಿದರು.
ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, “ನನ್ನ ಕುಟುಂಬದಲ್ಲಿ ಸಾಕಷ್ಟು ಮಕ್ಕಳು ಇದ್ದಾರೆ. ಆದರೆ ಎಲ್ಲರೂ ಚಿತ್ರರಂಗಕ್ಕೆ ಬಂದಿಲ್ಲ. ಸಂಚಿತ್‌ಗೆ ನಟನೆ ಮೇಲೆ ಆಸಕ್ತಿ ಇರುವುದರಿಂದ ಬಂದಿದ್ದಾನೆ. ನನ್ನ ಮಗಳು ಸಾನ್ವಿ ಹಾಡುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದಾಳೆ. ಆಸಕ್ತಿ ಮತ್ತು ಪ್ರತಿಭೆ ಇದ್ದವರು ಮಾತ್ರ ಈ ಕ್ಷೇತ್ರಕ್ಕೆ ಬರುತ್ತಾರೆ” ಎಂದರು.
ಕೊನೆಯಲ್ಲಿ ಕನ್ನಡ ಪ್ರೇಕ್ಷಕರನ್ನು ಶ್ಲಾಘಿಸಿದ ಸುದೀಪ್, “ಕರ್ನಾಟಕದ ಜನರಿಗೆ ಗೊತ್ತಿರುವುದು ಒಂದೇ ಒಂದು ವಿಷಯ – ಕಲೆ. ಯಾರಲ್ಲಿ ನಿಜವಾದ ಪ್ರತಿಭೆ ಇರುತ್ತದೆಯೋ ಅವರನ್ನು ಮಾತ್ರ ಇಲ್ಲಿ ಜನ ಬೆಂಬಲಿಸುತ್ತಾರೆ. ಪ್ರತಿಭೆ ಇಲ್ಲದಿದ್ದರೆ ಯಾರನ್ನೂ ಪ್ರೇಕ್ಷಕರು ಒಪ್ಪುವುದಿಲ್ಲ” ಎಂದು ಹೇಳಿದರು.ಈ ಮೂಲಕ ‘ನೆಪೋಟಿಸಂ’ ಕುರಿತ ಚರ್ಚೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದು, ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗೇ ಮೊದಲ ಆದ್ಯತೆ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದ್ದಾರೆ.






