ನಾನು ಈ ಹಿಂದೆ ಒಂದು ಅಂಕಣ ಬರೆದಿದ್ದೆ. ಅದರಲ್ಲಿ ಅಮೆರಿಕೆಯಲ್ಲಿರುವ ಹಿಂದುತ್ವವಾದಿ ಸಂಘಟನೆಗಳು ಅಮೆರಿಕೆಯ ಕೋವಿಡ್ ಫೆಡರಲ್ ಫಂಡನ್ನು ಹೇಗೆಲ್ಲ ಲಪಟಾಯಿಸಿದವು ಮತ್ತು ಅದನ್ನು ಭಾರತದಲ್ಲಿ ಹಿಂದುತ್ವದ ವಿದ್ವಂಸಕಾರಿ ಕಾರ್ಯಗಳಿಗೆ ಹೇಗೆಲ್ಲ ಬಳಸುತ್ತವೆ ಎನ್ನುವ ಕುರಿತು ವಿವರಿಸಿದ್ದೆ. ದಿನಾಂಕ ೧೪ ಜೂನ್ ೨೦೨೨ ರ ‘ದಿ ಪ್ರಿಂಟ್’ ವೆಬ್ ಜರ್ನಲ್ಲಿನಲ್ಲಿ ವಂದನಾ ಮೆನನ್ ಬರೆದಿರುವ ಹಾಗು ಹಮ್ರಾ ಲಾಯಿಖ್ ಸಂಪಾದಿಸಿರುವ ಲೇಖನ ಅಮೆರಿಕೆಯ ಹಿಂದುತ್ವವಾದಿ ಸಂಘಟನೆಗಳ ಹಣದ ಹರಿವು ಮತ್ತು ಅವುಗಳ ಹಿಂದಿನ ಹಗರಣದ ಮುಂದುವರೆದ ಭಾಗವನ್ನು ವಿಸ್ತ್ರತವಾಗಿ ವಿವರಿಸಿದೆ. ಈ ವರದಿಗಳನ್ನು ಅಮೆರಿಕೆಯ ಹಿಂದೂ ಸ್ವಯಂಸೇವಕ ಸಂಘ (ಎಚ್ಎಸ್ಎಸ್) ಮತ್ತು ಇನ್ನೂ ಅನೇಕ ಹಿಂದುತ್ವವಾದಿ ಗುಂಪುಗಳು ‘ವಿಶ್ವಾಸಾರ್ಹವಲ್ಲ’ ಎಂದು ವಾದಿಸಿದರೆˌ ಹಿಂದುತ್ವ ವಿರೋಧಿ ಕಾರ್ಯಕರ್ತರು ಈ ವರದಿಯು ಲಭ್ಯವಿರುವ ಮೂಲಗಳಿಂದ ಪಡೆದ ಡೇಟಾ ಆಧರಿಸಿದ್ದರೂ ಅದು ಜನರ ಗಮನವನ್ನು ಸೆಳೆಯುತ್ತಿಲ್ಲ ಎನ್ನುತ್ತಾರೆ.
ನಿಗೂಢ ಅಥವಾ ಅನಾಮಿಕ ಲೇಖಕನೊಬ್ಬ ಅಮೆರಿಕೆಯ ಹಿಂದುತ್ವವಾದಿ ಸಂಘಟನೆಗಳು ನಡೆಸುತ್ತಿರುವ ಹಣಕಾಸಿನ ವ್ಯವಹಾರಗಳ ಜಾಡು ಹಿಡಿದು ಹೆಚ್ಚು ಗದ್ದಲವಿಲ್ಲದೆ ನಡೆಯುವ ಈ ಅವ್ಯವಹಾರದ ಕುರಿತು ಬರೆದಿದ್ದಾನೆ. ಈ ನಾಟಕೀಯ ಹಾಗು ನಿಗೂಢ ಹೊಸ ವರದಿಯು ಯುಎಸ್ ನಲ್ಲಿ ಹಿಂದೂ ರಾಷ್ಟ್ರೀಯತೆಯ ಹೆಸರಿನ ಸಂಘಟನೆಗಳು ಹೇಗೆ ಹಣವನ್ನು ಸಂಗ್ರಹಿಸುತ್ತವೆ ಎನ್ನುವ ಕುರಿತು ವಿವರಿಸುತ್ತದೆ. ಇತ್ತೀಚಿನ ಮಾಹಿತಿಯ ಪ್ರಕಾರ ಕನಿಷ್ಠ $ ೯೭.