ಕಳೆದ ವಾರದಿಂದ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ.ಇಲ್ಲಿ ಕುತೂಹಲದ ಅಂಶವೆಂದರೆ ಮೋದಿ ಟಾರ್ಗೆಟ್ ಮಾಡುತ್ತಿರುವುದು ಬಿಎಸ್ಪಿಯ ಮಾಯಾವತಿಯವರನ್ನೂ ಅಲ್ಲ, ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿಯವರನ್ನೂ ಅಲ್ಲ, ಅವರ ಟಾರ್ಗೆಟ್ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಆಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡಿದ್ದ ಸಮಾಜವಾದಿ ಪಕ್ಷ ಈ ಸಲವೂ ತೀವ್ರ ಸ್ಪರ್ಧೆ ಒಡ್ಡಲು ಹಲವಾರು ತಂತ್ರಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದ ಹಲವು ವಿವಾದಾತ್ಮಕ ಕಾನೂನುಗಳು ದಲಿತರಲ್ಲಿ, ಶೂಧ್ರರಿಗೆ ಹಾಗೂ ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿವೆ. ಅವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಮತಾಂತರ ನಿಷೇಧ ಕಾನೂನು ಬಳಸಿಕೊಂಡು ಅಲ್ಲಿನ ಹಿಂದೂತ್ವಾದಿ ಪುಂಡರು ಅಂತರ್ ಧರ್ಮೀಯ ವಿವಾಹವಾದವರಿಗೆ ಮತ್ತು ಅಂತರ್ ಧರ್ಮೀಯ ಪ್ರೇಮಿಗಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಹಾಗೆ ನೋಡಿದರೆ ಮತಾಂತರ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆಯಿಲ್ಲ. ಆದರೆ ಬಲಾತ್ಕಾರದ ಮತಾಂತರ, ಆಮಿಷದ ಮತಾಂತರ ಎಂಬ ಪದಪುಚ್ಛಗಳನ್ನು ಸೇರಿಸಿ ಈ ಕಾನೂನು ರೂಪಿಸಲಾಗಿದೆ.
ಕೋವಿಡ್ ನಿರ್ವಹಣೆಯಲ್ಲೂ ಯೋಗಿ ಆದಿತ್ಯನಾಥ್ ಸರ್ಕಾರ ಎಡವಿದೆ. ಗಂಗಾನದಿಯಲ್ಲಿ ಮೃತ ಕೋವಿಡ್ ರೋಗಿಗಳ ಹೆಣಗಳು ತೇಲಿದ ವಿಡಿಯೋ ಜಾಗತಿಕವಾಗಿ ಟೀಕೆ ಒಳಗಾಗಿತ್ತು.
ಈ ಎಲ್ಲದರ ನಡುವೆಯೂ ಬಿಜೆಪಿ ಮತ್ತೆ ಹಿಂದೂತ್ವದ ಅಜೆಂಡಾ ಮುನ್ನೆಲೆಗೆ ತಂದು ಗೆಲ್ಲುವ ಕಸರತ್ತು ಮಾಡುತ್ತಿದೆ.ಸಾಲುಸಾಲಾಗಿ ಪ್ರಮುಖ ಯೋಜನೆಗಳನ್ನು ಘೋಷಿಸುತ್ತಿದೆ. ಹಿಂದೂತ್ವ ಮಾತ್ತು ಅಭಿವೃದ್ಧಿ ಎಂಬ ಭ್ರಮೆಗಳೇ ಅದಕ್ಕೆ ಆಧಾರ.
ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಬಹುದೊಡ್ಡ ರಾಜ್ಯ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ಫಲಿತಾಂಸ ಪರಿಣಾಮ ಬೀರಲಿದೆ. ಈ ಕಾರಣಕ್ಕೆ ಮೋದಿ ಮತ್ತು ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡೇ ಮೋದಿ ಉತ್ತರಪ್ರದೇಶದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡುತ್ತ, ಸಮಾಜವಾದಿ ಪಕ್ಷದ ಅಖಿಲೇಶ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಅಖಿಲೇಶ್ ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ.
ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಪ್ರಧಾನಿ ಮೋದಿ ಅವರು ಶನಿವಾರ ಉದ್ಘಾಟಿದ್ದರು. ಈ ವಿಚಾರವಾಗಿ ರಿಬ್ಬನ್‌ಗಳನ್ನು ಕತ್ತರಿಸುವುದು ಕೆಲವರಿಗೆ ಆದ್ಯತೆಯಾಗಿದೆ ಎಂದು ಅಖಿಲೇಶ್ ಯಾದವ್ ಮೋದಿ ಅವರನ್ನು ಟೀಕಿಸಿದ್ದರು. ತಮ್ಮ ಆಡಳಿತದಲ್ಲಿ ಸರಯು ಕಾಲುವೆ ನೀರಾವರಿ ಯೋಜನೆಯ ಪ್ರಮುಖ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಅಖಿಲೇಶ್ ಹೇಳಿದ್ದಕ್ಕೆ ಪ್ರತಿಯಾಗಿ ಮೋದಿ ʼರಿಬ್ಬನ್ʼ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಶನಿವಾರ ಅಭಿವೃದ್ಧಿ ಯೋಜನೆಗಳ ಕ್ರೆಡಿಟ್ ಅನ್ನು ತೆಗೆದುಕೊಳ್ಳಲು ಪರಸ್ಪರ ಟೀಕೆಗಳನ್ನು ಮಾಡಿಕೊಂಡಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ, ʼಲಾಲ್ ಟೋಪಿವಾಲೆ ಬಹುತ್ ಡೇಂಜರ್ʼ ( ಕೆಂಪು ಟೊಪ್ಪಿವಾಲಾಗಳು ಅಪಾಯಕಾರಿ) ಎಂದು ಸಮಾಜವಾದಿ ಪಕ್ಷವನ್ನು ಟೀಕಿಸಿದ್ದರು. ಸಮಾಜವಾದಿ ಪಕ್ಷದ ಸದಸ್ಯರು ಕೆಂಪು ಟೊಪ್ಪಿಗೆ ಧರಿಸುತ್ತಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಅಕಿಲೇಶ್ ಯಾದವ್, ಕೆಂಪು ಬಣ್ಣದ ಮಹತ್ವ ವಿವರಿಸಿ, ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದರು. ಮೋದಿಯವರು ಮಾಡಿದ ಆ ರಾಜಕೀಯ ಭಾಷಣವನ್ನು ಪ್ರಧಾನಿ ಕಚೇರಿ ಪ್ರಕಟಿಸುವ ಮೂಲಕ ಶಿಷ್ಟಾಚಾರದ ಉಲ್ಲಂಘನೆ ಮಾಡಿತ್ತು. ಇದು ತೀವ್ರ ಟೀಕೆಗೂ ಗುರಿಯಾಗಿತ್ತು.ಈಗ ಸರಯು ಯೋಜನೆಯ ವಿಷಯದಲ್ಲಿ ಮತ್ತೆ ರಾಜಕೀಯ ಕಿತ್ತಾಟ ಮುಂದುವರೆದಿದೆ.
ಇನ್ನೊಂದು ಕಡೆ ಪ್ರಿಯಾಂಕಾ ಗಾಂಧಿ ಮತ್ತು ಮಾಯಾವತಿ ತಮ್ಮದೇ ತಂತ್ರಗಳನ್ನು ರೂಪಿಸುತ್ತಿದ್ದಾರೆ.ಚುನಾವಣೆಗೂ ಮುನ್ನ ಗಂಗೆಯಲ್ಲಿ ಸಾಕಷ್ಟು ನೀರು ಹರಿಯಲಿದೆ. ಅಷ್ಟೇ ರಭಸವಾಗಿ ಟೀಕೆ-ಪ್ರತಿಟೀಕೆಗಳು ಗಾಳಿಯಲ್ಲಿ ತೇಲಾಡಲಿವೆ.