ಕಾಂಗ್ರೆಸ್ ಅಧಿಕೃತವಾಗಿ ಆಪರೇಷನ್ ಹಸ್ತ ಎಂದು ಹೇಳಿಕೊಳ್ಳದಿದ್ದರೂ ಲೋಕಸಭಾ ಚುನಾವಣೆ ಹಾಗು ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಕಷ್ಟು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ನಾಯಕರನ್ನು ಸೆಳೆಯುತ್ತಿದ್ದು, ಬಹುತೇಕ ಮಂದಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎನ್ನುತ್ತಲೇ ಕಾಂಗ್ರೆಸ್ ಸೇರುವ ಕಸರತ್ತು ನಡೆಸಿದ್ದಾರೆ. ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯನಾಯ್ಡು ಕೂಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಬಿಜೆಪಿಯ ಹಾಲಿ ಶಾಸಕರು, ಮಾಜಿ ಶಾಸಕರನ್ನು ಸೆಳೆಯುವ ಕಸರತ್ತು ಮುಂದುವರಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.
ರೇಣುಕಾಚಾರ್ಯರಿಂದ ಮತ್ತೆ ಮತ್ತೆ ಸಿಎಂ, ಡಿಸಿಎಂ ಭೇಟಿ!!
ಈ ಹಿಂದೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ರೇಣುಕಾಚಾರ್ಯ, ಶುಭಾಶಯ ಕೋರುವುದಕ್ಕೆ ಬಂದಿದ್ದೆ ಎಂದು ತೇಪ ಸಾರಿಸಿದ್ದರು. ಆ ಬಳಿಕ ಮಹಾಲಕ್ಷ್ಮೀ ಹಬ್ಬದ ನೆಪದಲ್ಲಿ ಮತ್ತೊಮ್ಮೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಂತರ ಕಂದಾಯ ಸಚಿವ ಕೃಷ್ಣಬೈರೇಗೌಡ ಜೊತೆಗೂ ರೇಣುಕಾಚಾರ್ಯ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 20 ನಿಮಿಷಗಳ ಕಾಲ ಸಿಎಂ ಸಿದ್ದರಾಮಯ್ಯ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದು, ಪಕ್ಷ ಸೇರ್ಪಡೆ ಆದ ಬಳಿಕ ಲೋಕಸಭಾ ಚುನಾವಣೆ ಟಿಕೆಟ್ ಜೊತೆಗೆ ಒಂದಷ್ಟು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭಕೋರಲು ಬಂದಿದ್ದೆ, ರಾಜಕೀಯ ಚರ್ಚೆ ನಡೆದಿಲ್ಲ ಎಂದಿದ್ದಾರೆ ರೇಣುಕಾಚಾರ್ಯ.
ನಾನು ಪಕ್ಷ ಬಿಡಲ್ಲ ಎಂದಿದ್ದ ಹೆಬ್ಬಾರ್, ಕದ್ದುಮುಚ್ಚಿ ಭೇಟಿ..!
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್, ಇತ್ತೀಚಿಗೆ ಎಸ್.ಟಿ ಸೋಮಶೇಖರ್ ಜೊತೆಗೆ ಕುಳಿತು, ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ತಾರೆ ಅನ್ನೋದು ಸುಳ್ಳು. ನಾನು ಕಾಂಗ್ರೆಸ್‌ಗೆ ಹೋಗಲ್ಲ ಎಂದಿದ್ದರು. ಆದರೆ ಶುಕ್ರವಾರ ಸಂಜೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗ್ತಾರೆ ಎನ್ನುವ ಚರ್ಚೆಗಳ ನಡುವೆ ಶಿವರಾಮ್ ಹೆಬ್ಬಾರ್ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಒಂದು ಗಂಟೆಗೂ ಹೆಚ್ಚು ಸಮಯ ಸಿಎಂ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸದ್ಯದ ಬಿಜೆಪಿ ಬೆಳವಣಿಗೆ ಹಾಗು ಸೂಕ್ತ ಪರಿಸ್ಥಿತಿ ನೋಡಿಕೊಂಡು ಬಿಜೆಪಿ ಪಕ್ಷ ತೊರೆಯುವ ಬಗ್ಗೆ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸೋತವರು ಗೆದ್ದವರು ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವುದು ಯಾಕೆ..?
ಕಾಂಗ್ರೆಸ್‌ಗೆ ಆಪರೇಷನ್ ಮಾಡುವ ಅವಶ್ಯಕತೆ ಏನಿಲ್ಲ. ಸರ್ಕಾರ ನಡೆಸುವುದಕ್ಕೆ ಬೇಕಿರುವ ಸಂಖ್ಯಾಬಲ ಹೆಚ್ಚಾಗಿಯೇ ಇದೆ. ಆದರೂ ಕಾಂಗ್ರೆಸ್ ಪಕ್ಷ ಸೇರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರು 5 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಅಧಿಕಾರದ ಬಲ ಇಲ್ಲದೆ ಇದ್ದರೆ ರಾಜಕೀಯ ಕಷ್ಟ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇನ್ನೂ ಕೆಲವರು ಈ ಹಿಂದಿನ ಸರ್ಕಾರದಲ್ಲಿ ನಡೆಸಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷವನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಶಿವರಾಮ್ ಹೆಬ್ಬಾರ್ ಸೇರಿದಂತೆ ಯಾರಿಗೆಲ್ಲಾ ಸರ್ಕಾರದ ಅನುದಾನ ಬಿಡುಗಡೆ ಆಗುತ್ತದೆ ಅನ್ನೋದ್ರ ಮೇಲೆ ಪಕ್ಷಾಂತರಿಗಳ ಗುಟ್ಟು ರಟ್ಟಾಗಲಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಪಕ್ಷ ಸೇರ್ಪಡೆ ಆಗುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಕೃಷ್ಣಮಣಿ