ರಾಜ್ಯ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯ ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಅಧಿಕಾರ ಉಳಿಸಿಕೊಳ್ಳಬೇಕು ಅನ್ನೋದು ಬಿಜೆಪಿ ಹಂಬಲವಾಗಿದ್ದರೆ ಹೇಗಾದರೂ ಮಾಡಿ ಈ ಬಾರಿ ಸಿಎಂ ಸ್ಥಾನದಲ್ಲಿ ಕೂರಬೇಕು ಅನ್ನೋದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯದ ಲೆಕ್ಕಾಚಾರವಾಗಿದೆ. ಮತದಾರರನ್ನು ಸೆಳೆದುಕೊಳ್ಳಲು ಮೂರು ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಲೇ ಇವೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ದೆಹಲಿಯ ನಾಯಕರು ಸಹ ಸಾಥ್ ನೀಡಿದ್ದು ಕರ್ನಾಟಕದ ಜನತೆಯ ವಿಶ್ವಾಸವನ್ನು ಸಂಪಾದಿಸಲು ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದ್ದಾರೆ. ದಕ್ಷಿಣ ಭಾರತದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಒಂದು ಅಗ್ನಿಪರೀಕ್ಷೆ ಎಂದು ಹೇಳಿದರೂ ಸಹ ತಪ್ಪಾಗಲಾರದು. ಈ ಬಾರಿಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜೊತೆಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಜನಾರ್ಧನ ರೆಡ್ಡಿಯ ಹೊಸ ಪಕ್ಷ ಕೂಡ ಚುನಾವಣೆ ರೇಸ್ನಲ್ಲಿದೆ.
ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯ ಗದ್ದುಗೆಯನ್ನು ಯಾರು ಏರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಬಿಜೆಪಿ ಸರ್ಕಾರ ಜನರು ನೆನಪಿಟ್ಟುಕೊಳ್ಳುವಂತಹ ಆಡಳಿತ ನೀಡಿಲ್ಲ ಎಂಬ ಮಾತನ್ನೂ ಸಹ ತಳ್ಳಿ ಹಾಕುವಂತಿಲ್ಲ. ರಾಜಕೀಯ ಹೈಡ್ರಾಮಾಗಳೇ ಹೆಚ್ಚಾಗಿದ್ದ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ವಿಶ್ವಾಸಗಳಿಸಿಕೊಳ್ಳಲು ಸಾಧ್ಯವಾಗಲಿಲ್ವಾ ಎಂಬ ಪ್ರಶ್ನೆ ಇದೀಗ ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶದ ಬಳಿಕ ಮೂಡಿದೆ. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಏರುವುದು ಬಿಜೆಪಿಗೆ ತುಂಬಾನೇ ಕಷ್ಟವಿದೆ ಎಂದು ಹೇಳಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಈ ಬಾರಿ ಬಿಜೆಪಿ ಪಕ್ಷವು 60 ರಿಂದ 70 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುವ ಪ್ರಕಾರ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಸರ್ಕಾರ ರಚನೆ ಮಾಡುವ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ ಕಡೆ ಒಲವು ತೋರಿಸುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ. ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ 110 ರಿಂದ 114 ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಅದರಂತೆ ಜೆಡಿಎಸ್ಗೆ 20 ರಿಂದ 30 ಸ್ಥಾನಗಳು ದೊರೆಯಲಿದ್ದು ಆಮ್ ಆದ್ಮಿ ಪಕ್ಷ ಶೂನ್ಯ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಸೀಟು ಗೆದ್ದರೆ ಹೆಚ್ಚು ಅಂತಾ ಭವಿಷ್ಯ ನುಡಿಯಲಾಗಿದೆ.









