ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ಅವರು ಕಳೆದ ಆಗಸ್ಟ್ ನಲ್ಲಿ ನಡೆಸಿದ ಲಸಿಕಾ ಅಭಿಯಾನದ ಕುರಿತ ಇನ್ನಷ್ಟು ಮಾಹಿತಿ ಹೊರಬಿದ್ದಿದ್ದು, ಇಡೀ ಲಸಿಕೆ ಅಭಿಯಾನವೇ ಅಸಲಿಯಲ್ಲ ಎಂಬ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಮಾಹಿತಿ ಹಕ್ಕು (RTI) ಕಾರ್ಯಕರ್ತ ಗಿರೀಶ್ ಅವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿಗಳಿಗೆ ಸಲ್ಲಿರುವ ದೂರಿನಲ್ಲಿ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಶಾಸಕ ಗೌರಿಶಂಕರ್ ಅವರ ಹೆಬ್ಬೂರಿನ ಮನೆಯಲ್ಲಿ ಆಗಸ್ಟ್ 1ರಂದು 10 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಲಸಿಕೆ ಇಂಡೆಂಟ್ ಇಲ್ಲ. ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ ಒ) ಗೆ ನೀಡಿದ ಪತ್ರದಲ್ಲಿ ನಮೂದಿಸಿದ ಲಸಿಕೆ ಬ್ಯಾಚ್ ಸಂಖ್ಯೆ ಮತ್ತು ಸಕರಿಯಾ ಆಸ್ಪತ್ರೆಯ ಹೆಸರಿನಲ್ಲಿ ಪಡೆದಿರುವ ಸಲಿಕೆಯ ಬ್ಯಾಚ್ ಸಂಖ್ಯೆಗಳು ಮತ್ತು ಸಕರಿಯಾ ಆಸ್ಪತ್ರೆಯ ಸಿವಿಸಿ (ಲಸಿಕಾ ಕೇಂದ್ರ) ಐಡಿಗಳನ್ನ ತಾಳೆ ಹಾಕಿದಾಗ, ಆ ನಿರ್ದಿಷ್ಟ ಆಸ್ಪತ್ರೆ ಲಸಿಕೆ ನೀಡುವ ದಿನಾಂಕ ಅಥವಾ ಅದಕ್ಕೂ ಮುನ್ನ ಯಾವುದೇ ಲಸಿಕೆ ಪಡೆದಿರಲೇ ಇಲ್ಲ!
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM)ದ ವ್ಯವಸ್ಥಾಪಕ ನಿರ್ದೇಶಕರು ದೂರುದಾರರಿಗೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಸಕರಿಯಾ ಆಸ್ಪತ್ರೆ ಮೊಟ್ಟಮೊದಲ ಬಾರಿಗೆ ಕೋವಿನ್ ಪೋರ್ಟಲ್ ಮೂಲಕ ಲಸಿಕೆ ಖರೀದಿಸಿರುವುದೇ ಆಗಸ್ಟ್ 23ರಂದು. ಆದರೆ, ಶಾಸಕ ಗೌರಿಶಂಕರ್ ಅವರ ನಿವಾಸದಲ್ಲಿ ಅವರೇ ಹೇಳಿಕೊಂಡಂತೆ 10 ಸಾವಿರ ಮಂದಿಗೆ ಇದೇ ಆಸ್ಪತ್ರೆಯ ಹೆಸರಿನಲ್ಲಿ, ಅದರ ಸಹಯೋಗದಲ್ಲಿ 10 ಸಾವಿರ ಮಂದಿಗೆ ಲಸಿಕೆ ನೀಡಿರುವುದಾಗಿ ಸ್ವತಃ ಶಾಸಕರೇ ಹೇಳಿದ್ದಾರೆ ಮತ್ತು ಅವರು ಡಿಎಚ್ ಒಗೆ ಸಲ್ಲಿಸಿರುವ ಪತ್ರದಲ್ಲಿ ಕೂಡ ಆಸ್ಪತ್ರೆಯ ಸಹಯೋಗದಲ್ಲಿ ಲಸಿಕೆ ನೀಡುತ್ತಿರುವುದಾಗಿ ಹೇಳಿದ್ದಾರೆ!
