
ನಾ ದಿವಾಕರ
ಭಾರತೀಯ ಸಮಾಜದಲ್ಲಿ, ಎಲ್ಲ ಸ್ತರಗಳಲ್ಲೂ, ಶತಮಾನಗಳಿಂದಲೂ ಗುರುತಿಸಬಹುದಾದ ಒಂದು ಸಮಾನ ಲಕ್ಷಣ ಎಂದರೆ ಲಿಂಗ ಸೂಕ್ಷ್ಮತೆಯ ಕೊರತೆ. ಸ್ವಾತಂತ್ರ್ಯಾನಂತರದಲ್ಲಿ ಜಗತ್ತಿನ ಅತ್ಯುತ್ತಮ ಸಂವಿಧಾನವನ್ನು ಅಳವಡಿಸಿಕೊಂಡಿದ್ದರೂ, ಸಮಕಾಲೀನ ಸಮಾಜದಲ್ಲಿ ಈ ಸೂಕ್ಷ್ಮತೆಯ ಒಂದು ಎಳೆಯೂ ಸಹ ಹೆಚ್ಚಾಗದಿರುವುದು ವಾಸ್ತವ. ಮಹಿಳೆ ತನ್ನ ಮೂಲಭೂತ (ಮಾನವ) ಹಕ್ಕುಗಳಿಗಾಗಿ, ಘನತೆಯ ಬದುಕಿನ ಹಕ್ಕಿಗಾಗಿ, ಸಮಾನ ಸ್ಥಾನಮಾನ-ಉದ್ಯೋಗಕ್ಕಾಗಿ, ವೈಯುಕ್ತಿಕ ಅಸ್ಮಿತೆಗಾಗಿಯೂ (Personal Identity) ಸಹ ಹೋರಾಟಗಳನ್ನು ನಡೆಸಿ, ಶಾಸನಗಳ ಮೂಲಕ ರಕ್ಷಣೆ ಪಡೆಯುವಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಭಾರತ ಇದೆ. ಅಂದರೆ ಸಮಾಜ ಕಲ್ಪಿಸಲಾಗದ ಮಾನವೀಯ ಚೌಕಟ್ಟುಗಳನ್ನು (Humane framework) ಸರ್ಕಾರಗಳು ಶಾಸನಗಳ ಮುಖೇನ ಕಲ್ಪಿಸಬೇಕಿದೆ.
ಹೆತ್ತವರು ತಮ್ಮ ಹೆಣ್ಣುಮಕ್ಕಳನ್ನು ಹತ್ಯೆ ಮಾಡಕೂಡದು ಎಂಬ ಮಾನವೀಯ ತಿಳುವಳಿಕೆ ನಾಗರಿಕತೆಯಲ್ಲೇ ಅಂತರ್ಗತವಾಗಿರಬೇಕು. ಅಜ್ಞಾನದ ಕೂಪದಲ್ಲಿರುವ ಸಮಾಜದಲ್ಲೂ ಇದನ್ನು ಕಾಣಬಹುದು. ಏಕೆಂದರೆ ಕರುಳು ಬಳ್ಳಿಯ ಸಂಬಂಧಗಳನ್ನು ನಿರ್ವಚಿಸಲು ಜಾತಿ, ಮತ, ಧರ್ಮ, ಸಂಹಿತೆಗಳ ಅವಶ್ಯಕತೆ ಇರುವುದಿಲ್ಲ. ಆದರೆ ಡಿಜಿಟಲ್ ಭಾರತದ ವೈಚಿತ್ರ್ಯ ಎಂದರೆ ಈ ಅಸ್ಮಿತೆಗಳೇ ಮನುಷ್ಯ ಸ್ವಭಾವದ ಮೇಲೆ ಸವಾರಿ ಮಾಡುತ್ತವೆ. ಕರುಳ ಕುಡಿ, ಬಾಳ ಸಂಗಾತಿ, ಕುಟುಂಬದ ಸೊಸೆ, ಹೆತ್ತ ತಾಯಿ/ತಂದೆ ಈ ಎಲ್ಲ ಮನುಜ ಸಂಬಂಧಗಳನ್ನೂ ಜಾತಿ/ಮತೀಯ ಪ್ರಜ್ಞೆ ನಿರ್ವಚಿಸುವ ಒಂದು ಪರಂಪರೆಗೆ ಭಾರತೀಯ ಸಮಾಜ ಒಗ್ಗಿಹೋಗಿದೆ. ಹಾಗಾಗಿಯೇ “ ಮನುಷ್ಯರಾಗಿ ಬದುಕಿ ”ಎಂದು ಹೇಳುವುದಕ್ಕೂ ಸಾಂವಿಧಾನಿಕ ಶಾಸನದ ಅಗತ್ಯತೆಯನ್ನು ಕಾಣುತ್ತಿದ್ದೇವೆ. ನಾಚಿಕೆಗೇಡು ಅಲ್ಲವೇ ?

