ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಮಂಡ್ಯ ಹಾಗು ಬೆಂಗಳೂರು ಬಂದ್ ಬಳಿಕ ಇಂದು ಇಡೀ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಎಲ್ಲಾ ಕಡೆಗಳಿಂದಲೂ ಸಂಘಟನೆಗಳು ಬಂದ್ಗೆ ಬೆಂಬಲಿಸುತ್ತಿದ್ದಾರೆ. ಸರ್ಕಾರ ಮೆರವಣಿಗೆ, ಱಲಿ ಸೇರಿದಂತೆ ಮುಜುಗರ ತಪ್ಪಿಸಿಕೊಳ್ಳುವ ಸಲುವಾಗಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಹೊಸ ವರಸೆ ತೆಗೆದಿದೆ. ವಿಪಕ್ಷದಲ್ಲಿದ್ದಾಗ ಸ್ವತಃ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದ ನಾಯಕರು ಇಂದು ಅಧಿಕಾರ ಸಿಕ್ಕ ಬಳಿಕ ಹೋರಾಟಗಾರರನ್ನು ಭೇಟಿ ಮಾಡುವ ಸೌಜನ್ಯವನ್ನು ತೋರಿಸುತ್ತಿಲ್ಲ. ಕಳೆದ ಮಂಗಳವಾರ ಬೆಂಗಳೂರು ಬಂದ್ ವೇಳೆ ರೈತರ ಅಹವಾಲು ಆಲಿಸಿದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. ಜಲಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಸಮಯವಿಲ್ಲದಂತೆ ಕೆಲಸ ಮಾಡ್ತಿದ್ದ ಹಾರಣಕ್ಕೆ ಸರ್ಕಾರದ ಪ್ರತಿನಿಧಿಯಾಗಿ ರಾಮಲಿಂಗಾರೆಡ್ಡಿ ಫ್ರೀಡಂಪಾರ್ಕ್ಗೆ ಆಗಮಿಸಿ ರೈತರ ಮನವಿ ಸ್ವೀಕಾರ ಮಾಡಿದ್ರು. ಆದರೆ ಇಲ್ಲೀವರೆಗೂ ಯಾವುದೇ ಬೆಳವಣಿಗೆ ಆಗಲಿಲ್ಲ.
ಡಿಸಿಎಂ ಡಿ.ಕೆ ಶಿವಕುಮಾರ್ಗೆ ಕೆಲಸದ ಒತ್ತಡ ಅಧಿಕ..
ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊರತುಪಡಿಸಿದ್ರೆ ಎರಡನೇ ಸ್ಥಾನದಲ್ಲಿ ಇರೋದು ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದೊಂದಿಗೆ, ಡಿಸಿಎಂ ಸ್ಥಾನವನ್ನೂ ಹೊಂದಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡ್ತಿದ್ದಾರೆ. ಅದರ ಜೊತೆಗೆ ಮಹತ್ವದ ಜಲಸಂಪನ್ಮೂಲ ಖಾತೆ ಸಚಿವರಾಗಿಯೂ ಕೆಲಸ ಮಾಡಬೇಕಿದೆ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾದ ಮಹತ್ವದ ಹೊಣೆಗಾರಿಕೆ ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿದೆ. ಇದೇ ಕಾರಣಕ್ಕೆ ಆಪರೇಷನ್ ಹಸ್ತ ಮಾಡುತ್ತಾ, ಗೆಲ್ಲುವ ಅಣ್ಯರ್ಥಿಗಳ ಬಗ್ಗೆ ಸರ್ವೇ ಕಾರ್ಯ ಮಾಡಿಸುವಲ್ಲಿ ಮಗ್ನರಾಗಿದ್ದಾರೆ. ಈಗಿರುವಾಗ ಕಾವೇರಿ ವಿಚಾರದಲ್ಲಿ ಸರ್ಕಾರದ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವುದು ಅಸಾಧ್ಯ ಅನ್ನೋ ಮಾತು ಕೇಳಿ ಬರುತ್ತಿದೆ.
ಜಲಸಂಪನ್ಮೂಲ ಖಾತೆ ಉಳಿದ ಖಾತೆಗಳ ರೀತಿ ಅಲ್ಲ.. ಸಮರ್ಥರು ಬೇಕು..
ಡಿ.ಕೆ ಶಿವಕುಮಾರ್ ಸಮರ್ಥ ನಾಯಕ ಅಲ್ಲವೇ ಅನ್ನೋ ಪ್ರಶ್ನೆ ಉದ್ಭವ ಆಗುತ್ತದೆ. ಆದರೆ ಕಾವೇರಿ ವಿಚಾರದಲ್ಲಿ ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ನಡೆದುಕೊಳ್ತಿರುವ ರೀತಿ ಹಾಗು ನೀಡುತ್ತಿರುವ ಹೇಳಿಕೆಗಳು ರೈತರು ಹಾಗು ಜನಸಾಮಾನ್ಯರಲ್ಲಿ ಈ ರೀತಿಯ ಅನುಮಾನವನ್ನು ಹುಟ್ಟು ಹಾಕಿರುವುದು ಸಹಜ. ಪಕ್ಷವನ್ನು ಸಂಘಟನೆ ಮಾಡುವಲ್ಲಿ, ಇರುವಂತಹ ಸಾಮರ್ಥ್ಯ, ತನಗೆ ಕೊಟ್ಟಿರುವ ಖಾತೆಯನ್ನು ನಿರ್ವಹಣೆ ಮಾಡುವಲ್ಲಿ ತೋರಿಸಲು ಸಾಧ್ಯವಾಗ್ತಿದೆ. ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಹೋರಾಟ ರೂಪಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಆವೇಶದಲ್ಲಿ ರೈತರ ವಿರುದ್ಧವೇ ಮಾತನಾಡುವುದು. CWRC ಹಾಗು CWMA ನೀಡಿರುವ ಆದೇಶ ಸರಿಯಾಗಿದೆ ಎನ್ನುವುದು. ಇಲ್ಲದೇ ಇರುವ ಒಳಹರಿವು ಇದೆ ಎನ್ನುವುದು, ಮೇಕೆದಾಟು ಹೋರಾಟಕ್ಕೆ ಬರಲಿಲ್ಲ ಎನ್ನುವುದು, ರೈತರೇ ಹೋಗಿ ಕೋರ್ಟ್ಗೆ ಎನ್ನುವುದನ್ನು ನೋಡಿದಾಗ ಎಂಥವರಿಗೂ ಈ ರೀತಿಯ ಪ್ರಶ್ನೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಜಲಸಂಪನ್ಮೂಲ ಖಾತೆಗೆ ತಜ್ಣರ ಅವಶ್ಯಕತೆ ಜೊತೆ ತಿಳುವಳಿಕೆಯೂ ಬೇಕು..
ರಾಜ್ಯ ಸರ್ಕಾರದಲ್ಲಿ ಯಾವುದೇ ಖಾತೆ ನಿರ್ವಹಣೆ ಮಾಡಿದರೂ ಜಲಸಂಪನ್ಮೂಲ ಖಾತೆ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮಹತ್ವದ ಖಾತೆಗಳಲ್ಲಿ ಪ್ರಮುಖವಾಗಿರುವ ಜಲಸಂಪನ್ಮೂಲ ಖಾತೆ ನಿಭಾಯಿಸಲು ತಿಳುವಳಿಕೆ ಅಗತ್ಯ. ಕಾನೂನು ಬಲ್ಲವರು, ಹೆಚ್ಚಿನ ಓದು ಇರುವ ವ್ಯಕ್ತಿಗಳು ಬೇಕು. ಅಷ್ಟೇ ಅಲ್ಲದೆ ನೀರಿನ ಬಗ್ಗೆ ಸಾಕಷ್ಟು ಸಂಶೋಧನಾ ಲೇಖನಗಳು ಹಾಗು ಇತಿಹಾಸದಲ್ಲಿ ಏನೆಲ್ಲಾ ಘಟನಾವಳಿಗಳು ನಡೆದಿವೆ ಎನ್ನುವ ಅಂಕಿಸಂಖ್ಯೆಗಳು ತಿಳಿದಿರಬೇಕು. ಅಧಿಕಾರಿಗಳು ಹೇಳಿದ್ದನ್ನೇ ಹೇಳುವುದಕ್ಕೆ ಸಚಿವರ ಅಗತ್ಯವಿಲ್ಲ. ಅಂತಾರಾಜ್ಯದ ಜೊತೆಗೆ ವ್ಯವಹರಿಸುವಾಗ ಹೇಗೆ ನಡೆದುಕೊಳ್ಳಬೇಕು..? ಯಾವೆಲ್ಲಾ ವಿಚಾರವನ್ನು ಬಹಿರಂಗವಾಗಿ ಹೇಳಬೇಕು..? ನಮ್ಮ ಜನರನ್ನು ಹೇಗೆ ಸಮಾಧಾನ ಮಾಡಬೇಕು ಅನ್ನೋದನ್ನು ಬಲ್ಲವರಾಗಿರಬೇಕು. ಅದೂ ಅಲ್ಲದೆ ಲೋಕಸಭಾ ಚುನಾವಣೆ ಒತ್ತಡದಲ್ಲಿರುವ ಡಿ.ಕೆ ಶಿವಕುಮಾರ್ ಮೇಲೆ ಕರ್ನಾಟಕಕ್ಕೆ ನ್ಯಾಯ ಕೊಡಿಸಿ ಎಂದು ಕೇಳುವುದೇ ತಪ್ಪು ಎನಿಸುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಮುಗಿಯುವ ತನಕ ಆದರೂ ಜಲಸಂಪನ್ಮೂಲ ಖಾತೆಯನ್ನು ಎಂ.ಬಿ ಪಾಟೀಲ್ ಅಥವಾ ಬೇರೆ ಇನ್ಯಾರಾದರೂ ಸಮರ್ಥರಿಗೆ ನೀಡಿದರೆ ಉತ್ತಮ ಎನ್ನಬಹುದು.
-ಕೃಷ್ಣಮಣಿ






