
ಮಂಡ್ಯ : ಸರ್ಕಾರಿ ಕೆಲಸ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಸಜ್ಜಾಗಿದ್ದಾರೆ ಮಂಡ್ಯದ ಹೆಚ್ಚುವರಿ ಜಿಲ್ಲಾಧಿಕಾರಿ.KAS ಅಧಿಕಾರಿ ಆಗಿರುವ ಡಾ.ನಾಗರಾಜು ಕೆಲವೇ ದಿನಗಳಲ್ಲಿ ಡಿಸಿ ಆಗಬೇಕಿತ್ತು. ಆದರೆ ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ಹೋಗುವುದಕ್ಕೆ ಮುಂದಾಗಿದ್ದಾರೆ.

ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ಸರ್ಕಾರಿ ಅಧಿಕಾರಿ ಡಾ.ನಾಗರಾಜು ನೇಮಕ ಆಗಿದ್ದು, ಈ ತಿಂಗಳ ಅಂತ್ಯಕ್ಕೆ ಡಾ. H.L. ನಾಗರಾಜು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸ್ತಿರೋ ಡಾ.ಎಚ್.ಎಲ್ ನಾಗರಾಜು, ಮುಂದಿನ ತಿಂಗಳು ಮಠದ ಪೀಠಾಧ್ಯಕ್ಷ ಆಗಲಿದ್ದಾರೆ.
ಹೊಸ ವರ್ಷದಿಂದ ಸನ್ಯಾಸತ್ವ ಸ್ವೀಕರಿಸಿ, ಮಠಕ್ಕೆ ನೂತನ ಫೀಠಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದ ಸರ್ಕಾರಿ ಅಧಿಕಾರಿ ನಾಗರಾಜ್, ಸನ್ಯಾಸತ್ವ ಸ್ವೀಕಾರ ಮಾಡ್ತಿದ್ದಾರೆ ಎಂದು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸರ್ಕಾರಿ ಕೆಲಸ ಬಿಟ್ಟು ಸನ್ಯಾಸತ್ವ ಸ್ವೀಕಾರ ಮಾಡ್ತಿರೋದು ವೈಯಕ್ತಿಕ ವಿಚಾರ. ಅವರು ದೀಕ್ಷೆ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅವರು ಹಿಂದೆಯೇ ದೀಕ್ಷೆ ಪಡೆಯಲು ಮುಂದಾಗಿದ್ದರು. ಅನುಯಾಯಿಗಳ ಒತ್ತಾಯದ ಮೇರೆಗೆ ವಾಪಸ್ಸಾಗಿದ್ದರು. ಎರಡ್ಮೂರು ದಿನ ರಜೆ ಕೇಳಿದ್ದಾರೆ. ರಜೆ ಮುಗಿದ ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಬಹುದು ಎಂದಿದ್ದಾರೆ.