ದಾವಣಗೆರೆ: ಅಧಿಕಾರ ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಪಾರ್ಟಿ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವು ಬಿಜೆಪಿ ಶಾಸಕರೊಬ್ಬರ ಪುತ್ರನ ಬಳಿ ಕಂತೆಕಂತೆ ಹಣ ಸಿಕ್ಕರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿ ಸಮಾವೇಶದಲ್ಲಿ ಮಾತನಾಡಿದ ಭಗವಂತ್ ಮಾನ್, ದೆಹಲಿ ಸರ್ಕಾರದ ಸಚಿವ ಮನೀಷ್ ಸಿಸೋದಿಯಾರವರು ಅತ್ಯುತ್ತಮವಾಗಿ ಸರ್ಕಾರಿ ಶಾಲೆಗಳನ್ನು ನವೀಕರಿಸಿದರು. ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ವಿಶ್ವವೇ ದೆಹಲಿಯ ಸರ್ಕಾರಿ ಶಾಲೆಗಳತ್ತ ತಿರುಗಿ ನೋಡುವಂತೆ ಮಾಡಿದರು. ಇದನ್ನು ಸಹಿಸದೇ ಸಿಬಿಐ ಮೂಲಕ ಅವರನ್ನು ಬಂಧಿಸಲಾಗಿದೆ. ನಾವು ಸಿಬಿಐ, ಇಡಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂಬುದನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿನ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದರು. ಅದು ಇದುವರೆಗೆ ಈಡೇರಿಲ್ಲ. ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರಿದ್ದೇವೆ. ಈ ನಿಟ್ಟಿನಲ್ಲಿ ಪಂಜಾಬ್ ಹಾಗೂ ದೆಹಲಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ತೆರಿಗೆ ಕಟ್ಟುವಂತಹ ದುಸ್ಥಿತಿಯಲ್ಲಿ ದೇಶದ ಜನರಿದ್ದಾರೆ. ಜನಪರ ಆಡಳಿತ ನೀಡುತ್ತಿರುವ ಕೇಜ್ರಿವಾಲ್ ಜನಪ್ರಿಯತೆ ಸಹಿಸದೇ ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಳ್ಳರ ಪಕ್ಷಗಳು. ಈ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ. ರಾಜ್ಯ ಲೂಟಿ ಹೊಡೆಯುವುದರಲ್ಲಿ ನಿರತವಾಗಿರುವ ಈ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕು. ಪಂಜಾಬ್ ಸರ್ಕಾರವು ಯಾವ ಭ್ರಷ್ಟರನ್ನೂ ಬಿಡುತ್ತಿಲ್ಲ. ಮಾಹಿತಿ ಮತ್ತು ದಾಖಲೆ ಸಿಕ್ಕ ತಕ್ಷಣವೇ ಜೈಲಿಗಟ್ಟುವ ಕೆಲಸ ಮಾಡಿದ್ದೇವೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಎಎಪಿಯ ಕೇಜ್ರಿವಾಲ್, ಮಾನ್ ಕಂಡರೆ ಭಯ:
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬದಲಾವಣೆಯು ಪ್ರಕೃತಿಯ ನಿಯಮ. ಕರ್ನಾಟಕದಲ್ಲಿ ಸರ್ಕಾರ ಹಾಗೂ ಆಡಳಿತ ಪಕ್ಷವನ್ನು ಹಲವು ಬಾರಿ ಬದಲಿಸಿದ್ದೇವೆ. ಆದರೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಬದಲಿಸಲು ಮಾತ್ರ ಸಾಧ್ಯವಾಗಿಲ್ಲ. ಕರ್ನಾಟಕವನ್ನು ಆಳಿದ ಮೂರು ಪಕ್ಷಗಳಲ್ಲೂ ದುರಹಂಕಾರವಿದೆ. ಐದೂ ವರ್ಷಗಳು ಕೆಲಸ ಮಾಡದಿದ್ದರೂ, ಚುನಾವಣೆ ಸಮೀಪಿಸಿದಾಗ ಹಣ ಹಾಗೂ ಇತರೆ ಆಮಿಷಗಳನ್ನು ಹಂಚಿ ಜಯಗಳಿಸಬಹುದು ಎಂದು ಅವು ಭಾವಿಸಿವೆ. ಈ ದುರಹಂಕಾರವನ್ನು ಮುರಿಯಲು ಪೊರಕೆಯೊಂದೇ ಪರಿಹಾರ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಇಡೀ ದೇಶದಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದೆ. ಇದನ್ನು ಗಮನಿಸಿದ ಬಿಜೆಪಿಯ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರಿಗೆ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್‌ರವರ ಬಗ್ಗೆ ಭಯ ಶುರುವಾಗಿದೆ. ಕೇಜ್ರಿವಾಲ್ ಹಾಗೂ ಮಾನ್ ಬಗ್ಗೆ ಭಯಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಜನತೆಯ ಬಗ್ಗೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಕರ್ನಾಟಕ ಸರ್ಕಾರವು 24,000 ಶಾಲಾ ತರಗತಿ ಕೊಠಡಿಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಆದರೆ ವಾಸ್ತವವಾಗಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡಲೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 192 ರೂಪಾಯಿ ಮೊತ್ತದ ಶೂಗಳನ್ನು 320 ರೂಪಾಯಿಗೆ ಖರೀದಿಸಿ, ಅದರಲ್ಲೂ ಕಮಿಷನ್ ಹೊಡೆದಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯು ದೆಹಲಿ ಎಂಬ ಸಣ್ಣ ರಾಜ್ಯದಲ್ಲೇ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿದೆ. ಆದರೆ ಅದನ್ನು ನಕಲು ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರವು ಇಡೀ ಕರ್ನಾಟಕಕ್ಕೆ ಕೇವಲ 483 ನಮ್ಮ ಕ್ಲಿನಿಕ್ ಗಳನ್ನು ಘೋಷಿಸಿದೆ. ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ 200 ಯೂನಿಟ್ ಉಚಿತ ಕರೆಂಟ್ ನೀಡುತ್ತಿದೆ. ಕಾಂಗ್ರೆಸ್ ಪಕ್ಷವು ಇದನ್ನೇ ನಕಲು ಮಾಡಿ ಇಲ್ಲಿ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವ ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ ಮತ್ತಿತರ ರಾಜ್ಯಗಳಲ್ಲಿ ಉಚಿತ ವಿದ್ಯುತ್ ಏಕಿಲ್ಲ? ಕಾಂಗ್ರೆಸ್ ಗೆ ಧೈರ್ಯ ಹಾಗೂ ಬದ್ಧತೆಯಿದ್ದರೆ ಆ ರಾಜ್ಯಗಳಲ್ಲಿ ಯೋಜನೆಯನ್ನು ಜಾರಿಗೆ ತಂದು ನಂತರ ಕರ್ನಾಟಕದಲ್ಲಿ ಭರವಸೆ ನೀಡಲಿ. ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಮೀಪಿಸಿದಾಗ ಶಾಲೆಗಳ ಬಗ್ಗೆ ಮಾತನಾಡುತ್ತಿರುವ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾಗಿದ್ದಾರೆ ನಿರ್ಮಿಸಿದ ಒಂದೇ ಒಂದು ಸರ್ಕಾರಿ ಶಾಲೆಯನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರು ಡಬಲ್ ಎಂಜಿನ್ ಸರ್ಕಾರ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಿಜವಾದ ಡಬಲ್ ಎಂಜಿನ್‌ಗಳೆಂದರೆ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಎಂಬ ಎರಡು ಎಂಜಿನ್ ಗಳನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ. ಇದು ಜೀರೋ ಪರ್ಸೆಂಟ್ ಕಮಿಷನ್ ಎಂಜಿನ್‌ಗಳು. ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಪಕ್ಷಕ್ಕಾಗಿ ಸಮಯ ಹಾಗೂ ಶ್ರಮ ನೀಡಿದರೆ, ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಾಸ್ಯನಟ ಟೆನಿಸ್ ಕೃಷ್ಣ, ರಾಜ್ಯ ಸಮಿತಿ ಉಪಾಧ್ಯಕ್ಷ ವಿಜಯ್ ಶರ್ಮಾ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹನಿ ಮತ್ತಿತರರು ಉಪಸ್ಥಿತರಿದ್ದರು.