ಅಕ್ಟೋಬರ್ 16ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲರ ದೃಷ್ಟಿ ಕೇಂದ್ರೀಕೃತವಾಗಿದ್ದು ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆಯ ಮೇಲೆ. 2022ರ ಸೆಪ್ಟೆಂಬರ್ ಒಳಗಾಗಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹಾಗೂ ಪಕ್ಷದಲ್ಲಿನ ಭಿನ್ನಮತೀಯರಿಗೆ ಸೋನಿಯ ಗಾಂಧಿ ನೀಡಿದ ಸಂದೇಶ ಎಲ್ಲೆಡೆ ಸುದ್ದಿ ಮಾಡಿತ್ತು. ಆದರೆ, ಇವೆಲ್ಲದರ ನಡುವೆ ಚರ್ಚೆಯಾದ ಕಾಂಗ್ರೆಸ್’ನ ಪ್ರಮುಖ ರಾಜಕೀಯ ತಂತ್ರಗಾರಿಕೆಯ ವಿಚಾರ ಬೆಳಕಿಗೆ ಬರದೇ ಉಳಿದು ಹೋಯಿತು.
ಸಭೆಯ ವೇಳೆ, ಪಂಜಾಬಿನ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಕುರಿತು ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಚರ್ಚೆ ನಡೆಸಿದರು. ದಲಿತ ನಾಯಕನನ್ನು ಸಿಎಂ ಪದವಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಚರಣ್ ಜೀತ್ ಸಿಂಗ್ ಚನ್ನಿ ಅವರು ಭಾವನಾತ್ಮಕವಾಗಿ ಆಡಿದ ನುಡಿಗಳನ್ನು ನೆನಪಿಸಿಕೊಂಡರು. ಇದೇ ರೀತಿ, ಹಿಂದುಳಿದ ವರ್ಗಗಳ ನಾಯಕರಾದ ಅಶೋಕ್ ಗೆಹ್ಲೋಟ್, ಕಮಲ್ ನಾಥ್ ಹಾಗೂ ಭೂಪೇಶ್ ಬಾಘೇಲ್ ಅವರು ಕೂಡಾ ಇದೇ ರಿತಿ ಭಾವನಾತ್ಮಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದರು ಎಂಬ ವಿಚಾರ ನೆನಪಿಸಿಕೊಂಡರು.
ಈ ಚರ್ಚೆಯನ್ನು ಸಾರಾಸಗಟಾಗಿ ನಾವು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ, ಇದು ಕೇವಲ ಮೂರು ರಾಜ್ಯಗಳ ಸಿಎಂ ಆಯ್ಕೆಯ ಕುರಿತು ನಡೆದ ಚರ್ಚೆಯಲ್ಲ, ಬದಲಾಗಿ ದೇಶದಾದ್ಯಂತ ಕಾಂಗ್ರೆಸ್ ಎಂಬ ಮುಳುಗುತ್ತಿರುವ ಹಡಗನ್ನು ಮತ್ತೆ ಮೇಲೆತ್ತಲು ಕಾಂಗ್ರೆಸ್ ಪಕ್ಷ ರೂಪಿಸುತ್ತಿರುವ ತಂತ್ರಗಾರಿಕೆಯ ಭಾಗವೆಂದೇ ಇದನ್ನು ಪರಿಗಣಿಸಬೇಕಾಗಿದೆ. ದಲಿತ ಹಾಗೂ ಹಿಂದುಳಿದ ನಾಯಕರಿಗೆ ಸ್ಥಾನಮಾನ ನೀಡಿ, ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಕಡೆಗಣಿಸಲ್ಪಟ್ಟ ಸಮುದಾಯಗಳ ಆಶಾಕಿರಣವಾಗಿ ಬಿಂಬಿಸಿಕೊಳ್ಳುವ ಅಭಿಲಾಷೆ ರಾಹುಲ್ ಗಾಂಧಿ ಅವರ ಚರ್ಚೆಯಲ್ಲಿ ಎದ್ದು ಕಾಣಿಸುತ್ತಿದೆ.