೭ಮಿಲಿಯನ್ ಮೌಲ್ಯದ ನಿವ್ವಳ ಆಸ್ತಿ ಹೊಂದಿರುವ ಸುಮಾರು ೨೪ ಹಿಂದುತ್ವವಾದಿ ಸಂಸ್ಥೆಗಳನ್ನು ವರದಿ ಹೆಸರಿಸಿದೆ. ಈ ಸಂಸ್ಥೆಗಳಲ್ಲಿ ಚಾರಿಟೆಬಲ್ ಗುಂಪುಗಳು, ಥಿಂಕ್ ಟ್ಯಾಂಕ್ ಗುಂಪುಗಳು, ರಾಜಕೀಯ ವಕಾಲತ್ತು ಗುಂಪುಗಳು ಮತ್ತು ಉನ್ನತ ಶಿಕ್ಷಣದಲ್ಲಿ ಕೆಲಸ ಮಾಡುವ ಘಟಕಗಳು ಸೇರಿವೆ. ಇವೆಲ್ಲವೂ ಭಾರತದಲ್ಲಿನ ಹಿಂದುತ್ವವಾದಿ ಗುಂಪುಗಳೊಂದಿಗೆ ಒಂದಿಲ್ಲ ಒಂದು ರೀತಿಯಲ್ಲಿ ಸಂಯೋಜನೆಗೊಂಡಿವೆ.
ಸಾರ್ವಜನಿಕವಾಗಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ, ಈ ವರದಿಯು ಯುಎಸ್ ನಲ್ಲಿನ ಹಿಂದುತ್ವವಾದಿ ಗುಂಪುಗಳ ಹಣಕಾಸಿನ ಸಂಬಂಧಗಳನ್ನು ವಿವರಿಸುತ್ತದೆ. ಈ ಗುಂಪುಗಳ ಹಣಕಾಸು ವ್ಯವಹಾರ ಅಮೆರಿಕಾದ ಶಿಕ್ಷಣದ ಮೇಲೆ ಪ್ರಭಾವ ಬೀರಲು ಮತ್ತು ಬಿಜೆಪಿ ನೇತೃತ್ವದ ಭಾರತ ಸರಕಾರದ ಹಿತಾಸಕ್ತಿಗಳನ್ನು ಕಾಯಲು ಮಿಲಿಯನ್ಗಟ್ಟಲೆ ಹಣ ಖರ್ಚು ಮಾಡುತ್ತವೆ ಎನ್ನುತ್ತವೆ ವರದಿಗಳು. ಸುಮಾರು ೨೦ ವರ್ಷಗಳಲ್ಲಿ ಅಂದರೆˌ ೨೦೦೧ ರಿಂದ ೨೦೧೯ ರವರೆಗೆ ಈ ಏಳು ದತ್ತಿ ಗುಂಪುಗಳು ಕನಿಷ್ಠ $ ೧೫೮.೯ ಮಿಲಿಯನ್ ಖರ್ಚು ಮಾಡಿ, ಅದರಲ್ಲಿ ಕೆಲವಷ್ಟನ್ನು ಭಾರತದಲ್ಲಿನ ಹಿಂದೂತ್ವವಾದಿ ಗುಂಪುಗಳಿಗೆ ಕಳುಹಿಸಿವೆ. ಈ ಹಣದ ಅರ್ಧದಷ್ಟು, ಅಂದರೆ ಸುಮಾರು $ ೮೫.೪ ಮಿಲಿಯನ್ ಹಣ ೨೦೧೪ ಮತ್ತು ೨೦೧೯ ರ ನಡುವೆ ಖರ್ಚು ಮಾಡಲಾಗಿದೆ ಎನ್ನುತ್ತವೆ ವರದಿಗಳು.

ಹಿಂದೂ ಅಮೆರಿಕನ್ ಫೌಂಡೇಷನ್ (ಹೆಚ್ ಎ ಎಫ್) ಈ ಹೊಸ ವರದಿಯಲ್ಲಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಇಮೇಲ್ ಮೂಲಕ ದಿ ಪ್ರಿಂಟ್ ಜರ್ನಲ್ಲಿಗೆ ತಿಳಿಸಿದೆಯಂತೆ. ಆ ಇಮೇಲಿನಲ್ಲಿ ಹೆಚ್ ಎ ಎಫ್ ತನ್ನನ್ನು ತಾನು ಒಂದು ಸಂಪೂರ್ಣ ಸ್ವತಂತ್ರ್ಯ ಹೊಂದಿರುವ ಅಮೇರಿಕನ್ ಸಂಸ್ಥೆ ಎಂತಲುˌ ಸಂಸ್ಥೆಯು ಯುಎಸ್ ಅಥವಾ ವಿದೇಶದಲ್ಲಿರುವ ಯಾವುದೇ ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿಲ್ಲವೆಂತಲುˌ ಈ ಸಂಸ್ಥೆಯನ್ನು ಯುನೈಟೆಡ್ ಸ್ಟೇಟ್ಸ್ನಲ್ಲಿ ಹುಟ್ಟಿ ಬೆಳೆದ ಎರಡನೇ ತಲೆಮಾರಿನ ಹಿಂದೂ ಅಮೆರಿಕನ್ನರು ಸ್ಥಾಪಿಸಿದ್ದಾರೆಂತಲು ಹಾಗು ತಮ್ಮ ಸಂಸ್ಥೆಯ ಕೆಲಸ ಮತ್ತು ನೀತಿ ನಿಲುವುಗಳು ತಮ್ಮ ವ್ಯವಹಾರಗಳ ಪಾರದರ್ಶಕತೆಯ ಬಗ್ಗೆ ಮಾತನಾಡುತ್ತವೆ ಎಂದು ಬರೆಯಲಾಗಿದೆಯಂತೆ. ಹಾಗೆಯೆ ತಮ್ಮ ಸಂಸ್ಥೆಯ ವ್ಯವಹಾರಗಳ ಕುರಿತು ಹೆಚ್ಚಿನ ತನಿಖೆ ನಡೆಸಬಾರದೆಂದು ಈ ಸಂಸ್ಥೆ ಆಗ್ರಹಿಸಿದೆಯಂತೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳು ಶಕ್ತಿಯುತವಾಗಿವೆˌ ಉತ್ತಮ ಹಣಕಾಸು ಶಕ್ತಿ ಹೊಂದಿವೆ ಮತ್ತು ಭಾರತದಲ್ಲಿನ ಹಿಂದೂ ರಾಷ್ಟ್ರೀಯತಾವಾದಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತವೆ ಎಂಬ ವರದಿಯು ಸತ್ಯಕ್ಕೆ ದೂರವಾದ ಅನಿಶ್ಚಿತ ಪರಿಭಾಷೆಯಲ್ಲಿದೆ ಎಂದು ಆ ಸಂಸ್ಥೆಗಳು ದಿ ಪ್ರಿಂಟ್ ಗೆ ಇಮೇಲ್ ಬರೆದಿದ್ದಾವಂತೆ. ಅಮೆರಿಕೆಯ ಶಾಲಾ ಪಠ್ಯಪುಸ್ತಕಗಳನ್ನು ಪುನಃ ಬರೆಯುವ ಅಥವಾ ಪರಿಷ್ಕರಿಸುವ ಪ್ರಯತ್ನಗಳು ಈ ಹಿಂದುತ್ವವಾದಿ ಗುಂಪುಗಳು ಮಾಡುತ್ತಿವೆಯಂತೆ. ಈ ಸಂಸ್ಥೆಗಳು ಹಣವನ್ನು ಯಾವುದಕ್ಕೆ ಬಳಕೆ ಮಾಡುತ್ತಿವೆ ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ ಎನ್ನುತ್ತವೆ ಪ್ರಿಂಟ್ ವರದಿಗಳು. ಈ ಸಂಸ್ಥೆಗಳು ಒಂದು ನಿರ್ಣಾಯಕ ಗುರಿ ಮತ್ತು ಅಪಾರದರ್ಶಕ ಹಣಕಾಸಿನ ವಹಿವಾಟಿನೊಂದಿಗೆ ಹಿಂದೂಗಳು ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸುವ ವಿಧಾನವನ್ನು ಬದಲಾಯಿಸಲು ಅಮೇರಿಕನ್ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ. ಈ ವರದಿಯು ಎರಡು ಸಂದರ್ಭಗಳಲ್ಲಿ (೨೦೦೫ ರಲ್ಲಿ ಮತ್ತು ೨೦೧೬ ರಲ್ಲಿ) ಹೆಚ್ ಎ ಎಫ್ ಮತ್ತು ಎಚ್ಎಸ್ಎಸ್ ಸಂಯೋಜಿತ ಯುಬೇರಾಯ್ ಫೌಂಡೇಶನ್ ಫಾರ್ ರಿಲಿಜಿಯಸ್ ಸ್ಟಡೀಸ್ ಅಮೆರಿಕೆಯ ಶಾಲಾ ಪಠ್ಯಪುಸ್ತಕಗಳಿಂದ “ದಲಿತ” ಪದವನ್ನು ತಿರುಚಲು ಪ್ರಯತ್ನಿಸಿದ ಕುರಿತು ಉಲ್ಲೇಖಿಸಿದೆಯಂತೆ.
