ಭಾರತ ಸರ್ಕಾರವು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮಗಳು, 2021 ರ ನಿಯಮ 16 (3) ರ ಅಡಿಯಲ್ಲಿ ತನ್ನ ತುರ್ತು ಅಧಿಕಾರವನ್ನು ಬಳಸಿ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ಗೆ ಲಿಂಕ್ ಮಾಡಿದ ಟ್ವೀಟ್’ಗಳನ್ನು ತೆಗೆದುಹಾಕುವಂತೆ ಟ್ವಿಟರ್’ಗೆ ನಿರ್ದೇಶಿಸಿದೆ.
ಸರ್ಕಾರದಿಂದ ಕೆಲವು ಅಂಶಗಳನ್ನು ನಿರ್ಬಂಧಿಸುವ ಆದೇಶಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಮೊದಲೇ ತನ್ನ ಬಳಕೆದಾರರಿಗೆ ಸ್ಪಷ್ಟನೆ ನೀಡಿದ್ದು “ನಮ್ಮ ಸೇವೆಗಳನ್ನು ಎಲ್ಲೆಡೆ ಜನರಿಗೆ ಲಭ್ಯವಾಗುವಂತೆ ಮಾಡುವ ನಮ್ಮ ನಿರಂತರ ಪ್ರಯತ್ನದಲ್ಲಿ, ಅಧಿಕೃತ ಆಡಳಿತ ಘಟಕದಿಂದ ನಾವು ಮಾನ್ಯವಾದ ಮತ್ತು ಸರಿಯಾಗಿ ವಿನಂತಿಯನ್ನು ಸ್ವೀಕರಿಸಿದರೆ, ಕಾಲಕಾಲಕ್ಕೆ ನಿರ್ದಿಷ್ಟ ದೇಶದಲ್ಲಿ ಕೆಲವು ವಿಷಯಗಳನ್ನು ಪ್ರತಿಬಂಧಿಸುವುದು ಅನಿವಾರ್ಯವಾಗಬಹುದು” ಎಂದಿತ್ತು.
ಈ ಸ್ಪಷ್ಟನೆಯ ಪ್ರಕಾರ (೧) ಮಾನ್ಯವಾಗಿದೆಯೇ
(೨) ಸರಿಯಾಗಿ ವ್ಯಾಪ್ತಿ ಹೊಂದಿದೆಯೇ ಮತ್ತು
(೩) ಅಂತಹ ವಿನಂತಿಯು ಅಧಿಕೃತ ಘಟಕದಿಂದ ಬಂದಿದೆಯೇ ಎಂಬುದರ ಕುರಿತು ಟ್ವಿಟರ್ ಅಧ್ಯಯನ ಮಾಡಿ ನಿರ್ಣಯ ಕೈಗೊಳ್ಳುತ್ತದೆ. ಸ್ವತಃ ಟ್ವಿಟರ್ ಸಂಸ್ಥೆಯೇ ನೀಡಿರುವ ಸ್ಪಷ್ಟನೆಯ ಆಧಾರದ ಮೇಲೆ ಟ್ವಿಟರ್ ಮೇಲಿರುವ ನಿರೀಕ್ಷೆಯೆಂದರೆ, ಟ್ವಿಟರ್ ಸರ್ಕಾರದ ವಿನಂತಿಯನ್ನು ಪರಿಗಣಿಸುವ ಮೊದಲು ಅದರ ಸಿಂಧುತ್ವದ ಬಗ್ಗೆ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುವುದು. ಆದರೆ ಸ್ವತಃ ಸಚಿವಾಲಯದ ನಿರ್ದೇಶನಗಳೇ ಹಲವಾರು ಕಾನೂನು ದೌರ್ಬಲ್ಯಗಳನ್ನು ಒಳಗೊಂಡಿರುವಾಗ ಅದರ ವಿನಂತಿಯ ಸಿಂಧುತ್ವದ ಬಗ್ಗೆ ಟ್ವಿಟರ್ ನಿರ್ಣಯ ಕೈಗೊಳ್ಳುವಾಗ ಯಾವ ಯಾವ ಅಂಶಗಳನ್ನು ಪರಿಗಣಿಸಿದೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.
ಮೊದಲನೆಯದಾಗಿ, ಈ ನಿರ್ದೇಶನಗಳನ್ನು ‘IT ಕಾಯಿದೆ’ಯ ಸೆಕ್ಷನ್ 69A ಮತ್ತು ‘IT ನಿಯಮಗಳು 2021’ ರ ನಿಯಮ 16 ರ ಅಡಿಯಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿಇದೆ. ನಿಯಮ 16ರ ಪ್ರಕಾರ I&B ಸಚಿವಾಲಯದ ಅಧಿಕೃತ ಅಧಿಕಾರಿಗೆ ಮಾತ್ರ Twitter ನಂತಹ ಪ್ಲಾಟ್ ಫಾರ್ಮ್ ಗಳಿಗೆ ನಿರ್ದೇಶನ ನೀಡುವ ಅಧಿಕಾರವಿರುವುದು. ಇದನ್ನು 69Aಯಲ್ಲೂ ಉಲ್ಲೇಖಿಸಲಾಗಿದೆ.
