ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 56 ಮಿಲಿಯನ್ ಭಾರತೀಯರು ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 38 ಮಿಲಿಯನ್ ಜನರು ಆತಂಕದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದೇ ಸಮಯದಲ್ಲಿ, ನಗರ ಭಾರತದಲ್ಲಿ ಮಾನಸಿಕ ಆರೋಗ್ಯದ ಅರಿವು ಹೆಚ್ಚುತ್ತಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2022-2028 ವರ್ಷಗಳಲ್ಲಿ ಮಾನಸಿಕ ಆರೋಗ್ಯ ಉದ್ಯಮವು ವಾರ್ಷಿಕ 15% ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು UnivDatos ಮಾರುಕಟ್ಟೆ ಒಳನೋಟಗಳ ಅಧ್ಯಯನವೂ ಹೇಳುತ್ತಿದೆ.
ಆದರೆ ಒಂದೆಡೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೆಚ್ಚುತ್ತಿದ್ದರೆ ಇನ್ನೊಂದೆಡೆ ಕೆಲವು ಅಹಿತಕರ ಅನುಭವಗಳಿಂದಾಗಿ ಅನೇಕ ಭಾರತೀಯರಿಗೆ ಮಾನಸಿಕ ಚಿಕಿತ್ಸಕರ ಬಗ್ಗೆ ನಂಬಿಕೆಯೇ ಇಲ್ಲದಂತಾಗುತ್ತಿದೆ ಎಂದೂ ಅಂತರರಾಷ್ಟ್ರೀಯ ವರದಿಗಳು ಹೇಳುತ್ತಿವೆ. ಇದಕ್ಕೆ ಮುಖ್ಯ ಕಾರಣ ವೈದ್ಯರ ತಪ್ಪು ನಿರ್ಧಾರಗಳು, ಅಸಮರ್ಪಕ ಚಿಕಿತ್ಸಾ ಕ್ರಮವೇ ಆಗಿವೆ.

ಮುಂಬೈ ಮೂಲದ ವಿದ್ಯಾರ್ಥಿನಿಯೊಬ್ಬರು ಲೆಸ್ಬಿಯನ್ ಸಂಬಂಧದಲ್ಲಿದ್ದ ಕಾರಣ ಮನೆಯಿಂದ ಹೊರ ಹಾಕಲ್ಪಟ್ಟರು. ವಿಪರೀತ ಮಾನಸಿಕ ಒತ್ತಡದಲ್ಲಿದ್ದ ಅವರು ಮಾನಸಿಕ ಚಿಕಿತ್ಸೆಯನ್ನು ಬಯಸಿ ವೈದರನ್ನು ಭೇಟಿಯಾಗುತ್ತಾರೆ. ವೈದ್ಯರು “ನಿಮ್ಮ ತಂದೆ ನಿಮ್ಮ ಒಳಿತನ್ನು ಮಾತ್ರ ಬಯಸುವುದರಿಂದ ಅವರ ಕ್ಷಮೆ ಕೇಳಬೇಕು” ಎನ್ನುತ್ತಾರೆ. ಇದರಿಂದ ಮತ್ತಷ್ಟು ಕ್ಷೋಭೆಗೊಳಗಾದ ಅವರು ತನ್ನ ಲೈಂಗಿಕ ಆಸಕ್ತಿಗಳ ಬಗ್ಗೆಯೇ ಸಂಶಯ, ನಾಚಿಕೆ ಪಡುವಂತಾಗುತ್ತದೆ. ತನ್ನ ಆತ್ಮವಿಶ್ವಾಸವನ್ನೇ ಕುಗ್ಗಿಸುವ ಯತ್ನ ನಡೆದ ನಂತರ ಬೇಸತ್ತ ಅವರು ಚಿಕಿತ್ಸೆ ಪಡೆಯುವುದನ್ನೇ ನಿಲ್ಲಿಸಿಬಿಟ್ಟರು.
