ಬೆಂಗಳೂರು: ಮುಂಗಾರು ಆರಂಭವಾಗಿ ಹಲವು ವಾರಗಳು ಕಳೆದರೂ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲೇ ಬೇಸಿಗೆಯನ್ನು ನೆನಪಿಸುವಂತ ಬಿಸಿಲು ದಾಖಲಾಗಿದ್ದು, ಕಳೆದ ಹತ್ತು ವರ್ಷಗಳಲ್ಲೇ ಅಪರೂಪದ ಉಷ್ಣಾಂಶ ಕಂಡುಬರುತ್ತಿದೆ. ಈ ಅಸಾಮಾನ್ಯ ಹವಾಮಾನಕ್ಕೆ ಎಲ್ ನಿನೊ (El Niño) ಮತ್ತು ಇಂಡಿಯನ್ ಓಷಿಯನ್ ಡೈಪೋಲ್ (IOD) ಪ್ರಮುಖ ಕಾರಣಗಳಾಗಿವೆ ಎಂದು ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

2026ರ ಮುಂಗಾರು ವಾಡಿಕೆಯಂತೆ ಆರಂಭವಾದರೂ ಜೂನ್ ತಿಂಗಳ ಬಹುತೇಕ ದಿನಗಳು ಒಣಹವೆಯಲ್ಲೇ ಕಳೆಯಿತು. ಜುಲೈ ಮೊದಲಾರ್ಧದಲ್ಲಿ ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ ಅಲ್ಲಲ್ಲಿ ಮಳೆಯಾದರೂ, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದೆ. ಬೆಂಗಳೂರಿನಲ್ಲೂ ತುಂತುರು ಮಳೆಯಷ್ಟೇ ಆಗಿದ್ದು, ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪೂರ್ವ ಫೆಸಿಫಿಕ್ ಸಾಗರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಿಂದ ಭಾರತದ ಮುಂಗಾರು ಮಾರುತಗಳ ಬಲ ಕುಗ್ಗಿ, ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇದೇ ಕಾರಣದಿಂದ ಈ ಬಾರಿ ಮಳೆ ಕೊರತೆ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಸಕಾರಾತ್ಮಕ ಇಂಡಿಯನ್ ಓಷಿಯನ್ ಡೈಪೋಲ್ (Positive IOD) ಎಲ್ ನಿನೊ ಪರಿಣಾಮವನ್ನು ಕೆಲವು ಮಟ್ಟಿಗೆ ತಗ್ಗಿಸಿ ಭಾರತಕ್ಕೆ ಮಳೆ ತರುತ್ತದೆ. ಆದರೆ ಈ ಬಾರಿ IOD ತಟಸ್ಥ (Neutral) ಸ್ಥಿತಿಯಲ್ಲಿರುವುದರಿಂದ ಎಲ್ ನಿನೊದ ಪರಿಣಾಮವನ್ನು ತಡೆಯಲು ಸಾಧ್ಯವಾಗಿಲ್ಲ.ಹವಾಮಾನ ವಿಜ್ಞಾನಿಗಳ ಪ್ರಕಾರ, ಆಫ್ರಿಕಾ ಮತ್ತು ಇಂಡೋನೇಷ್ಯಾ ಕರಾವಳಿಗಳ ಸಮುದ್ರ ತಾಪಮಾನದಲ್ಲಿ ಗಮನಾರ್ಹ ವ್ಯತ್ಯಾಸ ಇಲ್ಲದಿರುವುದರಿಂದ ಹಿಂದೂ ಮಹಾಸಾಗರವು ಮುಂಗಾರು ಮಾರುತಗಳಿಗೆ ಹೆಚ್ಚುವರಿ ಬಲ ನೀಡುತ್ತಿಲ್ಲ. ಪರಿಣಾಮವಾಗಿ ಮಳೆಯ ಪ್ರಮಾಣ ಕುಂಠಿತವಾಗಿದೆ.
ಜುಲೈ ಕೊನೆಯ ವಾರದಲ್ಲಿ ಮ್ಯಾಡನ್–ಜೂಲಿಯನ್ ಆಸಿಲೇಷನ್ (MJO) ಪ್ರಭಾವದಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಈ ಮಳೆಯಿಂದ ಕೆರೆಗಳು ತುಂಬಿ, ಅಂತರ್ಜಲ ಮಟ್ಟ ಏರಿಕೆಯಾಗುವ ಜೊತೆಗೆ ಸಾವಿರಾರು ಬೋರ್‌ವೆಲ್‌ಗಳ ಮರುಪೂರಣಕ್ಕೂ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ಸುರಿಯುವ ಹಿಂಗಾರು ಮಳೆ ಸಹ ಈ ಬಾರಿ ಉತ್ತಮವಾಗುವ ನಿರೀಕ್ಷೆಯಿದೆ. ಇದರಿಂದ ತಾಪಮಾನ ಇಳಿಕೆಯಾಗುವ ಜೊತೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ಸಾಧ್ಯತೆ ಇದೆ.