ಅಂದರೆ, ಸರ್ಕಾರದ ನಿಯಮಗಳ ಪ್ರಕಾರ ಒಂದು ಡೋಸ್ ಲಸಿಕೆಯನ್ನು ನೀಡುವಾಗ ಕೂಡ ಆ ಲಸಿಕೆಯ ಬ್ಯಾಚ್ ಸಂಖ್ಯೆ, ವಯಾಲ್ ಸಂಖ್ಯೆ, ಅದನ್ನು ಪಡೆದುಕೊಂಡಿರುವ ಆಸ್ಪತ್ರೆಯ ಅಥವಾ ಲಸಿಕಾ ಕೇಂದ್ರದ ಐಡಿಗಳ ಸಹಿತ ಸಂಪೂರ್ಣ ಮಾಹಿತಿ ಕೋವಿನ್ ಪೋರ್ಟಲ್ ನಲ್ಲಿ ನಮೂದಾಗಬೇಕು.
ಆದರೆ, ವಾಸ್ತವವಾಗಿ ಶಾಸಕರು ನಮೂದಿಸಿರುವಂತೆ 2021ರ ಆಗಸ್ಟ್ 1 ಅಥವಾ ಅದಕ್ಕೆ ಮುನ್ನ ಸಕರಿಯಾ ಆಸ್ಪತ್ರೆ ಲಸಿಕೆ ಪಡೆದುಕೊಂಡೇ ಇಲ್ಲ. ಪಿಸಿವಿಸಿ ಐಡಿ CVC 617983 ಹೆಸರಿನಲ್ಲಿ ಕೋವಿನ್ ಪೋರ್ಟಲ್ ನಲ್ಲಿ ನಮೂದಿಸಿಕೊಂಡಿರುವ ಬೆಂಗಳೂರಿನ ಸಕರಿಯಾ ಆಸ್ಪತ್ರೆ 2021ರ ಜುಲೈನಲ್ಲಿ 2500 ಮತ್ತು 500 ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ ಬೇಡಿಕೆ ಸಲ್ಲಿಸಿತ್ತು(ಇಂಡೆಂಟ್ ಸಂಖ್ಯೆ-182204351 ಮತ್ತು 2710198649). ಆದರೆ, ಆ ಎರಡೂ ಬೇಡಿಕೆಯನ್ನು ಲಸಿಕೆ ಪಡೆಯುವ ಮುನ್ನವೇ ತಿರಸ್ಕರಿಸಲಾಗಿತ್ತು. ಬಳಿಕ ಸಕರಿಯಾ ಆಸ್ಪತ್ರೆ ಆಗಸ್ಟ್ 23ರಂದು ತನ್ನ ನೋಂದಾಯಿತ ಪಿಸಿವಿಸಿ ಐಡಿ 617983ರ ಮೂಲಕ ಕೋವಿನ್ ಪೋರ್ಟಲ್ ನಲ್ಲಿ 3000 ಕೋವಿಶೀಲ್ಡ್ ಲಸಿಕೆಗೆ ಬೇಡಿಕೆ ಸಲ್ಲಿಸಿ(ಇಂಡೆಂಟ್ ಸಂಖ್ಯೆ-5424252873), ಬ್ಯಾಚ್ ನಂಬರ್ 4121P154ನ ಲಿಸಿಕೆಯನ್ನು ಪಡೆದುಕೊಂಡಿದೆ ಎಂದು ಎನ್ ಎಚ್ ಎಂ ಎಂಡಿಯವರು ನೀಡಿದ ಮಾಹಿತಿ ಹೇಳುತ್ತದೆ.
