IAS-IPS ಎರಡು ಸರಿಸಮಾನವಾದ ಹುದ್ದೆಗಳೇ ಆದರೂ IAS ಗೆ ಕಿಂಚಿತ್ತು ಮಾನ್ಯತೆ ಹೆಚ್ಚು. ಆಡಳಿತಾತ್ಮಕವಾಗಿ IAS ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು IPS ಅಧಿಕಾರಿಗಳು ಪಾಲನೆ ಮಾಡುವುದು ಕರ್ತವ್ಯ ಆಗಿರುತ್ತದೆ. ಆದರೆ ಇದೀಗ ರಾಜ್ಯದ ಆಡಳಿತ ವಲಯದಲ್ಲಿ ನಡೆಯುತ್ತಿರುವ IAS ಹಾಗು IPS ನಡುವೆ ಹಾದಿ ಬೀದಿ ರಂಪಾಟವನ್ನು ನೋಡಿದಾಗ IAS ಅಧಿಕಾರಿ ರೋಹಿಣಿ ಸಿಂಧುರಿಗಿಂತಲೂ IPS ಅಧಿಕಾರಿ ಡಿ ರೂಪಾ ಒಂದು ಕೈ ಮೇಲೆಯೇ ಇದ್ದಾರೆ. ಡಿ ರೂಪಾ ಮಾಡಿರುವ ಆರೋಪಗಳು ಎಲ್ಲವೂ ಸರಿ ಎನ್ನಿಸಿದರೂ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಹಾಗು ನಾಟ್ ಸೋ ಡೀಸೆಂಟ್ ಫೋಟೋಗಳನ್ನು ಮೂವರು ಐಎಎಸ್ ಪುರುಷ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎಂದಿದ್ದಾರೆ. ಆದರೆ ಅದು ಡಿ ರೂಪಾ ಅವರಿಗೆ ಸಂಬಂಧಿಸಿದ ವಿಒಚಾರ ಅಲ್ಲವೇ ಅಲ್ಲ. ಹಾಗಿದ್ದರೂ ಈ ವಿಚಾರದಲ್ಲಿ ಮೂಗು ತೂರಿಸಿದ್ದು ಯಾಕೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಡಿ ರೂಪಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ಅಕ್ರಮಗಳ ಬಗ್ಗೆ ತನಿಖೆ ಮಾಡುವಂತೆ ಕೇಳಿದ್ದಾರೆ. ಆದರೆ ವೈಯಕ್ತಿಕ ಫೋಟೋಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ರೂಪಾ ಹಿಂದೆ ಯಾರೋ ಸೂತ್ರಧಾರರು ನಿಂತು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎನಿಸುತ್ತದೆ.
IPS ಡಿ ರೂಪಾ ಮೇಲೆ ಅನುಮಾನಕ್ಕೆ ಇದೂ ಕಾರಣ..!
ನಿನ್ನೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುವುದಕ್ಕೆ ವಿಧಾನಸೌಧಕ್ಕೆ ಆಗಮಿಸಿದ್ದರು. ಆ ವೇಳೆ ಒಂದೆರಡು ಪೊಲೀಸ್ ಅಧಿಕಾರಿಗಳು ಸೆಲ್ಯೂಟ್ ಹೊಡೆದಿದ್ದು ಬಿಟ್ಟರೆ ಬೇರೆ ಯಾವುದೇ ಗನ್ಮ್ಯಾನ್ ಇರಲಿಲ್ಲ. ಸುತ್ತಲೂ ನಾಲ್ಕಾರು ಪೊಲೀಸ್ ಅಧಿಕಾರಿಗಳೂ ಇರಲಿಲ್ಲ. ಒಬ್ಬರೆ ಬಂದರು ಒಬ್ಬರೇ ಹೋದರು. ಮಾಧ್ಯಮಗಳ ಬಳಿ ಮಾತನಾಡುವಾಗಲು ರೋಹಿಣಿ ಸಿಂಧೂರಿ ನಾವು ಮಾಧ್ಯಮಗಳ ಜೊತೆಗೆ ಮಾತನಾಡಬಾರದು ಅನ್ನೋದು ನಿಯಮವಿದೆ ಎಂದು ಸ್ಪಷ್ಟಪಡಿಸಿದ್ರು. ಆದರೆ ಅದೇ ಡಿ ರೂಪಾ ದೂರಿಗೆ ಸ್ಪಷ್ಟನೆ ಕೊಡುವುದಕ್ಕೆ ಬಂದ ವೇಳೆ ವಿಧಾನಸೌಧದ ಮುಖ್ಯ ದ್ವಾರದಲ್ಲೇ ರೂಪಾ ಅವರನ್ನು ಇಡೀ ಪೊಲೀಸ್ ಅಧಿಕಾರಿಗಳು ಐಪಿಎಸ್ ಅಧಿಕಾರಿಗಳು ಸುತ್ತುವರಿದರು. ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಹೋಗುವ ತನಕ ಪೊಲೀಸ್ ಟೀಂ ಸುತ್ತುವರಿದಿತ್ತು. ಆ ಬಳಿಕ ವಿಧಾನಸೌಧದಿಂದ ಹೊರಕ್ಕೆ ಹೋಗುವಾಗಲೂ ಖಾಕಿ ಕೋಟೆಯೇ ನಿರ್ಮಾಣ ಆಗಿತ್ತು. ಇದರ ಜೊತೆಗೆ ಬಹಿರಂಗವಾಗಿಯೇ ಡಿ ರೂಪಾ ಅವರಿಗೆ ರಾಜಕೀಯ ಬೆಂಬಲ ಸಿಕ್ಕಿದೆ.
