ಸಂಪೂರ್ಣ ಭಾರತ ಮುಸ್ಲೀಮರ ಪವಿತ್ರ ಹಬ್ಬ ರಂಜಾನ್ ಆಚರಣೆಯ ಖುಷಿಯಲ್ಲಿ ಇರುವಾಗ, ಮಹಾರಾಷ್ಟ್ರದಲ್ಲಿ ಮತ್ತೆ ಬಾಬ್ರಿ ಮಸೀದಿ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮತ್ತು ಬಿಜೆಪಿ ಜತೆಯಾಗಿ, ಬಾಬ್ರಿ ವಿವಾದದಲ್ಲಿ ಶಿವಸೇನೆಯನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸಿವೆ. ಬಾಬ್ರಿ ಮಸೀದಿ ಧ್ವಂಸದ ಕೀರ್ತಿಯನ್ನು (?) ಶಿವಸೇನೆ ಕಸಿಯಲು ಯತ್ನಿಸುತ್ತಿದೆ ಎಂದು ಮಹಾರಾಷ್ಟ್ರದ ವಿಪಕ್ಷಗಳು ಆರೋಪಿಸಿವೆ.
ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಈ ಕುರಿತಾಗಿ ಬಹಿರಂಗ ಹೇಳಿಕೆ ನೀಡಿರುವ ದೇವೇಂದ್ರ ಫಡ್ನವಿಸ್, ಮಸೀದಿ ಕೆಡವುವ ವೇಳೆ ನಾನೂ ಅಲ್ಲೇ ಹಾಜರಿದ್ದೆ. ಒಬ್ಬನೇ ಒಬ್ಬ ಶಿವಸೇನೆಯ ನಾಯಕ ಅಲ್ಲಿ ಕಾಣಿಸಿಲ್ಲ, ಎಂದು ಹೇಳಿದ್ದಾರೆ.
ಇದೇ ರೀತಿ ಎಂಎನ್ಎಸ್ ನಾಯಕ ರಾಜು ಪಾಟಿಲ್ ಕೂಡಾ ವಾಗ್ದಾಳಿ ನಡೆಸಿ, ಬಜರಂಗದಳದ ಕಾರ್ಯಕರ್ತರು ಹೇಳುವ ಪ್ರಕಾರ ಶಿವಸೇನೆ ನಾಯಕರು ಘಟನಾಸ್ಥಳದಲ್ಲಿ ಹಾಜರಿರಲೇ ಇಲ್ಲ ಎಂದು ಹೇಳಿದ್ದಾರೆ.
ಆದರೆ, 1992ರಿಂದಲೂ ಬಾಬ್ರಿ ಮಸೀದಿ ಕೆಡವುವಲ್ಲಿ ನಮ್ಮ ಪಾತ್ರ ಮಹತ್ವದ್ದು ಎಂದು ಶಿವಸೇನೆಯ ನಾಯಕರು ಹೇಳುತ್ತಲೇ ಬಂದಿದ್ದಾರೆ. 2020ರ ಆಗಸ್ಟ್ ತಿಂಗಳಲ್ಲಿ, ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಶಿವಸೇನಾ ನಾಯಕರಿಗೆ ಆಹ್ವಾನ ನೀಡದ ಕಾರಣ, “ಧನ್ಯವಾದ್ ಬಾಳಾಸಾಹೇಬ್” ಎಂಬ ಅಭಿಯಾನವನ್ನು ನಡೆಸಲಾಗಿತ್ತು.
