ಸುಪ್ರಿಂ ಕೋರ್ಟ್‌ನಲ್ಲಿ ಬಾಕಿಯಿರುವ ಹುದ್ದೆಗಳನ್ನು ತುಂಬಿಸಲು ಇಬ್ಬರನ್ನು ಶಿಫಾರಸು ಮಾಡುವ ಕುರಿತು ಸುಪ್ರಿಂಕೋರ್ಟ್ ಕೊಲೀಜಿಯಂ (Supreme Court collegium ) ನಿರ್ಧರಿಸಿದೆ. ಇದರಲ್ಲಿ ಅಚ್ಚರಿಯ ವಿಷಯವೇನೆಂದರೆ, ಕರ್ನಾಟಕದ ಹಿರಿಯ ನ್ಯಾಯಮೂರ್ತಿಯಾದ ಜಸ್ಟೀಸ್ ಬಿ ವಿ ನಾಗರತ್ನ ಅವರ ಹೆಸರು ಕೂಡಾ ಮುಂಚೂಣಿಯಲ್ಲಿದ್ದು, ಒಂದು ವೇಳೆ ಅವರಿಗೆ ಭಡ್ತಿ ದೊರೆತಲ್ಲಿ ಮುಂಬರುವ ದಿನಗಳಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನಾಯಮೂರ್ತಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಆಂಗ್ಲ ವೆಬ್‌ಸೈಟ್ ʼದಿ ಪ್ರಿಂಟ್ʼ ಪ್ರಕಟಿಸಿರುವ ವರದಿಯ ಪ್ರಕಾರ, ಕೊಲೀಜಿಯಂನ ಪ್ರಾಥಮಿಕ ಚರ್ಚೆಯಲ್ಲಿ ಜಸ್ಟೀಸ್ ಬಿ ವಿ ನಾಗರತ್ನ ಅವರ ಹೆಸರು ಕೇಳಿ ಬಂದಿದೆ. ಆದರೆ, ಅವರ ಆಯ್ಕೆಗೆ ಕೆಲವೊಂದು ಅಡೆತಡೆಗಳಿವೆ ಎಂದು ವರದಿ ಮಾಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಫೆಬ್ರವರಿ 2, 2008ರಲ್ಲಿ ಆಯ್ಕೆಯಾದ ಜಸ್ಟೀಸ್ ಬಿ ವಿ ನಾಗರತ್ನ ಅವರು ಈಗ ಸುಪ್ರಿಂ ಕೋರ್ಟ್ ನ್ಯಾಯಧೀಶೆಯಾಗಿ ಆಯ್ಕೆಯಾದರೆ, 2027ರ ಫೆಬ್ರವರಿಯಲ್ಲಿ ಜಸ್ಟೀಸ್ ಸೂರ್ಯಕಾಂತ್ ಅವರಿಂದ ತೆರವಾಗುವ ಸಿಜೆಐ ಸ್ಥಾನವನ್ನು ಅಲಂಕರಿಸುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಕೆಲವೇ ತಿಂಗಳುಗಳ ಸಮಯಕ್ಕೆ ಅವರು ಸಿಜೆಐ ಸ್ಥಾನದಲ್ಲಿ ಮುಂದುವರೆಯಲಿದ್ದು 29 ಅಕ್ಟೋಬರ್ 2027ರಂದು ನಿವೃತ್ತಿ ಹೊಂದಲಿದ್ದಾರೆ.
ಇವರ ಆಯ್ಕೆಗೆ ಈಗಿರುವ ಬಹುದೊಡ್ಡ ಅಡ್ಡಿಯೆಂದರೆ, ಸುಪ್ರಿಂಕೋರ್ಟ್‌ನಲ್ಲಿ ಈಗಾಗಲೇ ಇರುವ ಕರ್ನಾಟಕದ ಮೂವರು ಜಡ್ಜ್‌ಗಳು. ಈಗಾಗಲೇ ಮೂವರು ಸದಸ್ಯರನ್ನು ಹೊಂದಿರುವ ಕರ್ನಾಟಕದಿಂದ ಇನ್ನೋರ್ವರನ್ನು ಸದಸ್ಯರನ್ನಾಗಿ ಮಾಡಿದರೆ, ಇತರೆ ರಾಜ್ಯಗಳ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಲಿದೆ. ಜಸ್ಟೀಸ್ ಬಿ ವಿ ನಾಗರತ್ನ ಅವರು ಉತ್ತಮ ಜಡ್ಜ್ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಅಂತಿಮ ನಿರ್ಧಾರ ಕೊಲೀಜಿಯಂಗೆ ಸೇರಿದ್ದು ಎಂಬ ಮಾತನ್ನು ಸುಪ್ರಿಂಕೋರ್ಟ್ ಮೂಲಗಳು ತಿಳಿಸಿವೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಒಂದು ವೇಳೆ, ಜಸ್ಟೀಸ್ ಬಿ ವಿ ನಾಗರತ್ನ ಅವರ ಹೆಸರು ಈಗ ಶಿಫಾರಸು ಆಗದಿದ್ದರೂ, ಈ ವರ್ಷಾಂತ್ಯದಲ್ಲಿ ತೆರವಾಗಲಿರುವ ಎರಡು ಸ್ಥಾನಗಳಿಗೆ ಅವರ ಹೆಸರು ಮತ್ತೆ ಶಿಫಾರಸಾಗುವ ಸಾಧ್ಯತೆಯಿದೆ.
