ಕಳೆದ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳು ಸೇರಿಕೊಂಡು ನಡೆಸಿದ ಸಭೆಯಲ್ಲಿ ದೇಶದ ಖಾಸಗಿ ಸುದ್ದಿ ಜಾಲತಾಣವಾದ ದಿ ವೈರ್ ಭಾಗವಹಿಸಿ, ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸವಿಸ್ತರವಾದ ವಾದ ಮಂಡಿಸಿದೆ. ಜಾಗತಿಕ ನಾಯಕರು, ದೇಶದ ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಮಾನಹಕ್ಕುಗಳ ಹೋರಾಟಗಾರರು ಇಸ್ರೇಲಿನ ಮಿಲಿಟರಿ ದರ್ಜೆಯ ಬೇಹುಗಾರಿಕೆ ಅಸ್ತ್ರವಾದ ಪೆಗಾಸಸ್ ಗೂಢಾಚರ್ಯೆಗೆ ಹೇಗೆ ಬಲಿಯಾಗಿದ್ದಾರೆ ಎಂಬುವುದರ ಬಗ್ಗೆ ವಿಷಯ ಮಂಡಿಸಿದೆ. ಈ ಪೆಗಾಸಸ್ ಜಗತ್ತಿನ ನಾಲ್ಕು ಪ್ರಬಲ ದೇಶದಲ್ಲಿ ಬಳಕೆಯಾಗಿದೆ ಎಂಬುವುದು ಸಾಬೀತಾಗಿದ್ದರೂ, ಸದ್ಯಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಎರಡು ದೇಶಗಳ ಬಗ್ಗೆಯಷ್ಟೇ ಮಾತನಾಡುವುದು ಸೂಕ್ತ.
ಪೇಗಾಸಸ್: ಬಿಜೆಪಿಯ ಮಂತ್ರದೆದುರು ದಿಕ್ಕೆಟ್ಟು ಹೋಯಿತೆ ಪ್ರತಿಪಕ್ಷ ತಂತ್ರಗಾರಿಕೆ?
ಈ ಪೈಕಿ ಮೊದಲನೇಯದ್ದು ಫ್ರಾನ್ಸ್. ಫ್ರಾನ್ಸ್ನ ವಿಶ್ವಾಸಾರ್ಹ ಸುದ್ದಿ ಸಂಸ್ಥೆ ಲೆ ಮೊಂಡೆ ಪೆಗಾಸಸ್ ಕುರಿತು ಮಾಡಿರುವ ವರದಿಗಳು ಗಮನ ಸೆಳೆಯುವಂತದ್ದು. ಲೆ ಮೊಂಡೆ ಎರಡು ರೀತಿಯಾಗಿ ಈ ಪ್ರಕರಣವನ್ನು ವರ್ಗೀಕರಿಸಿ ಸರಣಿ ವರದಿಯನ್ನು ನೀಡುತ್ತಾ ಬಂದಿದೆ. ಈ ಪೆಗಾಸಸ್ ಬೇಹುಗಾರಿಕೆಗೆ ಒಳಗಾದ 13 ಮಂದಿಯ ಪಟ್ಟಿ ಮೊದಲನೇಯದ್ದು. ಮತ್ತು ಎರಡನೇಯದ್ದು, ಪೆಗಾಸಸ್ ಬೇಹುಗಾರಿಕೆ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡರೂ ಫಾರೆನ್ಸಿಕ್ ಟೆಸ್ಟ್ನಲ್ಲಿ ಸಾಬೀತಾಗದೆ ಉಳಿದವರು. ಹೀಗೆ ಲೆ ಮೊಂಡೆ ಎರಡು ರೀತಿಯಲ್ಲಿ ಪೆಗಾಸಸ್ ಬೇಹುಗಾರಿಕೆ ಪ್ರಕರಣವನ್ನು ವರ್ಗೀಕರಿಸಿದೆ.