ಶಿವಸೇನೆಯ ಮುಖಪತ್ರಿಕೆ ‘ಸಾಮ್ನಾ’ದ ಸಂಪಾದಕೀಯದಲ್ಲಿಯೂ ಬಾಳಾ ಸಾಹೇಬರ ಕುರಿತು ಬರೆಯಲಾಗಿತ್ತು. “ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಶಿವಸೈನಿಕರ ಕುರಿತು ನನಗೆ ಹೆಮ್ಮೆಯಿದೆ” ಎಂದು ಬಾಳ್ ಠಾಕ್ರೆ ಹೇಳಿದ್ದನ್ನು ಉಲ್ಲೇಖಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ಈ ವಿವಾದವನ್ನು ಮತ್ತೆ ಜೀವಂತಗೊಳಿಸಿದವರು ಸಿಎಂ ಉದ್ಧವ್ ಠಾಕ್ರೆ. ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಮಾತನಾಡಿದ ಅವರು, ಬಾಬ್ರಿ ಮಸೀದಿಯನ್ನು ಶಿವಸೈನಿಕರು ಒಡೆದು ಹಾಕಿದ್ದರು. ಆದರೆ, ಆ ತೂತಿನಲ್ಲಿ ಬಿಜೆಪಿ ಮೆಲ್ಲನೆ ತೂರಿ ಬಂದಿದೆ ಎಂದು ಲೇವಡಿ ಮಾಡಿದ್ದರು. ಪ್ರಸ್ತುತ ಹಿಂದುತ್ವ ರಾಜಕಾರಣ ಉಚ್ಚ್ರಾಯ ಸ್ಥಿತಿಯಲ್ಲಿರುವಾಗ ಇಂತಹ ಒಂದು ಲೇವಡಿಯನ್ನು ಸಾಮಾನ್ಯವಾಗಿ ಸ್ವೀಕರಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ..
ಹಿಂದುತ್ವದ ಪ್ರತಿಪಾದಕರಂತೆ ಪೋಸು ಕೊಡುತ್ತಿರುವ ಬಿಜೆಪಿಗೆ ಉದ್ಧವ್ ಠಾಕ್ರೆ ಹೇಳಿಕೆಯನ್ನು ಸಹಿಸಲು ಅಸಾಧ್ಯವಾಯಿತು. ಈ ಕಾರಣಕ್ಕಾಗಿ ಮತ್ತೆ ಬಾಬ್ರಿ ವಿವಾದವನ್ನು ಮುನ್ನೆಲೆಗೆ ತಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಸಂಪೂರ್ಣ (ಅಪ)ಕೀರ್ತಿಯನ್ನು ತನ್ನದೆಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮಹಾರಾಷ್ಟ್ರದಲ್ಲಿ ನಡೆಸಲಾಗುತ್ತಿದೆ.
ಶಿವಸೇನೆಯ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಬಯಪಡುವ ಶಿವಸೇನೆ ಬಾಬ್ರಿ ಮಸೀದಿಯನ್ನು ಕೆಡವಿದ್ದಕ್ಕೆ ಬೆನ್ನು ತಟ್ಟಿಕೊಳ್ಳುತ್ತಿದೆ.
“ಬಾಬ್ರಿ ಒಡೆಯುವಾಗ ನಾನು ಅಲ್ಲಿಯೇ ಇದ್ದೆ. ಅದಕ್ಕೂ ಮುಂಚೆ ರಾಮಮಂದಿರಕ್ಕಾಗಿ ಕರಸೇವೆ ಮಾಡುವ ವೇಳೆ 18 ದಿನ ಜೈಲುವಾಸ ಕೂಡಾ ಅನುಭವಿಸಿದ್ದೆ. ಬೇರೆ ಯಾವ ಮಹಾರಾಷ್ಟ್ರ ಮೂಲದ ನಾಯಕರು ಅಲ್ಲಿದ್ದರು? ಶಿವಸೇನೆಯ ಎಬ್ಬನೇ ಒಬ್ಬ ಮುಖಂಡ ಅಲ್ಲಿ ಇರಲಿಲ್ಲ. ಬಾಬ್ರಿ ಮಸೀದಿ ಪ್ರಕರಣದಲ್ಲಿ 32 ಜನ ಆರೋಪಿಗಳಿದ್ದರು. ಅವರಲ್ಲಿ ಒಬ್ಬನೇ ಒಬ್ಬ ನಾಯಕ ಶಿವಸೇನೆಯವನಾಗಿರಲಿಲ್ಲ,” ಎಂದು ಹೇಳಿದ್ದಾರೆ.
