ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದು ಈಗಾಗಲೇ ಎರಡು ವಾರಗಳಾಗುತ್ತಾ ಬಂದಿದೆ. ದೇಶವನ್ನು ಉಳಿಸಲು ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಹೇಳಿದ್ದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸದ್ದಿಲ್ಲದೇ ಆಗಸ್ಟ್ 15ರಂದು ದೇಶವನ್ನು ಬಿಟ್ಟು ಪರಾರಿಯಾಗಿದ್ದಾರೆ. ತಾಲಿಬಾನಿಗಳು ಅತ್ಯಂತ ಸುಲಭವಾಗಿ ಕಾಬೂಲನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಸಂಪೂರ್ಣ ದೇಶವೇ ತಮ್ಮ ಕೈಯಲ್ಲಿದೆ ಎಂದು ತಾಲಿಬಾನಿಗಳು ಬೀಗುತ್ತಿರುವ ಸಂದರ್ಭದಲ್ಲಿಯೇ ದೇಶದ ವಾಯವ್ಯ ಭಾಗದಲ್ಲಿರುವ ಪಂಜ್ಶಿರ್ನಲ್ಲಿ ತಾಲಿಬಾನ್ ವಿರುದ್ದ ಹೋರಾಡುವ ಪಡೆ ಸಜ್ಜಾಗಿ ನಿಂತಿದೆ. ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಪರಕೀಯರ ದಾಳಿಯನ್ನು ಹಠದಿಂದ ಮೆಟ್ಟಿ ನಿಂತಿರುವ ಈ ಪ್ರದೇಶವು ತಾಲಿಬಾನ್’ನ ಅಟ್ಟಹಾಸಕ್ಕೂ ತಡೆಯೊಡ್ಡಿದೆ.
ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪರಾರಿಯಾದ ನಂತರವೂ, ತಾಲಿಬಾನ್ ಅನ್ನು ಕಠೋರವಾಗಿ ಟೀಕಿಸಿದ್ದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಮ್ಮ ಜನ್ಮಸ್ಥಳವಾದ ಪಂಜ್ಶಿರ್ನಲ್ಲಿ ನೆಲೆಸಿದ್ದಾರೆ. ಕಾಬೂಲ್’ನಿಂದ ಕೇವಲ 150 ಕಿ.ಮೀ. ದೂರದಲ್ಲಿರುವ ಪಂಜ್ಶಿರ್ ಕಣಿವೆಯ ಒಂದು ಇಂಚಿನಷ್ಟು ಜಾಗವನ್ನು ಕೂಡಾ ತಾಲಿಬಾನ್ ಉಗ್ರರು ಪಡೆಯಲು ಸಾಧ್ಯವಾಗಿಲ್ಲ. 1980ರಲ್ಲಿ ಸೋವಿಯತ್ ನುಸುಳುವಿಕೆಯನ್ನು ಪಂಜ್ಶಿರ್ ತಡೆದಿತ್ತು. 1990ರಲ್ಲಿ ತಾಲಿಬಾನ್ ನುಸುಳುವಿಕೆಯನ್ನು ಕೂಡಾ ಪಂಜ್ಶಿರ್ ತಡೆಯುವಲ್ಲಿ ಸಫಲವಾಗಿತ್ತು. ಈಗ ಮತ್ತೆ ತಾಲಿಬಾನ್ ದಾಳಿಗೆ ಪಂಜ್ಶಿರ್ ಎದೆಯೊಡ್ಡಿ ನಿಂತಿದೆ.
2001ರಲ್ಲಿ ತಾಲಿಬಾನ್ ಆಡಳಿತವನ್ನು ಅಮೇರಿಕಾದ ಸಹಾಯದೊಂದಿಗೆ ಕೊನೆಗಾಣಿಸಿ ಸೃಷ್ಟಿಸಿದ ಹೊಸ ಸರ್ಕಾರವನ್ನು ರೂಪಿಸುವಲ್ಲಿ ಪಂಜ್ಶಿರ್ ಕಣಿವೆಯ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಸರ್ಕಾರದಲ್ಲಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರು, ಸರ್ಕಾರದ ಹಿರಿಯ ನಾಯಕರಾಗಿ ಪ್ರಮುಖ ನಿರ್ಧಾರಗಳನ್ನು ತಾಲುವಲ್ಲಿ ಮುತುವರ್ಜಿ ವಹಿಸಿದ್ದರು. 2014-19ರ ವೇಳೆ ನಡೆದ ಹಗರಣ ಹಾಗೂ ಇತರೆ ಕಾರಣಗಳಿಂದ ಪಂಜ್ಶಿರ್ ಕಣಿವೆಯ ಜನ ಕಾಬೂಲ್ ಮೇಲಿನ ವಿಶ್ವಾಸ ಕಳೆದುಕೊಂಡಿದ್ದರು.
ಈಗ ಅಹ್ಮದ್ ಮಸೂದ್ ಅವರ ನಾಯಕತ್ವದಲ್ಲಿ ಪಂಜ್ಶಿರ್ ಒಗ್ಗೂಡಿ ನಿಂತಿದೆ. ಅಫ್ಘಾನಿಸ್ತಾನದ ಅತ್ಯಂತ ಜನಪ್ರಿಯ ನಾಯಕ, ‘ಅಫ್ಘಾನ್ ನೆಪೋಲಿಯನ್’ ಎಂದು ಬಿರುದು ಪಡೆದಿರುವ ಅಹ್ಮದ್ ಶಾಹ್ ಮಸೂದ್ ಅವರ ಮಗನಾದ ಮಹ್ಮದ್ ಮಸೂದ್ ಈಗಿನ ತಾಲಿಬಾನ್ ವಿರುದ್ದದ ಹೋರಾಟದ ಕೇಂದ್ರ ಬಿಂದು.
ಈಗಾಗಲೇ ಸ್ಥಳಿಯ ಪಡೆಗಳನ್ನು ಒಗ್ಗೂಡಿಸಿಹೊರಾಟದ ಕಾರ್ಯತಂತ್ರವನ್ನು ಹೆಣೆಯಲು ಆರಂಭಿಸಲಾಗಿದೆ. ಆದರೆ, ಕೆಲವು ಸ್ಥಳೀಯ ನಾಯಕರು ಈಗಲೂ ಮಸೂದ್ ಅವರ ಮೇಲೆ ಸಂಪೂರ್ಣ ವಿಶ್ವಾಸವನ್ನು ತೋರ್ಪಡಿಸುವಲ್ಲಿ ವಿಫಲರಾಗಿದ್ದಾರೆ.
ಪಂಜ್ಶಿರ್ ಅನ್ನು ಸಂಪರ್ಕಿಸುವ ರಸ್ತೆಗಳ ಮೇಲೆ ತಾಲಿಬಾನಿಗಳು ನಿರ್ಬಂಧ ಹೇರಿದ್ದಾರೆ. ಕಾಬೂಲಿಗೆ ಅತೀ ಸಮೀಪದಲ್ಲಿರುವ ಪಂಜ್ಶಿರ್ ಸುತ್ತ ತಾಲಿಬಾನಿಗಳ ಪಹರೆಯಿದೆ. ಇಂತಹ ಸಂದರ್ಭದಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾದರೆ ಅಲ್ಲಿನ ಜನರಿಗೆ ತುರ್ತು ಸೌಲಭ್ಯಗಳನ್ನು ಕಲ್ಪಿಸುವುದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಇದಕ್ಕಿಂತಲೂ ಮಿಗಿಲಾಗಿ, ಪಂಜ್ಶಿರ್ ಒಳಗಡೆ ಇರುವಂತಹ ಕೆಲವು ರಾಜಕೀಯ ಗುಂಪುಗಳು ತಾಲಿಬಾನ್ ಪರವಾಗಿ ಸೌಮ್ಯ ನಿಲುವು ಹೊಂದಿವೆ. ಇದು ತಾಲಿಬಾನ್’ಗೆ ವರವಾಗಿ ಪರಿಣಮಿಸಲಿದೆ. ಅಲ್ಲಿನ ಧಾರ್ಮಿಕ ಗುಂಪುಗಳು ಈ ಹಿಂದೆ ತಾಲಿಬಾನ್ ವಿರುದ್ದದ ನಿಲುವು ಹೊಂದಿದ್ದರೂ, ಅವರೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಈಗ ತಾಲಿಬಾನಿಗಳು ಯಶಸ್ವಿಯಾಗಿದ್ದಾರೆ.
ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಜಲಾಲಬಾದ್’ನಲ್ಲಿ ಈಗಾಗಲೇ ತಾಲಿಬಾನಿಗಳ ವಿರುದ್ದ ಹೋರಾಟ ಆರಂಭವಾಗಿದೆ. ಇದು ಪಂಜ್ಶಿರ್ ಕಣಿವೆಯಲ್ಲಿಯೂ ತಾಲಿಬಾನ್ ವಿರುದ್ದ ಜನರನ್ನು ಒಗ್ಗೂಡಿಸಲು ಸಹಕಾರಿಯಾಗಬಹುದು ಎಂಬ ನಂಬಿಕೆಯಿದೆ.
ಗುರುವಾರ ಸಂಜೆಯ ವೇಳೆಗೆ ಕಾಬೂಲ್ ಏರ್ಪೋರ್ಟ್’ನಲ್ಲಿ ನಡೆದಂತಹ ಬಾಂಬ್ ದಾಳಿಯಿಂದ ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಅಫ್ಘಾನಿಸ್ತಾನಿದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಪಂಜ್ಶಿರ್ನಲ್ಲಿ ನಡೆಯುತ್ತಿರುವ ಹೋರಾಟ ನಿಜಕ್ಕೂ ಮಹತ್ವ ಪಡೆದಿದೆ.
ಏಕೆಂದರೆ, ಪಂಜ್ಶಿರ್ನಲ್ಲಿ ತಾಲಿಬಾನಿಗಳ ವಿರುದ್ದ ಆರಂಭಿಸಿರುವ ಹೋರಾಟ ಕೇವಲ ತಾಲಿಬಾನ್ಅನ್ನು ತಡೆಯಲು ಮಾತ್ರವಲ್ಲ, ಸಂಪೂರ್ಣ ಅಫ್ಘಾನಿಸ್ತಾನ್ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸ್ಥಿರತೆ ಹಾಗೂ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಡೆಯುತ್ತಿದೆ. ಒಂದು ವೇಳೆ ಪಂಜ್ಶಿರ್ ತಾಳಿಬಾನಿಗೆ ಶರಣಾದರೆ, ಅಫ್ಘಾನಿಸ್ತಾನ ಮತ್ತೆ 2001ರ ಹಿಂದಿನ ಪರಿಸ್ಥಿತಿ ಮರಳುವುದರಲ್ಲಿ ಸಂಶಯವಿಲ್ಲ. ಇದು ಕೇವಲ ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲ, ಸಂಪೂರ್ಣ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಲಿದೆ.
ಅಫ್ಘಾನ್ ಪಾಲಿಗೆ ಪಂಜ್ಶಿರ್ ಹೋರಾಟ ಮಾಡು ಇಲ್ಲವೇ ಮಡಿ ಎಂಬಂತಿದೆ. ಅದೇ ಸಮಯದಲ್ಲಿ ವಿಶ್ವದ ಉಳಿದ ರಾಷ್ಟ್ರಗಳಿಗೂ, ಇಸ್ಲಾಮಿಕ್ ಮುಲಭೂತವಾದಿಗಳ ಆಡಳಿತದಿಂದ ಹೊರಬರಲು ಇರುವಂತಹ ಹಾದಿಯಾಗಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಭದ್ರತೆಗೆ ಕಂಟಕಪ್ರಾಯವಾಗುವುದರಿಂದ ಅಫ್ಘಾನ್ ತಪ್ಪಿಸಿಕೊಳ್ಳಲು ಪಂಜ್ಶಿರ್ ಯೋಧರ ಗೆಲುವು ಅನಿವಾರ್ಯ. ಇದಕ್ಕಾಗಿ, ವಿಶ್ವವೇ ಆ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದುದೂ ಅನಿವಾರ್ಯ.