ಆದರೆ, ಡಿಎಚ್ ಒ ಕಚೇರಿಗೆ ಡಿ ಸಿ ಗೌರಿಶಂಕರ್ ಅವರು ಸಲ್ಲಿಸಿರುವ ಲಸಿಕೆ ಪಡೆದ ಕುರಿತು ಸಲ್ಲಿಸಿರುವ ಮ್ಯೂನ್ಯುವಲ್ ಬಿಲ್ ಪ್ರಕಾರ, ಆಗಸ್ಟ್ 1ರಂದು ಸಕರಿಯಾ ಆಸ್ಪತ್ರೆಯ ನೋಂದಾಯಿತ ಲಸಿಕಾ ಕೇಂದ್ರವಾದ(CVC W818792) ಶಾಸಕ ಗೌರಿಶಂಕರ್ ಅವರ ಹೆಬ್ಬೂರು ನಿವಾಸದಲ್ಲಿ ಲಸಿಕಾ ಆಂದೋಲನ ನಡೆದಿದೆ. ಆ ದಿನ ಎಷ್ಟು ಡೋಸ್ ಲಸಿಕೆಯನ್ನು ನೀಡಲಾಯಿತು ಎಂಬ ಬಗ್ಗೆ ಅಧಿಕೃತ ಮಾಹಿತಿ ಎಲ್ಲೂ ನಮೂದಾಗಿಲ್ಲ(ಸರಕು ಪಟ್ಟಿ ಮತ್ತು ಮ್ಯಾನ್ಯುವಲ್ ಬಿಲ್ ನಲ್ಲಿ ಕೇವಲ ಲಸಿಕೆಯ ದರ ಮತ್ತು ಮೊತ್ತ ನಮೂದಿಸಲಾಗಿದೆ!). ಆದರೆ, ಸ್ವತಃ ಶಾಸಕರೇ ಹೇಳಿದಂತೆ ಅಂದು ಅವರ ನಿವಾಸದಲ್ಲಿ ಹತ್ತು ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ!
ಅಲ್ಲದೆ, 2021ರ ಸೆಪ್ಟೆಂಬರ್ 25ರಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಬೆಂಗಳೂರು ಕಚೇರಿಯ ಲಸಿಕಾ ವಿಭಾಗದ ಉಪ ನಿರ್ದೇಶಕರು ನೀಡಿರುವ ಸ್ಪಷ್ಟನೆಯಲ್ಲಿ ಕೂಡ, ತುಮಕೂರು ಜಿಲ್ಲೆಯಲ್ಲಿ 2021ರ ಸೆಪ್ಟೆಂಬರ್ 15ರವರೆಗಿನ ಲಸಿಕೆ ನೀಡಿಕೆ ಮಾಹಿತಿ ನೀಡುತ್ತಾ, ಶಾಸಕ ಗೌರಿಶಂಕರ್ ಅವರ ಹೆಬ್ಬೂರಿ ನಿವಾಸದ ಲಸಿಕಾ ಕೇಂದ್ರದಲ್ಲಿ(CVC W818792) ಯಾವುದೇ ಲಸಿಕೆಯನ್ನೂ ನೀಡಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ!.
ಸೆಪ್ಟೆಂಬರ್ 15ರವರೆಗೆ ತುಮಕೂರು ಜಿಲ್ಲೆಯಲ್ಲಿ ಸಿದ್ದಗಂಗಾ ಮೆಡಿಕಲ್ ಕಾಲೇಜು, ಸಿದ್ಧಾರ್ಥ ಆಸ್ಪತ್ರೆ, ಶಾಸಕ ಡಾ ರಂಗನಾಥ್ ಅವರ ಕಚೇರಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕಡೆ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗಿದೆ. ಆದರೆ, ಶಾಸಕ ಗೌರಿಶಂಕರ್ ಅವರ ಹೆಬ್ಬೂರಿನ ನಿವಾಸದ ವಿಳಾಸದ ಕಚೇರಿಯಲ್ಲಿ ಲಸಿಕಾ ಕೇಂದ್ರ ತೆರೆಯಲು ಅನುಮತಿ ಪಡೆದಿದ್ದರೂ, ಲಸಿಕಾ ಕೇಂದ್ರದ ಸಿವಿಸಿ (CVC W818792) ಮಾಡಿದ್ದರೂ, ಅಲ್ಲಿ ಯಾವೊಬ್ಬರಿಗೂ ಲಸಿಕೆ ನೀಡಲಾಗಿಲ್ಲ ಎಂದು ಎನ್ ಎಚ್ ಎಂ ಉಪನಿರ್ದೇಶಕರು ತಮ್ಮ ಮಾಹಿತಿಯಲ್ಲಿ ಅಧಿಕೃತವಾಗಿ ಉಲ್ಲೇಖಿಸಿದ್ದಾರೆ!
