ಕಳೆದ ಮೂರು ವಾರಗಳಿಂದ, ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣಕ್ಕೆ ಅವರಿಗೆ ತರಗತಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಹಿಜಾಬ್ ಸಂಸ್ಥೆಯ ವಸ್ತ್ರಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಕಾಲೇಜು ಹೇಳಿಕೊಂಡಿದ್ದು, ಹುಡುಗಿಯರು ತರಗತಿಗೆ ಪ್ರವೇಶ ಬಯಸಿದರೆ ಹಿಜಾಬ್ ಧರಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಈ ಕ್ರಮಕ್ಕೆ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಅವರು ಆರೋಪಿಸುತ್ತಾರೆ.
ಭಾರತದ ಸಂವಿಧಾನವು ಕೆಲವು ನಿರ್ಬಂಧಗಳಿಗೆ ಒಳಪಟ್ಟು ಒಬ್ಬ ವ್ಯಕ್ತಿಗೆ ತನ್ನ ಧರ್ಮವನ್ನು ಮೂಲಭೂತ ಹಕ್ಕಾಗಿ ಆಚರಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಹಿಂದೆ, ಹಿಜಾಬ್ ಧರಿಸುವ ಹಕ್ಕು ಸಂವಿಧಾನವು ಖಾತರಿಪಡಿಸಿದ ರಕ್ಷಣೆಯ ಅಡಿಯಲ್ಲಿ ಬರುತ್ತದೆ ಎಂದು ವಿವಿಧ ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ನೆನಪಿಸಬಹುದು..
ಇಂತಹ ವಿಷಯಗಳ ಬಗ್ಗೆ ನಿರ್ಧರಿಸುವಾಗ ನ್ಯಾಯಾಲಯಗಳು ಏನು ಹೇಳುತ್ತವೆ ಎಂಬುದನ್ನು ಗಮನಿಸೋಣ.
ಅಗತ್ಯ ಧಾರ್ಮಿಕ ಆಚರಣೆಗಳ ಪರೀಕ್ಷೆ
ಸಂವಿಧಾನದ ಪರಿಚ್ಛೇದ 25(1) “ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕನ್ನು” ಖಾತರಿಪಡಿಸುತ್ತದೆ. ಆದಾಗ್ಯೂ, ಎಲ್ಲಾ ಮೂಲಭೂತ ಹಕ್ಕುಗಳಂತೆ, ಇದು ಸಂಪೂರ್ಣವಲ್ಲ. ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಇತರ ನಿಬಂಧನೆಗಳ ಆಧಾರದ ಮೇಲೆ ಸರ್ಕಾರವು ಅದನ್ನು ನಿಯಂತ್ರಿಸಬಹುದು.

ಸಂವಿಧಾನವು “ಅಗತ್ಯ ಧಾರ್ಮಿಕ ಆಚರಣೆಗಳನ್ನು” ಮಾತ್ರ ರಕ್ಷಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹಲವು ವರ್ಷಗಳಿಂದ ಅಭಿಪ್ರಾಯಪಟ್ಟಿದೆ. ನ್ಯಾಯಾಲಯಗಳು, ಧಾರ್ಮಿಕ ಗ್ರಂಥಗಳು ಮತ್ತು ತಜ್ಞರನ್ನು ಸಮಾಲೋಚಿಸಿದ ನಂತರ, ಒಂದು ಆಚರಣೆಯು ಧರ್ಮಕ್ಕೆ ಅತ್ಯಗತ್ಯ ಅಥವಾ ಧರ್ಮದಿಂದ ಅವಿಭಾಜ್ಯವಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ ಮತ್ತು ಅದಕ್ಕೆ, ಸಾಂವಿಧಾನಿಕ ರಕ್ಷಣೆ ಒದಗಿಸುತ್ತದೆ.
ಹಿಜಾಬ್ ಇಸ್ಲಾಮಿನಲ್ಲಿ ಅತ್ಯಗತ್ಯವೇ?
ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬಗೆಗಿನ ಇದೇ ರೀತಿಯ ಪ್ರಕರಣಗಳು ಈಗಾಗಲೇ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಬಂದಿವೆ. ಇವೆರಡೂ ಅಖಿಲ ಭಾರತ ಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಸ್ತ್ರ ಸಂಹಿತೆಗೆ ಸಂಬಂಧಿಸಿವೆ.
ಪರೀಕ್ಷಾ ಅಭ್ಯರ್ಥಿಗಳು ಅಧ್ಯಯನ ಸಾಮಗ್ರಿಗಳನ್ನು ಮರೆಮಾಚಲು ಉದ್ದನೆಯ ತೋಳಿನ ಹಾಗೂ ತಲೆಯ ಸ್ಕಾರ್ಫ್ ಅನ್ನು ಬಳಸುತ್ತಾರೆ. ಇಂತಹ ವಂಚನೆಗಳನ್ನು ತಡೆಯಲು ನಿಗದಿತ ಉಡುಪು ಧರಿಸಿದರಷ್ಟೇ ಪರೀಕ್ಷೆಗೆ ಹಾಜರಾಗಬಹುದು. ಇದರರ್ಥ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಅಥವಾ ಉದ್ದನೆಯ ತೋಳಿನ ಉಡುಪುಗಳನ್ನು ಧರಿಸಬಾರದೆಂಬುದು.
ಇದನ್ನು ಪ್ರಶ್ನಿಸಿ, ವಿದ್ಯಾರ್ಥಿಯರು 2015 ಮತ್ತು 2016 ರಲ್ಲಿ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಎರಡೂ ಸಂದರ್ಭಗಳಲ್ಲಿ, ನ್ಯಾಯಾಲಯವು ವಿದ್ಯಾರ್ಥಿನಿಯರಿಗೆ ಹಿಜಾಬ್ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿತು.
2016 ರಲ್ಲಿ, ಕೇರಳ ಹೈಕೋರ್ಟ್ ಕುರಾನ್ ಮತ್ತು ಹದೀಸ್ (ಪ್ರವಾದಿ ಮಹಮ್ಮದ್ ಅವರ ಬೋಧನೆಗಳು) ಅನ್ನು ಪರೀಕ್ಷಿಸಿ ಹಿಜಾಬ್ ಮತ್ತು ಉದ್ದನೆಯ ತೋಳಿನ ಉಡುಪನ್ನು ಧರಿಸುವುದು ಮುಸ್ಲಿಂ ಮಹಿಳೆಯ ನಂಬಿಕೆಗೆ ಅತ್ಯಗತ್ಯವಾಗಿದೆಯೇ ಎಂದು ಪರಿಶೀಲಿಸಿತು. ಈ ಗ್ರಂಥಗಳ ವಿಶ್ಲೇಷಣೆಯು ತಲೆಯನ್ನು ಮುಚ್ಚುವುದು ಮತ್ತು ಉದ್ದನೆಯ ತೋಳಿನ ಉಡುಪನ್ನು ಧರಿಸುವುದು ಧಾರ್ಮಿಕ ಕರ್ತವ್ಯ ಎಂದು ತೋರಿಸಿದೆ ಎಂದು ನ್ಯಾಯಾಲಯ ಹೇಳಿದೆ. ಇಸ್ಲಾಮಿನಲ್ಲಿ ದೇಹವನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿರುವುದರಿಮಂದ ಇದು (ಹಿಜಾಬ್) “ಇಸ್ಲಾಮಿಕ್ ಧರ್ಮದ ಅಗತ್ಯ ಭಾಗ” ವಾಗಿರುತ್ತದೆ ಎಂದು ಕೋರ್ಟ್ ಹೇಳಿತ್ತು.
ಈ ರೀತಿಯ ವಸ್ತ್ರಧಾರಣೆಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಅಥವಾ ಸಂವಿಧಾನವು ಖಾತರಿಪಡಿಸುವ ಇತರ ಮೂಲಭೂತ ಹಕ್ಕುಗಳಿಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯವು ಉಲ್ಲೇಖಿಸಿದೆ.
