ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದಿರುವ ಸಂಘರ್ಷ ಹಾಗೂ ಕೆಂಪುಕೋಟೆಯ ಮೇಲೆ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿರುವುದರ ಕುರಿತು ಭಾರತೀಯ ರೈತ ಒಕ್ಕೂಟದ ಮುಖಂಡರು ಪತ್ರಿಕಾಗೋಷ್ಟಿ ನಡೆಸಿದೆ. ಈ ವೇಳೆ ಮಾತನಾಡಿದ ರೈತ ಮುಖಂಡರು, ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಬಲಗೊಳಿಸಿ ಮುಂದುವರೆಸುವುದಾಗಿ ಹೇಳಿದ್ದಾರೆ.
“ಕೇಂದ್ರ ಸರ್ಕಾರದ ಮೋಸದಾಟಕ್ಕೆ ರ‍್ಯಾಲಿ ಬಲಿಪಶುವಾಗಿದೆ. ನಮ್ಮ ಬಲವನ್ನು ಮುರಿಯಲು ಕೇಂದ್ರ ಎಷ್ಟೇ ಯತ್ನಿಸಿದ್ದರೂ, 99.9% ರ‍್ಯಾಲಿ ಶಾಂತಯುತವಾಗಿಯೇ ನಡೆದಿದೆ. ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಕಮಿಟಿಯ ಸದಸ್ಯರುಗಳನ್ನು ತಡೆಯಲಿಲ್ಲ. ಆದರೆ, ನಮ್ಮನ್ನು ಪೊಲೀಸರು ತಡೆದರು,” ಎಂದು ಭಾರತೀಯ ರೈತ ಒಕ್ಕೂಟದ ಮುಖಂಡರಾದ ಬಲ್ಬೀರ್ ರಾಜೇವಾಲ್ ಹೇಳಿದ್ದಾರೆ.

ಇನ್ನು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಮಾತನಾಡಿ, ಕೆಂಪು ಕೋಟೆಯಲ್ಲಿ ಆದಂತಹ ಘಟನೆಗೆ ವಿಷಾದಿಸುತ್ತೇವೆ. ಅಲ್ಲಿ ನಡೆದಂತಹ ಘಟನೆಗಳ ನೈತಿಕ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ, ಎಂದು ಹೇಳಿದ್ದಾರೆ.
ಇನ್ನು ರ‍್ಯಾಲಿಯ ವೇಳೆ ನಡೆದ ಗಲಭೆಗೆ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಕಮಿಟಿ ಹಾಗೂ ದೀಪ್ ಸಿಧು ಅವರೇ ಕಾರಣಕರ್ತರು ಎಂದು ರೈತ ಒಕ್ಕೂಟದ ಮುಖಂಡರು ಹೇಳಿದ್ದಾರೆ.
ಟ್ರ್ಯಾಕ್ಟರ್ ರ‍್ಯಾಲಿಯ ಸಂಧರ್ಭದಲ್ಲಿ ಗಲಭೆಗೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದು ದೆಹಲಿಯ ಪೊಲೀಸ್ ಕಮಿಷನರ್ ಎಸ್ ಎನ್ ಶ್ರೀವಾಸ್ತವ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಮಾಹಿತಿ ನೀಡಿದ್ದಾರೆ.