ಬಿಜೆಪಿಯ ಒಂದೇ ಒಂದು ತಪ್ಪು ಏನೆಂದರೆ, ಮಸೀದಿ ಕೆಡವಿದ್ದನ್ನು ಬಿಜೆಪಿ ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿಲ್ಲ. ಮಸೀದಿ ಕೆಡವಿದ ಬಳಿಕ, ಬಿಜೆಪಿ ಮತ್ತು ಇತರ ಹಿಂದೂಪರ ಸಂಘಟನೆಗಳು ಈ ಘಟನೆಯನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು ಎಂದು ನಿರ್ಧಾರಕ್ಕೆ ಬಂದಿದ್ದವು, ಎಂದಿದ್ದಾರೆ.
“ಮಸೀದಿಯನ್ನು ಕೆಡವಿದ ಎಲ್ಲರೂ ರಾಮ ಸೇವಕರು ಮತ್ತು ಕರ ಸೇವಕರಾಗಿದ್ದರು. ಈಗ ನೀವು ರಾಮ ಮಂದಿರವನ್ನು ವಿರೋಧಿಸಿದವರ ಮತ್ತು ರಾಮನ ಅಸ್ಥಿತ್ವವನ್ನೇ ಅಲ್ಲಗೆಳೆದವರ ಪಕ್ಕದಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ದೀರಾ,” ಎಂದು ಶಿವಸೇನೆಗೆ ಮಾತಿನ ಬಾಣಗಳಿಂದ ತಿವಿದಿದ್ದಾರೆ.
ಬಾಬ್ರಿ ಮಸೀದಿ ಕೆಡವುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂಬುದನ್ನು ಸ್ಪಷ್ಟೀಕರಿಸಲು ಹಲವು ದಾಖಲೆಗಳಿವೆ, ಎಂದು ಶಿವಸೇನೆ ಶಾಸಕ ಮನಿಷಾ ಕಾಯಂದೆ ಹೇಳಿದ್ದಾರೆ. ಹಲವರನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ಬಾಬ್ರಿ ಮಸೀದಿ ಒಡೆಯುವ ಚಿತ್ರಗಳು ಪತ್ರಿಕೆಗಳಲ್ಲಿ ಮುದ್ರಣಗೊಂಡಾಗ ಅದರಲ್ಲಿ ಶಿವಸೈನಿಕರಿದ್ದರು, ಎಂದು ಹೇಳಿದ್ದಾರೆ.
“ಈ ಹಿಂದೆ ಬಾಬ್ರಿ ಘಟನೆಯ ತನಿಖೆ ನಡೆಸಲು ಆಯೋಗ ರಚಿಸಿದಾಗ ಇದೇ ಬಿಜೆಪಿ ನಾಯಕರು, ಆ ಘಟನೆಗೂ ತಮಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡಿದ್ದರು. ಈಗ ಏಕೆ ಬಾಬ್ರಿ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಇನ್ನು, ಎಂಎನ್ಎಸ್ ನಾಯಕರಿಗೆ ತಿರುಗೇಟು ನೀಡಿರುವ ಮನಿಷಾ, ಎಂಎನ್ಎಸ್ ಪಕ್ಷ ಅಸ್ಥಿತ್ವಕ್ಕೆ ಬಂದಿದ್ದೇ 2006ರಲ್ಲಿ. ಇದರ ಹಿಂದೆ ಬಹುತೇಕ ಎಂಎನ್ಎಸ್ ಕಾರ್ಯಕರ್ತರು ಶಿವಸೇನೆಯ ಕಾರ್ಯಕರ್ತರಾಗಿದ್ದರು, ಎಂದಿದ್ದಾರೆ.
ಒಟ್ಟಿನಲ್ಲಿ, ಸುಪ್ರೀಂ ಕೊರ್ಟ್ ತೀರ್ಪಿನ ಬಳಿಕ ಬಾಬ್ರಿ ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲಿ, ಈಗ ಮಹಾರಾಷ್ಟ್ರದಲ್ಲಿ ಎದ್ದಿರುವ ವಿವಾದ ಮತ್ತೆ ಬಾಬ್ರಿ ನೋವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ.