ನವದೆಹಲಿ: ದೇಶದಲ್ಲಿ ಏನೇ ನಡೆದರೂ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಚರ್ಚೆಗಳು ಇದ್ದೇ ಇರುತ್ತದೆ. ಘಟನೆ ಸಂಭವಿಸಿದ ರೀತಿ, ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಹೀಗೆ ಒಂದಿಲ್ಲ ಒಂದು ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಸದ್ಯ ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿರುವ ಸ್ಫೋಟದ ವಿಚಾರ ಟ್ರೆಂಡಿಂಗ್‌ನಲ್ಲಿದ್ದು, ಈ ಚರ್ಚೆಯಲ್ಲಿ ಉದ್ಭವವಾದ ಪ್ರಶ್ನೆಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ದೇಶದಲ್ಲಿ ಭಯೋತ್ಪಾದಕರ ದಾಳಿ ಚುನಾವಣೆ ಸಂದರ್ಭದಲ್ಲಿಯೇ ಯಾಕೆ ನಡೆಯುತ್ತದೆ ಎನ್ನುವ ನೆಟ್ಟಿಗರೊಬ್ಬರು ಎತ್ತಿರುವ ಪ್ರಶ್ನೆ ಈಗ ಎಲ್ಲೆಡೆ ಹರಿದಾಡುತ್ತಿದೆ. ಮಾಧ್ಯಮಗಳು ಕೂಡ ರಾಜಕೀಯ ನಾಯಕರನ್ನು ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದು, ಬಹುತೇಕ ರಾಜ್ಯದ ರಾಜಕೀಯ ನಾಯಕರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ.

ದೇಶದಲ್ಲಿ ಸಂದರ್ಭದಲ್ಲಿಯೇ ಭಯೋತ್ಪಾದಕರ ದಾಳಿ ಎನ್ನುವುದನ್ನು ವಿಶ್ಲೇಷಿಸುವುದಾರೆ ಕೆಲವು ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದು.
* 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ಉಗ್ರಗಾಮಿಗಳು ನಡೆಸಿದ್ದ ಆತ್ಮಾ**ತಿ ಬಾಂಬ್ ದಾಳಿ ದೇಶವನ್ನೇ ನಡುಗಿಸಿತ್ತು. ಫೆಬ್ರವರಿ 14 ರಂದು ನಡೆದ ಉಗ್ರರ ಈ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಉಗ್ರರ ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿ ನಾಶಗೊಳಿಸಿತು. ಈ ಘಟನೆ ನಡೆದ ಮೂರೇ ತಿಂಗಳಲ್ಲಿ ದೇಶದ ಮಹತ್ವದ ಲೋಕಸಭಾ ಚುನಾವಣೆ ನಡೆಯಿತು.

* 2025 ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್‌ಗೆ ನುಗ್ಗಿದ ಐದು ಸಶಸ್ತ್ರ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿ ನಡೆಸಿದರು. ಈ ಘಟನೆಯಲ್ಲಿ 26 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿದರು. ದೇಶದ ರಾಜಕೀಯ ಪ್ರತಿಷ್ಠೆಯ ಕಣವಾದ ಬಿಹಾರ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಈ ಘಟನೆ ನಡೆಯಿತು.

*ಇನ್ನು ಸೋಮವಾರ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಹತ್ತಕ್ಕೂ ಹೆಚ್ಚು ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನವೇ ಈ ಸ್ಫೋಟ ನಡೆದಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. ಇದು ಕೂಡ ಆತ್ಮಾ**ತಿ ಬಾಂಬ್ ದಾಳಿ ಎನ್ನಲಾಗುತ್ತಿದ್ದು, ದೇಶದಲ್ಲಿ ಭಯೋತ್ಪಾದಕರ ದಾಳಿ ಚುನಾವಣೆ ಸಂದರ್ಭದಲ್ಲಿಯೇ ಯಾಕೆ ನಡೆಯುತ್ತದೆ ಎನ್ನುವ ಪ್ರಶ್ನೆ ಇನ್ನಷ್ಟು ಬಲಿಷ್ಠವಾಗುವಂತೆ ಮಾಡಿದೆ. ಜೊತೆಗೆ ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ ಎನ್ನುವ ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವುದು ಯಾರು ಎನ್ನುವುದು ಕೂಡ ಸದ್ಯದ ಪ್ರಶ್ನೆಯಾಗಿದೆ.












