
ಸುಂದರ ಕ್ಷಣಗಳು ಅನ್ನುವ ಹಾಗೆಯೇ ಕೆಲವರಿಗೆ ಮರೆಯಲಾಗದ ಶಾಪಗಳು.
ಅವರವರ ಜೀವನದಲ್ಲಿ ಯಾವ ನೆನಪುಗಳು ಯಾವ ಅನುಭವಗಳನ್ನು ನೀಡುತ್ತವೆ ಅಂತ ಯಾರಿಗೂ ಮೊದಲೇ ಊಹಿಸಲು ಸಾಧ್ಯವಿಲ್ಲ. ಸವಿ ನೆನಪುಗಳು ಅಂದುಕೊಂಡು ಬದುಕುವ ಜೀವನದಲ್ಲಿ ಅದೇ ಸವಿ ನೆನಪುಗಳು ಅನುಭವಗಳ ಪುಟಗಳಲ್ಲಿ ಮರೆಯಲಾಗದ ಕಹಿ ಘಟನೆಗಳು ನೆನಪುಗಳಾಗಲೂಬಹುದು.
ಸಮಯ ಅನ್ನೋದು ನಾವು ಅಂದುಕೊಂಡಂತೆ, ನಾವುಗಳು ಅಂದುಕೊಂಡ ಹಾಗೆಯೇ ಎಂದಿಗೂ ಚಲಿಸದು. ಚಲಿಸುವ ಸಮಯ, ಚಲಿಸುವ ಕಾಲ ಅದರ ದಿಕ್ಕನ್ನು ಯಾವ ಕಡೆಯಿಂದ, ಯಾವ ಕಡೆಗೆ ತನ್ನ ಪಥವನ್ನು ಅಥವಾ ದಿಕ್ಕನ್ನು ಬದಲಾಯಿಸುತ್ತೆ ಅಂತಲೇ ಗೊತ್ತಾಗಲ್ಲ. ಯಾವುದೋ ಒಂದು ಭ್ರಮೆಯಲ್ಲಿ, ಇನ್ಯಾವುದೋ ಕಲ್ಪನೆಯಲ್ಲಿಯೇ ಬದುಕು ಸಾಗುತ್ತಲೇ ಇರುತ್ತೆ.
ಬಣ್ಣ ಬಣ್ಣದ ಲೋಕದಲ್ಲಿ, ಬಣ್ಣ ಬಣ್ಣ ಮಾತಿಗೆ, ಅಂದವಾಗಿ ಕಾಣುವ ಹೊರ ಪ್ರಪಂಚವೇ ಆಕರ್ಷಣೆ. ಐಶ್ವರ್ಯ ಅನ್ನುವ ಅಯಸ್ಕಾಂತದ ಆಕರ್ಷಣೆಯ ಹುಚ್ಚಿಗೆ ಬಿದ್ದು ಗಳಿಸಿಕೊಂಡಿದ್ದೆಷ್ಟು, ಅದನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಕಳೆದುಕೊಂಡದ್ದೆಷ್ಟು…?
ಈ ಪ್ರಪಂಚದಲ್ಲಿ ಒಮ್ಮೆ ಕಳೆದುಕೊಂಡರೆ ಮತ್ತೆ ಗಳಿಸಿಕೊಳ್ಳಲು ಅವಕಾಶವಿದೆ ಅನ್ನುವುದು ಎಲ್ಲರ ಅನುಭವದ ಮಾತು. ಆದರೆ, ವಾಸ್ತವದಲ್ಲಿ ಅದು ಅಸಾಧ್ಯ. ಒಮ್ಮೆ ಜೀವನದಲ್ಲಿ ಕೆಲವೊಂದನ್ನು ಕಳೆದುಕೊಂಡರೆ ಮರಳಿ ಪಡೆಯುವ ಅರ್ಹತೆ ಕಳೆದುಕೊಂಡಂತೆಯೇ. ಮರಳಿ ಪಡೆಯುವ ಅವಕಾಶವಾಗಲಿ ಅಥವಾ ಅದೃಷ್ಟವಾಗಲಿ ಸಿಗಲಾಗದು. ಯಾಕೆಂದರೆ, ಕಳೆದುಕೊಂಡವರನ್ನು ಈ ಸಮಾಜ ನೋಡುವ ದೃಷ್ಠಿಕೋನವೇ ಬೇರೆ.

