
ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡಪರ ಸಂಘಟನೆಗಳ ಒಕ್ಕೂಟ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರವೇ ಶಿವರಾಮೇಗೌಡ ಮಾತನಾಡಿದ್ದಾರೆ. ನಾಳಿನ ಬಂದ್ಗೆ ಕೆಲವರು ನೈತಿಕ ಬೆಂಬಲ, ಸಂಪೂರ್ಣ ಬೆಂಬಲ ಅನ್ನೋ ಗೊಂದಲಗಳಿವೆ. ಅದು ಯಾವುದೂ ಇಲ್ಲ, ಯಾವ ಅಪಸ್ವರವೂ ಇಲ್ಲ. ನಾಳಿನ ಬಂದ್ಗೆ ಎಲ್ಲರ ಸಹಕಾರ ಇದೆ. ಕನ್ನಡಿಗರನ್ನ ಎತ್ತಿಕಟ್ಟುವ ಕೆಲಸವನ್ನ ಕೆಲವರು ಮಾಡ್ತಿದ್ದಾರೆ. ಅದ್ಯಾವುದೂ ಸಕ್ಸಸ್ ಆಗಲ್ಲ, ಬಂದ್ ಯಶಸ್ವಿಯಾಗುತ್ತದೆ ಎಂದಿದ್ದಾರೆ.
ಕನ್ನಡಪರ ಹೋರಾಟಗಾರ ಕೆ.ಆರ್ ಕುಮಾರ್ ಮಾತನಾಡಿ, ಕನ್ನಡ ಒಕ್ಕೂಟದಿಂದ ನಾಳೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದೇವೆ. 20 ಬೇಡಿಕೆಗಳನ್ನ ರಾಜ್ಯ ಹಾಗೂ ಕೇಂದ್ರ ಈಡೇರಿಸಬೇಕು. ಕೆಲ ಸಂಘಟನೆಗಳು ಬೆನ್ನು ತೋರಿಸುವ ಕೆಲಸ ಮಾಡ್ತಿದ್ದಾರೆ. ನಾವು ಶಾಂತಿ ರೀತಿಯಲ್ಲಿ ಬಂದ್ ಮಾಡ್ತಿದ್ದೇವೆ. ಆದ್ರೆ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಕೆಲಸ ಮಾಡ್ತಿದ್ದಾರೆ. ಸರ್ಕಾರ ಪೊಲೀಸರ ಮೂಲಕ ಬಂದ್ ಮಾಡದಂತೆ ತಡೆಯುತ್ತಿದ್ದಾರೆ. ಕರ್ನಾಟಕ ಯೋಜನೆ ಸರಿಯಾಗಿ ಅನುಷ್ಠಾನ ಆಗಿಲ್ಲ. ಮೆಟ್ರೋ ಸೇರಿದಂತೆ ಎಲ್ಲ ದರವೂ ಏರಿಕೆ ಆಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿದ್ದಾರೆ ಎಂದಿದ್ದಾರೆ.

ಕನ್ನಡಪರ ಸಂಘಟನೆಗಳಿಗೆ ಪೊಲೀಸ್ ಮೂಲಕ ನೋಟಿಸ್ ನೀಡ್ತಿದ್ದಾರೆ. ಪೊಲೀಸ್ ಠಾಣೆಗೆ ಬನ್ನಿ, ಬಂದ್ ಪ್ರತಿಭಟನೆ ಮಾಡಬಾರದು ಎಂದು ಬೆದರಿಸುವ ಕೆಲಸ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ನೀವು ಅಧಿಕಾರಕ್ಕೆ ಬರಬೇಕಾದರೆ ಹೋರಾಟ ಮಾಡ್ತಿರಾ..? ವಾಟಳ್ ನಾಗರಾಜ್ ಅವ್ರು ಹೋರಾಟ ಮಾಡಿದ್ರೆ ಕಾನೂನು ಅಂತ ಹೇಳ್ತಿರಾ ಎಂದು ಪ್ರಶ್ನಿಸಿದ್ದಾರೆ. ಕನ್ನಡಿಗರು ಕೆಲಸಕ್ಕೆ ಹೋಗದೆ ನಮಗೆ ಬೆಂಬಲ ಕೊಡ್ಬೇಕು, ಯಾವುದೋ ಸಂಘಟನೆ ಬಂದ್ನ ವಿರೋಧ ಮಾಡ್ತಿದ್ದಾರೆ. 20 ಬೇಡಿಕೆಗಳಲ್ಲಿ 10 ಬೇಡಿಕೆಗಳು ಈಡೇರಿಸಿಲಿ, ನಾಳೆ ಪೊಲೀಸರು ನಮ್ಮ ಕಾರ್ಯಕರ್ತರನ್ನ ಬೆದರಿಸುವ ಕೆಲಸ ಮಾಡಿದ್ದಾರೆ. ಆದರೆ ನಾವು ಯಾವುದಕ್ಕೂ ಹೆದರಲ್ಲ, ಬಂದ್ ಮಾಡೇ ಮಾಡ್ತೀವಿ ಎಂದಿದ್ದಾರೆ.