ಡಿ ರೂಪಾ ಪ್ರಶ್ನೆಗಳನ್ನು ಬೆಂಬಲಿಸಿದ ಬಿಜೆಪಿ ಸಂಸದ..!

ಮೈಸೂರು ಹಾಗು ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಡಿ ರೂಪಾ ಅವರು ಎತ್ತಿರುವ ಪ್ರಶ್ನೆಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಶಾಸಕ ಸಾ ರಾ ಮಹೇಶ್ ಎತ್ತಿದ್ದ ಪ್ರಶ್ನೆಗಳು ರಾಜಿ ಸಂಧಾನದ ಮೂಲಕ ಬಗೆಹರಿದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗ ಆದ ಬಳಿಕ ಡಿ ರೂಪಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮೈಸೂರು ಸಂಸದ ಪ್ರತಾಪ್ ಸಿಂಹ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ. ಡಿ ರೂಪಾ ಅವರು ದಕ್ಷತೆಯಿಂದ ಪ್ರಶ್ನೆ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಅಂದರೆ ಡಿ ರೂಪಾ ಅವರಿಗೆ ಸಂಸದ ಬೆಂಬಲ ಇದೆ ಎನ್ನುವುದು ಖಚಿತ ಆಯ್ತು. ಇಷ್ಟು ಮಾತ್ರವಲ್ಲದೆ ಇನ್ನೂ ದೊಡ್ಡ ಮಟ್ಟದಲ್ಲೇ ರಾಜಕೀಯ ಈ ವಿಚಾರದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗಾಗಲೇ ಮೈಸೂರು ಜಿಲ್ಲಾಧಿಕಾರಿ ಸ್ಥಾನವನ್ನು ತೊರೆದು ವರ್ಷಗಳೇ ಉರುಳಿ ಹೋಗಿರುವಾಗ ಮತ್ತೆ ರೋಹಿಣಿ ಸಿಂಧೂರಿ ಮೇಲೆ ಈ ರೀತಿಯ ಆಕ್ರಮಣ ಯಾಕೆ ಎನ್ನುವ ಪ್ರಶ್ನೆ ರೋಹಿಣಿ ಅಭಿಮಾನಿಗಳನ್ನು ಕಾಡುತ್ತಿದೆ.
IAS & IPS ವಿರುದ್ಧ ಯಾವುದೇ ಕೇಸ್ ಆಗಲ್ಲ..!
ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಅನ್ನೋದು ಸರಿಯಷ್ಟೆ. ಆದರೆ ಯಾವುದೇ IAS ಹಾಗು IPS ಅಧಿಕಾರಿಗಳ ವಿರುದ್ಧ ದೂರು ದಾಖಲಾಗುತ್ತದೆ. ಆದರೆ ಅಂತಿಮವಾಗಿ ಯಾವುದೇ ತನಿಖೆ ನಡೆದರೂ IAS ಹಾಗು IPS ಅಧಿಕಾರಿಗಳ ಕಣ್ಗಾವಲಿನಲ್ಲೇ ನಡೆಯುತ್ತದೆ. ಆ ಸಮಯದಲ್ಲಿ IAS ಹಾಗು IPS ಅಧಿಕಾರಿಗಳ ಲಾಬಿ ಕೆಲಸ ಮಾಡುತ್ತದೆ. ಒಂದೇ ರಾಜ್ಯದಲ್ಲಿ ಕೆಲಸ ಮಾಡುವ IAS ಹಾಗು IPS ಅಧಿಕಾರಿಗಳು ಒಬ್ಬರು ಇನ್ನೊಬ್ಬರಿಗೆ ಪರಿಚಯ ಆಗಿರುವುದು ಸಹಜ. ಹೀಗಿರುವಾಗ ತನಿಖಾ ಹಂತದಲ್ಲೇ ವಿಚಾರಣೆ ದಿಕ್ಕು ತಪ್ಪುತ್ತದೆ. ಇನ್ನು ಕೋರ್ಟ್’ನಲ್ಲಿ ಕೇಸ್ ನಿಲ್ಲುವುದಿಲ್ಲ. ಅದರ ಜೊತೆಗೆ ಕೆಲವೊಮ್ಮೆ ರಾಜಿ ಪಂಚಾಯ್ತಿಯಲ್ಲಿ ಕೇಸ್ ಖಲ್ಲಾಸ್ ಆಗುತ್ತದೆ. ಈ ಕೇಸ್’ನಲ್ಲೂ ರೂಪಾ ಯಾವುದೋ ಅಜೆಂಡ ಹಿಡಿದುಕೊಂಡು ರೋಹಿಣಿ ಸಿಂಧೂರಿ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಬಾಗಲಗುಂಟೆ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಒಂದು ವೇಳೆ FIR ಮಾಡದೆ ಹೋದರೆ ಕೋರ್ಟ್ ಮೆಟ್ಟಿಲೇರಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅಂತಿಮವಾಗಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ. ಕೊನೆಗೆ ಕೇಸ್ ಏನಾಯ್ತು ಎನ್ನುವುದನ್ನು ಜನರೇ ಹುಡುಕಿದರೂ ಸಿಗುವುದಿಲ್ಲ. ಆ ರೀತಿ ಮಂಗಮಾಯ ಆಗುತ್ತದೆ. ಅದೇ ಕಾರಣಕ್ಕೆ ಇದು ಕೇವಲ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿರುವ ಸಮರ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ಸತ್ಯ.