
ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇರವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ವೀರಶೈವ ಲಿಂಗಾಯತ ರನ್ನು ಹಾಗು ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ..? ಎಂದು ಜಾತಿಗಣತಿ ಬಿಡುಗಡೆ ಬಗ್ಗೆ ಶಾಮನೂರು ಶಿವಶಂಕರಪ್ಪ ಕೌಂಟರ್ ಮಾಡಿದ್ದಾರೆ. ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಶಾಮನೂರು, ಇವರು ಸುಮ್ಮನೆ ಜಾತಿ ಗಣತಿ ಬಿಡುಗಡೆ ಮಾಡ್ತಿವಿ ಅಂತ ಹೇಳ್ತಾ ಇದಾರೆ.

ರಾಜ್ಯದಲ್ಲಿ ಫಸ್ಟ್ ಲಿಂಗಾಯತರು, ಸೆಕೆಂಡ್ ಒಕ್ಕಲಿಗರು ಇದ್ದಾರೆ. ಒಕ್ಕಲಿಗರನ್ನು ನಮ್ಮನ್ನು ಎದುರು ಹಾಕಿಕೊಂಡು ರಾಜ್ಯಾಭಾರ ಮಾಡೋಕೆ ಆಗುತ್ತಾ..? ಲಿಂಗಾಯತರು, ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡುತ್ತೇವೆ. ವೀರಶೈವ ಲಿಂಗಾಯತ ಮಹಾಸಭಾ ಈಗಾಗಲೇ ಸಭೆ ನಡೆಸಿದ್ದೇವೆ ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಹೋರಾಟದ ರಣಕಹಳೆ ಊದಿದ್ದಾರೆ.

ಜಾತಿ ಜನ ಗಣತಿ ವಿಚಾರದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಎರಡು ಸಮುದಾಯದ ಪ್ರಶ್ನೆಯಲ್ಲ, ಬಹುತೇಕರಿಗೆ ಇದರಿಂದ ತೊಂದರೆ ಆಗಿದೆ. ಹತ್ತ ವರ್ಷಗಳ ಹಿಂದಿನ ವರದಿ ಇದು. ಇನ್ನೊಮ್ಮೆ ಜಾತಿ ಸಮೀಕ್ಷೆ ಮಾಡುವುದು ಸೂಕ್ತ ಎಂದಿದ್ದಾರೆ ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ಬಾಮೀಜಿ. ಈಗಾಗಲೇ ಬಹುತೇಕ ಕಡೆಯಿಂದ ಈ ವರದಿ ಬಗ್ಗೆ ವಿರೋಧ ವ್ಯಕ್ತವಾಗಿದೆ. ಈ ಜಾತಿ ವರದಿಯಲ್ಲಿ ಲಿಂಗಾಯತ ಸಂಖ್ಯೆಯೇ ಕಡಿಮೆ ಇದೆ. ಇನ್ನೊಂದು ವರ್ಗದ ಸಂಖ್ಯೆ ಹೆಚ್ಚಿಗೆ ಇದೆ ಎಂದಿದ್ದಾರೆ.

ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುತ್ತೇವೆ. ಹತ್ತು ವರ್ಷದ ಹಿಂದಿನ ವರದಿ ಜಾರಿ ಮಾಡುವುದು ಬೇಡ. ಇನ್ನೊಮ್ಮೆ ವೈಜ್ಞಾನಿಕ ವರದಿ ಆಗಲಿ, ಮೇಲಾಗಿ ಈ ಜಾತಿ ಜನಗಣತಿ ವರದಿಗೆ ಆಡಳಿತ ಪಕ್ಷದ ಸಚಿವರು, ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ನಿರೀಕ್ಷೆಯಂತೆ ಈ ವರದಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲ್ಲ ಎಂದು ಸಾಣೆಹಳ್ಳಿ ಶ್ರೀ ಭವಿಷ್ಯ ನುಡಿದಿದ್ದಾರೆ. ಶಾಮನೂರು ಶಿವಶಂಕರಪ್ಪ ಕೂಡ ಸುಮ್ಮನೇ ಬಿಡುಗಡೆ ಮಾಡ್ತೇವೆ ಅಂತಾ ಹೇಳ್ತಾರೆ ಎನ್ನುವ ಮೂಲಕ ಸರ್ಕಾರ ಬಿಡುಗಡೆ ಮಾಡಲ್ಲ, ಸರ್ಕಾರದ ಮೇಲಿನ ಆರೋಪಗಳನ್ನು ಮರೆಮಾಚಲು ಹೀಗೆ ಮಾಡಿದ್ದಾರೆ ಎಂದಿದ್ದಾರೆ.