ಅಂದರೆ; ಒಂದು ಕಡೆ ಶಾಸಕರು ಲಸಿಕಾ ಅಭಿಯಾನ ನಡೆಸಲು ಸಹಯೋಗ ಪಡೆದುಕೊಂಡ ಸಕರಿಯಾ ಆಸ್ಪತ್ರೆಯ ಹೆಸರಿನಲ್ಲಾಗಲೀ, ಅಥವಾ ಇನ್ನಾವುದೇ ಹೆಸರಿನಲ್ಲಾಗಲೀ ತಮ್ಮ ಹೆಬ್ಬೂರಿ ನಿವಾಸದ ಸಿವಿಸಿ(ಲಸಿಕಾ ಕೇಂದ್ರ) ಆಧಾರದ ಮೇಲೆ ಲಸಿಕೆ ಪಡೆದ ಬಗ್ಗೆ ಕೋವಿನ್ ಪೋರ್ಟಲ್ ನಲ್ಲಿ ಯಾವುದೇ ಮಾಹಿತಿ ಇಲ್ಲ. ಡಿಎಚ್ಒ ಕಚೇರಿಯ ಮಾಹಿತಿಯಲ್ಲೂ ಶಾಸಕರ ಲಸಿಕಾ ಅಭಿಯಾನದ ಕುರಿತು ಎಷ್ಟು ಲಸಿಕೆ ನೀಡಲಾಯಿತು? ಎಲ್ಲಿಂದ ಲಸಿಕೆ ಪಡೆಯಲಾಗಿತ್ತು? ಎಷ್ಟು ಲಸಿಕೆ ಬಳಕೆಯಾಗಿದೆ? ಎಷ್ಟು ಉಳಿದಿದೆ? ಅವುಗಳನ್ನು ಎಲ್ಲಿ ಸಂಗ್ರಹಿಸಿಡಲಾಗಿತ್ತು? ಎಂಬ ಮೂಲಭೂತ ಮಾಹಿತಿಗಳು ಇಲ್ಲ! ಮತ್ತೊಂದು ಕಡೆ, ಸ್ವತಃ ಲಸಿಕಾ ಆಂದೋಲನದ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ ಎಚ್ ಎಂ) ಅಧಿಕೃತ ಮಾಹಿತಿಯಲ್ಲೇ ಶಾಸಕರ ಹೆಬ್ಬೂರಿ ನಿವಾಸದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಿಲ್ಲ ಎಂದು ಘೋಷಿಸಲಾಗಿದೆ!
ಈ ಎಲ್ಲಾ ಮಾಹಿತಿಯನ್ನು ದಾಖಲೆ ಸಹಿತ ಗಿರೀಶ್ ಅವರು ತಮ್ಮ ದೂರಿನಲ್ಲಿ ನಮೂದಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಇದೀಗ ಈ ನಕಲಿ ಲಸಿಕಾ ಅಭಿಯಾನದ ದೂರು ಇದೆ.
ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಪ್ರಚಾರ ಮತ್ತು ಮತಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ನಡೆಸಿದ ಲಸಿಕಾ ಅಭಿಯಾನ ಮತ್ತು ಅಲ್ಲಿ ಹತ್ತು ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂಬ ಅವರದೇ ಹೇಳಿಕೆಯ ಸಾಚಾತನ ಹೀಗೆ ಬಯಲಾಗುತ್ತಿರುವಾಗಲೇ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಅದೆಂದರೆ; ತಮ್ಮ ನಿವಾಸದಲ್ಲಿ ಆಗಸ್ಟ್ 1ರಂದು ಹತ್ತು ಸಾವಿರ ಮಂದಿಗೆ ಲಸಿಕೆ ನೀಡಿದ್ದಾಗಿ ಹೇಳಿದ ಶಾಸಕ ಗೌರಿಶಂಕರ್, ಸ್ವತಃ ಲಸಿಕೆ ತೆಗೆದುಕೊಂಡದ್ದು ಮಾತ್ರ ಆ ಬೃಹತ್ ಲಸಿಕಾ ಅಭಿಯಾನ ನಡೆದ ಮೂರು ದಿನಗಳ ಬಳಿಕ!, ಅದೂ ಕೂಡ ಗೂಳೂರಿನ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಗಸ್ಟ್ 4ರಂದು! ಶಾಸಕ ಗೌರಿಶಂಕರ್ ಗೂಳೂರಿನಲ್ಲಿ ಲಸಿಕೆ ಪಡೆದುಕೊಂಡಿರುವುದು ಮಾಧ್ಯಮಗಳಲ್ಲೇ ಅವರು ಲಸಿಕೆ ಪಡೆಯುತ್ತಿರುವ ಫೋಟೋ ಸಹಿತ ಪ್ರಕಟವಾಗಿದೆ!