ಈ ರೀತಿಯ ಬಟ್ಟೆಯ ಪರಿಣಾಮವಾಗಿ ವಂಚನೆ ನಡೆಯಬಹುದೆಂಬ ಆತಂಕ ಇದ್ದರೆ, ಮಹಿಳಾ ನಿರೀಕ್ಷಕರು ಅಭ್ಯರ್ಥಿಗಳನ್ನು ಪರೀಕ್ಷಿಸಬಹುದು ಎಂದು ನ್ಯಾಯಾಲಯವು ಹೇಳಿದೆ. ಇದಕ್ಕೆ ಅನುಕೂಲವಾಗುವಂತೆ ಹಿಜಾಬ್ ಧರಿಸಿರುವ ಪರೀಕ್ಷಾ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಆಗಮಿಸುವಂತೆ ನ್ಯಾಯಾಲಯ ತಿಳಿಸಿದೆ.
2015 ರಲ್ಲಿ, ಇದೇ ರೀತಿಯ ಪ್ರಕರಣವನ್ನು ಕೇರಳ ಹೈಕೋರ್ಟ್ ಕೈಗೆತ್ತಿಕೊಂಡಿತ್ತು. ಆ ವೇಳೆ ಕೂಡಾ ಹಿಜಾಬ್ ಧರಿಸಲು ಅವಕಾಶ ನೀಡುವ ತೀರ್ಮಾನಕ್ಕೆ ಕೋರ್ಟ್ ಬಂದಿತು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, “ನಿರ್ದಿಷ್ಟ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಒತ್ತಾಯಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗದು” ಎಂದು ಕೋರ್ಟ್ ಹೇಳಿತ್ತು.
ಸುಪ್ರೀಂ ಕೋರ್ಟ್ ಏನನ್ನುತ್ತದೆ?
AIPMT ಪರೀಕ್ಷೆಗೆ ಸಂಬಂಧಿಸಿದಂತೆ ಇಂತಹದ್ದೇ ಪ್ರಕರಣವೊಂದು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿತ್ತು. ಇದೊಂದು ಕ್ಷುಲ್ಲಕ ಸಂಗತಿಯಾಗಿರುವುದರಿಂದ ತಾನು ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಅದಾಗ್ಯೂ, ಶಿರವಸ್ತ್ರ ಧರಿಸುವುದು ತನ್ನ ಧಾರ್ಮಿಕ ನಂಬಿಕೆ ಎಂದು ಅರ್ಜಿದಾರರು ವಾದಿಸಿದಾಗ, “ಒಂದು ದಿನ ನೀವು ಶಿರವಸ್ತ್ರ ಧರಿಸದಿದ್ದರೆ, ನಿಮ್ಮ ನಂಬಿಕೆ ಇಲ್ಲವಾಗುವುದೋ?, ನಿಮ್ಮ ನಂಬಿಕೆಗೆ ಧಕ್ಕೆ ಬರುವುದಿಲ್ಲವೆಂದಾದರೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಿ” ಎಂದು ಸುಪ್ರೀಂ ಹೇಳಿತ್ತು.
ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡಿಲ್ಲ, ಇದು ಕೇವಲ ಮೌಖಿಕ ಹೇಳಿಕೆ ಅಷ್ಟೇ. ಪರೀಕ್ಷೆಗೆ ಹಾಜರಾತಿ ಕುರಿತು ಸುಪ್ರೀಂ ಹೇಳಿಕೆಯನ್ನೂ (ಉಡುಪಿ) ಪಿಯು ಕಾಲೇಜಿನ ಪ್ರಕರಣವನ್ನೂ ಪ್ರತ್ಯೇವಾಗಿ ನೋಡಬೇಕೆಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಇಲ್ಲದಿರುವುದರಿಂದ ಕೇರಳ ಹೈಕೋರ್ಟ್ ಆದೇಶವೇ ಕಾನೂನು. ಕೇರಳ ಹೈಕೋರ್ಟ್ ತುಂಬಾ ಆಳವಾಗಿ ಪರಿಶೀಲಿಸಿ, ತೀರ್ಪು ನೀಡಿದೆ, ಇದು ಬಹುಶಃ ಇತರ ಹೈಕೋರ್ಟ್ಗಳಿಗೆ ಒಪ್ಪಿಗೆಯಾಗುವ ಸಾಧ್ಯತೆಯಿದೆ ಎಂದು ಸಂಜಯ್ ಹೆಗ್ಡೆ ಹೇಳಿದ್ದಾರೆ.
