ಬಳ್ಳಾರಿ ನಗರದಲ್ಲಿ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಜೋತು ಬಿದ್ದು ಪ್ರಾಣಾಪಾಯದಲ್ಲಿ ಪ್ರಯಾಣ ಮಾಡುವ ಸ್ಥಿತಿಯಿರುವ ವಿಡಿಯೋ ತಲುಪಿದರೂ ಸಾರಿಗೆ ಸಚಿವ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ (ಈಗ ಹೊಸಪೇಟೆ ಜಿಲ್ಲೆ) 4 ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯೂ ಇಲ್ಲ, ಶಾಲೆಗಳೂ ಇಲ್ಲ ಎಂಬ ಸುದ್ದಿ ಹೈದರಾಬಾದ್ ಕರ್ನಾಟಕದ ಹೊರಗಿನ ಜನಕ್ಕೆ ವಿಚಿತ್ರ ಅನಿಸಬಹುದು. ಆದರೆ ಇಲ್ಲಿನ ಜನ ಇದಕ್ಕೆ ಒಗ್ಗಿ ಹೋಗಿದ್ದಾರೆ. ಹೈದರಾಬಾದ್ ಕರ್ನಾಟಕದ 20ಕ್ಕೂ ಹೆಚ್ಚು ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ!
ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಡೆಸೂರಿನಲ್ಲಿ ಇಬ್ಬರು ಮಹಿಳೆಯರು ಅಸು ನೀಗಿದ್ದನ್ನು ಈಚೆಗೆ ನೋಡಿದ್ದೇವೆ. 2016ರಲ್ಲಿ ಕಲುಷಿತ ನೀರು ಸೇವಿಸಿ ಇದೇ ಗ್ರಾಮದ ನಾಲ್ವರು ಸಾವನ್ನಪ್ಪಿದ್ದರು. 2010ರಲ್ಲಿ ಇದೇ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ ಹತ್ತಾರು ಜನ ತೀವ್ರ ಅಸ್ವಸ್ಥರಾಗಿದ್ದರು.
ಈ ಮೇಲಿನ ಘಟನೆ ಒಂದು ಸಾಂಕೇತಿಕ. ಹೈದರಾಬಾದ್ ಕರ್ನಾಟಕದ ಒಟ್ಟೂ ದಯನೀಯಸ್ಥಿತಿಗೆ ಇದು ಕನ್ನಡಿ.

ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 50 ತಾಲೂಕಳಿದ್ದು 41 ವಿಧಾನಸಭಾ ಕ್ಷೇತ್ರಗಳಿವೆ. ಅಂದರೆ ಈ ಭಾಗದಿಂದ 41 ಎಂಎಲ್ಎಗಳು ಆಯ್ಕೆ ಆಗುತ್ತಾರೆ. ಐವರು ಸಂಸತ್ತು ಪ್ರವೇಶಿಸುತ್ತಾರೆ. ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರ ಸಂಖ್ಯೆ 10 ದಾಟುತ್ತದೆ. ಇವರೆಂದೂ ಈ ಭಾಗದ ಬಗ್ಗೆ ಸದಸದಲ್ಲಿ ಗಂಭೀರ ಚರ್ಚೆ ನಡೆಸಿದ್ದೇ ಅಪರೂಪ.
ಇವರೆಂದೂ ಶಾಲೆ, ಆಸ್ಪತ್ರೆ, ಕುಡಿಯುವ ನೀರು ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ಎಂದೂ ಗಂಭಿರವಾಗಿ ಗಮನಹರಿಸಿಲ್ಲ.
ಲಿಂಗಸೂರು ತಾಲೂಕಿನಲ್ಲಿ ಹಲವು ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿ ಇಲ್ಲಿ ಹತ್ತು ಕಿಮೀ ಅಂತರದಲ್ಲಿ ಯಾವುದೇ ಹೈಸ್ಕೂಲ್ ಇಲ್ಲ. ಇಲ್ಲಿ ಸಾರಿಗೆ ವ್ಯವಸ್ಥೆಯೂ ಇಲ್ಲ.
ಹೈ–ಕ ಮಂಡಳಿ ಏನು ಮಾಡುತ್ತಿದೆ?
