ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ನಡೆಯಲಿದೆ. ಬೆಳಗ್ಗೆ ಸುಳೇಭಾವಿ ಮಹಾಲಕ್ಷ್ಮಿ, ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಸಿಪಿಎಡ್ ಮೈದಾನದಿಂದ ಬೃಹತ್ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮೃನಾಲ್ ಹೆಬ್ಬಾಳ್ಕರ್ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಗಿಯಾಗಲಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಗೀತಾ ಶಿವರಾಜ್ ಕುಮಾರ್, ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ರೋಡ್ ಶೋನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಇನ್ನುಳಿದಂತೆ ನಟ ಶಿವರಾಜ್ ಕುಮಾರ್, ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಜರಿರಲಿದ್ದಾರೆ. ಮಧ್ಯಾಹ್ನ 12.45ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಹಿಂದಿನ ದಿನ ಭಾನುವಾರ ಶಿವಣ್ಣ ದಂಪತಿ ಫುಲ್ ಎಂಜಾಯ್ ಮೋಡ್ನಲ್ಲಿ ಮುಳುಗಿದ್ರು. ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ದಂಪತಿ, ಇಡೀ ಫ್ಯಾಮಿಲಿ ಆನೆ ಮೇಲೆ ಕುಳಿತು ಎಂಜಾಯ್ ಮಾಡಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಸಲಿದ್ದಾರೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಐದನೇ ಬಾರಿ ಸ್ಪರ್ಧೆ ಮಾಡುತ್ತಿರುವ ಪ್ರಹ್ಲಾದ್ ಜೋಶಿ, ಬೆಳಗ್ಗೆ 10 ಘಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ಮೆರವಣಿಗೆ ಮೂಲಕ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ. ಧಾರವಾಡದ ಶಿವಾಜಿ ಸರ್ಕಲ್ನಿಂದ ಬೃಹತ್ ಮೆರವಣಿಗೆಯ ಮುಖಾಂತರ ಆಗಮಿಸಲಿದ್ದಾರೆ ಜೋಶಿ. ರ್ಯಾಲಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ ಸೇರಿ ಹಲವಾರು ನಾಯಕರು ಭಾಗಿಯಾಗಲಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಇಂದು ಅಣ್ಣಾ ಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಚಿಕ್ಕೋಡಿ ಪಟ್ಟಣದ ಕಿವುಡ ಮೈದಾನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಅಲ್ಲಿಂದಲೇ ತೆರೆದ ವಾಹನದಲ್ಲಿ ಱಲಿ ಮೂಲಕ ಎಸಿ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಿರುವ ಜೋಲ್ಲೆ, ಚಿಕ್ಕೋಡಿಯಲ್ಲೆ ತಮ್ಮ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ..

ಕೃಷ್ಣಮಣಿ