ಆದರೆ ಹೆಚ್ ಎ ಎಫ್ ಸಂಸ್ಥೆಯು ‘ದಲಿತ’ ಪದವನ್ನು ತಿರುಚಲು ತಾನು ಪ್ರಯತ್ನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದು ˌ ಬದಲಿಗೆ ತಮ್ಮ ಸಂಸ್ಥೆಯು ವರ್ಣ ಮತ್ತು ಜಾತಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿಸುವ ಮೂಲಕ ಪಠ್ಯಪುಸ್ತಕ ಪರಿಷ್ಕರಿಸುವಂತೆ ಸಲಹೆ ನೀಡಿದ್ದಾಗಿ ಹೇಳಿಕೊಂಡಿದೆಯಂತೆ. ಯುಬೇರಾಯ್ ಫೌಂಡೇಶನ್ ೨೦೧೦ ಮತ್ತು ೨೦೧೬ ರ ನಡುವೆ ಕನಿಷ್ಠ ಅರ್ಧ ಮಿಲಿಯನ್ ಡಾಲರ್ ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಿದೆ ಎನ್ನಲಾಗಿದೆ. ಈ ಖರ್ಚು ಸಾರ್ವಜನಿಕ ಶಾಲಾ ಪಠ್ಯಪುಸ್ತಕಗಳ ಮೇಲೆ ಪ್ರಭಾವ ಬೀರಲು, ವಿಶ್ವವಿದ್ಯಾನಿಲಯಗಳಲ್ಲಿ ದತ್ತಿಗಳನ್ನು ಸ್ಥಾಪಿಸಲುˌ ಶಿಕ್ಷಕರಿಗೆ ತರಬೇತಿ ನೀಡಲು ಮತ್ತು ಸಂಶೋಧನಾ ಅನುದಾನಗಳ ಹಂಚಿಕೆಗಾಗಿ ಮಾಡಲಾಗಿದೆ ಎಂದು ಈ ವರದಿಗಳು ಹೇಳುತ್ತವೆ. ಯುಬೇರಾಯ್ ಫೌಂಡೇಶನ್ನ $ ೧೪೨,೦೦೦ ರಷ್ಟು ಹಣದಲ್ಲಿ ಕನಿಷ್ಠ ಅರ್ಧ ಮಿಲಿಯನ್ನಷ್ಟು ದೊಡ್ಡ ಪಾಲು ೨೦೧೨ ಮತ್ತು ೨೦೧೬ ರ ನಡುವೆ ಹೆಚ್ ಎ ಎಫ್ ಪಾಲಿಗೆ ಹೋಗಿದೆ. ಹೆಚ್ ಎ ಎಫ್ ಸಂಸ್ಥೆ ದಿ ಪ್ರಿಂಟ್ ಜರ್ನಲ್ಲಿಗೆ ಬರೆದ ಪತ್ರದಲ್ಲಿ ತಾನು ಉಬೇರಾಯ್ ಫೌಂಡೇಶನ್ನ ಅನುದಾನವನ್ನು ತಮ್ಮ ಶೈಕ್ಷಣಿಕ ಕೆಲಸಗಳಿಗಾಗಿ ಬಳಸಿಕೊಂಡಿದೆ ಎಂದು ಹೇಳಿಕೊಂಡಿದೆಯಂತೆ.