ಇಲ್ಲಿ ಒಂದು ಅಂಶವೆಂದರೆ, ನಿಯಮ 16 ರ ಅಡಿಯಲ್ಲಿ ನಿರ್ದೇಶನಗಳನ್ನು I&B ಸಚಿವಾಲಯದ ಅಧಿಕೃತ ಅಧಿಕಾರಿಯಿಂದ ನೀಡಬಹುದು ಆದರೆ ಸೆಕ್ಷನ್ 69A ಮತ್ತು 2009 ರ ‘ಬ್ಲಾಕಿಂಗ್ ರೂಲ್’ ಪ್ರಕಾರ MeiTY ಯ ಗೊತ್ತುಪಡಿಸಿದ ಅಧಿಕಾರಿಗೆ ಮಾತ್ರ ನಿರ್ದೇಶನಗಳನ್ನು ನೀಡುವ ಅಧಿಕಾರವಿರುವುದು.
ಎರಡನೆಯದಾಗಿ, ಬ್ಲಾಕ್ ಮಾಡುವ ಆದೇಶದಂತಹ ತುರ್ತು ಅಧಿಕಾರವನ್ನು ಯಾವ ಆಧಾರದ ಮೇಲೆ ಅನ್ವಯಿಸಲಾಗಿದೆ ಎಂಬುದನ್ನು ಸರ್ಕಾರದ ಮಾರ್ಗದರ್ಶಿಸೂತ್ರಗಳು ಸೂಚಿಸುವುದಿಲ್ಲ. ಸರ್ಕಾರದ ಆದೇಶಗಳು ಸ್ಪಷ್ಟವಾಗಿಲ್ಲದೇ ಇರುವಾಗ ಟ್ವಿಟ್ಟರೇ ಆಗಲಿ ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ಗೇ ಆಗಲಿ ಆದೇಶದ ಸಿಂಧುತ್ವದ ಬಗ್ಗೆ ನಿರ್ಧಾರಕ್ಕೆ ಬರುವುದು ಅಸಾಧ್ಯ. ಮೇಲಾಗಿ, ನಿಯಮಗಳು ‘ಹಿತಾಸಕ್ತಿಯ’ ಕಾರಣಗಳಿಗಾಗಿ ನಿರ್ಬಂಧಗಳನ್ನು ಹೇರುವ ಅವಕಾಶವನ್ನು ಒದಗಿಸಿದರೂ ಈ ಹಿಂದೆ ಅನೇಕ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವಾಗ ತ್ವರಿತ ತೀರ್ಮಾನ ತೆಗೆದುಕೊಳ್ಳಬಾರದು ಎಂದೇ ಹೇಳಿವೆ.
ಮೂರನೆಯದಾಗಿ, ಟ್ವಿಟ್ಟರ್ ನಿರ್ದಿಷ್ಟವಾಗಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದಂತೆ ಆದೇಶವನ್ನು ಪರಿಶೀಲಿಸುವಲ್ಲಿ ಇನ್ನಷ್ಟು ಸೂಕ್ಷ್ಮವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಸಂವಿಧಾನದ ಅಡಿಯಲ್ಲಿ ಖಾತರಿಸಲಾದ ವಾಕ್ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಸಾಮಾಜಿಕ ಜಾಲತಾಣಗಳು ಜನರ ಅಭಿವ್ಯಕ್ತಿ ಮಾಧ್ಯಮವಾಗಿರುವ ಕಾಲದಲ್ಲಿ ಟ್ವಿಟ‌್ಟರ್ ನಂತಹ ಪ್ಲಾಟ್‌ಫಾರ್ಮ್‌ಗಳ ಆದ್ಯತೆಯಾಗಬೇಕು. ಈ ಹಿಂದೆ ರೈತರ ಆಂದೋಲನ ಸಂದರ್ಭದಲ್ಲಿ ಸರ್ಕಾರವು ಹಲವರ ಅಕೌಂಟ್‌ಗಳನ್ನು ಬ್ಲಾಕ್ ಮಾಡಲು ಕೇಳಿಕೊಂಡಾಗ ಟ್ವಿಟರ್ ಸ್ಪಷ್ಟವಾಗಿ ಅದನ್ನು ನಿರಾಕರಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಟ್ವಿಟರ್ ಸರ್ಕಾರದ ನಿರ್ದೇಶನವನ್ನು ಕಡೆಗಣಿಸಿದರೆ ಅಸುರಕ್ಷಿತ ರಾಷ್ಟ್ರೀಯತೆ ಪ್ರಶ್ನೆಗಳಿಗೆ ಈಡಾಗಬಹುದು ಎಂಬುವುದನ್ನು ಒಪ್ಪಬೇಕಾಗಿ ಬಂದರೂ ಅಂತಿಮವಾಗಿ ಭಾರತದ ಸಾರ್ವಭೌಮತ್ವವು ಅದರ ಸಂವಿಧಾನದಲ್ಲಿದೆ, ಸರ್ಕಾರದಲ್ಲಿಲ್ಲ ಮತ್ತು ದೇಶೀ ಅಥವಾ ವಿದೇಶೀ ಯಾವ ಸಂಸ್ಥೆಯೇ ಆದರೂ ವಿಧೇಯವಾಗಿರಬೇಕಾಗಿರುವುದು ಸಂವಿಧಾನಕ್ಕೆ ಹೊರತು ಸರ್ಕಾರಕ್ಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಇನ್ಪುಟ್ಸ್: ಪ್ರಸನ್ನ ಎಸ್, ದಿ ವೈರ್