ಉದ್ಯಮಿ, ಇನ್ಫೋಸಿಸ್ ಮಾಜಿ ಡೈರೆಕ್ಟರ್ ಮೋಹನ್ ದಾಸ್ ಪೈ. ಇವ್ರ ಬಗ್ಗೆ ಸಾಕಷ್ಟು ಬಾರಿ ಸುದ್ದಿ ಸದ್ದು ಮಾಡುತ್ತಿರುತ್ತದೆ. ಇತ್ತೀಚಿಗಷ್ಟೇ ಕೇರಳ ಕಾಂಗ್ರೆಸ್ಗೆ ಚಾಟಿ ಬೀಸಿದ್ದರು. ಬೈ ಹಾರ್ಟ್ ಬೆಂಗಳೂರಿಯನ್ ಎನ್ನುವ ಮೋಹನ್ ದಾಸ್ ಪೈ, ಬೆಂಗಳೂರಿನ ಬಗ್ಗೆ ಮಾತನಾಡಿ ರಾಜೀವ್ ಚಂದ್ರಶೇಖರ್ ಅವರನ್ನು ಟೀಕೆ ಮಾಡಿದ್ದ ಕೇರಳ ಕಾಂಗ್ರೆಸ್ಗೆ ‘ನಿಮ್ಮದು ನೀವು ನೋಡಿಕೊಳ್ಳಿ’ ಕರ್ನಾಟಕ ನೋಡಿಕೊಳ್ಳಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇದ್ದಾರೆ ಎಂದಿದ್ದರು. ಖಂಡಿತ ಹೌದು, ನಾನು ಕನ್ನಡಿಗನಾಗಿ ಬೇರೊಬ್ಬರು ಕರ್ನಾಟಕದ ಬಗ್ಗೆ ಕೊಂಕು ಮಾತನಾಡಿದಾಗ ಚಾಟಿ ಬೀಸಿದ್ದು ಅತ್ಯುತ್ತಮ ಅನಿಸಿತ್ತು. ಈ ಬಗ್ಗೆ ಪ್ರತಿಧ್ವನಿ ಕೂಡ ದನಿ ಸೇರಿಸಿತ್ತು. ಆ ಬಳಿಕ ಹಾಗೇ ನೋಡಿಕೊಂಡು ಬಂದಾಗ ಮೋಹನ್ ದಾಸ್ ಪೈ ಅವರು ಕೇವಲ ಬಿಜೆಪಿ ಪರವಾಗಿ ಮಾತನಾಡ್ತಿದ್ದಾರಾ..? ಅನ್ನೋ ಅನುಮಾನ ಮೂಡಿದೆ.
ರಾಜೀವ್ ಚಂದ್ರಶೇಖರ್ ಅವರನ್ನು ಬೆಂಬಲಿಸುವ ಉದ್ದೇಶದಿಂದ ಕೇರಳ ಕಾಂಗ್ರೆಸ್ಗೆ ಚಾಟಿ ಬೀಸಿದ್ದ ಟಿ.ವಿ ಮೋಹನ್ ದಾಸ್ ಪೈ (TV Mohan Das Pai) ರಾಜೀವ್ ಚಂದ್ರಶೇಖರ್ ಅಕ್ರಮದ ಬಗ್ಗೆ ಸೊಲ್ಲು ಎತ್ತುವುದಿಲ್ಲ ಎಂದು ಮನವರಿಕೆ ಆಗಿತ್ತು. ಆದರೂ ಮೋಹನ್ ದಾಸ್ ಪೈ ಅವರು ಗಮನಹರಿಸದೆ ಇರಬಹುದು ಅನ್ನೋ ಕಾರಣಕ್ಕೆ ಪ್ರತಿಧ್ವನಿ ಎಚ್ಚರಿಸುವ ಕೆಲಸ ಮಾಡುತ್ತಿದೆ. ಕೇವಲ 36 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿರುವ ರಾಜೀವ್ ಚಂದ್ರಶೇಖರ್, ನಾಮಿನೇಷನ್ ಸಲ್ಲಿಕೆ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುವಂತೆ ಕಾಣಿಸುತ್ತಿದೆ. ಈ ಹಿಂದಿನ ಆದಾಯ ತೆರಿಗೆ ಪಾವತಿ ಅಂಕಿ ಅಂಶ ನೋಡಿದಾಗ ಸುಳ್ಳಿನ ಅಫಿಡವಿಟ್ ಅನ್ನೋದು ಮನವರಿಕೆ ಆಗಿದ್ದು, ಅವನಿ ಬನ್ಸಲ್ (@bansalavani) ಎನ್ನುವ ವಕೀಲರು ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್ ಕೂಡ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಈ ಬಗ್ಗೆ ಮೋಹನ್ ದಾಸ್ ಪೈ ಅವರು ಮೌನಕ್ಕೆ ಶರಣಾಗ್ತಾರೆ.