ಸಂಸ್ಕೃತಿ ಸಮಾಜ- ಕಾನೂನು
ಉದಾತ್ತ ಸಂಸ್ಕೃತಿ, ಭವ್ಯ ಪರಂಪರೆ, ಶ್ರೀಮಂತ ಇತಿಹಾಸ, ಸಮೃದ್ಧ ಸಾಹಿತ್ಯ ಈ ಆತ್ಮರತಿಯ ಚೌಕಟ್ಟುಗಳಿಂದ ಹೊರಬಂದು ಆತ್ಮವಿಮರ್ಶೆಯ ದೃಷ್ಟಿಯಿಂದ ನೋಡಿದಾಗ ನಮಗೆ ಕಾಣುವ ಕರಾಳ ಜಗತ್ತು ಇಂತಹ ಅಪಭ್ರಂಶಗಳನ್ನು ತೆರೆದಿಡುತ್ತದೆ. ಬಹುಶಃ ಮಹಿಳಾ ಹೋರಾಟಗಳು ಇಲ್ಲದೆ ಹೋಗಿದ್ದರೆ, ಭಾರತದ ಪಿತೃಪ್ರಧಾನ ಸಮಾಜ ಇನ್ನೂ ಸಹ ಮಹಿಳಾಧೀನತೆಯನ್ನು ವೈಭವೀಕರಿಸುವ ಪ್ರಾಚೀನ ಜೀವನಶೈಲಿಯನ್ನೇ ಅನುಸರಿಸುತ್ತಿತ್ತು ಎನಿಸುತ್ತದೆ. ರಾಜಕೀಯ, ಆಡಳಿತಾತ್ಮಕ, ಸಾಂವಿಧಾನಿಕ, ಆಧ್ಯಾತ್ಮಿಕ-ಧಾರ್ಮಿಕ ಸಮವಸ್ತ್ರಗಳಿಗೂ ಅತ್ಯಾಚಾರ, ದೌರ್ಜನ್ಯ, ಹತ್ಯೆಗಳ ಕಲೆ ಮೆತ್ತಿಕೊಂಡಿದೆ. ಈ ಹೊತ್ತಿನಲ್ಲಿ ಗಾಂಧಿ ಕಲ್ಪನೆಯ “ ನಡುರಾತ್ರಿಯಲ್ಲಿ ಏಕಾಂಗಿಯಾಗಿ ಧೈರ್ಯದಿಂದ ಓಡಾಡುವ ಮಹಿಳೆ ” ಕಲ್ಪನೆಯಲ್ಲೇ ಉಳಿದಿದ್ದಾಳೆ. ಆಗಾಗ್ಗೆ ಹಾಥ್ರಸ್‌ನ ಯುವತಿಯ ಹಾಗೆ ನಡುರಾತ್ರಿ ಬೂದಿಯಾದುತ್ತಿದ್ದಾಳೆ.
ಈ ಸಮಾಜದಲ್ಲಿ ಮನುಜ ಸೂಕ್ಷ್ಮತೆಯನ್ನು ಬೆಳೆಸಲು ʼ ಇವ ನಮ್ಮವ-ಇವ ನಮ್ಮವ ʼ ವಚನದ ಸಾಲುಗಳನ್ನು ಹೇಳುತ್ತಲೇ ಇರಬೇಕೇ ? ಅಥವಾ “ ಮನುಷ್ಯ ಜಾತಿ ತಾನೊಂದೇ ವಲಂ ”ಎಂದು ಪಂಪನ ಜಪ ಮಾಡುತ್ತಲೇ ಇರಬೇಕೇ ? ವಿವಾಹ ಎನ್ನುವ ಸಂಸ್ಥೆಯನ್ನು ಜಾತಿ-ಧರ್ಮಗಳ ಸರಳುಗಳಲ್ಲಿ ಬಂಧಿಸಿರುವ ಭಾರತೀಯ ಸಮಾಜ, ಮನುಜ ಸಂಬಂಧಗಳನ್ನು ಶಾಶ್ವತವಾಗಿ ಬೆಸೆಯುವ ಈ ಸಂಸ್ಥೆ, ಕ್ರಮೇಣವಾಗಿ ಜಾತಿ ಪ್ರಜ್ಞೆಯ, ಧಾರ್ಮಿಕ ಅಸ್ಮಿತೆಯ ದುಷ್ಟ ಕೂಪವಾಗಿ ಪರಿವರ್ತನೆಯಾಗುತ್ತಿರುದಕ್ಕೆ ಮೂಕ ಪ್ರೇಕ್ಷಕನಂತಾಗಿದೆ. ಎರಡು ಜೀವಗಳೊಂದಾಗಿ ಮತ್ತೊಂದು ಜೀವ ತಳೆಯಲು ಕಾರಣವಾಗುವ ಬಾಂಧವ್ಯದ ಜಗತ್ತನ್ನು ಜಾತಿ-ಧರ್ಮದ ಅಸ್ಮಿತೆಗಳಿಂದ ಕಲುಷಿತಗೊಳಿಸುತ್ತಿರುವ ಸಮಾಜಕ್ಕೆ ಅಂಕುಶ ಹಾಕಲು ಕಾನೂನಿನ ನೆರವು ಅಪೇಕ್ಷಿಸುತ್ತಿದ್ದೇವೆ. ಈ ಕಲುಷಿತ ವಾತಾವರಣದಲ್ಲಿ ಹೆಣ್ಣು ಮಕ್ಕಳು (ಕೆಲವೊಮ್ಮೆ ಗಂಡುಮಕ್ಕಳು) ಬಲಿಪೀಠಕ್ಕೆ ಏರುವುದು ʼ ಮರ್ಯಾದೆ ʼಗಾಗಿ. ಕುಟುಂಬ, ಸಮುದಾಯ, ಸಮಾಜ ಇವುಗಳ ʼಮರ್ಯಾದೆʼ ಉಳಿಸುವ ದಂಡ ಶುಲ್ಕ ಮಕ್ಕಳ ಜೀವ.

ಬಸವಣ್ಣನ ಈ ವಚನ ಮನುಷ್ಯರಲ್ಲಿ ಅಂತರ್ಗತವಾಗಿರಬೇಕಾದ ಒಂದು ಔದಾತ್ಯ. ಪ್ರತಿಯೊಬ್ಬರನ್ನೂ ಆತ್ಮೀಯತೆಯಿಂದ ಅಕ್ಕರೆಯಿಂದ ಒಪ್ಪಿಕೊಳ್ಳಿ ಎಂದು ಹೇಳುವ ಈ ವಚನ ಅಸಹಿಷ್ಣುತೆ, ಜಾತಿ-ಧರ್ಮಗಳ ಭೇದಭಾವಗಳನ್ನು ತೊಡೆದುಹಾಕಲೂ ಪ್ರಚೋದಿಸುತ್ತದೆ. ಬಸವಣ್ಣನನ್ನು ಆರಾಧಿಸುವ ನಿತ್ಯ ಪಠಿಸುವ ಸಮುದಾಯದಲ್ಲೇ ಕಂಡ ಕರಾಳ ಸತ್ಯ ಮತ್ತು ಕ್ರೌರ್ಯ ಈ ವಚನವನ್ನು ಗ್ರಾಂಥಿಕಗೊಳಿಸಿದೆ. ತನ್ನ ತಂದೆಯಿಂದಲೇ ಹತ್ಯೆಗೀಡಾದ ಮಾನ್ಯ ಎಂಬ 19 ವರ್ಷದ ಯುವತಿ ಮಾಡಿದ ಅಪರಾಧ ಜಾತಿಯ ಗೆರೆಯನ್ನು ದಾಟಿ ಹೋಗಿದ್ದು. ಪ್ರಜಾಪ್ರಭುತ್ವದ ಒಂದು ಚುನಾಯಿತ ಸರ್ಕಾರ ನಿದ್ರೆಯಿಂದ ಎಚ್ಚೆತ್ತುಕೊಳ್ಳಲು ಈಕೆಯೊಬ್ಬಳೇ ಅಲ್ಲ, 2021-25ರ ಅವಧಿಯಲ್ಲಿ 15 ಹತ್ಯೆಗಳು ಸಂಭವಿಸಬೇಕಾಯಿತು. ಎಲ್ಲವೂ ʼಮರ್ಯಾದೆʼಯ ಹೆಸರಿನಲ್ಲಿ. ಎರಡು ಸರ್ಕಾರಗಳಿದ್ದವು ಆದರೂ, ಹೆಣ್ಣು ಭ್ರೂಣ ಹತ್ಯೆಯಂತೆಯೇ ಇದು ಗಂಭೀರ ಸಮಸ್ಯೆ ಅನ್ನಿಸಲೇ ಇಲ್ಲ !!!
ಸಾಮಾಜಿಕ ಮೌಲ್ಯಗಳು ಮತ್ತು ಕಾನೂನು
ಮಾನವೀಯ ಸಮಾಜದಲ್ಲಿ ವ್ಯಕ್ತಿಗತ ಮನಸ್ಥಿತಿಯಾಗಬೇಕಾದ, ಜೀವನಾದರ್ಶವಾಗಬೇಕಾದ ಔದಾತ್ಯವನ್ನು ಕಾನೂನಾತ್ಮಕವಾಗಿ ಕಾಪಾಡುವುದು ಹೆಮ್ಮೆಯ ವಿಚಾರವಲ್ಲ. ಇದು ಸಾಮಾಜಿಕ ಅಧಃಪತನದ, ನೈತಿಕ ಪಾತಾಳ ಕುಸಿತದ ಸಂಕೇತ. ಬಸವ ಚಳುವಳಿ 12ನೆ ಶತಮಾನದಲ್ಲಿ ಪಿತೃಪ್ರಧಾನತೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಆದರೆ ಬಸವಣ್ಣನನ್ನು ಕರ್ನಾಟಕದ ʼ ಸಾಂಸ್ಕೃತಿಕ ನಾಯಕ ʼ ಎಂದು ಅಧಿಕೃತವಾಗಿ ಘೋಷಿಸಿರುವ ಸಮಾಜವೊಂದು ಪಿತೃಪ್ರಧಾನತೆಯ ಕ್ರೌರ್ಯಕ್ಕೆ ವಿದಾಯ ಹೇಳಬೇಕಿತ್ತಲ್ಲವೇ ? ಈಗ ಕಾನೂನು ಕಡಿವಾಣ ಹಾಕುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ʼ ಮರ್ಯಾದೆಗೇಡು ಹತ್ಯೆಗಳು ʼ ಆಕಸ್ಮಿಕ ಸಾವು, ಆತ್ಮಹತ್ಯೆಗಳಾಗಿ ಕಾಣಲಾರಂಭಿಸುವ ಸಾಧ್ಯತೆಗಳಿವೆ. ಹೆಣ್ಣು ಭ್ರೂಣ ಹತ್ಯೆಗಾಗಿಯೇ ಏಜೆನ್ಸಿಗಳನ್ನು ಸೃಷ್ಟಿಸುವ ಕ್ರೂರ ಸಮಾಜ, ಬಹುಶಃ ಇಲ್ಲಿಯೂ ಸಹ ತನ್ನದೇ ಆದ ಸಾಂಸ್ಥಿಕ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಮೌಲ್ಯಗಳನ್ನು ಮತ್ತು ಅದರೊಳಗಿನ ಲೌಕಿಕ ಕ್ರೌರ್ಯ, ಬೌದ್ಧಿಕ ಅಸಹನೆ ಮತ್ತು ಹಿಂಸೆಯನ್ನು ಕಾನೂನುಗಳ ಮೂಲಕ ಹೋಗಲಾಡಿಸಲು ಸಾಧ್ಯವಾಗಿದ್ದರೆ, ಈ 78 ವರ್ಷಗಳಲ್ಲಿ ಭಾರತ ಎಂದೋ ʼ ಮಹಿಳಾ ದೌರ್ಜನ್ಯ ಮುಕ್ತ ʼ ದೇಶವಾಗುತ್ತಿತ್ತು. ಮರ್ಯಾದೆಗೇಡು ಹತ್ಯೆಯಂತಹ ಭೀಕರ ಹಿಂಸಾಕೃತ್ಯಗಳು ನಮ್ಮ ಕಣ್ಣಿಗೆ ರಾಚುತ್ತವೆ, ಸಮಾಜ ಕಂಬನಿ ಮಿಡಿಯುತ್ತದೆ, ಸಮುದಾಯ ಮರುಗುತ್ತದೆ, ಆದರೆ ಬಸವಧರ್ಮ ಪರಿಪಾಲಕ ಸಮವಸ್ತ್ರಧಾರಿಗಳು ಉಸಿರೆತ್ತದೆ ಮೌನ ವಹಿಸುತ್ತಾರೆ. ಮಾನ್ಯ ಪ್ರಕರಣದ ಕೊಲೆಗಡುಕರಿಗೆ ಆಕೆ ಪ್ರತಿನಿಧಿಸುತ್ತಿದ್ದ ಸಮಾಜ ಅಥವಾ ಸಮುದಾಯ ಯಾವುದೇ ದಂಡ ವಿಧಿಸಲಿಲ್ಲ, ಶಿಕ್ಷೆ ನೀಡಲಿಲ್ಲ. ಏಕೆಂದರೆ ಈ ಸಮಾಜದಲ್ಲಿ ನ್ಯಾಯಾನ್ಯಾಯಗಳನ್ನು ನಿಷ್ಕರ್ಷೆ ಮಾಡುವ ಸರ್ವೋಚ್ಛ ನ್ಯಾಯಪೀಠಕ್ಕೆ ಜಾತಿ ಶ್ರೇಷ್ಠತೆಯ ಗೀಳು ಅಂಟಿಕೊಂಡಿದೆ. ಅಲ್ಲಿ ಹೆಣ್ಣು ಅಧೀನಳಾಗಿಯೇ ಕಾಣುತ್ತಾಳೆ. ಹಾಗಾಗಿಯೇ ಹತ್ಯೆಯ ನಂತರದಲ್ಲೂ ಮಾನ್ಯ ಹಿಂದುತ್ವ ರಾಜಕಾರಣಕ್ಕೆ ʼ ಹಿಂದೂ ʼಆಗಿ ಕಾಣಲಿಲ್ಲ.