ಲೆ ಮೊಂಡೆ ವರದಿ ಮಾಡಿರುವ ಪ್ರಕಾರ ತನ್ನ ಮೊದಲ ಪಟ್ಟಿಯಲ್ಲಿರುವ ಮೊದಲ ಹೆಸರು ಫಾನ್ಸ್ನ ಅಧ್ಯಕ್ಷ ಇಮ್ಮಾನುವೆಲ್ ಮ್ಯಾಕ್ರೋನ್. ಇದರ ಜೊತೆಗೆ ಅಧ್ಯಕ್ಷ ಮ್ಯಾಕ್ರೋನ್ ಸಂಪುಟದ ಒಂದು ಡಜನ್ಗೂ ಅಧಿಕ ಸಚಿವರುಗಳೂ ಇದ್ದಾರೆ. ಇವರೆಲ್ಲರೂ ಕೂಡ ಸ್ಪಷ್ಟವಾಗಿ ಇಸ್ರೆಲ್ನ ಈ ಪೆಗಾಸಸ್ ಬೇಹುಗಾರಿಕೆಗೆ ಒಳಗಾಗಿದ್ದಾರೆ ಎಂದು ಲೆ ಮೊಂಡೆ ಸರಣಿ ವರದಿಗಳನ್ನು ಬಿತ್ತರಿಸಿದೆ.
ಪೇಗಾಸಸ್ ಲೀಕ್ಸ್: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ತನಿಖೆಯ ಒತ್ತಡ
ಲೆ ಮೊಂಡೆ ರೀತಿಯಲ್ಲೇ ಭಾರತದಲ್ಲಿ ದಿ ವೈರ್ ಪೆಗಾಸಸ್ ಕುರಿತು ಸರಣಿಯಾಗಿ ವರದಿಗಳನ್ನು ಬಿತ್ತರಿಸಿದೆ. ದಿ ವೈರ್ ಕೂಡ ಎರಡು ಭಾಗವಾಗಿ ಈ ಪ್ರಕರಣವನ್ನು ವರ್ಗೀಕರಿಸಿಕೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಸೇರಿದಂತೆ 10 ಮಂದಿಯ ಪಟ್ಟಿ ಮೊದಲನೇಯದ್ದು. (ಸದ್ಯ ಈ ಸಂಖ್ಯೆ 13ಕ್ಕೇರಿದೆ) ಹಾಗೂ ಈ ಪೆಗಾಸಸ್ ಬೇಹುಗಾರಿಕೆಗೆ ಒಳಗಾಗಿರುವ ಸಾಧ್ಯತೆ ಇರುವ 300 ಮಂದಿಯ ಹೆಸರಿರುವ ಪಟ್ಟಿ ಎರಡನೇಯದ್ದು. ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇವರಿಗೆ ಆಪ್ತವಾಗಿ ಇರುವ ಏಳು ಮಂದಿ ಸೇರಿದಂತೆ, ಮೋದಿ ಸರ್ಕಾರದ್ದೇ ಇಬ್ಬರು ಸಚಿವರು, ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ, ಸುಪ್ರೀಂ ಕೋರ್ಟ್ ರೆಜಿಸ್ಟ್ರಾರ್ಗಳು, ಸಿಬಿಐನ ಮಾಜಿ ಮುಖ್ಯಸ್ಥ ಹಾಗೂ ಸುಪ್ರೀಂ ಮಾಜಿ ಚೀಫ್ ಜಸ್ಟಿಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ನಡೆಸಿದ ಮಹಿಳೆಯ ಹೆಸರು ಈ ಪಟ್ಟಿಯಲ್ಲಿದೆ.
ಈ ಎಲ್ಲರ ಸಂಖ್ಯೆಗಳನ್ನು ಇಸ್ರೇಲ್ನ ಗುರುತಿಸಲಾಗದ ನೆಟ್ವರ್ಕ್ ಮೂಲಕ ದಾಳಿ ಮಾಡಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ. ಇದರ ಜೊತೆಯಲ್ಲೇ, ಭಯೋತ್ಪಾಧಕ ವಿರೋಧಿ ಗುಂಪಿಗೆ ಸೇರಿದ ಪಾಕಿಸ್ತಾನದ 800 ಮೊಬೈಲ್ ಸಂಖ್ಯೆಗಳೂ ಈ ಪಟ್ಟಿಯಲ್ಲಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಮಾಡಲು ದಿ ವೈರ್ ಆಸಕ್ತಿ ತೋರುವುದಿಲ್ಲ ಎಂದೂ ವರದಿ ಮಾಡಿದೆ.