ಇನ್ನೊಂದು ಹಿಂದುತ್ವವಾದಿ ಗುಂಪು, ಧರ್ಮ ಸಿವಿಲೈಜೇಷನ್ ಫೌಂಡೇಷನ್ (ಡಿಸಿಎಫ್), ಅಮೆರಿಕೆಯ ಕನಿಷ್ಠ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಹಿಂದುತ್ವವಾದಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡಲು ಮತ್ತು ಸ್ಥಾಪಿಸಲು ಪ್ರಯತ್ನಿಸಿದೆಯಂತೆ. ಯುನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾದ ಸ್ಕೂಲ್ ಆಫ್ ರಿಲಿಜನ್ಗೆ $ ೩.೨೪ ಮಿಲಿಯನ್, ಗ್ರಾಜ್ಯುಯೇಟ್ ಥಿಯೋಲಾಜಿಕಲ್ ಯೂನಿಯನ್ಗೆ $ ೪.೪ ಮಿಲಿಯನ್ ಮತ್ತು ಇರ್ವಿನ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ $ ೬ ಮಿಲಿಯನ್ ಹಣಕಾಸಿನ ಅನುದಾನ ನೀಡುವುದಾಗಿ ಡಿಸಿಎಫ್ ವಾಗ್ದಾನ ಮಾಡಿತ್ತಂತೆ. ಡಿಸಿಎಫ್ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳೊಂದಿಗೆ ಹೊಂದಿರುವ ಶಂಕಿತ ಸಂಬಂಧಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಎತ್ತಿದಾಗ ಇರ್ವಿನ್ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ $ ೬ ಮಿಲಿಯನ್ ಅನುದಾನವನ್ನು ನಿರಾಕರಿಸಿತ್ತು ಎಂಬ ಸಂಗತಿ ಈ ವರದಿಯಿಂದ ಬಹಿರಂಗಗೊಂಡಿದೆ.

ಯುಎಸ್ ನಲ್ಲಿನ ಹಿಂದೂ ಅಮೇರಿಕನ್ ವಿದ್ಯಾರ್ಥಿಗಳ ಅನುಭವಗಳು ಸಹ ಸಾಕಷ್ಟು ಕಳವಳಕಾರಿಯಾಗಿ ತೋರುತ್ತವೆ. ಅಮೆರಿಕೆಯ ಈ ಹಿಂದೂ ಶಿಕ್ಷಣ ಪ್ರತಿಷ್ಠಾನಗಳು ಹಿಂದೂ ವಿದ್ಯಾರ್ಥಿಗಳನ್ನು ಬೆದರಿಸುವ ಮತ್ತು ಯುಎಸ್ ಪಠ್ಯಪುಸ್ತಕಗಳಲ್ಲಿನ ಹಿಂದೂ ಧರ್ಮದ ಚಿತ್ರಣವನ್ನು ತಿರುಚಲು ಪ್ರಯತ್ನಿಸಿವೆ ಎನ್ನುತ್ತವೆ ಈ ವರದಿಗಳು. ದಿ ಹಿಂದೂ ಎಜುಕೇಷನ್ ಫೌಂಡೇಷನ್ˌ ಎಚ್ಎಸ್ಎಸ್ ಸಂಸ್ಥೆಯ ಒಂದು ಯೋಜನೆಯಾಗಿದ್ದು ೨೦೧೧ ರಿಂದ ೨೦೧೯ ರವರೆಗಿನ ತನ್ನ ತೆರಿಗೆ ರಿಟರ್ನ್ಸ್ ನಲ್ಲಿ “ಹಿಂದೂ ಶಿಕ್ಷಣ ಪ್ರತಿಷ್ಠಾನದ ಹೆಸರಿನಲ್ಲಿ ತಾನು ವ್ಯಾಪಾರ ಮಾಡುತ್ತಿರುವೆ ಎಂದು ನಮೂದಿಸಿದೆಯಂತೆ. ಆದರೆˌ ದಿ ಪ್ರಿಂಟ್ ಗೆ ಬರೆದ ಇಮೇಲ್ನಲ್ಲಿ ಎಚ್ಎಸ್ಎಸ್ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್ನ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ಸ್ವತಂತ್ರ ೫೦೧(ಸಿ)(೩) ಲಾಭರಹಿತ ಸಂಸ್ಥೆಯಾಗಿದ್ದು ಅದು ಅಮೇರಿಕನ್ ಹಿಂದೂಗಳನ್ನು ಒಗ್ಗೂಡಿಸುವ, ಮುಂದಿನ ಪೀಳಿಗೆಗಾಗಿ ಯುಎಸ್ ನಲ್ಲಿ ಹಿಂದೂ ಸಂಸ್ಕೃತಿಯನ್ನು ಉಳಿಸುವ ಹಾಗು ಹಿಂದೂ ಸಮುದಾಯದ ಸೇವೆ ಸಲ್ಲಿಸುವ ಗುರಿ ಹೊಂದಿದೆ ಎಂದು ಬರೆದಿದೆಯಂತೆ.