ಸುಶಿಕ್ಷಿತ ಮತ್ತು ಸುಸಂಸ್ಕೃತ ಎಂದು ಬೆನ್ನುತಟ್ಟಿಕೊಳ್ಳುವ ಸಮಾಜಗಳ ಸದಸ್ಯರಲ್ಲಿ ʼಮಾನವೀಯʼ ಹಾಗೂ ʼಸರ್ವಸಮಾನತೆಯʼ ಮೌಲ್ಯಗಳನ್ನು ಬೆಳೆಸಲು ಧಾರ್ಮಿಕ ಸಂಹಿತೆಗಳಾಗಲೀ, ಜಾತಿ ಕೇಂದ್ರಿತ ದಾರ್ಶನಿಕ ಹಿತವಚನಗಳಾಗಲೀ ಫಲಕಾರಿಯಾಗುವುದಿಲ್ಲ ಎಂದು ಭಾರತೀಯ ಸಮಾಜ ಮತ್ತೆಮತ್ತೆ ನಿರೂಪಿಸುತ್ತಲೇ ಇದೆ. ಈ ಎರಡೂ ಮೌಲ್ಯಗಳು ತಳಮಟ್ಟದವರೆಗೂ ತಲುಪದಿರುವಂತೆ ಕಾಪಾಡಲೆಂದೇ ಜಾತಿ, ಮತ, ಧರ್ಮ ಮತ್ತು ಆಧ್ಯಾತ್ಮವನ್ನು ಸಾಂಸ್ಥೀಕರಣಗೊಳಿಸಲಾಗುತ್ತದೆ. ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಪ್ರತಿನಿಧಿಗಳು ಬಹುತೇಕವಾಗಿ ಈ ಸಾಂಸ್ಥಿಕ ಚೌಕಟ್ಟುಗಳ ಸಂಕೋಲೆಗಳಲ್ಲಿ ಬಂಧಿತರಾಗಿದ್ದಾರೆ. ಆದ್ದರಿಂದಲೇ ಪಿತೃಪ್ರಧಾನತೆಯ ಮೌಲ್ಯಗಳು ಭಾರತೀಯ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ಮಜಲುಗಳನ್ನೂ, ಎಲ್ಲ ಸಮುದಾಯಗಳನ್ನೂ ಆಕ್ರಮಿಸಿಕೊಂಡಿವೆ. ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ಈ ಪ್ರಾಚೀನ ಸಾಂಸ್ಥಿಕ/ವ್ಯಕ್ತಿಗತ ಮೌಲ್ಯಗಳು ನಾಶವಾಗಬೇಕು.
ನಾಚಿಕೆಗೇಡಿನ ಪ್ರಸಂಗಗಳು

ದುರದೃಷ್ಟವಶಾತ್ ಭಾರತೀಯ ಸಮಾಜ ಇದರಿಂದ ಮುಕ್ತವಾಗಿಲ್ಲ. ಗ್ರಾಂಥಿಕವಾಗಿ ವ್ಯಕ್ತವಾಗುವ ಮಹಿಳಾ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆ, ಭಾವನಾತ್ಮಕವಾಗಿ ಅಪಭ್ರಂಶಕ್ಕೊಳಗಾಗಿರುತ್ತದೆ, ಸಾಂಸ್ಕೃತಿಕವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುತ್ತದೆ. ಇತ್ತೀಚಿನ ಎರಡು ಪ್ರಸಂಗಗಳು ಇದಕ್ಕೆ ನಿದರ್ಶನವಾಗಿ ಕಾಣುತ್ತದೆ.
ಮೊದಲನೆಯದು ತಮಿಳು ಕವಿ ಮತ್ತು ಚಲನಚಿತ್ರ ಗೀತರಚನೆಕಾರ ವೈರಮುತ್ತು ಅವರ ಸಾಹಿತ್ಯಕ್ಕೆ ಮನ್ನಣೆ ನೀಡಿ ದೇಶದ ಅತ್ಯಂತ ಪ್ರತಿ಼ಷ್ಟಿತ ಜ್ಞಾನಪೀಠ ಪ್ರಶಸ್ತಿ ನೀಡಿರುವುದು. ಈ ಪ್ರಶಸ್ತಿಯನ್ನು ನೀಡುವುದು ಖಾಸಗಿ ಸಂಸ್ಥೆಯಾದರೂ, ರಾಜಕೀಯ ಹಸ್ತಕ್ಷೇಪ ಮತ್ತು ಹಿತಾಸಕ್ತಿಗಳಿಂದ ಮುಕ್ತವಾಗಿಲ್ಲ ಎನ್ನುವುದು ವಾಸ್ತವ. ವೈರಮುತ್ತು ರಾಮಸ್ವಾಮಿ ಅವರ ಕಾವ್ಯ ಪ್ರತಿಭೆ ಮತ್ತು ಜನಪ್ರಿಯತೆಯನ್ನೇ ಮಾನದಂಡವಾಗಿಟ್ಟುಕೊಂಡು, ಜ್ಞಾನಪೀಠ ನೀಡುವುದೇ ಆದರೂ, ಉತ್ತಮ ಗೀತೆಗಳನ್ನು ಬರೆದಿರುವುದು ಈ ಅತ್ಯುನ್ನತ ಪ್ರಶಸ್ತಿಗೆ ಅರ್ಹವಾಗುವುದಿಲ್ಲ. ಸಾಹಿತಿಯ ಸಾರ್ವಜನಿಕ ವ್ಯಕ್ತಿತ್ವ ಮತ್ತು ಚಾರಿತ್ರ್ಯವೂ ಮುಖ್ಯವಾಗುತ್ತದೆ. ಈ ಆಯ್ಕೆಯ ಹಿಂದೆ ಬರಲಿರುವ ತಮಿಳುನಾಡು ಚುನಾವಣೆಗಳ ಲಾಭ ನಷ್ಟಗಳ ಲೆಕ್ಕಾಚಾರ ಇರುವುದು ಗುಟ್ಟಿನ ಮಾತೂ ಅಲ್ಲ.

ಆದರೆ ಈ ಪ್ರಶಸ್ತಿಯನ್ನು ವಿರೋಧಿಸುತ್ತಿರುವ ಕಾರಣ, ವೈರಮುತ್ತು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳ ಹಲವಾರು ಪ್ರಕರಣಗಳು #ಮಿ ಟೂ ಆಂದೋಲನದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿರುವ ವೈರಮುತ್ತು ವಿರುದ್ಧ ಅಧಿಕೃತವಾಗಿ ದೂರುಗಳು ದಾಖಲಾಗಿವೆ. 17 ಮಹಿಳಾ ಕಲಾವಿದರು ವೈರಮುತ್ತು ವಿರುದ್ಧ ಅನುಚಿತ ವರ್ತನೆಯ ಆರೋಪ ಮಾಡಿದ್ದಾರೆ. 1990-2000ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಗಳನ್ನು ಸಾಕ್ಷೀಕರಿಸುವಂತೆ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ 2005ರಲ್ಲಿ ತಾನೂ ಸಹ ಈ ರೀತಿಯ ಚಿತ್ರಹಿಂಸೆ ಅನುಭವಿಸಿರುವುದನ್ನು ಮಾಧ್ಯಮಗಳ ಮುಂದೆ ದಾಖಲಿಸಿದ್ದರು. ವಿಪರ್ಯಾಸವೆಂದರೆ ಈಕೆ ತಮಿಳು ಚಿತ್ರರಂಗದ ಪಿತೃಪ್ರಧಾನ ವ್ಯವಸ್ಥೆಯ ಅವಕೃಪೆಗೊಳಗಾಗಿ ವೃತ್ತಿಯಲ್ಲಿ ಹಿನ್ನಡೆ ಎದುರಿಸಬೇಕಾಯಿತು.
ಮಹಿಳಾ ದೌರ್ಜನ್ಯದ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಜ್ಞಾನಪೀಠ ನೀಡುವುದು ರಾಜಕೀಯ ದೃಷ್ಟಿಯಿಂದ ನೋಡಿದಾಗ ಪಿತೃಪ್ರಧಾನತೆಯ ಬೇರುಗಳು ನಮ್ಮ ಅಧಿಕಾರ ರಾಜಕಾರಣದಲ್ಲಿ ಎಷ್ಟು ಆಳಕ್ಕಿಳಿದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೂ ದೇವರುಗಳನ್ನು ಅವಹೇಳನ ಮಾಡಿದ್ದರೆಂದು ವೈರಮುತ್ತು ವಿರುದ್ಧ ಮೊದಲಿನಿಂದಲೂ ಆರೋಪ ಹೊರಿಸುತ್ತಿರುವ ಬಿಜೆಪಿ ಜ್ಞಾನಪೀಠ ಪ್ರಶಸ್ತಿ ನೀಡಿರುವುದನ್ನೂ ಖಂಡಿಸಿದೆ, ಆದರೆ ಪೆರಿಯಾರ್ ಅನುಯಾಯಿಗಳೆಂದು ಹೇಳಿಕೊಳ್ಳುವ ಡಿಎಂಕೆ ಸರ್ಕಾರ ಮೌನ ವಹಿಸಿದೆ. ಪಿತೃಪ್ರಧಾನ ಮೌಲ್ಯಗಳಿಗೆ ತತ್ವ, ಸಿದ್ದಾಂತ, ರಾಜಕೀಯ ಅಸ್ಮಿತೆಗಳು ಗಣನೆಗೆ ಬರುವುದಿಲ್ಲ ಎಂದು ಈ ಪ್ರಸಂಗ ಸ್ಪಷ್ಟವಾಗಿ ನಿರೂಪಿಸುತ್ತದೆ.
