ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆ. ED ಈಗಾಗಲೇ ECIR ದಾಖಲು ಮಾಡಿಕೊಂಡಿದೆ. ಸಿದ್ದರಾಮಯ್ಯ ಮೂಲ ಫಲಾನುಭವಿ ಎಂದು ಇಡಿ ದೂರು ದಾಖಲು ಮಾಡಿಕೊಂಡಿದೆ. ಆದರೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದರೂ ತೊಡೆ ತಟ್ಟುವ ಕೆಲಸ ಮಾಡಿಲ್ಲ. ಇದ್ರ ನಡುವೆ ಸಿಎಂ ಸಿದ್ದರಾಮಯ್ಯಗೆ ಬಂಧನದ ಭೀತಿ ಎದುರಾಗಿದೆ. ಜೊತೆ ಜೊತೆಗೆ ಕಾಂಗ್ರೆಸ್ನಲ್ಲಿ ಈಗಾಗಲೇ ಗುಟ್ಟು ಗುಟ್ಟು ಸಭೆಗಳು ನಡೆಯುವುದಕ್ಕೂ ಶುರುವಾಗಿದೆ. ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಬಂಧನ ಆಗುತ್ತಾ..? ಇಡಿ ಹಾಕುತ್ತಿರುವ ಲೆಕ್ಕಾಚಾರ ಏನು ಅನ್ನೋದು ಎಲ್ಲರ ತಲೆಯಲ್ಲೂ ಶುರುವಾಗಿರುವ ಪ್ರಶ್ನೆ.
ಜಾರಿ ನಿರ್ದೇಶನಾಲಯ ದೂರು ದಾಖಲು ಮಾಡಿಕೊಂಡ ತಕ್ಷಣ ಏಕಾಏಕಿ ಅಖಾಡಕ್ಕೆ ಧುಮುಕಿ ಕರೆದು ವಿಚಾರಣೆ ಮಾಡುವ ಸಂಸ್ಥೆಯಲ್ಲ. ಯಾವುದಾದರೂ ಒಂದು ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದ್ದು, ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ಇಸಿಐಆರ್ ದಾಖಲು ಮಾಡಿಕೊಂಡು ತನಿಖೆಗೆ ಇಳಿಯುತ್ತಾರೆ. ಬಹುತೇಕ ಸಂದರ್ಭದಲ್ಲಿ ರಾಜ್ಯಮಟ್ಟದ ಸಂಸ್ಥೆಗಳು ಅಥವಾ ಸಿಬಿಐ ತನಿಖೆ ನಡೆಯುವಾಗ ಜಾರಿ ನಿರ್ದೇಶನಾಲಯ ರಂಗ ಪ್ರವೇಶ ಆಗುತ್ತದೆ. ಇದೀಗ ಕರ್ನಾಟಕದಲ್ಲೂ ಲೋಕಾಯುಕ್ತ ಸಂಸ್ಥೆ ತನಿಖೆಗೆ ಕೈ ಹಾಕಿರುವಾಗಲೇ ಇಡಿ ಅಧಿಕಾರಿಗಳು ವೇದಿಕೆಗೆ ಎಂಟ್ರಿ ಕೊಡುವ ತಯಾರಿ ಮಾಡಿಕೊಂಡಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಬರುವಂತೆ ನೋಟಿಸ್ ಕೊಡಬಹುದು. ನಾಳೆ ವಿಚಾರಣೆಗೆ ಬನ್ನಿ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆಹ್ವಾನಿಸಿದರೆ ಸಿಎಂ ಸಿದ್ದರಾಮಯ್ಯ ನಾಳೆ ವಿಚಾರಣೆಗೆ ಹಾಜರಾಗಬಹುದು ಅಥವಾ ಸಮಯಾವಕಾಶ ಕೋರಬಹುದು. ಆ ರೀತಿ ವಿಚಾರಣೆಗೆ ಹಾಜರಾದಾಗ ಸಿಎಂ ಸಿದ್ದರಾಮಯ್ಯ ನೀಡುವ ಉತ್ತರಗಳ ಆಧಾರದ ಮೇಲೆ ತನಿಖೆಯ ವೇಗ ಹಾಗು ಮಾರ್ಗವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುತು ಮಾಡುತ್ತಾರೆ. ಮತ್ತೆ ತನಿಖೆಗೆ ಬೇಕಾದರೂ ಕರೆಯಬಹುದು. ಜೊತೆಗೆ ಸಿದ್ದರಾಮಯ್ಯ ಹಾಗು ಆಪ್ತರಿಗೆ ಸಂಬಂಧಿಸಿದ ಮನೆ ಕಚೇರಿ ಮೇಲೆ ದಾಳಿ ಮಾಡಿ ಸಾಕ್ಷ್ಯ ಸಂಗ್ರಹ ಮಾಡಬಹುದು.
ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಬಂಧನದ ಅವಶ್ಯಕತೆ ಇದೆ ಎನಿಸಿದರೆ ಬಂಧನ ಮಾಡುವ ನಿರ್ಧಾರಕ್ಕೂ ಬರಬಹುದು. ಬಹುತೇಕ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧನ ಮಾಡದೆ ವಿಚಾರಣೆ ಮಾಡುವುದಿಲ್ಲ. ಕಾರಣ, ಪ್ರಭಾವಿ ವ್ಯಕ್ತಿಗಳ ವಿರುದ್ಧ ತನಿಖೆ ಆಗುತ್ತಿರುವಾಗ ಸಾಕ್ಷ್ಯ ನಾಶ ಆಗುವ ಸಂಭವ ಹೆಚ್ಚಾಗಿರುತ್ತದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧದ ಸಾಕ್ಷಿಗಳನ್ನು ನಾಶ ಮಾಡಲು ಒಂದೆರಡು ತಂಡಗಳೇ ಕೆಲಸ ಮಾಡುತ್ತವೆ. ಸರ್ಕಾರಿ ಅಧಿಕಾರಿಗಳೂ ಕೂಡ ಕೆಲವೊಮ್ಮೆ ಪ್ರಭಾವಿ ವ್ಯಕ್ತಿಗಳ ಪರವಾಗಿ ಕೆಲಸ ಮಾಡುವ ಸಾಧ್ಯತೆಗಳಿರುತ್ತವೆ. ಈ ಎಲ್ಲಾ ಕಾರಣದಿಂದ ಬಂಧನ ಮಾಡಿಕೊಂಡು ತನಿಖೆ ಮಾಡುವ ಜಾಯಮಾನ ED ಅಧಿಕಾರಿಗಳದ್ದು ಎನ್ನಬಹುದು.