ಕೋಲ್ಕತ್ತಾದ ಪಶ್ಚಿಮ ಬಂಗಾಳದ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ವಿಜಯ್ ಕಿಶೋರ್ ತಿವಾರಿ, ಈ ಕುರಿತು ಸುಪ್ರೀಂ ಕೋರ್ಟ್ನ ಪ್ರತಿಕ್ರಿಯೆಗಳು ಕಾನೂನಿನಲ್ಲಿ ಕಡಿಮೆ ತೂಕ ಹೊಂದಿವೆ ಎಂದು scroll.in ಗೆ ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ಗೆ ಈ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಹಕ್ಕಿಲ್ಲ, ಅದು ಅರ್ಹತೆಯ ಮೇಲೆ ವಿಷಯವನ್ನು ಕೇಳುತ್ತಿಲ್ಲ. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯ ಉಡುಪನ್ನು ಅದು ತಮ್ಮ ಧಾರ್ಮಿಕ ವ್ಯಕ್ತಿತ್ವದ ಭಾಗವಾಗಿದೆ ಎಂದು ಭಾವಿಸಿದರೆ ಅದನ್ನು ಧರಿಸಲು ಅನುಮತಿಸಬೇಕು ಎಂಬುದು ಪ್ರಜಾಪ್ರಭುತ್ವದ ಸಾಮಾಜಿಕ ಒಪ್ಪಂದದ ಒಂದು ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.
ಅತ್ಯಗತ್ಯವಾದ ಧಾರ್ಮಿಕ ಆಚರಣೆ ಯಾವುದು ಎಂಬುದರ ಬಗ್ಗೆ ನಿರ್ಣಯಿಸುವು ಕೂಡಾ ಸಂದರ್ಭೋಚಿತವಾಗಿದೆ. ಅದಕ್ಕೆ ಯಾವುದೇ ಸ್ಪಷ್ಟ ಮಾರ್ಗಸೂಚಿಗಳಿಲ್ಲದ ಕಾರಣ ಸಂಧರ್ಭಗಳಿಗೆ ತಕ್ಕಂತೆ ಬದಲಾಗುತ್ತದೆ.
2016 ರಲ್ಲಿ, ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಗಡ್ಡವನ್ನು ಹೊಂದಲು ಬಯಸಿದ ಮುಸ್ಲಿಂ ಸೈನಿಕನ ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸಿತು. ಯಾವುದೇ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅವರ ನಂಬುವ ಧರ್ಮವು ಕೂದಲನ್ನು ಕತ್ತರಿಸುವುದನ್ನು ಅಥವಾ ಕ್ಷೌರ ಮಾಡುವುದನ್ನು ನಿಷೇಧಿಸಿರುವುದನ್ನು ಹೊರತುಪಡಿಸಿ ಗಡ್ಡ ಅಥವಾ ಮೀಸೆಯನ್ನು ಹೊಂದಲು ಅನುಮತಿಸಲಾಗುವುದಿಲ್ಲ ಎಂದು ಸೇವಾ ನಿಯಮಗಳು ಹೇಳುತ್ತವೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರನ್ನು ಇಸ್ಲಾಂನಲ್ಲಿ ಕೂದಲು ಕತ್ತರಿಸುವುದು ಅಥವಾ ಮುಖದ ಕೂದಲು ಕ್ಷೌರ ಮಾಡುವುದನ್ನು ನಿಷೇಧಿಸಲಾಗಿದೆಯೇ ಎಂದು ಕೇಳಿತು. ಗಡ್ಡದ ಕುರಿತು ವಿಭಿನ್ನ ವ್ಯಾಖ್ಯಾನಗಳಿವೆ ಎಂದು ಖುರ್ಷಿದ್ ಹೇಳಿದರು.
ತನ್ನ ಧರ್ಮವು ಕ್ಷೌರ ಮಾಡುವುದನ್ನು ನಿಷೇಧಿಸಿದೆ ಎಂದು ತೋರಿಸಲು ಯಾವುದೇ ಪುರಾವೆಯನ್ನು ಸುಪ್ರೀಂ ಮುಂದೆ ಇರಿಸಲು ಅರ್ಜಿದಾರರಿಗೆ ಸಾಧ್ಯವಾಗದ ಕಾರಣ ಅರ್ಜಿದಾರರಿಗೆ ಸೇನೆಯಲ್ಲಿ ತನ್ನ ಗಡ್ಡವನ್ನು ಇಟ್ಟುಕೊಳ್ಳಲು ಅನುಮತಿಸಲಿಲ್ಲ.
