ಬೆಂಗಳೂರು: ಕನ್ನಡ ನೀನಾದೆ ನಾ ಧಾರಾವಾಹಿ ಖ್ಯಾತಿಯ ನಂದಿನಿ ಸಿಎಂ (Nandini CM) ನಿನ್ನೆ ಸಾವಿಗೆ ಶರಣಾಗಿದ್ದಾರೆ. ಕನ್ನಡ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಂದಿನಿ, ಬೆಂಗಳೂರಿನ ತಮ್ಮ ನಿವಾಸದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ನಟಿ ನಂದಿನಿ ಆತ್ಮಹತ್ಯೆ ಕಾರಣದ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿದ್ದು, ಇದೀಗ ಅವರ ಸ್ನೇಹಿತೆ ತನುಜಾ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ. ನಂದಿನಿ ಅವರ ತಂದೆ ಇತ್ತೀಚಿಗೆ ತೀರಿಕೊಂಡಿದ್ದು, ತಂದೆಯ ಸರ್ಕಾರಿ ಕೆಲಸ ಇವರಿಗೆ ಬಂದಿತ್ತು. ಆದರೆ ಆ ಕೆಲಸ ಮಾಡಲು ನಂದಿನಿಗೆ ಇಷ್ಟ ಇರಲಿಲ್ಲ. ಹತ್ತು ವರ್ಷ ಕಷ್ಟಪಟ್ಟು ನಟನೆಯಲ್ಲಿ ಖ್ಯಾತಿ ಪಡೆದಿದ್ದರು. ಹೀಗಾಗಿ ಸರ್ಕಾರಿ ಕೆಲಸ ಬೇಡ ಎನ್ನುತ್ತಿದ್ದ ನಂದಿನಿ ಅವರಿಗೆ, ಕುಟುಂಬದ ಇತರರು ಚಿತ್ರರಂಗ ಬೇಡ ಸರ್ಕಾರಿ ಕೆಲಸಕ್ಕೆ ಸೇರು ಎನ್ನುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ನಂದಿನಿ ಖಿನ್ನತೆಯಲ್ಲಿದ್ದಳು ಎಂದು ತನುಜಾ ಹೇಳಿದ್ದಾರೆ.

ನಿಜವಾದ ಕಾರಣ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ನಾನು ಅವಳ ಜೊತೆ ಮಾತನಾಡಿ ಮೂರು ದಿನ ಆಯಿತು. ಈ ರೀತಿ ಯಾಕೆ ಮಾಡಿಕೊಂಡಳು ಎನ್ನುವುದು ಗೊತ್ತಿಲ್ಲ. ಆದರೆ ಒಳ್ಳೆಯ ಪ್ರಾಜೆಕ್ಟ್ ಮಾಡಬೇಕು ಎನ್ನುವ ಆಸೆ ನಂದಿನಿಗೆ ಇತ್ತು. ಇಷ್ಟೆಲ್ಲಾ ಸಾಧಿಸಿದ ಆಕೆ ಬದುಕುವ ಮನಸ್ಸು ಮಾಡಬಹುದಿತ್ತು ಎಂದು ತನುಜಾ ತಮ್ಮ ಸ್ನೇಹಿತೆಯನ್ನು ಕಳೆದುಕೊಂಡ ನೋವು ತೋಡಿಕೊಂಡಿದ್ದಾರೆ.