ಜಸ್ಟೀಸ್ ಬಿ ವಿ ನಾಗರತ್ನ ಅವರ ಭಡ್ತಿಗಿರುವ ಅಡ್ಡಿಗಳೇನು?
ಈಗಾಗಲೇ ಕರ್ನಾಟಕದಿಂದ ಸುಪ್ರಿಂಕೋರ್ಟ್ ಜಡ್ಜ್‌ಗಳಾಗಿರುವ ಜಸ್ಟೀಸ್ ಎಂ ಎಂ ಶಾಂತನಗೌಡರ್, ಎಸ್ ಅಬ್ದುಲ್ ನಜೀ಼ರ್ ಮತ್ತು ಎ ಎಸ್ ಬೋಪಣ್ಣ ಅವರಲ್ಲಿ ಯಾರೂ ಕೂಡಾ ಜನವರಿ 2023ರ ವರೆಗೆ ನಿವೃತ್ತರಾಗುವುದಿಲ್ಲ. ಹೀಗಾದರೆ, ಸುಪ್ರಿಂಕೋರ್ಟ್‌ನಲ್ಲಿ ಕರ್ನಾಟಕದ ಪ್ರಾತಿನಿಧಿತ್ವ ಹೆಚ್ಚಾಗುವ ಕಾರಣವನ್ನು ಮುಂದಿಟ್ಟುಕೊಂಡು ಜಸ್ಟೀಸ್ ಬಿ ವಿ ನಾಗರತ್ನ ಅವರ ಭಡ್ತಿಯನ್ನು ತಡೆಯಬಹುದಾಗಿದೆ.
ಇನ್ನು ಅಕ್ಟೋಬರ್ 29, 2024ರಂದು ನಿವೃತ್ತಿ ಹೊಂದಲಿರುವ ಜಸ್ಟೀಸ್ ಬಿ ವಿ ನಾಗರತ್ನ ಅವರು ಸುಪ್ರಿಂಕೋರ್ಟ್ ನ್ಯಾಯಾಧೀಶೆಯಾಗಿ ಆಯ್ಕೆಯಾದರೆ ಮಾತ್ರ ಅವರ ನಿವೃತ್ತಿ ಅವಧಿ ಮೂರು ವರ್ಷಗಳಿಗೆ ಮುಂದೂಡಲ್ಪಡುತ್ತದೆ.
ಇನ್ನು ಭಾರತದಲ್ಲಿರುವ ಹಿರಿಯ ನ್ಯಾಯಾಧೀಶರ ಪಟ್ಟಿಯಲ್ಲಿ ಜಸ್ಟೀಸ್ ಬಿ ವಿ ನಾಗರತ್ನ ಅವರು 46ನೇ ಸ್ಥಾನದಲ್ಲಿದ್ದಾರೆ. ಮೂಲತಃ ಕರ್ನಾಟಕದವರಾಗಿದ್ದು ಈಗ ಇತರೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಸ್ಟೀಸ್ ಎಲ್ ಎನ್ ಸ್ವಾಮಿ (ಹಿಮಾಚಲ್ ಪ್ರದೇಶ್ ಹೈಕೋರ್ಟ್ ಚೀಫ್ ಜಸ್ಟೀಸ್) ಮತ್ತು ಜಸ್ಟೀಸ್ ರವಿ ವಿಜಯ್‌ಕುಮಾರ್ ಮಳೀಮಠ (ಉತ್ತರಾಖಂಡ್ ಹೈಕೋರ್ಟ್) ಅವರು ಜಸ್ಟೀಸ್ ಬಿ ವಿ ನಾಗರತ್ನ ಅವರಿಗಿಂತ ಹಿರಿಯರಿದ್ದಾರೆ.
ಒಟ್ಟಿನಲ್ಲಿ, ಅಂತಿಮ ತೀರ್ಮಾನವನ್ನು ಸುಪ್ರಿಂಕೋರ್ಟ್ ಕೊಲೀಜಿಯಂ ತೆಗೆದುಕೊಳ್ಳಲಿದ್ದು ಅಲ್ಲಿಯವರೆಗೆ ಕಾಯಬೇಕಾದುದು ಅನಿವಾರ್ಯ. ಅಲ್ಲಿಯವರೆಗೂ ಕರ್ನಾಟಕದ ಜಸ್ಟೀಸ್ ಬಿ ವಿ ನಾಗರತ್ನ ಅವರು ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಲಿದೆ.