ಬೆಂಗಳೂರು ಸಬ್ ಅರ್ಬನ್ ಯೋಜನೆ ತಡ ಆಗುತ್ತಿರುವುದನ್ನು ಹಾಗೂ ನಮ್ಮ ಮೆಟ್ರೋದ ಸೂಚನಾಫಲಕಗಳಲ್ಲಿ ಕನ್ನಡ ಬಳಕೆಯಿಲ್ಲದ ಕುರಿತು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ರಾಜ್ಯಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.
ʼಇವತ್ತು ಬೆಂಗಳೂರು ಜಗತ್ತಿನಲ್ಲೆ ಅತಿ ಹೆಚ್ಚು ವಾಹನ ದಟ್ಟನೆ ಇರುವ ನಗರದಲ್ಲೊಂದು. ವಾಹನದಟ್ಟನೆ ನಿಯಂತ್ರಿಸಲು 2018-19 ರಲ್ಲಿ ಸಬ್ ಅರ್ಬನ್ ರೈಲ್ವೇ ಯೋಜನೆಯನ್ನು ಕೇಂದ್ರ ಘೋಷಿಸಿತ್ತು. ಆದರೆ ಈವರೆಗೆ ಕೆಲಸ ಪ್ರಾರಂಭಗೊಂಡಿಲ್ಲ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಯಾವಾಗ ಅನುದಾನ ಮಾಡಲಾಗುತ್ತದೆʼ ಎಂದು ಜಿ.ಸಿ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚಂದ್ರಶೇಖರ್ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವ ಹರದೀಪ್ ಸಿಂಗ್ ಪೂರಿ ʼ ಯೋಜನೆ ಆರಂಭಿಸಲು ಭಾರತ ಸರ್ಕಾರ ಈಗಾಗಲೇ ಮೊತ್ತ ನಿಗದಿ ಮಾಡಿದೆ. ಯೋಜನೆಗೆ ನಿಗದಿಪಡಿಸಿದ ಸ್ಥಳಗಳಲ್ಲಿ 4266 ಮರಗಳು ಇದೆ. ಎರಡು ಕಡೆ ಅರಣ್ಯ ಪ್ರದೇಶ ಇದೆ. ಭೂಸ್ವಾಧೀನ ಅರ್ಜಿಯೊಂದು ವಿಚಾರಣೆಯಲ್ಲಿದೆ. ರಾಜ್ಯ ಸರ್ಕಾರ ಭೂಮಿ ವಶಪಡಿಸಿಕೊಳ್ಳಬೇಕಿದೆ. ಹಾಗಾಗಿ ಹಣ ನೀಡಲು ತಡವಾಗುತ್ತಿದೆ. ಭೂಮಿ ವಶಪಡಿಸಿಕೊಂಡರೆ ಹಣ ನೀಡಲು ಕೇಂದ್ರ ಸರ್ಕಾರ ತಯಾರಾಗಿದೆ ಎಂದು ಅವರು ಉತ್ತರಿಸಿದ್ದಾರೆ.
ಇದೇ ವೇಳೆ, ʼನಮ್ಮ ಮೆಟ್ರೋʼದ ಸೂಚನಾಫಲಕದಲ್ಲಿ ಕನ್ನಡ ಭಾಷೆಯ ಬಳಕೆ ಇಲ್ಲದಿರುವ ಕಾರಣವನ್ನು ಪ್ರಸ್ತಾಪಿಸಿದ ಜಿ.ಸಿ. ಚಂದ್ರಶೇಖರ್ ಭಾರತದ ಅಧಿಕೃತ ಭಾಷೆಯಲ್ಲೊಂದಾಗಿರುವ ಕನ್ನಡವನ್ನು ಬಳಸಿದರೆ ಸ್ಥಳೀಯರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೂ ಕನ್ನಡ ಭಾಷೆಯ ಬಳಕೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, ʼಈ ಕುರಿತಾಗಿ ನನ್ನಲ್ಲಿ ಮಾಹಿತಿಯಿಲ್ಲ. ಸಂಬಂಧಪಟ್ಟ ಸಚಿವಾಲಯದ ಗಮನಕ್ಕೆ ಈ ವಿಚಾರವನ್ನು ತರಲಾಗುವುದುʼ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ದೇಶದ ಪ್ರತಿ ಮೆಟ್ರೊಗಳಲ್ಲೂ ಸ್ಥಳೀಯ ಭಾಷೆಗಳನ್ನ ಬಳಸುವುದು ಕಡ್ಡಾಯ ಮಾಡಬೇಕಿದೆ. ಏಕೆಂದರೆ, ಸ್ಥಳೀಯ ಜನರೇ ಹೆಚ್ಚಾಗಿ ಮೆಟ್ರೋದಲ್ಲಿ ಪ್ರಯಾಣಿಸುವುದರಿಂದ ಸ್ಥಳೀಯ ಭಾಷೆ ಅಳವಡಿಸುವುದು ಅವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.