ಬಿಜೆಪಿಯಲ್ಲಿ ಹಿಂ.ವ. ಹಾಗೂ ದಲಿತರ ಕಡೆಗಣನೆ:
ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ದಲಿತ ನಾಯಕರನ್ನು ಮುನ್ನಲೆಗೆ ತರುವ ತಂತ್ರಗಾರಿಕೆ ರೂಪಿಸಲು ಇರುವ ಮೊದಲ ಕಾರಣ, ಬಿಜೆಪಿಯಲ್ಲಿ ಮೇಲ್ಜಾತಿಯ ನಾಯಕರಿಗೆ ಸಿಗುವ ವಿಫುಲ ಅವಕಾಶಗಳು. ಈಶಾನ್ಯ ರಾಜ್ಯಗಳ ಹೊರತಾಗಿ, ಹಿಂದುಳಿದ ವರ್ಗದಿಂದ ಸಿಎಂ ಆಗಿರುವ ಏಕೈಕ ಬಿಜೆಪಿ ನಾಯಕನೆಂದರೆ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್. ಇವರ ಹೊರತಾಗಿ, ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿಯೂ ಮೇಲ್ಜಾತಿಯ ನಾಯಕರೇ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಸ್ಸಾಂನಲ್ಲಿ ಬುಡಕಟ್ಟು ಜನಾಂಗದ ಅತ್ಯಮತ ಪ್ರಬಲ ನಾಯಕರಾಗಿದ್ದ ಸರ್ಬಾನಂದ ಸೋನೋವಾಲ್ ಅನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅಲ್ಲಿ ಬ್ರಾಹ್ಮಣರಾದ ಹಿಮಂತ ಬಿಸ್ವಾ ಸರ್ಮಾ ಅವರನ್ನು ಸಿಎಂ ಆಗಿ ನೇಮಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ದಲಿತರಿಗೆ ಹಾಗೂ ಹಿಂದುಳಿದ ವರ್ಗದ ನಾಯಕರಿಗೆ ಉನ್ನತ ಸ್ಥಾನಕ್ಕೇರಲು ಬಿಜೆಪಿಯಲ್ಲಿ ಅವಕಾಶಗಳು ಕಡಿಮೆಯಿರುವುದು ಸ್ಪಷ್ಟವಾಗುತ್ತಿದೆ. ಈ ಅವಕಾಶವನ್ನು ಕಾಂಗ್ರೆಸ್ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಈಗ ರೂಪಿಸುತ್ತಿದೆ.

ನಿಚ್ಚಳವಾಗಿ ಗೋಚರಿಸುತ್ತಿರುವ ಕಾಂಗ್ರೆಸ್’ನ ದಲಿತ ಪರ ನೀತಿ:
ಕಾಂಗ್ರೆಸ್ ತನ್ನ ದಲಿತ ಓಲೈಕೆ ನಿತಿಯನ್ನು ಕೇವಲ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ತೋರಿಸುತ್ತಿಲ್ಲ. ಬದಲಾಗಿ ದೇಶದಾದ್ಯಂತ ದಲಿತ ನಾಯಕರಿಗೆ ಮಣೆ ಹಾಕುವ ಕಾರ್ಯಕ್ಕೆ ‘ಕೈ’ ಹಾಕಿದೆ. ಇತ್ತೀಚಿಗೆ ಗುಜರಾತ್’ನ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್’ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿದೆ.
ಬಿಹಾರದಲ್ಲಿ ಯಾದವ ಮತಗಳ ಮೇಲೆ ಅವಲಂಬಿತವಾಗಿರುವ ಪಪ್ಪು ಯಾದವ್ ನೇತೃತ್ವದ ಜನ ಅಧಿಕಾರ್ ಪಾರ್ಟಿಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಈ ವಿಲೀನ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಬಿಹಾರದ ಕೋಸಿ ಭಾಗದಲ್ಲಿನ ಯಾದವ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಲಿದೆ.
ಇಷ್ಟಕ್ಕೇ ನಿಲ್ಲಿಸದೇ, ದೇಶದೆಲ್ಲೆಡೆ ಪ್ರಸಿದ್ದಿ ಪಡೆದಿರುವ ದಲಿತ ಹಾಗೂ ಹಿಂದುಳಿದ ವರ್ಗದ ಪ್ರಗತಿಪರ ಹಾಗೂ ಬುದ್ದಿಜೀವಿಗಳನ್ನು ಸಂಪರ್ಕಿಸಿ ಅವರ ಮೂಲಕ ಮತಗಳನ್ನು ಸೆಳೆಯುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಕರ್ಮಠ ಎಡ ಹಾಗೂ ಬಲ ಪಂಥೀಯರಂತೆ ಇಲ್ಲದೇ, ಕಾಂಗ್ರೆಸ್ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ವಿಫುಲ ಅವಕಾಶವನ್ನು ನೀಡುತ್ತದೆ ಎಂಬ ಸಂದೇಶ ಸಾರುವ ಎಲ್ಲಾ ಯತ್ನಗಳು ಸಾಂಗವಾಗಿ ಜರುಗುತ್ತಿವೆ.