ಪೆಗಾಸಸ್ ಬಗ್ಗೆ ಇಸ್ರೇಲ್ ಬಳಿ ಸ್ಪಷ್ಟನೆ ಕೇಳಿದೆ ಫ್ರಾನ್ಸ್ : NSO ಪರವಹಿಸಿದ ಭಾರತ !
ಈಗ ಎರಡು ಪ್ರಬಲ ದೇಶಗಳಾದ ಫ್ರಾನ್ಸ್ ಹಾಗೂ ಭಾರತ ಈ ಪೆಗಾಸಸ್ ಬೇಹುಗಾರಿಕ ಪ್ರಕರಣದ ಬಗ್ಗೆ ಕೊಟ್ಟಿರುವ ಪ್ರತಿಕ್ರಿಯೆಯನ್ನು ಹೋಲಿಕೆ ಮಾಡಿ ನೋಡೋಣ.
ಸಂಚಲನ ಸೃಷ್ಟಿಸಿದ ಪೇಗಾಸಸ್ ಲೀಕ್ಸ್: ಮೋದಿ ಆಡಳಿತದ ಟೀಕಾಕಾರರ ಮೊಬೈಲ್ ಗೆ ಕನ್ನ!
ಅದ್ಯಾವಾಗ, ಲೆ-ಮೊಂಡೆ ಎಂಬ ಸುದ್ದಿ ಸಂಸ್ಥೆ ಅಧ್ಯಕ್ಷ ಇಮ್ಮಾನುವೆಲ್ ಮ್ಯಾಕ್ರೋನ್ ಹೆಸರು ಪ್ರಸ್ತಾಪಿಸಿಕೊಂಡು ವರದಿ ಮಾಡಿತೋ, ಆಗಲೇ ಫ್ರಾನ್ಸ್ ತನಿಖೆಗೆ ಆದೇಶಿಸಿತೇ ಹೊರತು ʻಸಾಕ್ಷಿ ಎಲ್ಲಿದೆ.. ಏನಿದೆ.?ʼʼ ಎಂದು ಕೇಳಲಿಲ್ಲ. ಯಾಕಂದ್ರೆ ಇದನ್ನು ಗಂಭೀರವಾಗಿ ಪರಿಗಣಿಸಿದ ಫ್ರಾನ್ಸ್, ಮೊರೋಕೋ ದೇಶದ ಜೊತೆ ಭಯೋತ್ಪಾದನ ವಿರೋಧಿ ನೆಲೆಗಟ್ಟಿನಲ್ಲಿ ಬಹಳ ಆಪ್ತ ಸಂಪರ್ಕ ಇಟ್ಟುಕೊಂಡಿತ್ತು. ಪ್ಯಾರಿಸ್ನ ಸುವ್ಯವಸ್ಥೆ ಕಾಪಾಡಿಕೊಳ್ಳಲು ಫ್ರಾನ್ಸ್ಗೆ ಮೊರೋಕಾದ ರಬತಾದ ಸಹಾಯ ಅನಿವಾರ್ಯವಾಗಿತ್ತು. ಹೀಗಾಗಿ ಪೆಗಾಸಸ್ ಪಟ್ಟಿಯಲ್ಲಿ ಹೆಸರು ಬಹಿರಂಗಗೊಂಡ ಬೆನ್ನಲ್ಲೇ ಇಮ್ಮಾನುವೆಲ್ ಮ್ಯಾಕ್ರೋನ್ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ಕೊಡುವಂತೆ ಕೇಳಿಕೊಂಡಿದ್ದರು.