ಬದಲಾಗಬೇಕು, ಬದಲಾವಣೆ ಹೊಂದಿ ಮರಳಿ ಜೀವನ ಸರಿದಾರಿಗೆ ತಂದುಕೊಂಡು ಎಲ್ಲರಂತೆ ಬದುಕಬೇಕು ಅಂತ ಅಂದುಕೊಂಡರೂ ಅದು ಸಾಮಾನ್ಯವಾಗಿ ಈಡೇರದ ಕನಸಾಗಿ, ತನ್ನ ಜೀವನದಲ್ಲಿ ಕಳೆದುಕೊಂಡದ್ದನ್ನು ನೆನೆದು, ಆ ನೆನಪುಗಳಲ್ಲಿಯೇ ಕಣ್ಣೀರು ಸುರಿಸುತ್ತ ಅವಕಾಶ ವಂಚಿತರಾಗಿ ಇಡೀ ಜೀವನ ಕಳೆಯುವ ಹಣೆಬರಹ ಕೆಲವರದ್ದು. ಇದನ್ನೇ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಇಡೀ ಜೀವನ ಶಿಕ್ಷೆ ಅನುಭವಿಸುವಂತದ್ದು ಅನ್ನೋದು.
ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಕಾರ್ಯ ಸಾಧನೆಗಾಗಿ ಜೊತೆಗಿದ್ದು, ತಮ್ಮ ಕಾಲ ಕಳೆಯುವುದಕ್ಕಾಗಿ ಉಪಯೋಗಿಸಿಕೊಂಡು ಇಲ್ಲದ ನಂಬಿಕೆ, ಭಾವನೆಗಳನ್ನು ಹುಟ್ಟಿಸಿ, ಕೊನೆಗೆ ಅದಕ್ಕೆ ಬೇರೆಯದೇ ಅರ್ಥವಿದೆ ಅನ್ನುವ ಪಾಠವನ್ನು ಕಲಿಸಿಕೊಡುವ ಜನರ ಮಧ್ಯೆ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅನ್ನುವುದೇ ಎಲ್ಲರ ಜೀವನದಲ್ಲಿನ ಗೊಂದಲದ ಪ್ರಶ್ನೆ. ಅದಕ್ಕೆ ಹೇಳಿರುವುದು ಮನುಷ್ಯರಿಗಿಂತ ಮಾತು ಬಾರದ ಪ್ರಾಣಿ – ಪಕ್ಷಿಗಳೇ ಎಷ್ಟೋ ವಾಸಿ ಅಂತ. ಯಾಕೆಂದರೆ ಅವುಗಳಿಗೆ ಮನುಷ್ಯರಂತೆ ಸಮಯಕ್ಕೆ ತಕ್ಕಂತೆ ನಟನೆ ಮಾಡಲು, ಮಾತು ಬದಲಾಯಿಸಲು ಬರಲ್ಲ. ಒಂದೇ ವ್ಯಕ್ತಿತ್ವ ಒಂದೇ ಬದುಕು ಅವುಗಳದ್ದು.

ನಾವು ಎಲ್ಲರ ಮುಂದೆ, ಎಲ್ಲರ ಕಣ್ಣಿಗೆ ಕಾಣುವಂತೆ ಹೇಗೆ ಬದುಕುತ್ತೇವೆ, ಕಣ್ಣಿಗೆ ಕಾಣುವಂತೆ ಏನೆಲ್ಲಾ ಸಂಪಾದನೆ ಮಾಡುತ್ತೇವೆ ಅನ್ನೋದು ಮುಖ್ಯ ಅನ್ನೋದು ಇಂದಿನ ಜೀವನ ಕ್ರಮ. ಅದು ಬದಲಾಗಬೇಕು. ಕಣ್ಣಿಗೆ ಕಾಣುವುದು ಮುಖ್ಯವಲ್ಲ. ಮನಸ್ಸಿಗೆ ಕಾಣುವುದು ಮುಖ್ಯ. ಇನ್ನೊಬ್ಬರ ಮನಸ್ಸಿನಲ್ಲಿ ನಾವು ಯಾವ ಸ್ಥಾನದಲ್ಲಿ ಇದ್ದಿವಿ, ಯಾವ ಸ್ಥಾನವನ್ನು ಸಂಪಾದನೆ ಮಾಡಿಕೊಂಡಿದ್ದೇವೆ ಅನ್ನೋದು ಮುಖ್ಯ. ಅದೇ ರೀತಿ ಎಂತಹ ಸ್ಥಾನದಲ್ಲಿ ನಮ್ಮನ್ನು ಅವರು ಇಟ್ಟಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಂಡು ಅವರ ನಂಬಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಜೀವನದಲ್ಲಿ ಬಹಳ ಮುಖ್ಯ.
