ಜನವರಿ 19ರಂದು ಪ್ರಧಾನಿ(Prime Minister) ನರೇಂದ್ರ ಮೋದಿ(Narendra Modi) ಬೆಂಗಳೂರಿಗೆ ಬಂದಿದ್ದರು. ಬೋಯಿಂಗ್(Boeing) ಎಂಜಿನಿಯರಿಂಗ್ ಪಾರ್ಕ್ ಲೋಕಾರ್ಪಣೆ ಮಾಡಿದ ಪ್ರಧಾನಿಯನ್ನು ಸ್ವತಃ ಸಿಎಂ ಸಿದ್ದಾರಾಮಯ್ಯ(Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar), ಇಂಧನ ಸಚಿವ ಕೆ.ಜೆ ಜಾರ್ಜ್ ಸ್ವಾಗತ ಮಾಡಿದ್ದರು. ಆ ಬಳಿಕ ನಡೆದ ಬಹಿರಂಗ ಸಭೆಯಲ್ಲೂ ಪ್ರಧಾನಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಸಿಎಂ ಸಿದ್ದಾರಾಮಯ್ಯ, ಸಭೆಯನ್ನ ಉದ್ದೇಶಿಸಿ ಭಾಷಣ ಮಾಡಿದ್ದರು. ಆದರೆ ಆ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಲೆಕ್ಕ ತಪ್ಪಿದ್ರು ಅನ್ನೋದು ಅಲ್ಲಿ ಸಭೆಯಲ್ಲಿ ನೆರೆದಿದ್ದ ಬಹುತೇಕ ಜನರಿಗೆ ಪಕ್ಕಾ ಆಗಿತ್ತು. ಆದರೂ ಸಿಎಂ ಸಿದ್ದರಾಮಯ್ಯ ಈ ರೀತಿ ಮಾಡಿಕೊಂಡಿದ್ದು ಯಾಕೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಂದುಕೊಂಡರೆ, ಮೋದಿ ಎದುರು ಮಾತೇ ಬರಲಿಲ್ಲ ನೋಡು ಎಂದು ಎಂದು ಬಿಜೆಪಿ ಕಾರ್ಯಕರ್ತರು ಅಂದುಕೊಂಡು ಹೊರಟಿದ್ರು.

ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದು ಏನೇನು..?
ದೇವನಹಳ್ಳಿ ಬಳಿಯ ಬಿಐಇಟಿಸಿಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಬಿಐಇಟಿಸಿಯಲ್ಲಿ ಕ್ಯಾಂಪಸ್ ಮಾಡಿರೋದು ಸಂತಸ ತಂದಿದೆ. 43 ಎಕರೆ ಪ್ರದೇಶದಲ್ಲಿ ಬಿಐಇಟಿಸಿ ಕ್ಯಾಂಪಸ್ ಆಗಿದೆ. ಕರ್ನಾಟಕಕ್ಕೆ ಇದರಿಂದ ತುಂಬಾ ಅನುಕೂಲ ಆಗಲಿದೆ. ಏರೋಸ್ಪೇಸ್ ಎಂಜನಿಯರಿಂಗ್ನಲ್ಲಿ ಸಾಧನೆಗೆ ಅನುಕೂಲ, ರಕ್ಷಣಾ ವಲಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನ, ವಿಜ್ಞಾನ ವಲಯದಲ್ಲಿ ನಮ್ಮ ಸಾಧನೆ ದೊಡ್ಡದಿದೆ. ಮಹಿಳಾ ಸ್ವಾವಲಂಬನೆಗೆ ಈ ಸೆಂಟರ್ ಸಹಕಾರಿ ಆಗಲಿದ್ದು, ಏವಿಯೇಷನ್ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗೆ ಅನುಕೂಲ ಎಂದಿದ್ದರು ಅಷ್ಟೇ.. ಅಲ್ಲಿಗೆ ಭಾಷಣ ಮುಕ್ತಾಯ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾತಿ ಕಾರಣ ಎಂದು ಸಾಕಷ್ಟು ಜನರು ಅಂದುಕೊಂಡರು. ಆದರೆ ಕಾರಣ ಮಾತ್ರ ಬೇರೆಯೇ ಆಗಿತ್ತು. ಆ ಕಾರಣವನ್ನು ನಿಮ್ಮ ಪ್ರತಿಧ್ವನಿ ಬಯಲು ಮಾಡ್ತಿದೆ.
ಭಾಷಣದ ಪ್ರತಿಯೇ ಮಿಸ್ಸಿಂಗ್.. ಸಿದ್ದು ಕಕ್ಕಾಬಿಕ್ಕಿ!!
ಯಾವುದೇ ರಾಜಕೀಯ ನಾಯಕರು ಭಾಷಣ ಮಾಡುವಾಗ ಒಂದು ಸಿದ್ಧಪಡಿಸಿದ ಭಾಷಣದ ಪ್ರತಿ ಇಟ್ಟುಕೊಂಡಿರುತ್ತಾರೆ. ಏನೆಲ್ಲಾ ಮಾತನಾಡಬೇಕು..? ಏನೆಲ್ಲಾ ಅಂಕಿ ಅಂಶಗಳನ್ನು ಪ್ರಸ್ತಾಪ ಮಾಡಬೇಕು..? ಯಾವ ವಿಚಾರದಲ್ಲಿ ಅಟ್ಯಾಕಿಂಗ್ ಇರಬೇಕು ಎನ್ನುವುದು ಮೊದಲೇ ನಿರ್ಧರಿತ ಆಗಿರುತ್ತದೆ. ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳು ಮಾತ್ರ ಸ್ಥಳದಲ್ಲೇ ಆಗುತ್ತವೆ. ಅದೇ ರೀತಿ ಸಿದ್ದರಾಮುಯ್ಯ ಕೂಡ ಭಾಷಣದ ಪ್ರತಿ ತೆಗೆದುಕೊಂಡು ಹೋಗಿದ್ದರು. ಆದರೆ ಮೂರನೇ ಹಾಳೆ ಸಿದ್ದರಾಮಯ್ಯಗೆ ಸಿಗಲೇ ಇಲ್ಲ. ಅದರಲ್ಲಿ ಸಾಕಷ್ಟು ವಿಚಾರಗಳಿದ್ದವು. ಆದರೆ ಮಾತನಾಡಲು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಅದೂ ಅಲ್ಲದೆ ಈ ರೀತಿ ಭಾಷಣದ ಪ್ರತಿ ಸಿಗದೆ ಇದ್ದಾಗ ಸಹಾಯಕ್ಕೆ ಬರಲು ಆಪ್ತ ಸಹಾಯಕರನ್ನೂ ಸ್ಟೇಜ್ ಮೇಲೆ ಬಿಟ್ಟಿರಲಿಲ್ಲ. ಸಿದ್ದರಾಮಯ್ಯ ಯಾರನ್ನು ಕೇಳಲು ಸಾಧ್ಯ..? ಆ ಹು ಅಂದು ಭಾಷಣ ಮುಗಿಸಿದ್ರು.
ವೇದಿಕೆ ಮೇಲೆ ಸಿದ್ದರಾಮಯ್ಯಗೆ ಮೋದಿ ಕೌಂಟರ್..!
ಸಿಎಂ ಸಿದ್ದರಾಮಯ್ಯ ಅರ್ಧಂಬರ್ಧ ಮಾತನಾಡಿ ಮುಗಿಸಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಶುರು ಮಾಡಿದ್ರು. ಇದೆಲ್ಲಾ ಸಾಧ್ಯ ಆಗಿದ್ದು ಸ್ಟೇಬಲ್ ಗೌರ್ನಮೆಂಟ್ ಇರೋದ್ರಿಂದ ಎಂದರು. ಈ ಮಾತಿಗೆ ಜನರು ಹೋ ಎಂದು ಕೂಗಿದ್ದು ಮಾತ್ರವಲ್ಲದೆ, ಮೋದಿ ಮೋದಿ ಎಂದು ಘೋಷಣೆಯನ್ನೂ ಕೂಗಿದ್ರು. ಆಗ ಪ್ರಧಾನಿ ಮೋದಿ ಇದೆಲ್ಲಾ ಇದ್ದಿದ್ದೆ, ತಲೆ ಕೆಡಿಸಿಕೊಳ್ಳಬೇಡಿ ಮುಖ್ಯಮಂತ್ರಿಗಳೇ ಎಂದು ಸಿಎಂ ಸಿದ್ದರಾಮಯ್ಯಗೆ ಕಿಚಾಯಿಸಿದ್ರು. ಮೋದಿ ಮೋದಿ ಮೋದಿ ಎಂದ ಮಾತುಗಳಿಗೆ ಖುಷ್ ಆಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಪ್ರಧಾನಿಗಳು ಕೆಲವೇ ತಿಂಗಳ ಹಿಂದೆ ಅಬ್ಬರದ ಪ್ರಚಾರ ಮಾಡಿದರೂ ಸೋಲುಣಿಸಿ ಕಳುಹಿಸಿದ್ರು ಅನ್ನೋದನ್ನು ಮರೆತಂತಿತ್ತು. ಆದರೂ ಭಾಷಣಕ್ಕೆ ನಿಂತರೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಸಿಎಂ ಸಿದ್ದರಾಮಯ್ಯ ಹಲವಾರು ಕಾರಣಗಳಿಂದ ಕಕ್ಕಾಬಿಕ್ಕಿ ಬಿಕ್ಕಿಯಾಗಿ ಮೋದಿ ಎದುರು ಜಾರಿ ಬಿದ್ದಿದ್ದು ಸತ್ಯ.

ಕೃಷ್ಣಮಣಿ