ಕರ್ನಾಟಕದ ಜನರಿಗೆ ಪಂಚರತ್ನ ಯೋಜನೆ ಮೂಲಕ ಕರ್ನಾಟಕ ಜನರ ಮುಂದೆ ಮೊದಲ ಬಾರಿ ಭರವಸೆ ನೀಡಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲುಂಡಿದೆ. 123 ಸ್ಥಾನಗಳಲ್ಲಿ ಗೆಲ್ಲುವ ಗುರಿ ಸಾಧಿಸುವ ಯೋಜನೆ ಮೂಲಕ ಚುನಾವಣೆ ನಡೆಸಿದ್ದ ಜೆಡಿಎಸ್ ಕೇವಲ 19 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಆ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ ಸಲ್ಲಿಸಿದ್ದರು. ಇನ್ನು ಜೆಡಿಎಸ್ ಯುವ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಜೆಡಿಎಸ್ ಪಕ್ಷದ ಸೋಲಿಗೆ ಕಾರಣ ಏನು ಎಂದು ಪರಾಮರ್ಶೆ ಸಭೆ ಆಯೋಜನೆ ಮಾಡಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಸೋಲಿನ ಬಗ್ಗೆ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗು ಜಿಲ್ಲಾಧ್ಯಕ್ಷರ ಜೊತೆಗೆ ಚರ್ಚೆ ನಡೆಸಿದ್ದಾರೆ.
ಹೆಚ್ಚು ಓದಿದ ಸ್ಟೋರಿಗಳು

ಯೋಜನೆ ಸರಿಯಾಗಿತ್ತು, ಆದರೂ ಸೋಲಿಸಿದ್ದು ಯಾಕೆ..?
ರಾಜ್ಯದಲ್ಲಿ ಜೆಡಿಎಸ್ಗೆ ಪ್ರಥಮ ಬಾರಿಗೆ ಯಾಕೆ..? ಜನರು ಈ ರೀತಿಯ ನಿರಾಶೆಯ ಫಲಿತಾಂಶ ಕೊಟ್ಟಿದ್ದಾರೆ ಎಂದು ಮುಕ್ತವಾಗಿ ಚರ್ಚೆ ಮಾಡಬೇಕು ಎಂದಿರುವ ಕುಮಾರಸ್ವಾಮಿ, ನಮ್ಮ ಪಕ್ಷ ಚುನಾವಣೆಗೆ ಒಂದು ವರ್ಷ ಇರುವಾಗಲೇ ಸಿದ್ದತೆ ಮಾಡಿತ್ತು. ಇವತ್ತಿನ ಫಲಿತಾಂಶವನ್ನು ನಾವು ಯಾರು ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆಯ ಹಿನ್ನಡೆಗೆ ಕಾರಣಗಳೇನು ಎಂದು ನಿಮಗೆ ಎಲ್ಲರಿಗೂ ತಿಳಿದಿದೆ. ಒಂದು ವರ್ಷದ ಮುಂಚಿತವಾಗಿಯೇ ಅಭ್ಯರ್ಥಿ ಪಟ್ಟಿ ಪ್ರಕಟ ಮಾಡಿ, ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇನೆ. ಪಕ್ಷ ಸಂಘಟನೆಯಲ್ಲೂ ತಾವು ಉತ್ತಮ ಸಹಕಾರ ಕೊಟ್ಟಿದ್ದೀರಿ. ಪಂಚರತ್ನ ರಥಯಾತ್ರೆ 90 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದಿದೆ. ಜನರ ಅಭೂತಪೂರ್ವ ಬೆಂಬಲ ಕಂಡು ಗೆಲುವಿನ ಆಶಾಭಾವನೆ ಮೂಡಿತ್ತು. ಜೆಡಿಎಸ್ ಈ ಬಾರಿ 75 ರಿಂದ 80 ಸ್ಥಾನ ಗೆಲ್ಲುವ ವಿಶ್ವಾಸ ಇತ್ತು. ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಆಕ್ರೋಶ ಕೂಡ ಇತ್ತು. ನಾವು ಈ ಬಾರಿ ಭ್ರಷ್ಟಾಚಾರ ಆಗಲಿ, ವ್ಯೆಯಕ್ತಿವಾಗಿಯೂ ಯಾರ ಬಗ್ಗೆಯೂ ಚುನಾವಣೆಯಲ್ಲಿ ಮಾತಾಡಿಲ್ಲ. ಆದರೂ ಜನ ಸೋಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರು ಮತ ನೀಡಲಿಲ್ಲ ಯಾಕೆ..?
