ವಿಶ್ವ ಆರೋಗ್ಯ ಸಂಸ್ಥೆಯ(WHO) ಹೊಸ ವರದಿಯ ಪ್ರಕಾರ ಭಾರತದಲ್ಲಿ 47 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಭಾರತ ಸರ್ಕಾರದ ಅಧಿಕೃತ ದಾಖಲೆಗಳು ಸೂಚಿಸುವುದಕ್ಕಿಂತ ಸುಮಾರು 10 ಪಟ್ಟು ಹೆಚ್ಚು. ಆದರೆ, ಭಾರತ ಸರ್ಕಾರವು WHO ಅಂಕಿಅಂಶವನ್ನು ತಿರಸ್ಕರಿಸಿದ್ದು, ಸಾವಿನ ಪ್ರಮಾಣ ಅಂದಾಜಿಸಿದ ವಿಧಾನವು ದೋಷಪೂರಿತವಾಗಿದೆ ಎಂದು ಹೇಳಿದೆ.
ನವೆಂಬರ್ 2020 ರಲ್ಲಿ, ವರ್ಲ್ಡ್ ಮಾರ್ಟಾಲಿಟಿ ಡೇಟಾಸೆಟ್‌ನ ಸಂಶೋಧಕರು ಎಲ್ಲಾ ರೀತಿಯಾದ ಸಾವುಗಳ ಬಗೆಗಿನ ಮಾಹಿತಿಯನ್ನು ಒದಗಿಸಲು ಭಾರತದ ಅಧಿಕಾರಿಗಳನ್ನು ಕೇಳಿದ್ದರು. ಆದರೆ, ಮಾಹಿತಿಯನ್ನು ನೀಡಲು ಭಾರತದ ಅಧಿಕಾರಿಗಳು ನಿರಾಕರಿಸಿ, ಇದು ಲಭ್ಯವಿಲ್ಲ ಎಂದು ಹೇಳಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ 2020 ಮತ್ತು 2021 ರ ನಡುವೆ ಕೋವಿಡ್ ಸಂದರ್ಭದಲ್ಲಿ ಉಂಟಾದ ಹೆಚ್ಚುವರಿ ಸಾವನ್ನು ಅಂದಾಜಿಸಲು ಸ್ಥಾಪಿಸಲಾಗಿದ್ದ ಸಲಹಾ ತಂಡದ ಸದಸ್ಯ ಹಾಗೂ ಡೇಟಾಸೆಟ್ ಅನ್ನು ಸಹ-ರಚಿಸಿದ ವಿಜ್ಞಾನಿ ಏರಿಯಲ್ ಕಾರ್ಲಿನ್ಸ್ಕಿ ಹೇಳಿರುವುದಾಗಿ bbc ವರದಿ ಮಾಡಿದೆ.

ಕೋವಿಡ್ ಸಾಂಕ್ರಾಮಿಕದಲ್ಲಿ 1.5 ಕೋಟಿ ಸಾವು: WHO
ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಿರೀಕ್ಷೆಗಿಂತ ಹೆಚ್ಚು ಜನರು ಸಾಯುತ್ತಿದ್ದಾರೆ ಎಂಬುದನ್ನು ʼಹೆಚ್ಚುವರಿ ಸಾವುಗಳುʼ ಎಂದು ಕರೆಯಲಾಗುತ್ತಿದೆ. ಇವುಗಳಲ್ಲಿ ಎಷ್ಟು ಸಾವುಗಳು ಕೋವಿಡ್‌ನಿಂದ ಸಂಭವಿಸಿವೆ ಎಂದು ಹೇಳಲು ಕಷ್ಟವಾದರೂ, ಅವುಗಳನ್ನು ಸಾಂಕ್ರಾಮಿಕದ ಸಾವಿನ ಪ್ರಮಾಣ ಎಂದು ಪರಿಗಣಿಸಬಹುದು.
ಕರೋನವೈರಸ್ ನಿಂದಾಗಿ ಭಾರತದಲ್ಲಿ ಇಲ್ಲಿಯವರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಾವುಗಳನ್ನು ಸರ್ಕಾರವು ಅಧಿಕೃತವಾಗಿ ದಾಖಲಿಸಿದೆ. ನಿರ್ದಿಷ್ಟವಾಗಿ, 1 ಜನವರಿ 2020 ಮತ್ತು 31 ಡಿಸೆಂಬರ್ 2021 ರ ನಡುವೆ 481,000 ಕೋವಿಡ್ ಸಾವುಗಳನ್ನು ಭಾರತ ಸರ್ಕಾರ ದಾಖಲಿಸಿದೆ, ಆದರೆ WHO ನ ಅಂದಾಜಿನ ಪ್ರಕಾರ ಈ ಅಂಕಿ ಅಂಶಕ್ಕಿಂತ ಸುಮಾರು 10 ಪಟ್ಟು ಹೆಚ್ಚು ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಕೋವಿಡ್ ಸಾವುಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರತ ಹೊಂದಿದೆ ಎಂದು ಅದು ಸೂಚಿಸಿದೆ.