ಈ ವರದಿಗಳು ಎಚ್ಎಸ್ಎಸ್ ಮತ್ತು ಇತರ ಹಿಂದೂ ಸಂಘಟನೆಗಳ ವಿರುದ್ಧ ರಾಜಕೀಯ ಪ್ರೇರಿತ ಅಭಿಯಾನವಾಗಿದೆ ಎಂದು ಎಚ್ಎಸ್ಎಸ್ ಬರೆದಿದೆಯಂತೆ. ಇಂತಹ ವರದಿಗಳು ಯುಎಸ್ ನಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಇಂಬು ನೀಡುವುದಲ್ಲದೆ ಸ್ಥಳೀಯ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂದೂ ದ್ವೇಷದ ಅಪರಾಧ ಚಟುವಟಿಕೆಗಳಿಗೆ ಮೂಲ ಕಾರಣಗಳಾಗಿವೆ ಎಂದು ಈ ಹಿಂದುತ್ವವಾದಿ ಸಂಘಟನೆಗಳು ಸ್ಪಷ್ಟನೆ ನೀಡಿವೆಯಂತೆ. ಇದು ಅಮೇರಿಕಾದಲ್ಲಿ ಹಿಂದುತ್ವವಾದವನ್ನು ಮುಗಿಸಲು ಬಯಸುವ ಪ್ರಗತಿಪರ ಹಿಂದುಗಳು ಹಾಗು ಹಿಂದುತ್ವವಾದವನ್ನು ಬಿತ್ತುತ್ತ ಹಿಂದೂ ದ್ವೇಷದ ವಿರುದ್ಧ ಪ್ರತಿಭಟಿಸಲು ಬಯಸುವ ಹಿಂದುತ್ವವಾದಿಗಳ ನಡುವಿನ ಯುದ್ಧವಾಗಿದೆ ಎನ್ನಲಾಗುತ್ತಿದೆ. ಎರಡೂ ಗುಂಪುಗಳು ಭಾರತದಲ್ಲಿನ ಹಿಂದುತ್ವವಾದಿ ಮತ್ತು ಪ್ರಗತಿವಾದಿ ಗುಂಪುಗಳ ನಡುವಿನ ರಾಜಕೀಯದ ಚಟುವಟಿಕೆಗಳಿಂದ ಪ್ರಭಾವಿತವಾಗಿವೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ ೨೦೨೧ ರಲ್ಲಿ ಅಮೆರಿಕೆಯಲ್ಲಿ ಪ್ರಗತಿಪರ ಹಿಂದುಗಳ ಗುಂಪು ಅನೇಕ ವಿಶ್ವವಿದ್ಯಾಲಯಗಳ ನೆರವಿನಿಂದ ಜಂಟಿಯಾಗಿ ಜಾಗತಿಕ ಹಿಂದುತ್ವದ ಮೂಲೋತ್ಪಾಟನೆಯ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಮ್ಮೇಳನದ ಸಂಘಟಕರು ಮತ್ತು ಅದರಲ್ಲಿ ಭಾಗವಹಿಸುವವರಿಗೆ ಹಿಂದುತ್ವವಾದಿ ಸಂಘಟನೆಗಳು ಕೊಲೆ ಬೆದರಿಕೆಯನ್ನು ಒಡ್ಡಿದ್ದವು. ಹಿಂದುತ್ವದ ಮೂಲೋತ್ಪಾಟನಾ ಸಮ್ಮೇಳನ ಆಯೋಜಿಸಿದ ವಿಶ್ವವಿದ್ಯಾನಿಲಯಗಳಿಗೆ ಹಿಂದುತ್ವವಾದಿ ಸಂಘಟನೆಗಳು ಒಂದು ಮಿಲಿಯನ್ ಇಮೇಲ್ಗಳನ್ನು ಕಳುಹಿಸಿ ಸಮ್ಮೇಳನವನ್ನು ನಡೆಸದಂತೆ ಒತ್ತಡ ಹೇರಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಭಾರತ ಸರಕಾರ ಕೂಡ ಪರೋಕ್ಷವಾಗಿ ಈ ಸಮ್ಮೇಳನ ತಡೆಯಲು ಪ್ರಯತ್ನಿಸಿತ್ತು. ಆದರೆ ಸಮ್ಮೇಳನ ಯಶಸ್ವಿಯಾಗಿ ನೆರವೇರುವ ಮೂಲಕ ಹಿಂದೂ ಧರ್ಮದ ಒಳಿತುಗಳನ್ನು ಮತ್ತು ಹಿಂದುತ್ವವಾದಿಗಳ ಅಪಾಯಗಳನ್ನು ಅಮೇರಿಕನ್ ಹಿಂದೂಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿತ್ತು. ಇದೊಂದು ಹಿಂದುದ್ವೇಷದ ಸಮ್ಮೇಳನ ಎಂದು ಹಿಂದುತ್ವವಾದಿಗಳು ಆರೋಪಿಸಿದ್ದರು.