ಈ ಬಗ್ಗೆ Deutsche Welleb (DW) ಜೊತೆ ಮಾತನಾಡಿರುವ ಅವರು “ನಾನು ಈಗ ಅದೃಷ್ಟವಶಾತ್ ಕ್ವೀರ್ ಸಮುದಾಯದ ಬೆಂಬಲವನ್ನು ಮತ್ತು ಉತ್ತಮ ಚಿಕಿತ್ಸಕನನ್ನು ಕಂಡುಕೊಂಡಿದ್ದೇನೆ” ಎಂದು ಹೇಳಿದ್ದಾರೆ. “ಬಹಳಷ್ಟು ಸಲಹೆಗಾರರು ಮತ್ತು ಚಿಕಿತ್ಸಕರು ತಾವು ಕ್ವೀರ್ ಫ್ರೆಂಡ್ಲೀ ಎಂದು ಜಾಹೀರಾತು ನೀಡುತ್ತಾರೆ, ಆದರೆ ಅವರು ನಿಜವಾಗಿಯೂ ಹಾಗಿರುವುದಿಲ್ಲ. ಇದು ಹಲವರ ಮಾನಸಿಕ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ, ವಿಶೇಷವಾಗಿ ಸಾಂಪ್ರದಾಯಿಕ ಅಥವಾ ನಿರ್ಬಂಧಿತ ಕುಟುಂಬಗಳಿಂದ ಬಂದವರು” ಎಂದೂ ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ಮತ್ತೊಂದು ಪ್ರಕರಣದಲ್ಲಿ 30 ವರ್ಷ ವಯಸ್ಸಿನ ಶ್ರೀರಾಮ್ ತನ್ನ ಮನೋವೈದ್ಯರೊಂದಿಗೆ ಮಕ್ಕಳನ್ನು ಹೊಂದಲು ಬಯಸದ ತನ್ನ ಮನಸ್ಥಿತಿಯ ಬಗ್ಗೆ ಮಾತನಾಡಿದ್ದರು. ಕೆಲವು ಸಮಯದ ನಂತರ ಮತ್ತೆ ಇದೇ ವಿಚಾರ ಮುನ್ನಲೆಗೆ ಬಂದಾಗ ಅವರ ವೈದ್ಯರು “ಅವರು ಸ್ವಾರ್ಥಿ ಆಗಿರುವುದರಿಂದ ಮಕ್ಕಳು ಬೇಡವೆಂದು ಅವರಿಗೆ ಅನ್ನಿಸುತ್ತಿದೆ” ಎಂದು ಹೇಳಿ ಅವರ ಮಾನಸಿಕತೆಯನ್ನೇ ಕುಗ್ಗಿಸಿದ್ದರು. ಆ ನಂತರ ವೈದ್ಯರನ್ನು ಬದಲಾಯಿಸಿದ ಶ್ರೀರಾಂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಚಿನ್ಮಯ ಮಿಷನ್ ಆಸ್ಪತ್ರೆಯ ಕೌನ್ಸಿಲರ್ ಆಗಿರುವ ಮನಶ್ಶಾಸ್ತ್ರಜ್ಞೆ ಹರಿಣಿ ಪ್ರಸಾದ್, “ಒಂಟಿಯಾಗಿರುವುದು ಅಥವಾ ಮಕ್ಕಳು ಬೇಡ ಎಮ್ನುವುದೆಲ್ಲಾ ಒಬ್ಬ ಕ್ಲೈಂಟ್ ಮಾಡುವ ಆಯ್ಕೆಗಳು. ಮಾನಸಿಕ ತಜ್ಞರು ಅವರ ಆಯ್ಕೆಗಳನ್ನು ಗೌರವಿಸಬೇಕು” ಎನ್ನುತ್ತಾರೆ.
2017 ರ ಭಾರತೀಯ ಮಾನಸಿಕ ಆರೋಗ್ಯ ಕಾಯಿದೆಯು ಸೇವೆಗಳನ್ನು ಒದಗಿಸುವಲ್ಲಿನ ನ್ಯೂನತೆಗಳ ಬಗ್ಗೆ ದೂರುಗಳನ್ನು ನೀಡುವ ಹಕ್ಕನ್ನು ರೋಗಿಗಳಿಗೆ ಒದಗಿಸುತ್ತದೆ. MHIಯು ‘ಕ್ವೀರ್ ಅಫರ್ಮೇಟಿವ್ ಕೌನ್ಸೆಲಿಂಗ್ ಪ್ರಾಕ್ಟೀಸ್ ಕೋರ್ಸ್’ ಅನ್ನು ನಡೆಸುತ್ತಿದ್ದು, ಅದರ ಮೂಲಕ ಈಗಾಗಲೇ ಭಾರತದಲ್ಲಿ ಸುಮಾರು 500 ಮಾನಸಿಕ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಿದೆ. ಇದು ತನ್ನ ವೆಬ್‌ಸೈಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದವರ ಹೆಸರನ್ನೂ ಪ್ರಕಟಿಸುತ್ತದೆ.
ಯಾವುದೇ ರೋಗಿಗೆ ಚಿಕಿತ್ಸಕರ ಕಡೆಯಿಂದ ಕೆಟ್ಟ ಅನುಭವಗಳಾದರೆ ಚಿಕಿತ್ಸೆ ಪಡೆಯುವುದನ್ನೇ ನಿಲ್ಲಿಸಿಬಿಡಬಾರದು ಎನ್ನುತ್ತಾರೆ ತಜ್ಞರು. “ಕೌನ್ಸಿಲರ್ ಅಥವಾ ವೈದ್ಯರ ಬಳಿ ಹೋದಾಗ ತಮಗೆ ಏನನ್ನಿಸುತ್ತದೆ ಎನ್ನುವುದರ ಬಗ್ಗೆ ರೋಗಿಗಳು ಜಾಗರೂಕರಾಗಿರಬೇಕು. ಒಬ್ಬ ವೈದ್ಯ ಎಲ್ಲರಿಗೂ ಹೊಂದಿಕೆಯಾಗುತ್ತಾರೆ ಎಂದು ಹೇಳಲಾಗುವುದಿಲ್ಲ. ಅವರು ಯಾವ ವಿಧಾನಗಳನ್ನು ಚಿಕಿತ್ಸೆಗೆ ಬಳಸುತ್ತಾರೆ, ಅವರ ಕ್ಲೈಂಟ್ ಪಾಲಿಸಿ ಏನು ಎಂಬುವುದನ್ನು ತಿಳಿದುಕೊಳ್ಳಬೇಕು. ಬಹುಮುಖ್ಯವಾಗಿ ನಿಮ್ಮ ಆಯ್ಕೆಗಳನ್ನು ಅವರು ಗೌರವಿಸುತ್ತಾರೆ, ನೀವು ಅವರೊಂದಿಗೆ ನಡೆಸುವ ಸಂವಹನವು ಗೌರವಯುತವಾಗಿದೆಯೇ ಎಂಬುವುದನ್ನು ಪರಿಶೀಲಿಸಬೇಕು” ಎನ್ನುತ್ತಾರೆ.