ಆದಾಗ್ಯೂ, ಸಂವಿಧಾನವು ಆರ್ಟಿಕಲ್ 33 ರ ಅಡಿಯಲ್ಲಿ ಒಂದು ನಿರ್ದಿಷ್ಟ ವಿನಾಯಿತಿಯನ್ನು ರೂಪಿಸುತ್ತದೆ, ಇದು ಸಶಸ್ತ್ರ ಪಡೆಗಳ ಸದಸ್ಯರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವುದನ್ನು ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಂಡರೆ ಸಂಸತ್ತು ಮೂಲಭೂತ ಹಕ್ಕುಗಳ ಅನ್ವಯವನ್ನು ಮಾರ್ಪಡಿಸಬಹುದು ಎಂದು ಹೇಳುತ್ತದೆ.
ಶಾಲೆಗಳಲ್ಲಿ ಧಾರ್ಮಿಕತೆ
ಶಾಲೆಯಲ್ಲಿ ಧಾರ್ಮಿಕ ನಂಬಿಕೆಗಳ ಆಚರಣೆ ಕುರಿತಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಪ್ರಕರಣವೊಂದನ್ನು ಕೈಗೆತ್ತಿಕೊಂಡಿತ್ತು. 1985 ರಲ್ಲಿ ಕ್ರಿಶ್ಚಿಯನ್ ಧರ್ಮದ ಒಂದು ಪಂಗಡವಾದ ಯಹೋವಾ ಸಮುದಾಯಕ್ಕೆ ಸೇರಿದ ಮೂವರು ವಿದ್ಯಾರ್ಥಿಗಳು, ರಾಷ್ಟ್ರ ಗೀತೆಯನ್ನು ಹಾಡಲು ನಿರಾಕರಿಸಿದ್ದರಿಂದ ಶಾಲೆಯಿಂದ ಹೊರಹಾಕಲಾಗಿತ್ತು. ತಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ದೇವರನ್ನು ಆರಾಧಿಸುವ ಹೊರತು ಬೇರೆ ಯಾವುದನ್ನೂ ಆರಾಧಿಸುವುದಕ್ಕೆ ನಮ್ಮ ಧರ್ಮ ಒಪ್ಪುವುದಿಲ್ಲ. ಅದಾಗ್ಯೂ, ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಲುವಾಗಿ ಎದ್ದು ನಿಲ್ಲುವುದಾಗಿ ವಿದ್ಯಾರ್ಥಿಗಳು ಹೇಳಿದ್ದರು.
ಶಾಲೆಯಿಂದ ವಿದ್ಯಾರ್ಥಿಗಳನ್ನು ಉಚ್ಛಾಟನೆಗೊಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮವನ್ನು ಅಭ್ಯಾಸ ಮಾಡುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದಲ್ಲದೆ, ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವ ಯಾವುದೇ ಕಾನೂನು ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಎಲ್ಲಾ ಭಾರತೀಯ ನಾಗರಿಕರು ರಾಷ್ಟ್ರಗೀತೆಯನ್ನು ಗೌರವಿಸಬೇಕು ಎಂದು ಸಂವಿಧಾನವು ಉಲ್ಲೇಖಿಸುತ್ತದೆ, ವಿದ್ಯಾರ್ಥಿಗಳು ಅದಕ್ಕೆ ಎದ್ದುನಿಂತು ಗೌರವಿಸಿ ಸಂವಿಧಾನವನ್ನು ಪಾಲಿಸಿದರು.