ಮನರಂಜನೆ ಮತ್ತು ಸ್ತ್ರೀ ಸಂವೇದನೆ
ಇದೇ ಸಂದರ್ಭದಲ್ಲಿ ನಡೆದ ಮತ್ತೊಂದು ವಿವಾದಾತ್ಮಕ ಪ್ರಸಂಗ, ಕನ್ನಡ ಸಿನಿಮಾ ಹಾಡಿನ ಸುತ್ತ ಹರಡಿಕೊಂಡಿದೆ. ಕೆಡಿ-ದ ಡೆವಿಲ್ (ಇದು ಕನ್ನಡ ಅವತರಣಿಕೆ ) ಚಿತ್ರದಲ್ಲಿ ಪ್ರೇಮ್ ಅವರು ಬರೆದಿರುವ ʼ ಸರ್ಸೆ ಸರ್ಸೆ ʼ ಹಾಡು ಮಹಿಳಾ ಸಂಘಟನೆಗಳ ತೀವ್ರ ವಿರೋಧ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಸಕಾಲಿಕ ಕ್ರಮದ ಪರಿಣಾಮ ಈಗ ಮರೆಯಾಗಿದೆ. ಆದರೆ ಮಹಿಳೆಯನ್ನು ಅಗೌರವಿಂದ ಕಾಣುವ, ಭೋಗದ ವಸ್ತುವಿನಂತೆ, ಬಳಕೆಯ ಸರಕಿನಂತೆ ಕಾಣುವ ಸಾಹಿತ್ಯ ʼಪಿತೃಪ್ರಧಾನ ಮನಸ್ಥಿತಿʼಯ ದ್ಯೋತಕವಾಗಿ ಕಾಣುತ್ತದೆ. ಇದನ್ನು ಮೂಲಾರ್ಥದಲ್ಲಿ ಹಾಡು ಎನ್ನುವುದಾದರೆ, ಇದನ್ನು ರಚಿಸಿದ ಪ್ರೇಮ್ ಅವರು ತಾವು ಬಾಟಲಿ, ಉಪ್ಪಿನಕಾಯಿಯನ್ನು ರೂಪಕಗಳಾಗಿಟ್ಟುಕೊಂಡು ಬರೆದದ್ದೇ ಹೊರತು ಯಾರನ್ನೂ ನೋಯಿಸಲು ಬರೆದದ್ದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇಲ್ಲಿ ಯಾರಿಗೆ ನೋವಾಗಿದೆ ? ಕರ್ನಾಟಕದ ಮಹಿಳೆಯರಿಗೆ, ಮಹಿಳಾ ಸಂವೇದನೆ ಇರುವ ವ್ಯಕ್ತಿಗಳಿಗೆ ನೋವಾಗಿದೆ. ಆದರೆ ಘಾಸಿಯಾಗಿರುವುದು ಯಾವುದಕ್ಕೆ ? ಮಹಿಳೆಯ ಅಸ್ತಿತ್ವ, ಸ್ವಾಭಿಮಾನ ಮತ್ತು ಘನತೆಗೆ ಅಲ್ಲವೇ ? ತಡವಾಗಿಯಾದರೂ ಪ್ರೇಮ್ ಕ್ಷಮೆ ಕೇಳಿದ್ದಾರಲ್ಲಾ ಎಂದು ಸಮಾಧಾನ ವ್ಯಕ್ತಪಡಿಸುವ ಸಮಾಜಕ್ಕೆ ಈ ಘಾಸಿಯ ಆಳ ಮತ್ತು ವ್ಯಾಪ್ತಿ ಅರ್ಥವಾಗುವುದೇ ಇಲ್ಲ. ಏಕೆಂದರೆ ಇದೇ ಸಮಾಜವೇ 1980-90ರ ದಶಕದಲ್ಲಿ ಹೆಣ್ಣನ್ನು ಸವಿಯಾದ ಹಣ್ಣುಗಳಿಗೆ (ಸೀಬೆ, ಹಲಸು, ಮಾವು, ನಿಂಬೆ, ಸೇಬು ಇತ್ಯಾದಿ) ಹೋಲಿಸಿ ಬರೆದ ಚಿತ್ರಗೀತೆಗಳನ್ನು ಆಸ್ವಾದಿಸಿದೆ. ಈ ಹಾಡುಗಳಲ್ಲಿ ಅಶ್ಲೀಲತೆ-ಅಸಭ್ಯತೆ ಇರಲಿಲ್ಲ ಎಂದು ಸಮರ್ಥಿಸುವವರಿಗೆ, ಈ ರೀತಿಯ ಸಾಹಿತ್ಯದಲ್ಲಿ ಮಹಿಳೆಯನ್ನು ಭೋಗದ-ಬಳಕೆಯ ಸರಕಿನಂತೆ ಕಾಣುವ ಪಿತೃಪ್ರಧಾನ ಮನಸ್ಥಿತಿ ಇರುವುದೇಕೆ ಕಾಣುವುದಿಲ್ಲ ? ಡಾ. ರಾಜಕುಮಾರ್ ಹೊರತುಪಡಿಸಿ ಉಳಿದೆಲ್ಲಾ ನಾಯಕ ನಟರ ಚಿತ್ರಗಳಲ್ಲೂ ಈ ರೀತಿಯ ದ್ವಂದ್ವಾರ್ಥದ (Double meaning ) ಹಾಡುಗಳು ಯಥೇಚ್ಛವಾಗಿರುತ್ತಿದ್ದವು.
ʼ ಅಧಿಕಾರ ಮತ್ತು ಅಧೀನತೆ ʼ ಕೃತಿಯಲ್ಲಿ ಮೂಲ ಲೇಖಕಿ ಕೇಟ್ ಮಿಲೆಟ್ (ಅನುವಾದ ಎಚ್ ಎಸ್ ಶ್ರೀಮತಿ) ಒಂದು ಕಡೆ “ ಶೃಂಗಾರದ ಹೆಸರಿನಲ್ಲಿ ಲೈಂಗಿಕತೆಯೇ ಪ್ರಧಾನವಾಗಿರುವ ಕಾವ್ಯಗಳಿಗೆ ಬರವಿಲ್ಲ ” (ಕನ್ನಡ ಕೃತಿ ಪುಟ 266) ಎಂದು ಹೇಳುತ್ತಾರೆ. ಇದು ದೇವತೆಗಳನ್ನು ಗುಣಗಾನ ಮಾಡುವ ಭಕ್ತಿರಸ ಗೀತೆಗಳಿಂದ ಸಿನಿಮಾನಗಳ ಮನರಂಜನಾತ್ಮಕ ಹಾಡುಗಳವರೆಗೂ ವಿಸ್ತರಿಸುವ ಕಟು ಸತ್ಯ. ದ್ವಂದ್ವಾರ್ಥದ ಸಂಭಾಷಣೆಗಳು ಕನ್ನಡ ಸಿನಿಮಾದ ಯಶಸ್ಸಿನ ಪ್ರಧಾನ ಸಾಧನವಾಗಿದ್ದನ್ನೂ ಕನ್ನಡ ಚಿತ್ರರಂಗ ಕಂಡಿದೆ. ಈ ಸಂಭಾಷಣೆ-ಹಾಡುಗಳನ್ನು ಬರೆಯುವವರಿಗೆ, ಅಶ್ಲೀಲತೆ, ಅಸಭ್ಯತೆ, ಸ್ತ್ರೀ ಸೂಕ್ಷ್ಮತೆ ಇವೆಲ್ಲವೂ ಕೇಳುಗರ ಅಥವಾ ವೀಕ್ಷಕರ ಗ್ರಹಿಕೆಯ ಸಮಸ್ಯೆಯಾಗಿ ಕಾಣುತ್ತದೆ.
