ರಾಜ್ಯಾದ್ಯಂತ ಭ್ರಷ್ಟರಿಗೆ ಲೋಕಾಯುಕ್ತರು ಬಿಗ್ ಶಾಕ್ ನೀಡಿದ್ದಾರೆ. ಹಾವೇರಿಯಲ್ಲಿ ಲೋಕಾಯುಕ್ತ ಟೀಂ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ನಿವಾಸ ಹಾಗೂ ರಾಜ್ಯ ಪಂಚಾಯತ್ ಸಹಾಯಕ ಇಂಜಿನಿಯರಿಂಗ್ ಕಾಶಿನಾಥ್ ಭಜಂತ್ರಿ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಕಾಶಿನಾಥ್ ತಮ್ಮ ನಿವಾಸದಿಂದ ಬರೊಬ್ಬರಿ 11 ಲಕ್ಷ ರೂಪಾಯಿ ಹಣವನ್ನು ಕಿಟಕಿಯಿಂದ ಹೊರಕ್ಕೆ ಎಸೆದಿದ್ದಾರೆ. ಇದನ್ನು ನೊಡಿದ ಲೋಕಾಯುಕ್ತ ಅಧಿಕಾರಿಗಳು ಕಂತೆ ಕಂತೆ ಹಣವನ್ನು ಸೀಜ್ ಮಾಡಿದ್ದಾರೆ. ಹಣ, ಬಂಗಾರ, ಆಸ್ತಿ ಪತ್ರಗಳು ಪತ್ತೆಗಾಗಿ ಶೋಧ ಮುಂದುವರಿದಿದೆ.
ಧಾರವಾಡದಲ್ಲೂ ಬೆಳ್ಳಂಬೆಳಗ್ಗೆಯೇ KIADB ಎಇಇ ಅಧಿಕಾರಿ ಮನೆ ಮೇಲೆ ರೇಡ್ ನಡೆಸಿದ್ದಾರೆ ಲೋಕಾಯುಕ್ತ ಟೀಂ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಎಇಇ ಗೋವಿದಂಪ್ಪ ಭಜಂತ್ರಿಯ ಫಾರ್ಮ್ ಹೌಸ್, ಧಾರವಾಡದ ತೇಜಸ್ವಿ ನಗರದಲ್ಲಿರೋ ಅಳಿಯನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ತಲಾಶ್ ಮಾಡ್ತಿದ್ದಾರೆ.
ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಿವಾಸದಲ್ಲಿ ಬೆಳಗ್ಗೆಯೇ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣದ ಡಾಲರ್ಸ್ ಕಾಲೋನಿಯ ಅಪಾರ್ಟ್‌ಮೆಂಟ್ ಹಾಗೂ ಪಕ್ಕದ ಮನೆ ಮೇಲೂ ಮೈಸೂರು ಲೋಕಾಯುಕ್ತ ಪೊಲೀಸರ ತಂಡ ದಾಖಲೆ ಪರಿಶೀಲನೆ ಮಾಡಿದ್ದಾರೆ.
ಬೀದರ್ನಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಬೆಳ್ಳಂ ಬೆಳಗ್ಗೆಯೇ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿಗೆ ಸೇರಿದ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೀದರ್ ಹಾಗು ಬೆಂಗಳೂರಿನ ನಿವಾಸ ಮತ್ತು ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದಾರೆ.
ಬೆಳಗಾವಿಯಲ್ಲಿಯೂ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಡವಳೇಶ್ವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ರೇಡ್ ನಡೆಸಿದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಠ್ಠಲ ಡವಳೇಶ್ವರ ನಿವಾಸದಲ್ಲಿ ಒಂದು ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ರೇಡ್ ಆಗಿದೆ. ಶಕ್ತಿನಗರದ ಮೂರನೇ ಕ್ರಾಸ್ನಲ್ಲಿರುವ ಕಮಲ್ ರಾಜ್ ಮನೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿರುವ ಕಚೇರಿಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಮಧು ಸೂದನ್ ಹಾಗೂ ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ಟೀಂ ದಾಳಿ ಮಾಡಿದೆ.