ಕಾಂಗ್ರೆಸ್ರಾಷ್ಟ್ರಾಧ್ಯಕ್ಷಸ್ಥಾನದಲಿತರಿಗೆದಕ್ಕುವುದೇ?
2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಪಂಜಾಬ್ ಹೊರತುಪಡಿಸಿ ಬೇರೆ ಎಲ್ಲಾ ರಾಜ್ಯಗಳಲ್ಲಿಯೂ ಎನ್ ಡಿ ಎ ಕಡೆಗೆ ದಲಿತರು ವಾಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಮಗ್ರವಾಗಿ ಗಮನಿಸಿದರೆ, ಎನ್ ಡಿ ಎ ಮೈತ್ರಿಕೂಟವು, ಮೇಲ್ವರ್ಗದ ಶೇ. 59, ಒಬಿಸಿಯ ಶೇ. 54, ಆದಿವಾಸಿಗಳ ಶೇ. 46 ಮತ್ತು ದಲಿತರ ಶೇ. 41 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಲೋಕನೀತಿ-CSDS ಅಂಕಿಅಂಶಗಳು ಬಹಿರಂಗ ಪಡಿಸಿವೆ.
ಈಗಾಗಲೇ ಬಿಜೆಪಿ ನೇತೃತ್ವದ ಎನ್ ಡಿ ಎ ಕಡೆಗೆ ವಾಲಿರುವ ಮತಗಳನ್ನು ಕಾಂಗ್ರೆಸ್ ತನ್ನತ್ತ ಸೆಳೆಯಬೇಕಾದರೆ ಬಹಳ ಶ್ರಮ ಪಡಬೇಕಿದೆ. ದಲಿತ ಮತಗಳ ಮೇಲೆ ಇಷ್ಟೆಲ್ಲಾ ಕಣ್ಣಿಟ್ಟಿರುವ ಕಾಂಗ್ರೆಸ್, ಪಕ್ಷದೊಳಗೆ ದಲಿತರಿಗೆ ಯಾವ ರೀತಿಯ ಸ್ಥಾನಮಾನ ನೀಡಲಿದೆ ಎಂಬುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗುತ್ತದೆ.
ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್’ನ ನೂರಾರು ಮುಖಂಡರು ಈಗಲೂ ಗಾಂಧಿ ಪರಿವಾರದೆಡೆಗೆ ತಮ್ಮ ಒಲವು ಸೂಚಿಸಿದ್ದಾರೆ. ಆದರೆ, ಪ್ರಮುಖ ನಾಯಕರ ಗುಂಪೊಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಾಂಧಿ ಪರಿವಾರದ ಹೊರತಾಗಿರುವ ವ್ಯಕ್ತಿಗೆ ದಕ್ಕಬೇಕು ಎಂದು ಹಠ ಹಿಡಿದಿದೆ.

ಇಲ್ಲಿಯವರೆಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿರುವ ಹಿರಿಯ ಕಾಂಗ್ರೆಸ್ ನಾಯಕರ ಹೇಳಿಕೆಗಳು ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡುತ್ತಿದೆ. ಮಿಗಿಲಾಗಿ, ಕುಟುಂಬ ರಾಜಕಾರಣದ ವಿಚಾರಕ್ಕೆ ಬಿಜೆಪಿಯೂ ಪದೇ ಪದೇ ಕಾಂಗ್ರೆಸ್ ಅನ್ನು ತಿವಿಯುತ್ತಿದೆ. ಪ್ರಬಲ ಅಧ್ಯಕ್ಷರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೂ ಇದೆ.
ಇಂತಹ ಸಮಯದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ದಲಿತ ನಾಯಕರಿಗೆ ನೀಡುವ ಯೋಚನೆ ಮಾಡುವುದೇ ಎಂಬುದು ಕುತೂಹಲಕಾರಿ ಅಂಶ. ದಲಿತ ನಾಯಕರಿಗೆ ಪಕ್ಷದ ಚೌಕಟ್ಟಿನ ಹೊರಗೆ ಉನ್ನತ ಸ್ಥಾನಮಾನ ನೀಡಿದರೂ, ಪಕ್ಷದ ಒಳಗೆ ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಪಕ್ಷದ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ, ತನ್ನ ದಲಿತ ಪರ ನೀತಿಯನ್ನು ಸ್ಪಷ್ಟವಾಗಿ ದೇಶದೆದುರಿಗೆ ಬಹಿರಂಗಪಡಿಸುವ ಸುವರ್ಣಾವಕಾಶ ಕಾಂಗ್ರೆಸ್ ಬಳಿಯಿದೆ. ಇದನ್ನು ಕಾಂಗ್ರೆಸ್ ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.