ಆದರೆ ವಾಸ್ತವದಲ್ಲಿ ನೋಡಬೇಕಿರುವುದು ಗೀತೆ-ಸಂಭಾಷಣೆಯ ರಚಯಿತರ ಆಲೋಚನಾ ಕ್ರಮ ಮತ್ತು ಇವರು ಪ್ರತಿನಿಧಿಸುವ ಸಮಾಜದ ಮನಸ್ಥಿತಿ. ಪಿತೃಪ್ರಧಾನತೆಯಲ್ಲಿ ಮಹಿಳಾಧೀನತೆಯ ಮನೋಭಾವ ಉಗಮಿಸುವುದು ಇಲ್ಲಿ. “ ನೀವೇಕೆ ಹಾಗೆ ಅರ್ಥಮಾಡಿಕೊಳ್ಳುತ್ತೀರಿ ? ” ಎಂಬ ಪ್ರಶ್ನೆ ನಮ್ಮ ಸರ್ಕಾರಿ/ಖಾಸಗಿ ಕಚೇರಿಗಳಲ್ಲೂ ಸಹ ದ್ವಂದ್ವಾರ್ಥ ಮಾತುಗಳ ನಡುವೆ ಕೇಳಿಬರುತ್ತದೆ. ಅಂದರೆ ನಮ್ಮ ಸಮಾಜ ಮಹಿಳೆಯರ ಸಂವೇದನೆಯನ್ನು ಘಾಸಿಗೊಳಿಸುವ ಇಂತಹ ಸಾಹಿತ್ಯ ಅಥವಾ ಮಾತುಗಳನ್ನು ಸ್ವಾಭಾವಿಕ (Natural) ಎಂದೇ ಭಾವಿಸುತ್ತದೆ. ಅಥವಾ ಸ್ವಾಭಾವಿಕೀಕರಣಗೊಳಿಸುತ್ತದೆ (Naturalisatioņ) ಇದಕ್ಕೆ ಕಿವಿಗೊಡುವ ಮಹಿಳೆಯರು ಅಥವಾ ಸಂವೇದನಾಶೀಲರು ತಮ್ಮ ಗ್ರಹಿಕೆಯ ದೋಷವನ್ನು ಸರಿಪಡಿಸಿಕೊಳ್ಳಬೇಕು ಎಂದರ್ಥವೇ ?

ಪಿತೃಪ್ರಧಾನತೆಯ ಗಟ್ಟಿ ಬೇರುಗಳು
“ ದೃಶ್ಯ ರೂಪ ನೋಡಿದ್ದರೆ ಹಾಡಿನ ಅರ್ಥ ತಿಳಿಯುತ್ತಿತ್ತು ” ಎಂಬ ಪ್ರೇಮ್ ಅವರ ಸಮರ್ಥನೆಯೇ ಪುರುಷಾಹಮಿಕೆಯ ದ್ಯೋತಕವಾಗಿ ಕಾಣುತ್ತದೆ. ಕಾವ್ಯದಲ್ಲಿ ಅಥವಾ ಗದ್ಯಸಾಹಿತ್ಯದಲ್ಲಿ ಶೃಂಗಾರ ರಸ ಸಹಜವಾಗಿ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ ಈ ಭಾವಕ್ಕೆ ಮಹಿಳೆಯ ಲೈಂಗಿಕತೆಯೇ ಏಕೆ ಕಚ್ಚಾವಸ್ತುವಾಗಬೇಕು ? ಕೆಲವು ಗದ್ಯ ಬರಹಗಳಲ್ಲೂ ಸಾಧಕರನ್ನು ಪರಿಚಯಿಸುವಾಗ ಮಹಿಳೆಯ ಅಂಗಸೌಷ್ಟವವನ್ನು ಅತಿಯಾಗಿ ಬಣ್ಣಿಸುವುದನ್ನು ಕಾಣಬಹುದು. “ ಕೆಂಪು ಗುಲಾಬಿಯ ಕೆಂದುಟಿ ಚೆಲುವೇ ” ಹಾಡಿಗೂ “ ನಿಂಬೆಹಣ್ಣಿನಂತ ಹುಡುಗಿ ಬಂತು ನೋಡು ” ಹಾಡಿಗೂ ನೈತಿಕವಾಗಿ ಎಷ್ಟು ಅಂತರವಿದೆ ಅಲ್ಲವೇ ? ಈ ಸೂಕ್ಷ್ಮ ಸಂವೇದನೆ ಸಾಹಿತ್ಯದ ಮೂಲ ಧಾತು ಆಗಿರಬೇಕು.
ಇಲ್ಲವಾದರೆ, ವೈರಮುತ್ತು ಅವರಂತಹ ಗೀತ ರಚನೆಕಾರರೂ #ಮಿ ಟೂ ಆರೋಪಿಯಾಗಿಬಿಡುತ್ತಾರೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವೆ ಹೆಚ್ಚಿನ ಅಂತರ ಇರಕೂಡದು. ಹಾಗೆಯೇ ವ್ಯಕ್ತಿಯ ಕಲಾ-ಸಾಹಿತ್ಯ ಪ್ರತಿಭೆ ಮತ್ತು ಸಾರ್ವಜನಿಕ ವ್ಯಕ್ತಿತ್ವದ ನಡುವೆಯೂ ಅಂತರ ಇರಕೂಡದು. ಆಗ ನಾವು ಅಂತಹ ಸಾಹಿತ್ಯದಲ್ಲಿರುವ ಸೃಜನಶೀಲತೆಯನ್ನು ನಿಜಾರ್ಥದಲ್ಲಿ ಗುರುತಿಸಲು ಸಾಧ್ಯ. ಇಲ್ಲವಾದರೆ, ಸಾಹಿತ್ಯದಲ್ಲಿ ಸೃಜಿಸುವ ಸಂವೇದನೆ, ಸೂಕ್ಷ್ಮತೆ ಎಲ್ಲವೂ ಸಾಂದರ್ಭಿಕ ಅನಿವಾರ್ಯತೆಗಳ ಉತ್ಪನ್ನವಾಗಿ ಮಾತ್ರ ಕಾಣುತ್ತವೆ. ವ್ಯಕ್ತಿತ್ವ ವೈಯುಕ್ತಿಕವಾದರೆ ವ್ಯಕ್ತಿ ಚಾರಿತ್ರ್ಯ ಸಾರ್ವಜನಿಕ ಸ್ವರೂಪದ್ದಾಗಿರುತ್ತದೆ. ಎರಡನ್ನೂ ಸಮಾನವಾಗಿ ಕಾಪಾಡಿಕೊಂಡರೆ ಮಾತ್ರ ಎಂತಹ ಖ್ಯಾತನಾಮರಾದರೂ ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸುತ್ತಾರೆ. ಈ ಸರಳ ಸೂಕ್ಷ್ಮತೆಯನ್ನು ಎಲ್ಲ ಕಲಾವಿದರೂ ಹೊಂದಿರಬೇಕು.

ನೈತಿಕ ನೆಲೆಯಲ್ಲಿ ನಿಂತು ನೋಡಿದಾಗ ದುರ್ವರ್ತನೆಯಾಗಿ, ದುಷ್ಟತನವಾಗಿ ಕಾಣುವ ಈ ಪ್ರವೃತ್ತಿಯ ಮೂಲ ಅಡಿಪಾಯ ಪಿತೃಪ್ರಧಾನ ಮೌಲ್ಯ ಮತ್ತು ವ್ಯವಸ್ಥೆಯಲ್ಲಿದೆ. ಗಂಡುಮಕ್ಕಳಲ್ಲಿ ಪುರುಷ ಶ್ರೇಷ್ಠತೆಯ ಅಹಮಿಕೆಯನ್ನು ರೂಢಿಗತಗೊಳಿಸುವ “ಸಮಾಜದಲ್ಲಿನ ಈ ಪ್ರವೃತ್ತಿಯು ಅವರಲ್ಲಿ ಅಹಂಕಾರವನ್ನು ತುಂಬಿಸುವ ಒಳ್ಳೆಯ ಅಕಾಡೆಮಿಯಂತೆ, ಆ ತರಬೇತಿಯನ್ನು ನೀಡುವ ವ್ಯಾಯಾಮ ಶಾಲೆಯಂತೆ ಕೆಲಸ ಮಾಡುತ್ತದೆ ” ಎಂದು ಕೇಟ್ ಮಿಲೆಟ್ ಹೇಳುತ್ತಾರೆ. (ಅಧಿಕಾರ ಮತ್ತು ಅಧೀನತೆ- ಎಚ್ ಎಸ್ ಶ್ರೀಮತಿ, ಪುಟ 257). ಭಾರತೀಯ ಸಮಾಜ ಈ ದುಷ್ಟ ಮನಸ್ಥಿತಿಯಿಂದ ಹೊರಬರಬೇಕಿದೆ. ಮಹಿಳಾ ಸಂಘಟನೆಗಳ ಪ್ರತಿರೋಧ ಇಲ್ಲದೆ ಹೋಗಿದ್ದರೆ ಸರ್ಸೆ ಸರ್ಸೆ ಹಾಡು ಈ ವೇಳೆಗೆ ಜನಜನಿತವಾಗಿಬಿಡುತ್ತಿತ್ತು. ಡಿಜಟಲ್ ಪರಿಭಾಷೆಯಲ್ಲಿ ವೈರಲ್ ಆಗಿಬಿಡುತ್ತಿತ್ತು.
ಮರ್ಯಾದೆಗೇಡು ಹತ್ಯೆಗಳನ್ನು ನಿಯಂತ್ರಿಸಲು ಜಾರಿಯಾಗುತ್ತಿರುವ ಕಾನೂನು ಮೂಲತಃ ಹತ್ಯೆಯನ್ನು ತಪ್ಪಿಸುವ ರೀತಿಯಲ್ಲಿ ಸಾಮಾಜಿಕ ಅರಿವಿನ ಕಡೆಗೆ ಗಮನಹರಿಸಬೇಕು. ಹಂತಕರನ್ನು ಶಿಕ್ಷಿಸುವುದು ಕಾನೂನಾತ್ಮಕ ಜವಾಬ್ದಾರಿಯಾದರೆ, ಸಮಾಜದಲ್ಲಿ ಪಿತೃಪ್ರಧಾನ ಕೌರ್ಯದ ನಿವಾರಣೆ ನಮ್ಮ ಸಾಮಾಜಿಕ-ನೈತಿಕ ಜವಾಬ್ದಾರಿಯಾಗಿರುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾನ್ಯಳಂತಹ ನತದೃಷ್ಟರು ಹಾಥ್ರಸ್‌ನ ,ಮಹಿಳೆಯಂತೆ ನಡುರಾತ್ರಿಯಲ್ಲಿ ಬೂದಿಯಾಗಿ ಹೋಗುತ್ತಾರೆ. ಕಾಯ್ದೆಗೆ ʼ ಇವ ನಮ್ಮವ ಇವ ನಮ್ಮವ ʼ ಎಂದು ಹೆಸರಿಸುವುದು ಅಲಂಕಾರಿಕವಾಗಿ ಗ್ರಾಂಥಿಕ ಪ್ರಕ್ರಿಯೆಯಾಗದೆ, ಸಮಾಜ ತನ್ನ ನೈತಿಕ ಜವಾಬ್ದಾರಿಯನ್ನು ಅರಿತು ನಡೆಯುವ ಒಂದು ಬೌದ್ಧಿಕ ಸಾಧನವಾದರೆ ಸಾರ್ಥಕವಾದೀತು.

-೦-೦-೦-೦-೦-