ಫ್ರೆಂಚ್ ಮಾದರಿಯ ಸೆಕ್ಯುಲರಿಸಂ ಮತ್ತು ಭಾರತದ ಬಹುತ್ವದ ಸೆಕ್ಯುಲರಿಸಂ
ಸಾರ್ವಜನಿಕವಾಗಿ ಹಿಜಾಬ್ ಧರಿಸುವ ವಿಷಯವು ಫ್ರಾನ್ಸ್ನಲ್ಲಿ ವಿವಾದಾಸ್ಪದವಾಗಿತ್ತು. ಫ್ರಾನ್ಸ್ ಸಾರ್ವಜನಿಕ ಜೀವನದಿಂದ ಧರ್ಮವನ್ನು ಅಳಿಸಲು ಪ್ರಯತ್ನಿಸುವ ಹಾಗೂ ಜಾತ್ಯತೀತತೆಯನ್ನು ಕಟ್ಟುನಿಟ್ಟಾದ ಮಾದರಿಯನ್ನು ಅನುಸರಿಸಲು ಹಿಜಾಬ್ ಸೇರಿದಂತೆ ಎಲ್ಲಾ ಪ್ರಮುಖ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸಿತು. 2004 ರಲ್ಲಿ, ಹಿಜಾಬ್ ಸೇರಿದಂತೆ ಶಾಲೆಗಳಿಂದ ಪ್ರಮುಖ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸಿತು. 2011 ರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪೂರ್ಣ ಮುಖದ ಪರದೆ ಹಾಕುವುದನ್ನು ನಿಷೇಧಿಸಿತು, ಇದರಿಂದಾಗಿ ಮುಸ್ಲಿಂ ಮಹಿಳೆಯರು ಬುರ್ಖಾವನ್ನು ಧರಿಸುವಂತಿರಲಿಲ್ಲ.
ಆದರೆ, ಫ್ರಾನ್ಸ್ನ ಅತಿರೇಕದ ಸೆಕ್ಯಲರಿಸಂಗಿತ ಭಾರತೀಯ ಸೆಕ್ಯುಲರಿಸಂ ಮಾದರಿಯು ವಿಭಿನ್ನವಾಗಿದೆ: ಸಾರ್ವಜನಿಕ ಸ್ಥಳಗಳಿಂದ ಧರ್ಮವನ್ನು ಅಳಿಸಿಹಾಕಲು ಪ್ರಯತ್ನಿಸುವ ಬದಲು ಅದು ಎಲ್ಲಾ ನಂಬಿಕೆಗಳನ್ನು ಸಮಾನವಾಗಿ ಗೌರವಿಸಲು ಪ್ರಯತ್ನಿಸುತ್ತದೆ.
ಹೀಗಾಗಿ, ಹಿಜಾಬ್ ಅನ್ನು ನಿಷೇಧಿಸುವ ಪಿಯು ಕಾಲೇಜಿನ ಕ್ರಮವು ಭಾರತೀಯ ಕಾನೂನಿನ ಅಡಿಯಲ್ಲಿ ದುರ್ಬಲವಾಗುತ್ತದೆ.
“ಸಿಖ್ ಪಟ್ಕಾ, ಮಂಗಳಸೂತ್ರ ಅಥವಾ ಪವಿತ್ರ ಶಿಲುಬೆಯಂತಹ ಇತರ ಧಾರ್ಮಿಕ ಚಿಹ್ನೆಗಳೊಂದಿಗೆ ಇದು ನಡೆಯಲಾರದು. ಸಾರ್ವಜನಿಕ ಶಾಲೆಯು ಇದನ್ನು ಹೇಗೆ ಮಾಡಿತು ಎಂದು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇದು ಫ್ರಾನ್ಸ್ ಅಲ್ಲ ಭಾರತ” ಎಂದು ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ನ ಪ್ರೊಫೆಸರ್ ಅನುಜ್ ಭುವಾನಿಯಾ Scroll.in ಗೆ ಹೇಳಿದ್ದಾರೆ.
ಹಿಂದೂ ಧರ್ಮ ಸೇರಿದಂತೆ ಇತರ ಧರ್ಮದವರಿಗೆ ಬಿಂದಿಗೆ ಮತ್ತು ಬಳೆಗಳನ್ನು ಧರಿಸಲು ಅವಕಾಶವಿದೆ ಎಂದು ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹೇಳುತ್ತಾರೆ. ಪಿಯು ಕಾಲೇಜಿನ ಆಡಳಿತ ಮಂಡಳಿಯ ನಿರ್ಧಾರವು ಮುಸ್ಲಿಮರನ್ನೇ ಗುರಿಯಾಗಿಸಿದೆ ಎಂದು ಅವರು ಆರೋಪಿಸುತ್ತಾರೆ.