ಹುಟ್ಟು ಅನ್ನೋದು ಎಲ್ಲರಿಗೂ, ಎಲ್ಲಾ ಜೀವರಾಶಿಗಳಿಗೂ ಸಹಜ. ಆ ಹುಟ್ಟಿಗೆ ಒಂದು ಸಾರ್ಥಕತೆ ಸಿಗಬೇಕು. ಬದುಕಿಗೆ ಒಂದು ಅರ್ಥ ಇರಬೇಕು. ಹುಟ್ಟು ಸಾವಿನ ಮಧ್ಯೆ ನಾವು ನಿಜವಾಗಿ ಸಂಪಾದನೆ ಮಾಡಬೇಕಾಗಿರುವುದು ನಾವು ಅಳಿದರೂ ಇನ್ನೊಬ್ಬರ ಜೀವನದಲ್ಲಿ ನಮ್ಮಿಂದ ಅಳಿಯಲಾಗದ ಹೆಸರು, ಪ್ರೀತಿ, ವಿಶ್ವಾಸ, ನಂಬಿಕೆಯುಕ್ತ ನೆನಪುಗಳು ಮಾತ್ರ.
ಸ್ವಾರ್ಥಕ್ಕಾಗಿ ದಯವಿಟ್ಟು ಯಾರೊಂದಿಗೂ ಯಾವ ಸಮಯದಲ್ಲಿಯೂ ವ್ಯವಹರಿಸಬಾರದು. ಸ್ವಾರ್ಥದ ಜೀವನ ಇನ್ನೊಬ್ಬರ ಜೀವನದಲ್ಲಿ ಯಾವ ಪರಿಣಾಮ ಬೀರುತ್ತೆ, ಯಾವ ಹಂತಕ್ಕೆ ಬೀರುತ್ತೆ ಅನ್ನೋದು ಸ್ವಲ್ಪ ಯೋಚಿಸಿ ನೋಡಿ. ಎಲ್ಲಾ ಮುಗಿದ ಮೇಲೆ ಚಿಂತಿಸಿ ಪ್ರಯೋಜನವೂ ಇಲ್ಲ. ತಿದ್ದಿ ಬದಲಾವಣೆ ಮಾಡಲು ಅವಕಾಶವೂ ಇರಲ್ಲ.
ಪ್ರಪಂಚ ಒಂದು ತಪ್ಪಾದರೆ ಅದೇ ತಪ್ಪನ್ನು ಹಿಡಿದು ನೋಡುತ್ತದೆಯೇ ಹೊರತು, ಆ ತಪ್ಪಿಗೆ ಸೂಕ್ತ ಕಾರಣ ಹುಡುಕಲ್ಲ, ಕೇಳಲ್ಲ. ತಪ್ಪು ಮಾಡಿದವನು ಇಂದಿಗೂ ಎಂದಿಗೂ ಎಂದೆಂದಿಗೂ ತಪ್ಪಿತಸ್ತ ಅಷ್ಟೇ ಅನ್ನುವ ನಿರ್ಧಾರ ಮಾಡಿಬಿಡುತ್ತೆ. ಅದೇ ದೃಷ್ಟಿಕೋನದಲ್ಲಿ ಸದಾ ನೋಡುತ್ತೆ, ಬದಲಾಗಬೇಕೆಂದುಕೊಂಡರೂ ಅವಕಾಶವಾಗಲಿ ಅಥವಾ ಬದಲಾಗುತ್ತೀಯಾ ಅನ್ನುವ ನಂಬಿಕೆಯಾಗಲಿ ಇಡುವುದೇ ಇಲ್ಲ

ಅಂತಹ ಬದಲಾವಣೆಗೆ ಅವಕಾಶವಿಲ್ಲದೆ, ಅವಕಾಶ ನೀಡುವವರು ಇಲ್ಲದೆ, ನಂಬಿಕೆ ಇಡುವವರು ಇಲ್ಲದೆ ಒಂಟಿಯಾಗಿದ್ದು, ಎಲ್ಲರಂತೆ ಬದುಕಲು ಆಗದೆ ಏಕಾಂತದಲ್ಲಿ ಏಕಾಂಗಿಯಾಗಿ ಸುರಿಸುವ ಕಣ್ಣೀರಿನ ಬದುಕು ಅನ್ನೋದು ಅಸಹನೀಯ. ಯಾಕೆಂದರೆ, ತಮ್ಮಲ್ಲಿನ ಅಂತಾರಾಳದ ನೋವು ವ್ಯಕ್ತಪಡಿಸಿದರೂ ಸಹ ಅದು ಎಲ್ಲರಿಗೂ ಕೇವಲ ಒಂದು ಕಥೆಯಾಗಿ ಕಾಣುತ್ತದೆಯೇ ವಿನಃ ಅರ್ಥ ಆಗುವ ವಾಸ್ತವ ಕಥೆಯಂತೆ ಯಾರಿಗೂ ಭಾಸವಾಗಲ್ಲ…
ನವೀನ ಹೆಚ್ಎ. ಅಂಕಣಕಾರರು ಲೇಖಕರುಹನುಮನಹಳ್ಳಿ ಕೆಆರ್ ನಗರ ತಾಲೂಕು, ಮೈಸೂರು ಜಿಲ್ಲೆ