ಅಂದರೆ, ಕೋವಿನ್ ಪೋರ್ಟಲ್, ಎನ್ ಎಚ್ ಎಂ, ಡಿಎಚ್ ಒ ಮತ್ತು ಸಕರಿಯಾ ಆಸ್ಪತ್ರೆಯ ಮಾಹಿತಿಗಳನ್ನು ತಾಳೆ ಹಾಕಿದಾಗ ಹೊರಬಿದ್ದ ಶಾಸಕರ ಹೆಬ್ಬೂರಿನ ನಿವಾಸದ ಭಾರೀ ಲಸಿಕಾ ಅಭಿಯಾನದ ಸಾಚಾತನಕ್ಕೆ ತಮ್ಮದೆ ಮನೆಯಲ್ಲಿ ತಾವೇ ನಡೆಸಿದ ಅಭಿಯಾನದಲ್ಲಿ ಲಸಿಕೆ ಪಡೆಯದೆ, ಮೂರು ದಿನಗಳ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಮೂಲಕ ಸ್ವತಃ ಶಾಸಕರೇ ಸಾಕ್ಷ್ಯ ನೀಡಿದ್ದಾರೆ!
ಹಾಗಾಗಿ ಈಗ ತನಿಖೆಯಾಗಬೇಕಿರುವುದು ಕೇವಲ ಲಸಿಕೆ ಪಡೆಯುವ, ಸಂಗ್ರಹಿಸುವ ಮತ್ತು ನೀಡುವ ವಿಧಿವಿಧಾನಗಳ, ಕಾನೂನು ನಿಯಮಗಳ ಉಲ್ಲಂಘನೆಯ ವಿಷಯವಷ್ಟೇ ಅಲ್ಲ; ಬದಲಾಗಿ, 2021ರ ಆಗಸ್ಟ್ 1ರಂದು ತುಮಕೂರು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್ ಅವರ ನಿವಾಸದಲ್ಲಿ ನಿಜವಾಗಿಯೂ ನಡೆದಿದ್ದು ಏನು? ಎಂಬುದು. ಅಲ್ಲಿ ನೀಡಿದ್ದು ನಿಜವಾಗಿಯೂ ಲಸಿಕೆಯೇ? ಲಸಿಕೆಯೇ ಆಗಿದ್ದರೆ ಅದು ಎಲ್ಲಿಂದ ಮತ್ತು ಯಾವ ಅಧಿಕೃತ ಮಾರ್ಗದ ಮೂಲಕ ಬಂದಿತ್ತು? ಅಲ್ಲವಾದಲ್ಲೀ ಶಾಸಕರ ಹೇಳಿಕೆಯ ಪ್ರಕಾರವೇ 10 ಸಾವಿರ ಮಂದಿಗೆ ನೀಡಿದ್ದು ಏನು? ಮತ್ತು ಹಾಗೇ ಲಸಿಕೆ ಎಂದು ಪಡೆದುಕೊಂಡವರ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳೇನು ಎಂಬ ಎಲ್ಲಾ ಸತ್ಯಾಂಶಗಳು ತನಿಖೆಯಿಂದಲೇ ಹೊರಬರಬೇಕಿದೆ.
ಕೋವಿಡ್ ಲಸಿಕೆ ಮತ್ತು ಸರ್ಕಾರದ ಲಸಿಕಾ ಆಂದೋಲನದ ಮೇಲೆ ಜನ ನಂಬಿಕೆ ಕಳೆದುಕೊಳ್ಳಬಾರದು ಎಂದರೆ, ಇಂತಹ ಅಕ್ರಮ ಮತ್ತು ನಯವಂಚಕತನದ ಕುರಿತು ಸರಿಯಾದ ತನಿಖೆ ನಡೆಸಿ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಹುಟ್ಟುವಂತೆ ಮಾಡುವ ಹೊಣೆಗಾರಿಕೆ ಈಗ ನೇರವಾಗಿ ಮುಖ್ಯಮಂತ್ರಿಗಳ ಹೆಗಲ ಮೇಲಿದೆ!