ಇದೇ ಹಿನ್ನೆಲೆಯಲ್ಲಿ ನಫ್ತಾಲಿ ಬೆನೆಟ್ ಒಂದು ತಂಡ ರಚಿಸಿ ಪೆಗಾಸಸ್ ತಯಾರಿಸಿದ NSO ಕಂಪೆನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಲ್ಲದೆ ಕಚೇರಿ ಮೇಲೆಯೂ ದಾಳಿ ನಡೆಸಿ ಈ ಬಗ್ಗೆ ಮಾಹಿತಿ ಕೆಲೆ ಹಾಕಿಕೊಂಡಿತು. ಅಲ್ಲದೆ ಫ್ರಾನ್ಸ್ ಜೊತೆಗಿನ ಉತ್ತಮ ಸಂಪರ್ಕವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತತ್ಕ್ಷಣವೇ ತನ್ನ ರಕ್ಷಣಾ ಸಚಿವರನ್ನೂ ಪ್ಯಾರಿಸ್ಗೆ ಕಳುಹಿಸಿ ಈ ಪ್ರಕರಣದ ಒಟ್ಟು ಮಾಹಿತಿಯನ್ನು ಕಲೆ ಹಾಕಿ ಕೊಡುವುದಾಗಿ ಭರವಸೆಕೊಟ್ಟಿತು. ಇದೇ ವೇಳೆಯಲ್ಲಿ ಫ್ರನ್ಸ್ ತನ್ನ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆಯ ಸಹಾಯದೊಂದಿಗೆ ಪೆಗಾಸಸ್ ಬೇಹುಗಾರಿಕೆ ಪಟ್ಟಿಯಲ್ಲಿ ಕಾಣಿಸಿಕೊಂಡ ಮೂವರು ಪತ್ರಕರ್ತರ ಸಂಖ್ಯೆಯನ್ನು ಫಾರೆನ್ಸಿಕ್ ಪರೀಕ್ಷೆ ನಡಿಸಿತು. ಈ ವೇಳೆ ಪೆಗಾಸಸ್ ಬೇಹುಗಾರಿಕೆಗೆ ಆ ಮೂವರು ಪತ್ರಕರ್ತರ ಸಂಖ್ಯೆ ಒಳಪಟ್ಟಿದ್ದು ದೃಢ ಪಟ್ಟಿತ್ತು. ಇದರ ಜೊತೆಯಲ್ಲೇ ಫ್ರಾನ್ಸ್, ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ಕೇವಲ ಗಂಭೀರವಾಗಿ ತೆಗೆದುಕೊಳ್ಳದೆ, ಆದರ ಒಳ ಹುರುಳು ಏನು ಎಂಬುವುದನ್ನು ತಿಳಿಯಲು ಮತ್ತು ದೇಶದ ಜನರಿಗೆ ಇದರಿಂದ ತಪ್ಪು ಸಂದೇಶಗಳು ರವಾನೆಯಾಗ ಬಾರದು ಎಂಬ ದೃಷ್ಟಿಯಲ್ಲಿ ಸೂಕ್ತ ತನಿಖೆಗೂ ಆದೇಶಿಸಿದರು.
ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ
ಆದರೆ ಇತ್ತ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವರಸೆ ಬೇರೆಯೇ ಇತ್ತು. ʻʻಇದೊಂದು ಸೆನ್ಸೇಷನಲ್ ಸುದ್ದಿಯಷ್ಟೇ. ಈ ಮೂಲಕ ದೇಶದ ಪಜಾಪ್ರಭುತ್ವವನ್ನು ಹಾಗೂ ಇಲ್ಲಿನ ವ್ಯವಸ್ಥೆಯನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ಬಗ್ಗೆ ವರದಿ ಮಾಡಿರುವ ದಿ ವೈರ್ ಸುದ್ದಿ ಸಂಸ್ಥೆ ಎಲ್ಲಿಯೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡವರ ಸಂಖ್ಯೆ ಪೆಗಾಸಸ್ ಕಣ್ಗಾವಲಿನಲ್ಲಿದೆ ಎಂದು ನೇರವಾಗಿ ಉಲ್ಲೇಖಿಸಿಲ್ಲ. ಮತ್ತು ದಿ ವೈರ್ ನೀಡಿರುವ ವರದಿಯನ್ನು NSO ತಿರಸ್ಕರಿಸಿದೆʼʼ ಎಂದು ಸಂಸತ್ತಿನಲ್ಲಿ ಪೆಗಾಸಸ್ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದರು.