ಈ ಪ್ರದೇಶದ ವಿಶೇಷ ಅಭಿವೃದ್ಧಿಗಾಗಿ ಹೈದರಾಬಾದ್ ಕರ್ನಾಟಕ ಮಂಡಳಿ ( ಈಗ ಕಲ್ಯಾಣ ಕರ್ನಾಟಕ ಮಂಡಳಿ) ಸ್ಥಾಪಿಸಲಾಗಿದ್ದು ಪ್ರತಿ ವರ್ಷ 1500-2000 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಲಾಗುತ್ತದೆ. ಇದನ್ನು ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆಗಳಿಗೆ ಬಳಸಬೇಕಾದ ಜನಪ್ರತಿನಿಧಿಗಳು, ಅದರ ಬದಲು ಕಮೀಷನ್ ಜಾಸ್ತಿ ಸಿಗುವ ಕಾಮಗಾರಿಗಳಿಗೆ ವಿನಿಯೋಗಿಸುತ್ತಾರೆ. ಅದಕ್ಕೂ ಮುಖ್ಯವಾದ ಸಂಗತಿ ಎಂದರೆ ಪೂರ್ಣ ಅನುದಾನವೂ ಖರ್ಚಾಗುವುದಿಲ್ಲ. ಉಳಿದ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ.
ಇದು ಏಕೆ ಸಂಭವಿಸುತ್ತಿದೆ ಎಂದರೆ, ಕಾರ್ಯ ಯೋಜನೆ (ಪ್ಲಾನ್) ರೂಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ!
ಸುಪ್ರೀಂಕೋರ್ಟ್ ಆದೇಶದಂತೆ ಗಣಿ ಪ್ರದೇಶಗಳ ಸುತ್ತಲಿನ ಗ್ರಾಮಗಳ ಪುನರ್ ನಿರ್ಮಾಣ ಮತ್ತು ಪುನಶ್ಚೇತನಕ್ಕಾಗಿ ಹತ್ತಾರು ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆದರೆ ಜನಪ್ರತಿನಿಧಿಗಳು ಇದನ್ನೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಬೇರೆ ಉದ್ದೇಶಕ್ಕೆ ಇದನ್ನು ಬಳಸುತ್ತಿದ್ದಾರೆ. ಈ ಮೀಸಲು ನಿಧಿಯನ್ನು ಗಣಿ ಧೂಳಿನ ಅಬ್ಬರಕ್ಕೆ ನಜ್ಜುಗುಜ್ಜಾದ ಗ್ರಾಮಗಳ ಶಾಲೆ, ರಸ್ತೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಬಹುದಿತ್ತು.
ಗಣಿ ದಂಧೆ ಉತ್ತುಂಗದಲ್ಲಿದ್ದಾಗ ಅದಿರು ಹೊತ್ತ ಟಿಪ್ಪರ್‍ಗಳ ಚಲನೆಯಿಂದ ನೂರಾರು ಗ್ರಾಮಗಳ ರಸ್ತೆಗಳು ಹಾಳಾಗಿವೆ. ಆ ಬಗ್ಗೆ ರಾಮುಲು-ರೆಡ್ಡಿಗಳು ಮತ್ತು ಇತರ ಪ್ರತಿನಿಧಿಗಳಿಗೆ ಯಾವುದೇ ಚಿಂತೆಯಿಲ್ಲ.
ಸರ್ಕಾರಿ ಬಸ್ ಇಲ್ಲದ ಕಾರಣಕ್ಕೆ ಜನರು ಕುರಿಗಳನ್ನು ಸಾಗಿಸುವ ವಾಹನಗಳಲ್ಲೂ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ ಪ್ರತಿಧ್ವನಿ’ ಜೊತೆ ಮಾತನಾಡಿದ ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್, ‘ ಒಂದು ರೀತಿಯಲ್ಲಿ ಜನರನ್ನು ಕುರಿಗಳಂತೆ ಪರಿಗಣಿಸುತ್ತಿರುವ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಈ ಎಲ್ಲ ಅವ್ಯವಸ್ಥೆಗೆ ಕಾರಣ. ಅನುದಾನ ಸಿಕ್ಕರೂ ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಕಲೆಕ್ಷನ್ ಕಡಿಮೆ ಎಂಬ ಕಾರಣಕ್ಕೆ ಕೆಲವು ರೂಟ್‍ಗಳಿಗೆ ಬಸ್‍ಗಳನ್ನೇ ಬಿಡುವುದಿಲ್ಲ. ಸೇವಾ ವಲಯದಲ್ಲಿ ಸರ್ಕಾರ ಲಾಭ-ನಷ್ಟ ನೋಡಬಾರದು. ಇಲ್ಲಿನ ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈ-ಕದ ಏಳು ಜಿಲ್ಲೆಗಳ ಹಿಂದುಳಿದಿರುವಿಕೆಗೆ ಕಾರಣ ಏನು ಎಂಬುದಕ್ಕೆ ಸಂಕ್ಷಿಪ್ತ ಚಿತ್ರಣವಿದು.