ಆದರ್ಶ ಆಟೋ ಚಾಲಕ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಾಳೆ ಆಟೋ, ಟ್ಯಾಕ್ಸಿ, ಗೂಡ್ಸ್ ಆಟೋ ಎಲ್ಲವೂ ಬಂದ್ ಆಗಲಿದೆ. ಬಂದ್ಗೆ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಆದರೆ ನಾಳೆ ಕರ್ನಾಟಕ ಬಂದ್ ಬೆಂಬಲಿಸಿದ ಸಂಘಟನೆಗಳಿಗೆ ಪೊಲೀಸ್ರು ನೋಟಿಸ್ ಕೊಡುತ್ತಿದ್ದಾರೆ. ನಾಳೆ ಪ್ರತಿಭಟನೆ, ಮುಷ್ಕರ, ಸಾರ್ವಜನಿಕ ತೊಂದರೆ, ಮೆರವಣಿಗೆ ಮಾಡುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ. ಎಸ್.ಜೆ. ಪಾಕ್೯ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿ ಆಗ್ತಿದೆ. ಒಂದ್ವೇಳೆ ಮೆರವಣಿಗೆ, ಪ್ರತಿಭಟನೆ ಮಾಡಿದ್ರೆ ಕಾನೂನು ಕ್ರಮ ಎಂದು ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ.
ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿ, ನಮ್ಮ ಹೋರಾಟಕ್ಕೆ ಉಪಮುಖ್ಯಮಂತ್ರಿ ಬೆಂಬಲ ಇಲ್ಲ ಅಂದಿದ್ದಾರೆ. ಇವರು ಮೇಕೆದಾಟು ಹೆಸರಲ್ಲಿ ಹೋರಾಟ ಮಾಡಿದಾಗ ನಾವು ಬೆಂಬಲಿಸಿದ್ವಿ, ಕನ್ನಡಿಗರು ಇವರ ಕೈಗೆ ಅಧಿಕಾರ ಕೊಟ್ಟು ನಾಡು ಉದ್ದಾರ ಮಾಡಿ ಅಂತಂದ್ರು. ಆದರೆ ನಾವು ಕನ್ನಡಿಗರ ಪರವಾಗಿ ಬಂದ್ ಗೆ ಕರೆ ಕೊಟ್ಟಾಗ ನಮ್ಮನ್ನು ಹತ್ತಿಕ್ತಾ ಇದ್ದಾರೆ. ಪಕ್ಷಾತೀತವಾಗಿ ಇವರ ಯೋಗ್ಯತೆ ಏನು ಅಂತ ನಿನ್ನೆ ಮೊನ್ನೆ ಸದನದಲ್ಲಿ ಚರ್ಚೆ ಆಗಿದೆ. ನಿಮ್ಮಗಳ ಯೋಗ್ಯತೆ ಇಷ್ಟೇ! ಜನರ ಹಿತ ನಿಮಗೆ ಬೇಕಾಗಿಲ್ಲ. ಕೇಂದ್ರ ಸರ್ಕಾರಕ್ಕೆ ವಿಪಕ್ಷದ ನಾಯಕರು ಕನ್ನಡಿಗರ ಪರವಾಗಿ ಹೋಗಿಲ್ಲ. ಅವರವರ ಕಷ್ಟ ಸುಖಕ್ಕಾಗಿ ದೆಹಲಿಗೆ ಹೋಗಿ ಬರ್ತಾರೆ. ಹೋಟೆಲ್ ಮಾಲೀಕರು ಬೆಂಬಲ ಇಲ್ಲಾ ಎಂದಿದ್ದಾರೆ. ಅವರಿಗೆ ಕಷ್ಟ ಬಂದಾಗ ನಾವು ಹೋಗಿ ನಿಂತಿದ್ವಿ. ಈಗ ಅವರು ಕನ್ನಡದ ಪರವಾಗಿ ಇಲ್ಲ ಅಂತಿದ್ದಾರೆ ಎಂದು ಸಾರಾ ಗೋವಿಂದ ಕಿಡಿಕಾರಿದ್ದಾರೆ. ಪೊಲೀಸ್ ಅವ್ರು ಮುಂದೆ ಬಿಟ್ಟು ಕರ್ನಾಟಕ ಬಂದ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ನಿನ್ನೆ ನಿಮ್ಮ ಯೋಗ್ಯತೆ ಏನು ಸದನದಲ್ಲಿ ಗೊತ್ತಾಗ್ತಿದೆ. ಹನಿಟ್ರ್ಯಾಪ್ ಮಾಡಿದವರನ್ನ ಬಂದಿಸಿಬೇಕು, ನಮ್ಮನಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ವಾಟಾಳ್ ನಾಗರಾಜ್ ಮಾತನಾಡಿ, ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಗರಂ ಆಗಿದ್ದಾರೆ. ಬಂಗಾರಪ್ಪನ ಕಾಲದಲ್ಲಿ ನಾನೇ ಬಂಗಾರಪ್ಪನ ಕೈಲಿ ಬಂದ್ ಮಾಡಿಸಿದ್ದೆ. ಏಯ್ ಡಿಕೆ ಕೇಳಿಲ್ಲಿ, ತಿಳ್ಕೋ ಬೇಕು ನೀನು. ಬಂಗಾರಪ್ಪನ ಕೈಲೇ ಬಂದ್ ಮಾಡಿಸಿದೋನು ನಾನು. ಅದೆಲ್ಲಾ ಸ್ವಲ್ಪ ತಿಳ್ಕೋಬೇಕು ನೀನು ಎಂದಿದ್ದಾರೆ. ಇನ್ನು ಬೆಂಗಳೂರು ಪೊಲೀಸ್ ಕಮಿಷನರ್ ನಡೆಗೆ ವಾಟಾಳ್ ಸಿಟ್ಟು ಪ್ರದರ್ಶನ ಮಾಡಿ, ನಮ್ಮ ಪೊಲೀಸ್ ಕಮಿಷನರ್ ದಯಾನಂದ ಅವರು, ದಯಾ + ಆನಂದ ಅವರು. ಅವರಿಗೆ ದಯೆಯೂ ಇಲ್ಲ ಆನಂದವೂ ಇಲ್ಲ. ನಮ್ಮ ಹೋರಾಟ ಹತ್ತಿಕ್ತಿದ್ದಾರೆ. ನಾನು ಸ್ವಲ್ಪ ಯಾಮಾರಿದೆ ನಾನೂ ಸಿಎಂ ಆಗ್ಬೇಕಿತ್ತು. ಆಗ ಇವರೆಲ್ಲಾ ನನ್ನ ಹಿಂದೆ ಹಿಂದೆ ಬರ್ತಿದ್ರು. ನಾನು ದಯಾನಂದ ಅವರನ್ನು ಭೇಟಿ ಮಾಡೋಕೆ ಹೋದೆ, ಆಗ ಅವರೊಂದು ತುದಿ ನಾನೊಂದು ತುದಿ. ಮಾತಿಲ್ಲ ಕತೆಯಿಲ್ಲ ಅವರದ್ದು. ನಾಳಿನ ಬಂದ್ ಯಶಸ್ವಿ ಆಗೇ ಆಗುತ್ತೆ. ನಾಳೆ ಟೌನ್ ಹಾಲ್ ನಿಂದ 11:30ಕ್ಕೆ ಮೆರವಣಿಗೆ ಇರುತ್ತದೆ. ನಾಳೆ ಸಂಪೂರ್ಣ ಕರ್ನಾಟಕ ಬಂದ್ ಇದ್ದೇ ಇದೆ ಎಂದಿದ್ದಾರೆ.