ಆದರೆ ಮಾಹಿತಿ ತಂತ್ರಜ್ಙಾನ ಸಚಿವರು, ಕೆಲವು ನಿರ್ದಿಷ್ಟ ವ್ಯಕ್ತಿಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲಿಟ್ಟು ಬೇಹುಗಾರಿಕೆ ಮಾಡುತ್ತಿದೆ ಎಂಬ ಕೆಲ ಸುದ್ದಿ ಸಂಸ್ಥೆಗಳು ಮಾಡಿದ ಆರೋಪ ಸತ್ಯಕ್ಕೆ ದೂರವಾದ್ದು ಎಂದು ಪೆಗಾಸಸ್ ಕುರಿತಾದ ಮಾಧ್ಯಮ ವರದಿಗಳಿಗೆ ಸರ್ಕಾರದ ಯಾವುದೇ ಲೋಗೋ ಅಥವಾ ಸಚಿವಲಾಯದ ಕುರಿತಾದ ಯಾವುದೇ ಮಾಹಿತಿ ಇಲ್ಲದ ಬಿಳಿ ಹಾಳೆಯ ಮೇಲೆ ಸ್ಪಷ್ಟನೆ ಕೊಟ್ಟು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು.
ಈ ಪತ್ರಿಕಾ ಹೇಳಿಕೆಯ ಬಳಿಕ ತಾವು ಎದುರಿಸಬಹುದಾದ ಕಾನೂನಾತ್ಮಕ ಸಮಸ್ಯೆಗಳನ್ನು ಮೊದಲೇ ಮನಗಂಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೀಗೆ ಯಾವುದೇ ಸರ್ಕಾರಿ ಪ್ರಾಯೋಜಕತ್ವ ಇಲ್ಲದ ಹೇಳಿಕೆಯನ್ನು ಬಿಡುಗಡೆಗೊಳಿಸಿ ಕೈ ತೊಳೆದುಕೊಂಡರು. ಹೀಗೆ ಭಾರತ ಪೆಗಾಸಸ್ ಕುರಿತಾಗಿ ಕ್ಷುಲ್ಲಕ ಸ್ಪಷ್ಟನೆಕೊಟ್ಟಿತೇ ಹೊರತು, ಫ್ರಾನ್ಸ್ ಅಧ್ಯಕ್ಷರಂತೆ, ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ಪೆಗಾಸಸ್ ಬಗ್ಗೆ ಸ್ಪಷ್ಟನೆ ಕೇಳಲಿಲ್ಲ. ಫ್ರಾನ್ಸ್ನಂತೆ ಮಾಧ್ಯಮ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಲಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಸವಿಸ್ತಾರವಾದ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಹೀಗೆ ಯಾವುದನ್ನೂ ಮಾಡದ ಕೇಂದ್ರ ಸರ್ಕಾರ ಈ ಪ್ರಕರಣ ಸಂಬಂಧ ಉದ್ಭಿವಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆಯೂ ತೋರಲಿಲ್ಲ ಎಂಬುವುದು ಸರ್ಕಾರದ ಉದ್ದೇಶವೇನು ಎಂಬುವುದನ್ನು ಸ್ಪಷ್ಟ ಪಡಿಸಿದೆ.
ಸದ್ಯ ಈ ಪೆಗಾಸಸ್ ಬೇಹುಗಾರಿಕೆ ಪ್ರಕರಣ ಸರ್ವೋಚ್ಛ ನ್ಯಾಯಾಲಯದ ಮುಂದಿದೆ. ಈ ಗೂಢಾಚರ್ಯೆಗೆ ಒಳಗಾಗಿರುವ ಪೈಕಿ ಕೆಲವರು ಸುಪ್ರೀಂ ಕೋರ್ಟ್ನಲ್ಲಿ ಸೂಕ್ತ ತನಿಖೆಗೆ ಆದೇಶಿಸುವಂತೆ ಅರ್ಜಿ ಸಲ್ಲಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರ ಪೆಗಾಸಸ್ ಪ್ರಕರಣದಲ್ಲಿ ನಡೆದುಕೊಳ್ಳುವ ರೀತಿ ಅವರ ಉದ್ದೇಶ ಮತ್ತು ಗುರಿಯನ್ನು ಸ್ಪಷ್ಟ ಪಡಿಸುತ್ತಿದೆ.