ಇದೊಂದು ಸರ್ಕಾರಿ ಭೂಮಿಯನ್ನು ಕಬಳಿಸಿದ ಆರೋಪ. ಕರ್ನಾಟಕ ಸಹಕಾರಿ ಹಾಲು ಮಹಾಮಂಡಳ (KMF) ಹೆಸರಿನಲ್ಲಿದ್ದ ಭೂಮಿಯನ್ನು ಗುಳುಂ ಸ್ವಾಹಃ ಮಾಡಿದ ಆರೋಪ 2017ರಲ್ಲೇ ಕೇಳಿ ಬಂದಿತ್ತು. ಬೆಂಗಳೂರು ದಕ್ಷಿಣ ತಾಲೂಕಿಗೆ ಸೇರುವ ಬೇಗೂರು ಹೋಬಳಿಯ ಕೋರಮಂಗಲ ಗ್ರಾಮದ ಸರ್ವೇ ನಂ. 5 ಮತ್ತು 5/1 (ಹಳೆಯ ಸರ್ವೇ ನಂಬರ್ 2, 3, 4 ಮತ್ತು 71) ರಲ್ಲಿ 2 ಎಕರೆ ಮತ್ತು 16.74 ಗುಂಟಾ ಜಮೀನು ಕಬಳಿಸಿದ್ದಾರೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೇ ಭೂಮಿಯನ್ನು ಅಡಮಾನವಿಟ್ಟು 165 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಅದು ಸತ್ಯವೂ ಆಗಿತ್ತು. ಪಾಸ್ಪೋರ್ಟ್ ಆಫೀಸ್ ಪಕ್ಕದ ಜಮೀನನ್ನು ಸರ್ಕಾರ ಕರ್ನಾಟಕ ಮಿಲ್ಕ್ ಫೆಡರೇಷನ್ಗೆ 1998ರಲ್ಲಿ ನೀಡಿತ್ತು. ಆದರೆ ಆ ಜಮೀನನ್ನು ರಾಜಕೀಯ ಶಕ್ತಿ ಬಳಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಟೆಂಡರ್ ನೆಪದಲ್ಲಿ ಪಿವಿಕೆ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಲಿಮಿಟೆಡ್, ಎಚ್‌ಎಸ್‌ಸಿಒ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್ ಮತ್ತು ಪಿ ವಿಜಯ್‌ಕುಮಾರ್ ಹೆಸರಿಗೆ ಪಡೆದುಕೊಳ್ಳಲಾಯ್ತು. ಈ ಕಂಪನಿಯಲ್ಲಿ ರಾಜೀವ್ ಚಂದ್ರಶೇಖರ್ ಕೂಡ ಪಾಲುದಾರರು. ಆದರೂ ಈ ಬಗ್ಗೆ ಮೋಹನ್ ದಾಸ್ ಪೈ ಅವರು ಮಾತನಾಡುವುದಿಲ್ಲ.u
KMF ಜೊತೆಗೆ ಮಾಡಿಕೊಂಡ ಒಪ್ಪಂದವನ್ನೂ ಪಾಲಿಸಲಿಲ್ಲ. ಆ ಬಳಿಕ PVK ಸಂಸ್ಥೆ ಶೇಕಡ 44ರಷ್ಟು ಹಾಗು ಹ್ಯಾಬಿಟೇಟ್ಸ್ ಶೇಕಡ 56ರಷ್ಟು ಪಾಲುದಾರಿಕೆ ಮೇಲೆ ಭೂಮಿ ಒಡೆತನ ಹೊಂದುವಂತಾಯ್ತು. ಆದರೆ ಈ ಭೂಮಿಯನ್ನು 2014ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಅಡಮಾನವಿಟ್ಟು 50 ಕೋಟಿ ಸಾಲವನ್ನು ಮಂತ್ರಿ ಸಂಸ್ಥೆ ಪಡೆದುಕೊಂಡಿತ್ತು. ಆ ಬಳಿಕ ಸಾಲ ಬಡ್ಡಿ ಸೇರಿಸಿ 66 ಕೋಟಿ ಪಾವತಿ ಮಾಡಿ ಸಾಲ ತೀರಿಸಿದ ಈ ಸಂಸ್ಥೆ, 2017ರಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ನಲ್ಲಿ ಅಡಮಾನವಿಟ್ಟು 140 ಕೋಟಿ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಾರೆ. ಇದೀಗ ಲಕ್ಷ್ಮೀ ವಿಲಾಸ್ ಬ್ಯಾಂಕ್ಕ್ಕೆ ಸಿಲುಕಿತ್ತು. ಆ ಬಳಿಕ ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು DBS ಜೊತೆಗೆ ವಿಲೀನ ಮಾಡಲಾಗಿದೆ. ಇಷ್ಟೆಲ್ಲಾ ನಡೆದಿದ್ದರೂ ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಬೈ ಹಾರ್ಟ್ ಬೆಂಗಳೂರಿಯನ್ ಎಂದು ಹೇಳಿಕೊಳ್ಳುವ ಮೋಹನ್ ದಾಸ್ ಪೈ ಕೂಡ ಈ ಬಗ್ಗೆ ಮಾತನಾಡುವುದಿಲ್ಲ. ಸರ್ಕಾರದ ಆಸ್ತಿ ಸಾರ್ವಜನಿಕರಿಗೆ ಸೇರಿದ್ದು ಅಲ್ಲವೇ..? ಎನ್ನುವ ಪ್ರಶ್ನೆ ಎದುರಾಗುತ್ತದೆ.
ಮೋಹನ್ ದಾಸ್ ಪೈ ಇತ್ತೀಚಿನ ದಿನಗಳಲ್ಲಿ ಕೇವಲ ಬಿಜೆಪಿ ಪರವಾಗಿ ಮಾತನಾಡುತ್ತಿದ್ದಾರೆ. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದರೆ ಯಾವುದೇ ತೊಂದರೆ ಇಲ್ಲ. ಅವರನ್ನು ಸಾಕಷ್ಟು ಮಂದಿ ಮಾದರಿ ವ್ಯಕ್ತಿಯಾಗಿ ನೋಡುತ್ತಿರುತ್ತಾರೆ. ಬೆಂಗಳೂರಿನ ಸಮಸ್ಯೆಗಳ ಬಗ್ಗೆ ದನಿ ಎತ್ತುವಾಗ ಬೆಂಗಳೂರಿನ ಮುಕ್ಕಾಲು ಭಾಗದ ಜನರು ಮೋಹನ್ ದಾಸ್ ಪೈ ಅವರ ಮಾತಿಗೆ ದನಿಗೂಡಿಸಿದ್ದರು. ಸಮಾಜದ ಒಳಿತಿಗಾಗಿ ಮಾತನಾಡುವ ಮೋಹನ್ ದಾಸ್ ಪೈ, ಕೇವಲ ಬಿಜೆಪಿ ನಾಯಕರು ಹಾಕುವ ಪೋಸ್ಟ್ಗಳನ್ನು ರೀ ಟ್ವೀಟ್ (X Post) ಮಾಡುವುದು. ಜೊತೆಗೆ ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ ತಿರುಗೇಟು ಕೊಡುವುದು. ಅಂದರೆ ಬಿಜೆಪಿ ವಕ್ತಾರನ ರೀತಿಯಲ್ಲಿ ನಡೆದುಕೊಳ್ತಿರೋದು ಪೈ ಅವರ ವ್ಯಕ್ತಿತ್ವಕ್ಕೆ ಮಸಿ ಎನ್ನುವಂತಾಗಿದೆ ಎನ್ನಬಹುದು.