ಇಡೀ ಕರ್ನಾಟಕದಲ್ಲಿ ನಾವು ಪಂಚರತ್ನ ಯೋಜನೆಗಳ ಬಗ್ಗೆ ಜನರನ್ನು ತಲುಪಲು ಪ್ರಚಾರ ಮಾಡಿದ್ವಿ. ಚುನಾವಣೆ ಘೋಷಣೆ ನಂತರ ಅನ್ಯ ಪಕ್ಷದವರು ಕೂಡ ನಮ್ಮ ಪಕ್ಷಕ್ಕೆ ಬಲಿಷ್ಠ ಅಭ್ಯರ್ಥಿಗಳು ಬಂದಿದ್ರು. ಹೀಗಾಗಿ ಹೆಚ್ಚುವರಿಯಾಗಿ 15-20 ಸೀಟು ಗೆಲ್ಲುವ ಅಚಲವಾದ ವಿಶ್ವಾಸ ಕೂಡ ಇತ್ತು. ಒಂದು ಸಮಾಜದ ಪರವಾಗಿ ಧ್ವನಿ ಎತ್ತಿದವರು ನಾವು. ಆದರೆ ಅ ಸಮಾಜ ನಮ್ಮನ್ನು ಈ ಬಾರಿ ಕೈ ಹಿಡಿಯಲಿಲ್ಲ. ಇಡೀ ಸಮಾಜ ನಮ್ಮನ್ನು ನಂಬದೇ ಇರೋದು ಕೂಡ ಹಿನ್ನಡೆಗೆ ಕಾರಣ ಆಗಿದೆ ಎನ್ನುವ ಮೂಲಕ ಮುಸ್ಲಿಂ ಸಮುದಾಯ ಜೆಡಿಎಸ್ ಬೆಂಬಲಿಸದಿದ್ದಕ್ಕೆ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ. ನಾನು ಎಲ್ಲರಿಗೂ ಆರ್ಥಿಕ ನೆರವು ಕೊಟ್ಟಿಲ್ಲ. ಆದರೆ ಚುನಾವಣೆಯಲ್ಲಿ ಗೆಲ್ಲುವ A ಕ್ಯಾಟಗಿರಿಯ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ಕೊಟ್ಟಿದ್ದೇನೆ. ಕಾಂಗ್ರೆಸ್ನ ಕುತಂತ್ರ ರಾಜಕಾರಣದಿಂದ ನಾವು ಸೋತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಒಂದು ಸಮುದಾಯ ಓಲೈಸಿದ್ದು, ಮತ್ತೊಂದು. ಜೆಡಿಎಸ್ಗೆ ಮತ ಹಾಕಿದ್ರೆ ಬೇರೆ ಪಕ್ಷಗಳಿಗೆ ಮತ ಹೋಗುತ್ತೆ ಅಂತಾ ಅಪಪ್ರಚಾರ ಮಾಡಿ ಮತ್ತೊಂದು ಸಮುದಾಯದ ಮೇಲೆ ಪ್ರಭಾವ ಬೀರಿ ಓಲೈಸಿದ್ದು ಇನ್ನೊಂದು ಕಾರಣ ಎಂದಿದ್ದಾರೆ.

ಕುಟುಂಬ ಬೇಡ, ಎಲ್ಲಾ ಸಮುದಾಯಕ್ಕೂ ನಾಯಕತ್ವ ಕೊಡೋಣ..!
ಚುನಾವಣೆ ಫಲಿತಾಂಶದಿಂದ ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿರುವ ಕುಮಾರಸ್ವಾಮಿ, ಕಾಂಗ್ರೆಸ್ನಲ್ಲಿ ಪ್ರಾರಂಭದಲ್ಲೇ ವಿಶ್ವಾಸದ ಕೊರತೆ ಕಾಣ್ತಿದೆ. ಈ ಪಕ್ಷಕ್ಕೆ ಮತ್ತೆ ಯಾವ ರೀತಿ ಜೀವ ತುಂಬಬೇಕು ಎಂದು ನಾವು ಚರ್ಚೆ ಮಾಡೋಣ. ವೈಯಕ್ತಿವಾಗಿ ಯಾರ ಬಗ್ಗೆಯೂ ಮಾತಾಡೋದು ಬೇಡ. ನಮ್ಮ ಸಂಘಟನೆಯಲ್ಲಿ ನಾವು ಸೊರಗಿದ್ದೇವೆ. ಪಕ್ಷದಲ್ಲಿ ಕಠಿಣವಾದ ನಿರ್ಧಾರ ಮಾಡಲೇಬೇಕಿದೆ. ಫೇಸ್ ವ್ಯಾಲ್ಯೂ ಇರುವಂತಹ ಒಂದೊಂದು ಸಮಾಜದ ನಾಯಕನನ್ನು ರೆಡಿ ಮಾಡಿ, ನಾನು ನಿಮ್ಮ ಜೊತೆ ನಿಲ್ತೇನೆ. ನಮ್ಮ ಕುಟುಂಬದ ಬಗ್ಗೆ ಪದೇ ಪದೇ ಟೀಕೆ ಮಾಡ್ತಾರೆ. ಆದರೆ ಸಿದ್ದರಾಮಯ್ಯ ತನ್ನ ಮೊಮ್ಮಗ ಮುಂದೆ ರಾಜಕಾರಣಕ್ಕೆ ಬರ್ತಾರೆ ಅಂತಾರೆ. ಆದರೆ ಅವರ ಬಗ್ಗೆ ಯಾರು ಟೀಕೆ ಮಾಡಲ್ಲ. ನಾನು ತುಂಬಾ ನೋವಿನಿಂದ ಈ ಮಾತು ಹೇಳ್ತಿದ್ದೇನೆ. ಮುಂದಿನ 5 ವರ್ಷ ನೀವು ಜನರ ಪರವಾಗಿ ಕೆಲಸ ಮಾಡಬೇಕು. ದೇವೇಗೌಡರ ಕುಟುಂಬ ಪಕ್ಷ ಎನ್ನುವ ಕುಪ್ಪು ಚುಕ್ಕೆಯನ್ನು ಅಳಿಸುವ ಕೆಲಸವನ್ನು ನೀವು ಮಾಡಬೇಕು ಎಂದು ಎಲ್ಲಾ ಸಮುದಾಯ ನಾಯಕತ್ವವನ್ನು ರೂಪಿಸುವ ಬಗ್ಗೆ ಮಾತನಾಡಿದ್ದಾರೆ.
5 ವರ್ಷ ಸರ್ಕಾರ ಇರುತ್ತೆ ಅನ್ನೋದು ಅನುಮಾನ..!
ಕಾಂಗ್ರೆಸ್ ಸರ್ಕಾರದ ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಈ ಸರ್ಕಾರ 5 ವರ್ಷ ಇರುತ್ತೋ ಇರಲ್ವೋ ಅಂತಾ ಗೊತ್ತಿಲ್ಲ. ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಸರ್ಕಾರದ ಭವಿಷ್ಯ ನಿಂತಿದೆ. ನಾನು ಈ ಮಾತನ್ನು ಕದ್ದು ಮುಚ್ಚಿ ಮಾತನಾಡ್ತಿಲ್ಲ. ಅಥವಾ ಬೇರೆ ಪಕ್ಷದ ಜೊತೆಗೆ ಸೇರಿಕೊಂಡಯ ಸರ್ಕಾರ ಮಾಡ್ತೀನಿ ಅಂತಾನೂ ಅಲ್ಲ. ಈ ಸರ್ಕಾರದಲ್ಲಿ ಆಗ್ತಿರುವ ಬೆಳವಣಿಗೆ ಹಾಗೂ ಪಕ್ಷದ ಸ್ಥಿತಿಗತಿಗಳ ನೋಡಿ ಈ ಮಾತು ಹೇಳ್ತಿದ್ದೇನೆ. ನಾನು ಭವಿಷ್ಯ ಹೇಳ್ತಿಲ್ಲ, ನಾನು ಜ್ಯೋತಿಷಿ ಕೂಡ ಅಲ್ಲ ಎಂದಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಜಾರಿ ಬಗ್ಗೆ ಹೋರಾಟಕ್ಕೆ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಹೋರಾಟ ಮಾಡಿ, ಜನರು ಬೀದಿಗಳಿಯುವಂತೆ ಮಾಡಿ. ಕಾಂಗ್ರೆಸ್ ಕೊಟ್ಟ ಫ್ರೀ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ ಎಂದು ಉರಿದುಂಬಿಸಿದ್ದಾರೆ. ಈ ಮೂಲಕ ಕೇವಲ 19 ಸ್ಥಾನ ಗೆದ್ದು ಪಕ್ಷವೇ ಇಲ್ಲ ಎನ್ನುವಂತಾಗಿರುವ ಈ ಸಮಯದಲ್ಲಿ ಜನರ ಜೊತೆಗಿದ್ದು ವಿಶ್ವಾಸ ಗಳಿಸಲು ಕರೆ ಕೊಟ್ಟಿದ್ದಾರೆ ಕುಮಾರಸ್ವಾಮಿ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೂ ಕೂಡ ಸಭೆಯಲ್ಲಿ ಭೇಸರದ ನುಡಿಗಳನ್ನಾಡಿದ್ದಾರೆ.
ಕೃಷ್ಣಮಣಿ