ಇಂಡಿಯಾ ಎಕ್ಸ್ಪ್ಲೇನ್ಡ್ ಪಾಡ್ಕ್ಯಾಸ್ಟ್ ನ ಶೈಕ್ಷಣಿಕ ಮತ್ತು ಸಹ-ಸಂಸ್ಥಾಪಕ ರೋಹಿತ್ ಚೋಪ್ರಾ ಅವರ ಪ್ರಕಾರ, ಹಿಂದೂದ್ವೇಷ ಪದವು ರಾಜಕೀಯ ಉದ್ದೇಶದಿಂದ ಹಿಂದೂತ್ವವಾದಿಗಳು ಬಳಸುತ್ತಿದ್ದಾರೆ. ‘ಹಿಂದೂಫೋಬಿಯಾ’ ಎಂಬ ಪದವನ್ನು ಹಿಂದುತ್ವವಾದಿಗಳು ಒಂದು ಅಸ್ತ್ರವಾಗಿ ಬಳಸುತ್ತಿದ್ದಾರೆ. ಹಿಂದೂತ್ವವಾದಿಗಳು ಪ್ರತಿಪಾದಿಸುವ ಜಾತಿಯನ್ನು ಇಲ್ಲಿನ ಅಮೆರಿಕನ್ ಹಿಂದೂಗಳು ಉಲ್ಲೇಖಿಸುವುದು ಕೂಡ ಹಿಂದೂಫೋಬಿಕ್ ಎನ್ನಲಾಗುತ್ತಿದೆಯಂತೆ. ಹಿಂದೂ ಧರ್ಮದ ಯಾವುದೇ ಜನವಿರೋಧಿ ಸಿದ್ಧಾಂತಗಳನ್ನು ಮತ್ತು ಭಾರತ ಸರಕಾರ ತೆಗೆದುಕೊಳ್ಳುತ್ತಿರುವ ಅನೇಕ ವಿವಾದಾತ್ಮಕ ಜನವಿರೋಧಿ ನೀತಿಗಳಿಗೆ ಸಂಬಂಧಿಸಿದ ಯಾವುದೇ ಟೀಕೆಗಳನ್ನು ಈಗ ಹಿಂದೂಫೋಬಿಕ್ ಎಂದು ಅಮೆರಿಕರ್ ಹಿಂದುತ್ವವಾದಿಗಳು ಪರಿಗಣಿಸುತ್ತಿದ್ದಾರೆ ಎನ್ನುವ ಚೋಪ್ರಾ ಅವರ ಅಭಿಪ್ರಾಯವನ್ನು ದಿ ಪ್ರಿಂಟ್ ಉಲ್ಲೇಖಿಸಿದೆ. ಒಟ್ಟಾರೆಯಾಗಿˌ ಭಾರತದ ಹಿಂದುತ್ವವಾದಿ ಸಂಘಟನೆಳೊಂದಿಗೆ ಸಂಯೋಜನೆಗೊಂಡಿರುವ ಅಮೆರಿಕೆಯ ಹಿಂದುತ್ವವಾದಿ ಸಂಘಟನೆಗಳು ಅಲ್ಲಿನ ಸರಕಾರದಿಂದ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ಅನುದಾನ/ಚಂದಾ ಹಣವನ್ನು ಹಿಂದುತ್ವದ ಅಪಾಯಕಾರಿ ಹಾಗು ವಿದ್ವಂಸಕ ಕೃತ್ಯಗಳಿಗಾಗಿ ಬಳಸುತ್ತಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದಾಗಿದೆ.