ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ವಿರುದ್ಧ ಸಮರ ಸಾರಿದ್ದವು. ಅಭಿವೃದ್ಧಿ ಮೇಲೆ ಚುನಾವಣೆ ಮಾಡ್ಬೇಕು, ಅದನ್ನು ಬಿಟ್ಟು ಭಾವನಾತ್ಮಕ ವಿಚಾರಗಳ ಮೇಲೆ ಚುನಾವಣೆ ನಡೆಸುವುದು ಸರಿಯಲ್ಲ ಎನ್ನುವ ಮಾತನ್ನು ಉಚ್ಚರಿಸಿದ್ದವು. ಆದರೆ ಬಿಜೆಪಿ ನಾಯಕರು ಮಾತ್ರ ಚರಂಡಿ ಆಗಿಲ್ಲ, ರಸ್ತೆ ಆಗಿಲ್ಲ ಅಂತಾ ಮತ ಹಾಕ್ಬೇಡಿ. ಟಿಪ್ಪು ವರ್ಸಸ್ ಸಾವರ್ಕರ್. ಮತ ಹಾಕುವಾಗ ಹಿಜಾಬ್, ಲವ್ ಜಿಹಾದ್ ನಿಮ್ಮ ಮನಸ್ಸಿನಲ್ಲಿರಲಿ ಎಂದು ಬಹಿರಂಗ ಸಭೆಯಲ್ಲೇ ಹೇಳಿಕೊಂಡಿದ್ದರು. ಆದರೆ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಅಭೂತಪೂರ್ವ ಜಯವನ್ನು ನೀಡಿದ್ದರು. ಟಿಪ್ಪು, ಹಿಜಾಬ್, ಲವ್ ಜಿಹಾದ್, ಉರಿಗೌಡ, ನಂಜೇಗೌಡ ಕೂಡ ಬಿಜೆಪಿ ಕೈ ಹಿಡಿಯಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರ ಭಾವನಾತ್ಮಕ ವಿಚಾರಗಳ ಮೂಲಕ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಗ್ಯಾರಂಟಿ ಘೋಷಣೆಗೆ ಮೋದಿ ಗ್ಯಾರಂಟಿ ಕೌಂಟರ್..!
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರ ಹಿಡಿದಿರುವ ಕರ್ನಾಟಕದ ಮೇಲೆ ಮೋದಿಗೆ ಕಿಂಚಿತ್ತು ಜಾಸ್ತಿನೇ ಕೋಪ ಇದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ ಲೋಕಾಸಭಾ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವ ನರೇಂದ್ರ ಮೋದಿ ದೇಶದ ಜನತೆಗೆ ಗ್ಯಾರಂಟಿ ಒಂದನ್ನು ಘೋಷಿಸಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ನರೇಂದ್ರ ಮೋದಿ, ವಿಪಕ್ಷಗಳು ಕೊಡುತ್ತಿರುವ ಒಂದೇ ಒಂದು ಗ್ಯಾರಂಟಿ ಅದು ಭ್ರಷ್ಟಾಚಾರದ ಗ್ಯಾರಂಟಿ. ಅವರದ್ದು ಒಂದು ಗ್ಯಾರಂಟಿ ಆದ್ರೆ, ಈ ನರೇಂದ್ರ ಮೋದಿಯದ್ದೂ ಕೂಡ ಒಂದು ಗ್ಯಾರಂಟಿ ಇದೆ. ಅದೇನಂದರೆ ಪ್ರತಿ ಹಗರಣದ ವಿರುದ್ಧ ತನಿಖೆ ನಡೆಸುವುದೇ ನನ್ನ ಗ್ಯಾರಂಟಿ ಎಂದಿದ್ದಾರೆ.
ಕುಟುಂಬ ರಾಜಕಾರಣ ಎಳೆದು ತಂದ ಮೋದಿ..!
ವಿಪಕ್ಷಗಳಿಗೆ ಮತ ಕೊಟ್ಟರೆ ಮಕ್ಕಳ ಅಭಿವೃದ್ಧಿ ಆಗುತ್ತದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಗಾಂಧಿ ಕುಟುಂಬದ ಮಗ-ಮಗಳು ಅಭಿವೃದ್ಧಿ ಆಗಬೇಕು ಎಂದರೆ ಕಾಂಗ್ರೆಸ್‌ಗೆ ಮತ ಹಾಕಿ. ಮುಲಾಯಂ ಸಿಂಗ್ ಮಗನ ಅಭಿವೃದ್ಧಿ ಆಗಬೇಕಿದ್ದರೆ ಸಮಾಜವಾದಿ ಪಕ್ಷಕ್ಕೆ ನಿಮ್ಮ ಮತ ನೀಡಿ. ಲಾಲು ಪ್ರಸಾದ್ ಪರಿವಾರದ ಮಕ್ಕಳ ಅಭಿವೃದ್ಧಿ ಆಗಬೇಕಿದ್ದರೆ ಆರ್‌ಜೆಡಿಗೆ ಪಕ್ಷಕ್ಕೆ ವೋಟ್ ಹಾಕಿ. ಶರದ್ ಪವಾರ್ ಮಗಳ ಅಭಿವೃದ್ಧಿ ಆಗಬೇಕಿದ್ರೆ ಎನ್‌ಸಿಪಿಗೆ ಮತ ಕೊಡಿ. ಆದರೆ ನಿಮ್ಮ ಮಕ್ಕಳ ಅಭಿವೃದ್ಧಿ ಆಗಬೇಕಿದ್ದರೆ ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದ್ದಾರೆ. ಅಂದರೆ ಈ ಬಾರಿ ವಿರೋಧ ಪಕ್ಷಗಳು ಒಗ್ಗಟ್ಟಾಗುತ್ತಿರುವ ಪರಿಣಾಮ ಕುಟುಂಬ ರಾಜಕಾರಣ ಎಳೆಯುವ ಪ್ರಯತ್ನ ಮಾಡಿದ್ದಾರೆ.
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿ
ಏಕರೂಪ ಕಾನೂನು ಜಾರಿ ಬಗ್ಗೆ ಅಗ್ಗಿಂದಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇನ್ನೂ ಕೂಡ ಭಾರತದ ಏಕರೂಪ ಕಾನೂನು ಜಾರಿ ಆಗಿಲ್ಲ. ಆದರೆ ಇದೀಗ ಮತ್ತೆ ಲೋಕಸಭಾ ಚುನಾವಣೆಗೆ ಏಕರೂಪ ಕಾನೂನು ವಿಷಯವಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಏಕರೂಪ ಕಾನೂನು ಬಗ್ಗೆ ಸುಳಿವು ಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ಬೇಡದ ತಲಾಕ್ ನಮಗ್ಯಾಕೆ ಬೇಕು..? ಎಂದಿರುವ ಪ್ರಧಾನಿ, ಈಜಿಪ್ಟ್‌ನಲ್ಲಿ 80 ರಿಂದ 90 ವರ್ಷದ ಹಿಂದೆಯೇ ತಲಾಕ್ ಬ್ಯಾನ್ ಮಾಡಿದ್ದರು. ತ್ರಿವಳಿ ತಲಾಕ್ ಇಸ್ಲಾಂನ ಪ್ರಮುಖ ಅಂಗವಾಗಿದ್ದರೆ ಪಾಕಿಸ್ತಾನದಲ್ಲಿ ಯಾಕೆ ಜಾರಿಯಲ್ಲಿಲ್ಲ..? ಇಂಡೋನೇಷ್ಯಾದಲ್ಲಿ ಯಾಕೆ ಇಲ್ಲ? ಮುಸ್ಲಿಂ ದೇಶಗಳಾದ ಖತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶದಲ್ಲಿ ತಲಾಕ್ ಯಾಕಿಲ್ಲ..? ಎಂದು ಪ್ರಶ್ನಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ಸಮಾನ ನಾಗರಿಕ ಹಕ್ಕಿನ ಬಗ್ಗೆ ಉಲ್ಲೇಖಿಸಲಾಗಿದೆ. ಆದರೂ ಕೆಲವರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಸಮಾನ ನಾಗರಿಕ ಹಕ್ಕು ಜಾರಿ ಮಾಡಿ ಅಂತ ಸುಪ್ರೀಂ ಕೋರ್ಟ್ ಕೂಡಾ ಹೇಳುತ್ತಿದೆ ಎಂದಿದ್ದಾರೆ.
ಕಳೆದ 9 ವರ್ಷ ಮಾಡಲಿಲ್ಲ, ಚುನಾವಣೆ ವೇಳೆ ಯಾಕೆ..?
ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಿದ್ದರೆ ಲೋಕಸಭೆ, ರಾಜ್ಯಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ ಕಾನೂನು ಜಾರಿ ಮಾಡಬೇಕು. ಅದನ್ನು ಬಿಟ್ಟು ಚುನಾವಣೆ ವೇಳೆ ಪ್ರಸ್ತಾಪ ಮಾಡಿ ಲಾಭ ಪಡೆಯುವುದು ಯಾಕೆ..? ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನು ಈ ಹಿಂದಿನ ಚುನಾವಣೆಯಲ್ಲಿ ಕಪ್ಪು ಹಣ ವಾಪಸ್ ತರುವುದು ಬೇಡ್ವಾ..? ನಿಮ್ಮ ಖಾತೆಗೆ 15 ಲಕ್ಷ ಬರೋದು ಬೇಡ್ವಾ ಎಂದು ಪ್ರಶ್ನೆ ಮಾಡಿದ್ದ ನರೇಂದ್ರ ಮೋದಿ, ನಿಮ್ಮ ಖಾತೆಗೆ 15 ಲಕ್ಷ ಬರಬೇಕು ಅಂದ್ರೆ ಬಿಜೆಪಿಗೆ ಮತ ನೀಡಿ ಎಂದಿದ್ದರು. ಆ ಬಳಿಕ ಪುಲ್ವಾಮಾ ದಾಳಿ, ಸೈನಿಕರ ಸಾವು ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಏರ್‌ಸ್ಟ್ರೈಕ್ ಮಾಡಿದ್ದೂ ಆಯ್ತು. ಇದೀಗ ಮತ್ತೆ ಭಾವನಾತ್ಮಕ ವಿಚಾರ ಏಕರೂಪ ನಾಗರಿಕ ಕಾನೂನು ಅಸ್ತ್ರ ಸಜ್ಜಾಗಿದೆ. ಆದರೆ ಜನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡದ ಭಾರತೀಯ ಜನತಾ ಪಾರ್ಟಿಗೆ ಗುನ್ನಾ ಕೊಡ್ತಾರಾ..? ಮತ ಕೊಡ್ತಾರಾ ಕಾದು ನೋಡ್ಬೇಕು.